
ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲಿಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ‘ದಿ ಆರ್ಟ್ ಆಫ್ ಲಿವಿಂಗ್’ (Art of Living) ಸಂಸ್ಥೆ ಮತ್ತು ಅದರ ಅಂಗಸಂಸ್ಥೆಗಳು ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲು ರಾಜ್ಯ ಸರ್ಕಾರವು ಉನ್ನತ ಮಟ್ಟದ 11 ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಜುಲೈ 17 ರಂದು ಅಧಿಕೃತ ಆದೇಶ ಹೊರಡಿಸಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಪ್ರಸ್ತಾವನೆಯ ಆಧಾರದ ಮೇಲೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಹಂತಯ್ಯ ಎಸ್. ಹೊಸಮಠ ಈ ಆದೇಶ ಹೊರಡಿಸಿದ್ದು, ತನಿಖೆಯನ್ನು ಪೂರ್ಣಗೊಳಿಸಿ ಗರಿಷ್ಠ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
1981ರಲ್ಲಿ ಸ್ಥಾಪಿತವಾದ 'ದಿ ಆರ್ಟ್ ಆಫ್ ಲಿವಿಂಗ್' ಟ್ರಸ್ಟ್ ಮತ್ತು ಅದರ ಅಂಗಸಂಸ್ಥೆಗಳಾದ ವೇದ ವಿಜ್ಞಾನ ಮಹಾ ವಿದ್ಯಾಪೀಠ ಇನ್‌ಸ್ಟಿಟ್ಯೂಟ್, ಸುಮೇರು ಗ್ಲೋಬಲ್ ಸಪೋರ್ಟ್ ಸಲ್ಯೂಷನ್ಸ್ ಪ್ರೈ.ಲಿ. ಹಾಗೂ ಸುಮೇರು ರಿಯಾಲ್ಟಿ ಪ್ರೈ.ಲಿ. ಸೇರಿದಂತೆ ಇನ್ನು ಕೆಲವು ವ್ಯಕ್ತಿಗಳು ಕಗ್ಗಲಿಪುರದ ಸರ್ವೇ ನಂಬರ್ 46 ಹಾಗೂ ಸುತ್ತಮುತ್ತಲಿನ ಬಿ.ಎಂ. ಕಾವಲ್, ಅಗ್ರ ಮತ್ತು ಉತ್ತರಿ ಗ್ರಾಮಗಳಲ್ಲಿ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಒತ್ತುವರಿ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಗುತ್ತಿಗೆ ನಿಯಮಗಳ ಉಲ್ಲಂಘನೆ: ಕಗ್ಗಲಿಪುರದ ಸರ್ವೇ ನಂ. 46 ರಲ್ಲಿನ 41 ಎಕರೆ ಸರ್ಕಾರಿ ಗೋಮಾಳ ಜಮೀನನ್ನು 1985ರಲ್ಲಿ ವಾರ್ಷಿಕ ಎಕರೆಗೆ ಕೇವಲ 500 ರೂ. ದರದಲ್ಲಿ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. ಈ ಗುತ್ತಿಗೆ ಅವಧಿಯು 2015 ರಲ್ಲೇ ಮುಕ್ತಾಯಗೊಂಡಿದ್ದರೂ, ಸಂಸ್ಥೆಯು ಅಕ್ರಮವಾಗಿ ಜಮೀನನ್ನು ತನ್ನ ವಶದಲ್ಲೇ ಇಟ್ಟುಕೊಂಡು ಬೃಹತ್ ಕಟ್ಟಡಗಳನ್ನು ನಿರ್ಮಿಸಿದೆ.
ದಲಿತರ ಭೂಮಿ ಒತ್ತುವರಿ ಆರೋಪ: ಈ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಕಂದಾಯ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, "ಆರ್ಟ್ ಆಫ್ ಲಿವಿಂಗ್ ಅಧೀನದಲ್ಲಿರುವ ಒಟ್ಟು 270 ಎಕರೆ ಭೂಮಿಯ ಪೈಕಿ 150 ಎಕರೆ ಭೂಮಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ (SC/ST) ಸೇರಿದ ಜಮೀನಾಗಿದೆ ಎಂದು ದಲಿತ ಸಂಘಟನೆಗಳ ಸಭೆಯಲ್ಲಿ ದೂರುಗಳು ಬಂದಿವೆ. ಈ ಎಲ್ಲ ದೂರುಗಳ ಸತ್ಯಾಸತ್ಯತೆ ತಿಳಿಯಲು ತನಿಖೆ ಅಗತ್ಯ" ಎಂದಿದ್ದಾರೆ.
ಸರ್ವೆ ವರದಿಯ ಆಘಾತಕಾರಿ ಅಂಶಗಳು: ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಅಕ್ಟೋಬರ್ 2025 ರಲ್ಲಿ ಸಹಾಯಕ ಭೂದಾಖಲೆಗಳ ನಿರ್ದೇಶಕರು ನಡೆಸಿದ ಜಂಟಿ ಸಮೀಕ್ಷೆಯಲ್ಲಿ, ಮೂಲ ಉದ್ದೇಶಕ್ಕೆ ವಿರುದ್ಧವಾಗಿ ಭೂಮಿಯನ್ನು ಬಳಸಿರುವುದು ಮತ್ತು ಭೂ ಬಳಕೆ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸಿರುವ ಅಂಶಗಳು ಬೆಳಕಿಗೆ ಬಂದಿವೆ.
ಗಮನಾರ್ಹವಾಗಿ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರ್ಷದ ಮಾರ್ಚ್ ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್ ಶ್ರೀ ಶ್ರೀ ರವಿಶಂಕರ್ ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ (FIR) ಅನ್ನು ರದ್ದುಗೊಳಿಸಿತ್ತು. ಅವರ ವಿರುದ್ಧ ವೈಯಕ್ತಿಕವಾಗಿ ಯಾವುದೇ ನೇರ ಆರೋಪಗಳಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಆದರೆ, ಈಗ ಸರ್ಕಾರವು ವ್ಯಕ್ತಿಗತ ಆರೋಪಗಳಿಗಿಂತ ಹೆಚ್ಚಾಗಿ ಒಟ್ಟಾರೆ ಭೂ ಅತಿಕ್ರಮಣ, ರಾಜಕಾಲುವೆ, ಕೆರೆ ಮತ್ತು ಸಾರ್ವಜನಿಕ ಆಸ್ತಿಗಳ ದುರ್ಬಳಕೆಯ ಸಮಗ್ರ ಪರಿಶೀಲನೆಗಾಗಿ ಕಂದಾಯ ಕಾಯ್ದೆಯಡಿ ಈ ಪ್ರತ್ಯೇಕ ಎಸ್‌ಐಟಿಯನ್ನು ರಚಿಸಿದೆ.
ಹಿರಿಯ ಐಎಎಸ್ ಅಧಿಕಾರಿ ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಅಮ್ಲನ್ ಆದಿತ್ಯ ಬಿಸ್ವಾಸ್ ಅವರ ಅಧ್ಯಕ್ಷತೆಯಲ್ಲಿ 11 ಸದಸ್ಯರ ಬಲಿಷ್ಠ ತಂಡವನ್ನು ರಚಿಸಲಾಗಿದೆ. ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಇಸ್ಲಾವುದ್ದೀನ್ ಜೆ. ಗದ್ಯಾಲ್, ವಿಶೇಷ ಜಿಲ್ಲಾಧಿಕಾರಿ-1 ಜಯಮಾಧವ್, ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕ ನಿಸಾರ್ ಅಹಮದ್, ಜಿಬಿಎ ಸಹಾಯಕ ಆಯುಕ್ತ ಗಿರೀಶ್ ನಂದನ್, ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ವಿಶ್ವನಾಥ್, ಯಲಹಂಕ ತಹಸೀಲ್ದಾರ್ ಕಲೀಮುಲ್ಲಾ, ಮತ್ತು ಶಿರಸ್ತೇದಾರ್‌ಗಳಾದ ಶಶಾಂಕ್ ಹಾಗೂ ಚರಣ್ ರಾಜ್. ಕಂದಾಯ ಇಲಾಖೆಯ ಕಾನೂನು ಸಲಹೆಗಾರ ಹಾಗೂ ನಿವೃತ್ತ ಜಿಲ್ಲಾ ಸತ್ರ ನ್ಯಾಯಾಧೀಶರಾದ ನೇಗಿನಹಾಳ್. ಪ್ರಾದೇಶಿಕ ಆಯುಕ್ತರ ಕಚೇರಿಯ ತಹಸೀಲ್ದಾರ್ ಸುಮಂತ್.
ವಿಶೇಷ ತನಿಖಾ ತಂಡಕ್ಕೆ ತನಿಖೆಗಾಗಿ ಸರ್ಕಾರವು ವಿಸ್ತಾರವಾದ ಮಾರ್ಗಸೂಚಿಗಳನ್ನು ನೀಡಿದ್ದು, ಈ ಕೆಳಗಿನ ಅಂಶಗಳ ಮೇಲೆ ಬೆಳಕು ಚೆಲ್ಲಲು ಸೂಚಿಸಿದೆ.
ಜಮೀನು ಮಂಜೂರಾತಿ ದಾಖಲೆಗಳು, ಮೂಲ ವಾರಸುದಾರರ ವಿವರಗಳನ್ನು ಪರಿಶೀಲಿಸುವುದು ಮತ್ತು ಭೂ ದಾಖಲೆಗಳಲ್ಲಿ ನಕಲಿ ದಸ್ತಾವೇಜು ಸೃಷ್ಟಿ ಅಥವಾ ವಂಚನೆ ನಡೆದಿದೆಯೇ ಎಂಬುದನ್ನು ಪತ್ತೆಹಚ್ಚುವುದು.
ಸಾರ್ವಜನಿಕ ರಸ್ತೆಗಳು, ರಾಜಕಾಲುವೆಗಳು, ಕೆರೆ-ಜಲಮೂಲಗಳು, ಗುಡ್ಡಗಳು ಹಾಗೂ 'ಬಂಡೆ ಖರಾಬು' ಜಮೀನುಗಳ ಗಡಿಗಳನ್ನು ನಿಖರವಾಗಿ ಗುರುತಿಸಿ, ಅಲ್ಲಿ ನಡೆದಿರುವ ಅಕ್ರಮ ನಿರ್ಮಾಣಗಳನ್ನು ಪತ್ತೆ ಮಾಡುವುದು.
ಇಸ್ರೋ ಅಥವಾ ಇತರ ಉಪಗ್ರಹ ದತ್ತಾಂಶಗಳನ್ನು (Satellite Data) ಬಳಸಿಕೊಂಡು ಪರಿಸರದ ಮೇಲೆ ಉಂಟಾಗಿರುವ ಹಾನಿಯನ್ನು ಅಂದಾಜಿಸುವುದು ಮತ್ತು ಸ್ಥಳೀಯ ಸಾರ್ವಜನಿಕರ ಪ್ರತಿಕ್ರಿಯೆಗಳನ್ನು ಸಂಗ್ರಹಿಸುವುದು.
ತನಿಖೆಯ ವೇಳೆ ಕಂಡುಬರುವ ಅಂಶಗಳಿಗೆ ಉತ್ತರಿಸಲು ಆರೋಪಿತ ಸಂಸ್ಥೆಯಾದ ಆರ್ಟ್ ಆಫ್ ಲಿವಿಂಗ್ ಮತ್ತು ಇತರ ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಿ, ತಮ್ಮ ವಿವರಣೆ ನೀಡಲು ಸೂಕ್ತ ಅವಕಾಶ ಒದಗಿಸುವುದು.
ರಾಜ್ಯ ಸರ್ಕಾರದ ಈ ಆದೇಶವನ್ನು ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಮುಕ್ತವಾಗಿ ಸ್ವಾಗತಿಸಿದೆ. ಸಂಸ್ಥೆಯ ಅಧಿಕೃತ ವಕ್ತಾರರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, "ನಾವು ಸರ್ಕಾರದ ಎಸ್‌ಐಟಿ ರಚನೆಯ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಈ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಯು ಸತ್ಯಾಂಶಗಳನ್ನು ಇಡೀ ಪ್ರಪಂಚದ ಮುಂದೆ ತರಲಿದ್ದು, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಈ ವಿವಾದಕ್ಕೆ ಒಂದು ನಿರ್ಣಾಯಕ ಹಾಗೂ ಶಾಶ್ವತ ಅಂತ್ಯವನ್ನು ನೀಡುತ್ತದೆ ಎಂಬ ನಂಬಿಕೆ ನಮಗಿದೆ" ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ