ವಯನಾಡು ಭೂಕುಸಿತದ ಬಳಿಕ ಎಚ್ಚೆತ್ತ ಕರ್ನಾಟಕ, ಕುದುರೆಮುಖದಲ್ಲಿ ಒಂದು ಅಕ್ರಮ ರೆಸಾರ್ಟ್‌ ಪತ್ತೆ!

By Kannadaprabha NewsFirst Published Aug 12, 2024, 6:16 PM IST
Highlights

ವಯನಾಡ್‌ ಭೂಕುಸಿತದ ಬಳಿಕ ಎಚ್ಚೆತ್ತಿರುವ ಕರ್ನಾಟಕ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಒತ್ತುವರಿಯಾಗಿರುವ ಭೂಮಿಯನ್ನು ಮರಳಿ ಪಡೆಯಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕುದುರೆಮುಖ ಪ್ರದೇಶದಲ್ಲಿ ಒಂದು ಅಕ್ರಮ ರೆಸಾರ್ಟ್ ಪತ್ತೆಯಾಗಿದೆ.

ಆತ್ಮಭೂಷಣ್‌

ಮಂಗಳೂರು (ಆ.12): ಕೇರಳ ವಯನಾಡ್‌ ಪ್ರಾಕೃತಿಕ ದುರಂತದ ಬಳಿಕ ಕರ್ನಾಟಕದಲ್ಲಿ ಅರಣ್ಯ ಪ್ರದೇಶಗಳಲ್ಲಿ ಅಕ್ರಮ ರೆಸಾರ್ಟ್‌, ಹೋಂ ಸ್ಟೇ ಹಾಗೂ ಇತರೆ ಒತ್ತುವರಿಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ. ರಾಜ್ಯದ ಪಶ್ಚಿಮ ಘಟ್ಟದಲ್ಲೂ ಅಕ್ರಮ ರೆಸಾರ್ಟ್‌, ಹೋಂ ಸ್ಟೇ ಪತ್ತೆ ಕಾರ್ಯ ನಡೆಯುತ್ತಿದೆ. ಲಭ್ಯ ಮಾಹಿತಿ ಪ್ರಕಾರ ಕುದುರೆಮುಖ ಗಡಿ ಭಾಗದಲ್ಲಿ ಒಂದು ರೆಸಾರ್ಟ್‌ ಮಾತ್ರ ಕಂಡುಬಂದಿದೆ. ಯಾವುದೇ ಅಕ್ರಮ ಹೋಂಸ್ಟೇ ಕಂಡುಬಂದಿಲ್ಲ.

Latest Videos

ಇದನ್ನು ಹೊರತುಪಡಿಸಿದರೆ ಮಂಗಳೂರು ಅರಣ್ಯ ವೃತ್ತದ ಮಂಗಳೂರು, ಕುಂದಾಪುರ ಹಾಗೂ ಕಾರ್ಕಳ ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 3,912 ಪ್ರಕರಣಗಳಲ್ಲಿ 5,966.390 ಎಕರೆ ಪ್ರದೇಶ ಒತ್ತುವರಿಯಾಗಿರುವುದು ಪತ್ತೆಯಾಗಿದೆ. ಇದರಲ್ಲಿ 30 ಎಕರೆಗಿಂತ ಜಾಸ್ತಿ ಎಲ್ಲೂ ಒತ್ತುವರಿಯಾಗಿಲ್ಲ. ಆದರೆ 10ರಿಂದ 30 ಎಕರೆಯಲ್ಲಿ ಒಟ್ಟು 5 ಕೇಸ್‌ಗಳಲ್ಲಿ 81.50 ಎಕರೆ ಒತ್ತುವರಿ, 3ರಿಂದ 10 ಎಕರೆಯಲ್ಲಿ ಒಟ್ಟು 92 ಕೇಸ್‌ಗಳಲ್ಲಿ 491.26 ಎಕರೆ ಒತ್ತುವರಿ, 3 ಎಕರೆಗಿಂತ ಹೆಚ್ಚಿಗೆ 3,815 ಕೇಸ್‌ಗಳಲ್ಲಿ 5,393.64 ಎಕರೆ ಒತ್ತುವರಿ ಮಾಡಲಾಗಿದೆ.

ಅಪರೂಪದ ಹೊಯ್ಸಳರ ದೇಗುಲ ಶಿಥಿಲ, ಜೀರ್ಣೋದ್ಧಾರಕ್ಕೆ 85 ಲಕ್ಷ ಕೊಟ್ರೂ ...

ಅರಣ್ಯ ಒತ್ತುವರಿ ಪತ್ತೆಗೆ ರಚಿಸಲಾದ ಕಾರ್ಯಪಡೆ ಕಳೆದ ಮೂರು ದಿನಗಳಲ್ಲಿ ಪತ್ತೆ ಕಾರ್ಯ ನಡೆಸಿ ವರದಿಯನ್ನು ಇಲಾಖೆಗೆ ಸಲ್ಲಿಸಿದೆ. ಎಲ್ಲ ಅಕ್ರಮ ಒತ್ತುವರಿಗಳ ತೆರವು ಕುರಿತಂತೆ ನಿಯಮಾನುಸಾರವೇ ಕ್ರಮ ಕೈಗೊಳ್ಳಲು ಇಲಾಖಾಧಿಕಾರಿಗಳು ಸಿದ್ಧತೆ ಆರಂಭಿಸಿದ್ದಾರೆ. ಪಶ್ಚಿಮ ಘಟ್ಟದಲ್ಲಿ ವಯನಾಡ್‌ ಮಾದರಿಯಲ್ಲಿ ಸಂಭಾವ್ಯ ಪ್ರಾಕೃತಿಕ ದುರಂತ ಸಂಭವಿಸುವುದನ್ನು ತಡೆಗಟ್ಟಲು ಈಗಲೇ ಯಾವುದೇ ಮುಲಾಜಿಲ್ಲದೆ ತೆರವು ಕಾರ್ಯಾಚರಣೆಗೆ ಚಿಂತನೆ ನಡೆಸಿದ್ದಾರೆ.

ರೆಸಾರ್ಟ್‌ ತೆರವಿಗೆ ಯತ್ನ: ಕುದುರೆಮುಖದ ಕಳಸ ತಾಲೂಕಿನ ಗಡಿ ಪ್ರದೇಶದಲ್ಲಿ ರೆಸಾರ್ಟ್‌ವೊಂದು ಕಾರ್ಯನಿರ್ವಹಿಸುತ್ತಿರುವುದು ಕಾರ್ಯಪಡೆಯ ಗಮನಕ್ಕೆ ಬಂದಿದೆ. ಇದು ಹಳೆ ಅರಣ್ಯ ಕಾಯ್ದೆಯನ್ವಯ ಸ್ವಂತಕ್ಕೆ ಅನುಮತಿ ಪಡೆದಿರುವುದು ಗೊತ್ತಾಗಿದೆ. ಕಂದಾಯ ಹಾಗೂ ಪ್ರವಾಸೋದ್ಯಮ ಇಲಾಖೆಯ ಅನುಮತಿಯೊಂದಿಗೆ ಕಳೆದ ಐದು ವರ್ಷದಿಂದ ಹೋಂಸ್ಟೇ ನಡೆಸುತ್ತಿದೆ. ಇದು ತಾತ್ಕಾಲಿಕ ಪರವಾನಿಯಾಗಿರುವುದರಿಂದ ಈ ಬಗ್ಗೆ ಕಂದಾಯ, ಅರಣ್ಯ ಇಲಾಖೆಯ ಜಂಟಿ ಸರ್ವೆ ಬಳಿಕ ಈ ರೆಸಾರ್ಟ್‌ ತೆರವಿಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.

3,815 ಪ್ರಕರಣಗಳಲ್ಲಿ 5,393.64 ಎಕರೆ ಒತ್ತುವರಿ!: ಮಂಗಳೂರು ವೃತ್ತ ವ್ಯಾಪ್ತಿಯಲ್ಲಿ ಒಟ್ಟು ಒತ್ತುವರಿ ಕೇಸ್‌ಗಳಲ್ಲಿ 3 ಎಕರೆ ಹಾಗೂ ಅದಕ್ಕಿಂತ ಕಡಿಮೆ ಇರುವ 3,815 ಪ್ರಕರಣಗಳಲ್ಲಿ 5,393.64 ಎಕರೆ ಪ್ರದೇಶ ಒತ್ತುವರಿಯಾಗಿದೆ. ಸರ್ಕಾರದ ನಿರ್ದೇಶನ ಪ್ರಕಾರ 3 ಎಕರೆಗಿಂತ ಕಡಿಮೆ ಒತ್ತುವರಿಯನ್ನು ಸದ್ಯದ ಮಟ್ಟಿಗೆ ತೆರವುಗೊಳಿಸುವಂತಿಲ್ಲ. ಆದರೂ ಈ ಬಗ್ಗೆ ಅರಣ್ಯ ಇಲಾಖೆ ದಾಖಲೆಗಳ ಪರಿಶೀಲನೆಗೆ ನಡೆಸಲಿದೆ.

ವಿಶ್ವಪಾರಂಪರಿಕ ಪಟ್ಟಿಗೆ ಸೇರಿದ ಬಳಿಕ ಬೇಲೂರು ದೇಗುಲಕ್ಕೆ ಯುನೆಸ್ಕೋ ನ ...

ದಾಖಲೆ ನೀಡದಿದ್ದರೆ ತೆರವು: ಅರಣ್ಯ ಪ್ರದೇಶ ಒತ್ತುವರಿ ವಿಚಾರದಲ್ಲಿ ವಾಸ್ತವ್ಯ ಹೊಂದಿರುವ ಬಗ್ಗೆ ಸೂಕ್ತ ದಾಖಲೆ ಪತ್ರವೇ ಮಾನದಂಡ. ಒತ್ತುವರಿದಾರರು ಕಂದಾಯ ಇಲಾಖೆಯಿಂದ ದಾಖಲೆ ಪತ್ರ ಹೊಂದಿದ್ದರೆ, ಅದನ್ನು ಅರಣ್ಯ ಇಲಾಖೆಗೆ ಹಾಜರುಪಡಿಸಬೇಕು. ಅದನ್ನು ಪರಿಶೀಲಿಸಿ ತೆರವಿನ ಬಗ್ಗೆ ಅಧಿಕಾರಿಗಳು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. 3 ಎಕರೆಗಿಂತ ಕಡಿಮೆ ಜಾಗವನ್ನು ಒತ್ತುವರಿ ಮಾಡಿರುವವರಿಗೆ ಸದ್ಯದ ಮಟ್ಟಿಗೆ ತೊಂದರೆ ಇಲ್ಲದಿದ್ದರೂ ಸೂಕ್ತ ದಾಖಲೆ ಪತ್ರಗಳು ಇಲ್ಲದಿದ್ದರೆ ತೆರವು ಭೀತಿಯನ್ನು ತಳ್ಳಿಹಾಕುವಂತಿಲ್ಲ.

ಅರಣ್ಯ ಸಂರಕ್ಷಣಾ ಕಾಯ್ದೆ 64(ಎ) ಪ್ರಕಾರ ಈಗಾಗಲೇ ನೋಟಿಸ್‌ ಪಡೆದುಕೊಂಡ ಒತ್ತುವರಿದಾರರೂ ಇಲಾಖಾ ಅಧಿಕಾರಿಗಳ ನ್ಯಾಯಿಕ ಅದಾಲತ್‌ನಲ್ಲಿ ತಮ್ಮ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬೇಕಿದೆ.

ಪಶ್ಚಿಮ ಘಟ್ಟದ ಕೆಳಭಾಗದಲ್ಲಿ ಅಧಿಕೃತ ಹೋಂ ಸ್ಟೇ, ರೆಸಾರ್ಟ್‌ ಬೆರಳೆಣಿಕೆ ಇರಬಹುದು. ಆದರೆ ಅನಧಿಕೃತವಾಗಿ ಅನೇಕ ಹೋಂ ಸ್ಟೇ ರೆಸಾರ್ಟ್‌ಗಳು ಇವೆ. ಕೆಳಹಂತದ ಅಧಿಕಾರಿಗಳು ನೀಡುವ ವರದಿಯ ಬದಲು ಅನಧಿಕೃತ ಹೋಂಸ್ಟೇ, ರೆಸಾರ್ಟ್‌ಗಳ ಬಗ್ಗೆ ವೆಬ್‌ಸೈಟ್‌ ಮೂಲಕ ನೋಡಿ ತಿಳಿದುಕೊಳ್ಳಲಿ.

-ಶಶಿಧರ ಶೆಟ್ಟಿ, ಸ್ಥಾಪಕಾಧ್ಯಕ್ಷ, ರಾಷ್ಟ್ರೀಯ ಪರಿಸರ ಒಕ್ಕೂಟ, ಮಂಗಳೂರು

ಕುದುರೆಮುಖದಲ್ಲಿ ಒಂದು ರೆಸಾರ್ಟ್‌ ಕಂಡುಬಂದಿದ್ದು, ಅದರ ದಾಖಲೆಗಳನ್ನು ಪರಿಶೀಲಿಸಿ ಅಕ್ರಮವಾಗಿದ್ದರೆ, ನಮ್ಮ ವ್ಯಾಪ್ತಿಯಲ್ಲಿದ್ದರೆ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಇತರೆ ಒತ್ತುವರಿ ಅರಣ್ಯ ಪ್ರದೇಶಗಳ ತೆರವಿಗೆ ಸೂಕ್ತ ದಾಖಲೆ ಪತ್ರಗಳನ್ನು ಸಲ್ಲಿಸುವಂತೆ ಒತ್ತುವರಿದಾರರಿಗೆ ನೋಟಿಸ್‌ ನೀಡಲಾಗಿದ್ದು, ಇಲಾಖಾ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ.

-ಕರಿಕಳನ್‌, ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ವೃತ್ತ

ಎಲ್ಲೆಲ್ಲಿ, ಎಷ್ಟೆಷ್ಟು ಒತ್ತುವರಿ?: ಅರಣ್ಯ ಇಲಾಖೆ ಮಾಹಿತಿ ಪ್ರಕಾರ ಮಂಗಳೂರು ವಿಭಾಗದಲ್ಲಿ ಒಟ್ಟು 2,591 ಪ್ರಕರಣಗಳಲ್ಲಿ 4,060.85 ಎಕರೆ ಒತ್ತುವರಿ ಇದೆ. ಇದರಲ್ಲಿ 10ರಿಂದ 30 ಎಕರೆ ವರೆಗೆ 4 ಕೇಸ್‌ಗಳಲ್ಲಿ 63.50 ಎಕರೆ, 3ರಿಂದ 10 ಎಕರೆಯಲ್ಲಿ 11 ಕೇಸ್‌ಗಳಲ್ಲಿ 70.29 ಎಕರೆ ಒತ್ತುವರಿ ಇದೆ. 3 ಎಕರೆಗಿಂತ ಮೇಲ್ಪಟ್ಟು 2,576 ಕೇಸ್‌ಗಳಲ್ಲಿ 3,927.07 ಎಕರೆ ಒತ್ತುವರಿಯಾಗಿದೆ.

ಕುದುರೆಮುಖ ವಿಭಾಗದಲ್ಲಿ ಒಟ್ಟು 1,158 ಕೇಸ್‌ಗಳಲ್ಲಿ 1,524.32 ಎಕರೆ ಒತ್ತುವರಿ ಪತ್ತೆಯಾಗಿದೆ. 10ರಿಂದ 30 ಎಕರೆಯಲ್ಲಿ ಯಾವುದೇ ಕೇಸ್‌ಗಳಿಲ್ಲ. ಆದರೆ 3ರಿಂದ 10 ಎಕರೆಯಲ್ಲಿ 50 ಕೇಸ್‌ಗ‍ಳಿದ್ದು, 285.28 ಎಕರೆ ಒತ್ತುವರಿಯಾಗಿದೆ. 3 ಎಕರೆಗಿಂತ ಜಾಸ್ತಿಯಲ್ಲಿ 1,108 ಕೇಸ್‌ಗಳಿದ್ದು, 1,239.042 ಎಕರೆ ಒತ್ತುವರಿ ಕಂಡುಬಂದಿದೆ.

ಕಾರ್ಕಳ ವಿಭಾಗದಲ್ಲಿ ಒಟ್ಟು 163 ಕೇಸ್‌ಗಳಲ್ಲಿ 381.21 ಎಕರೆ ಒತ್ತುವರಿ ವರದಿಯಾಗಿದೆ. 10ರಿಂದ 30 ಎಕರೆಯಲ್ಲಿ ಕೇವಲ ಒಂದು ಕೇಸ್ ಇದ್ದು, 18 ಎಕರೆ ಒತ್ತುವರಿ ಇದೆ. 3ರಿಂದ 10 ಎಕರೆಯಲ್ಲಿ 31 ಕೇಸ್‌ಗಳಲ್ಲಿ 135.69 ಎಕರೆ ಒತ್ತುವರಿ ಇದೆ. 3 ಎಕರೆಗಿಂತ ಹೆಚ್ಚಿನದಲ್ಲಿ 131 ಕೇಸ್‌ನಲ್ಲಿ 227.53 ಎಕರೆ ಒತ್ತುವರಿ ದಾಖಲಾಗಿದೆ.

click me!