ಇದು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಅಷ್ಟೆ. ನಾನು 15 ದಿನಗಳ ಹಿಂದೆಯೇ ಪತ್ರ ಬರೆದಿದ್ದೇನೆ. ಆದರೂ ನನಗೆ ಪ್ರತಿಕ್ರಿಯೆ ಬಂದಿಲ್ಲ. ಒಂದು ವೇಳೆ ನಾನು ಪತ್ರ ಬರೆದದ್ದು ತಡವಾಗಿದೆ ಅಂದುಕೊಳ್ಳಿ, ಈಗ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಹೇಳಿ? ಸುಮ್ಮನೆ ಕಾಲ ಕಳೆಯುವುದನ್ನು ಬಿಡಬೇಕು ಎಂದ ಸಿಎಂ ಸಿದ್ದರಾಮಯ್ಯ
ಮೈಸೂರು(ಮೇ.26): ಬೆಲ್ಜಿಯಂನಲ್ಲಿ ಪುತ್ರ ರಾಕೇಶ್ ಸಾವಿಗೆ ಸಂಬಂಧಿಸಿ ಯಾಕೆ ತನಿಖೆಗೆ ಆಗ್ರಹಿಸಿಲ್ಲ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಮಗ (ಪ್ರಜ್ವಲ್ ರೇವಣ್ಣ) ರೇಪ್ ಮಾಡಿ ಓಡಿ ಹೋಗಿರುವುದು. ಅದಕ್ಕೂ 2016ರಲ್ಲಿ ಮೃತಪಟ್ಟ ನನ್ನ ಪುತ್ರ ರಾಕೇಶ್ ವಿಚಾರಕ್ಕೂ ಏನು ಸಂಬಂಧ ಎಂದಿದ್ದಾರೆ. ನನ್ನ ಮಗ ಮೃತಪಟ್ಟು 8 ವರ್ಷ ಆಗಿದೆ. ಈಗ ಆತನ ಸಾವಿನ ವಿಚಾರ ಇನ್ನೊಂದು ಯಾವುದೋ ಪ್ರಕರಣಕ್ಕೆ ಲಿಂಕ್ ಮಾಡಿ ಮಾತಾಡುವುದು ಮೂರ್ಖತನ ಎಂದರು.
ಅತ್ಯಾಚಾರಕ್ಕಿಂತ ಅದರ ವಿಡಿಯೋ ಹಂಚಿದ್ದು ದೊಡ್ಡ ಅಪರಾಧ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಇದೇ ವೇಳೆ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಆ ರೀತಿ ಯಾವ ಕಾನೂನಿನಲ್ಲಿದೆ ಹೇಳಿ? ಕುಮಾರಸ್ವಾಮಿ ಏನಾದರೂ ಸೆಕ್ಷನ್ ಹೇಳಿದ್ದಾರಾ? ಅದು ಭಾರತೀಯ ದಂಡ ಸಂಹಿತೆಯಲ್ಲಿದೆಯಾ? ಅಥವಾ ಇವರೇ ಬರೆದುಕೊಂಡ ಕಾನೂನಿನಲ್ಲಿದೆಯಾ ಎಂದು ಪ್ರಶ್ನಿಸಿದರು. ಜತೆಗೆ, ಹಾಗಂತ ನಾನು ವಿಡಿಯೋಹಂಚಿಕೆ ಮಾಡಿದ್ದನ್ನು ಸಮರ್ಥನೆ ಮಾಡುತ್ತಿಲ್ಲ ಎಂದ ಅವರು, ಆದರೆ ಅತ್ಯಾಚಾರಕ್ಕಿಂತ ವಿಡಿಯೋ ಹಂಚಿದ್ದು ಮಹಾ ಅಪರಾಧ ಎನ್ನುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಜ್ವಲ್ ರೇವಣ್ಣ ಕೇಸ್ ದಾರಿ ತಪ್ಪಿಸಲು ಎಚ್‌ಡಿಕೆಯಿಂದ ಡಿಕೆಶಿ ಹೆಸರು: ಸಿಎಂ ಸಿದ್ದರಾಮಯ್ಯ
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಸಂಬಂಧ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ತಡವಾಗಿ ಪತ್ರ ಬಂತು ಎಂಬ ಕೇಂದ್ರ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಅಷ್ಟೆ. ನಾನು 15 ದಿನಗಳ ಹಿಂದೆಯೇ ಪತ್ರ ಬರೆದಿದ್ದೇನೆ. ಆದರೂ ನನಗೆ ಪ್ರತಿಕ್ರಿಯೆ ಬಂದಿಲ್ಲ. ಒಂದು ವೇಳೆ ನಾನು ಪತ್ರ ಬರೆದದ್ದು ತಡವಾಗಿದೆ ಅಂದುಕೊಳ್ಳಿ, ಈಗ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಹೇಳಿ? ಸುಮ್ಮನೆ ಕಾಲ ಕಳೆಯುವುದನ್ನು ಬಿಡಬೇಕು ಎಂದು ಆರೋಪಿಸಿದರು.