ಬಿಸಿಲಿಗೆ ಹೆಸರುವಾಸಿಯಾಗಿದ್ದ ಈ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಚಳಿ!

By Kannadaprabha News  |  First Published Jan 1, 2024, 6:08 AM IST

ಬಿಸಿಲಿನ ತಾಪಮಾನಕ್ಕೆ ಹೆಸರು ವಾಸಿಯಾಗಿದ್ದ ವಿಜಯಪುರದಲ್ಲಿ ಈ ಬಾರೀ ಚಳಿ ಮೈನಡುಗಿಸುವಂತೆ ಮಾಡಿದೆ. ಈ ವರ್ಷದ ಕೊನೆಯಲ್ಲಿ ೯.೬ ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದ್ದು, ಇದು ರಾಜ್ಯದಲ್ಲೇ ಕನಿಷ್ಠ ತಾಪಮಾನವಾಗಿದೆ.


ಖಾಜಾಮೈನುದ್ದೀನ್ ಪಟೇಲ್

ವಿಜಯಪುರ (ಜ.1) ಬಿಸಿಲಿನ ತಾಪಮಾನಕ್ಕೆ ಹೆಸರು ವಾಸಿಯಾಗಿದ್ದ ವಿಜಯಪುರದಲ್ಲಿ ಈ ಬಾರೀ ಚಳಿ ಮೈನಡುಗಿಸುವಂತೆ ಮಾಡಿದೆ. ಈ ವರ್ಷದ ಕೊನೆಯಲ್ಲಿ ೯.೬ ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದ್ದು, ಇದು ರಾಜ್ಯದಲ್ಲೇ ಕನಿಷ್ಠ ತಾಪಮಾನವಾಗಿದೆ.

Tap to resize

Latest Videos

ಜಿಲ್ಲಾದ್ಯಂತ ಇದ್ದಕ್ಕಿದ್ದಂತೆ ಚಳಿರಾಯನ ಆರ್ಭಟ ಜೋರಾಗಿದ್ದು, ಜನರನ್ನು ಹೈರಾಣಾಗಿಸಿದೆ. ಬೆಳಗ್ಗೆ ಎದ್ದು ಹೊರಬರದಷ್ಟೂ ಚಳಿ ಕಾಡುತಿದೆ. ಜಿಲ್ಲಾದ್ಯಂತ ಚಳಿಯ ಹೊಡೆತಕ್ಕೆ ಸೂರ್ಯ ಕಿರಣಗಳು ಭೂಮಿಗೆ ತಾಕುವರೆಗೆ ಜನರು ಮನೆ ಬಾಗಿಲು, ಕಿಟಕಿ ತೆಗೆಯದೇ ಹೊದಿಕೆಯನ್ನು ಹೊದ್ದುಕೊಂಡು ಬೆಚ್ಚನೆ ಮಲುಗುತ್ತಿದ್ದಾರೆ. ಇನ್ನು ಅನಾರೋಗ್ಯದಿಂದ ಬಳಲುವವರು, ವೃದ್ಧರು ಚಳಿಯ ಆರ್ಭಟಕ್ಕೆ ನಡುವಂತಾಗಿದೆ. 

ಹೊಸ ವರ್ಷಾಚರಣೆಗೆ ರಾಜ್ಯದ ಪ್ರವಾಸಿ ತಾಣಗಳಲ್ಲಿ ರಶ್‌; ಹಂಪಿಗೆ 1 ಲಕ್ಷ, ಅಂಜನಾದ್ರಿ, ಗೋಕರ್ಣಕ್ಕೆ 25 ಸಾವಿರ ಭಕ್ತರ ಭೇಟಿ!

ಬರದ ಮಧ್ಯೆಯೂ ಚಳಿ ಆರ್ಭಟ:

ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಭೀಕರ ಬರದ ಆವರಿಸಿ, ಹಳ್ಳ, ಕೊಳ್ಳ, ಕೆರೆ, ಕಟ್ಟೆಗಳು ಬರಿದಾಗಿದ್ದರೂ ಮೈಕೊರೆಯುವ ಚಳಿಗೆ ಮಾತ್ರ ಬರ ಬಿದ್ದಿಲ್ಲ. ಪ್ರಸಕ್ತ ವರ್ಷ ಚಳಿಗಾಲ ತಿಂಗಳೊಪ್ಪತ್ತು ಕಾಲ ತಡವಾಗಿ ಆರಂಭಿಸಿದ್ದು, ಹೇಳಿಕೇಳಿ ಡಿಸೆಂಬರ್ ಚಳಿ ಕಚಗುಳಿ ಇಡುವಂತಾಗಿದೆ.

ಈ ವರ್ಷದ ಬಿರು ಬೇಸಿಗೆಯ ರಣರಣ ಬಿಸಿಲಿಗೆ ಕಂಗಾಲಾಗಿದ್ದ ಜನರು, ಇನ್ನು ಚಳಿಗೆ ಪರಿತಪಿಸುವ ಪರಿಸ್ಥಿತಿ ಉಂಟಾಗಿದೆ. ಸಾಮಾನ್ಯವಾಗಿ ದೀಪಗಳ ಸಾಲು ದೀಪಾವಳಿಯ ಬೆನ್ನಲ್ಲೆ ಚಳಿಗಾಲ ಆರಂಭಗೊಳ್ಳುತ್ತಿತ್ತು. ಆದರೆ ಭೀಕರ ಬರ ಹಾಗೂ ಹವಾಮಾನ ವೈಪರೀತ್ಯದಿಂದ ಚಳಿಗಾಳ ತಡವಾಗಿದ್ದು, ಕಳೆದ ವಾರದಿಂದ ಚಳಿ ಬಲಿಯುತ್ತ, ಜನರನ್ನು ಗೋಳಿಡುವಂತೆ ಮಾಡುತ್ತಿದೆ.

ದಾಖಲೆ ಕುಸಿತ ಕಂಡ ತಾಪಮಾನ:

ಉತ್ತರ ಭಾರದಲ್ಲಿ ಚಳಿಯ ಆರ್ಭಟ ಜೋರಾಗಿದೆ. ಅಲ್ಲದೇ ರಾಜ್ಯದ ಸಮತಟ್ಟಾದ ಪ್ರದೇಶಗಳನ್ನು ಪರಿಗಣನೆಗೆ ತೆಗೆದುಕೊಂಡಾಗ ವಿಜಯಪುರದಲ್ಲಿ ಈ ದಾಖಲೆ ಪ್ರಮಾಣದಲ್ಲಿ ತಾಪಮಾನ ಕುಸಿತ ಕಂಡಿದೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ.

ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ ಕಳೆದ ಡಿ.15ರಂದು 9.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ ಎಂಬುವುದು ಹವಾಮಾನ ಇಲಾಖೆಯ ವರದಿಯಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ತಾಪಮಾನ ಇಳಿಕೆಯಾಗುತ್ತದೆಯೋ? ಎಂದು ಜನರು ಕಂಗಾಲಾಗುವಂತಾಗಿದೆ. ಡಿ.30ರಂದು 10 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದರೆ, ಭಾನುವಾರ 10 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಚಳಿಯಿಂದ ಶೀತ, ಜ್ವರ ಹೆಚ್ಚಳ:

ಚಳಿ ಹಿನ್ನೆಲೆಯಲ್ಲಿ ಪರಿಣಾಮ ಮಕ್ಕಳಿಗೆ ಶೀತ ಜ್ವರ, ಕೆಮ್ಮು ಕಾಣಿಸುತ್ತಿದ್ದು, ಆಸ್ಪತ್ರೆಗೆ ತೆರಳುವಂತಾಗಿದೆ. ಚಳಿಯಿಂದ ವಯೋ ವೃದ್ಧರೆಲ್ಲ ಮಮ್ಮಲ ಮರಗುವಂತಾಗಿದೆ. ದಮ್ಮು-ಕೆಮ್ಮು ಇದ್ದವರ ಗೋಳು ದೇವರೇ ಬಲ್ಲಎನ್ನುವಂತಾಗಿದೆ. ರಾತ್ರಿಯೆಲ್ಲ ಉಸಿರಾಟಕ್ಕೆ ತೊಂದರೆಯಾಗುತ್ತಿದ್ದು, ಜೀವ ಕೈಯಲ್ಲಿ ಹಿಡಿದುಕೊಂಡೇ ಬದುಕುವಂತಾಗಿದೆ. ಚಳಿಯ ಹೊಡೆತಕ್ಕೆ ಅಬಾಲ-ವೃದ್ಧರೆಲ್ಲ ಮೆತ್ತಗಾಗಿ ಬಿಟ್ಟಿದ್ದಾರೆ.

ಚಳಿಯಿಂದ ರಕ್ಷಣೆಗೆ ನಾನಾ ತಂತ್ರ:

ಮೈ ಕೊರೆವ ಚಳಿಯಿಂದ ಜಿಲ್ಲೆಯ ಮಂದಿ ಬೆಚ್ಚನೆಯ ವಿವಿಧ ಉಣ್ಣೆ ಉಡುಪುಗಳನ್ನು ಖರೀದಿಸುತ್ತಿರುವುದು ಕಂಡು ಬರುತ್ತಿದೆ. ಎಲ್ಲೆಂದರಲ್ಲಿ ಜರ್ಕಿನ್‌ಗಳು, ಸ್ವೇಟರ್‌ಗಳು ಮಾರಾಟಕ್ಕೆ ಲಭ್ಯವಾಗಿವೆ. ರಸ್ತೆ ಬದಿಯಲ್ಲಿಯೂ ಮಾರಾಟಕ್ಕಿವೆ. ಅಲ್ಲದೇ ಗ್ರಾಮೀಣ ಭಾಗದಲ್ಲಿ ಬೆಳಗ್ಗೆ ಹಾಗೂ ಸಂಜೆ ಹೊತ್ತಲ್ಲಿ ಮನೆ ಮುಂದೆ ಕಸ ಕಡ್ಡಿಗಳನ್ನು ಸಂಗ್ರಹಿಸಿ ಸುಡುತ್ತ ಬೆಂಕಿ ಕಾಯಿಸುತ್ತ ಚಳಿ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಬೆಳಗ್ಗೆ ಎದ್ದು ಹೊಲಗದ್ದೆಗಳಿಗೆ ಹೋಗಲು ರೈತರಿಗೆ ಹಿಂಜರಿಸುತ್ತಿರುವ ದೃಶ್ಯ ಕಂಡುಬಂದಿದೆ. 

ಹೊಸ ವರ್ಷಾಚರಣೆಗೆ ನಂದಿಬೆಟ್ಟಕ್ಕೆ ಬರೋ ಪ್ರವಾಸಿಗರಿಗೆ ನಿರ್ಬಂಧ! ಕಾರಣ ಇಲ್ಲಿದೆ

ಡಿ.15ರಂದು ರಾಜ್ಯದಲ್ಲಿ ಕಡಿಮೆ ೯.೬ರಷ್ಟು ಕನಿಷ್ಠ ತಾಪಮಾನ ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಇಳಿಕೆಯಾಗುತ್ತದೆಯೋ ಎಂದು ಜನರು ಕಂಗಾಲಾಗುವಂತಾಗಿದೆ. ಉತ್ತರ ಭಾರತದಲ್ಲಿ ವಾಯುಬಾರ ಕುಸಿತವಾದ ಕಾರಣ ಸಮತಟ್ಟಾದ ಭಾಗವಾದ ವಿಜಯಪುರದಲ್ಲಿ ತಾಪಮಾನ ಕಡಿಮೆ ಆಗಿದೆ.

-ಡಾ.ಸೋಮೇಶ ಕೆ.ಜೆ. ಕೃಷಿ ಹವಾಮಾನಶಾಸ್ತ್ರಜ್ಞರು. ವಿಜಯಪುರ

ಈ ಸಾರಿ ಚಳಿ ತುಂಬಾ ಇದೆ. ತೋಟಕ್ಕೆ ಹೋಗಿ ಕೆಲಸ ಮಾಡಲು ಆಗುತ್ತಿಲ್ಲ. ನೀರು ಬಿಡಲು ಹೋದರೆ ಸಲಿಕೆ ಹಿಡಿಯಾಕ ಆಗುತ್ತಿಲ್ಲ. ನಸುಕಿನ್ಯಾಗ ಸ್ವಲ್ಪ ಹೊರಗ ಬಂದ್ರ ಮೈಯೆಲ್ಲ ನಡುಗಿ ಹೋಗ್ತಾದರೀ, ಕೆಲಸ ಮಾಡದಂಗ್‌ ಆಗ್ಯಾದರೀ.

-ಅಲ್ಲಾಭಕ್ಷ ಗದ್ಯಾಳ, ಪ್ರಗತಿಪರ ರೈತ ಕುಮಠೆ.

click me!