
ಮಂಗಳೂರು (ಜು.15): ಮಂಗಳೂರಿನಲ್ಲಿ ಮುಳುಗಿದ ಸಿರಿಯಾ ಸರಕು ನೌಕೆಯಿಂದ ತೈಲ ಹೊರ ತೆಗೆಯಲು ಸಮುದ್ರದಲ್ಲಿ ಪ್ರತಿಕೂಲ ಹವಾಮಾನ ಅಡ್ಡಿಯಾಗಿದೆ. ನೌಕೆ ಮುಳುಗಿ 23 ದಿನ ಕಳೆದಿದ್ದು, ತೈಲ ಸೋರಿಕೆ ಭೀತಿ ಇನ್ನೂ ನಿವಾರಣೆಯಾಗಿಲ್ಲ. ನೌಕೆಯಿಂದ ತೈಲ ಹೊರತೆಗೆಯಲು ಪೋರಬಂದರಿನಿಂದ ತಂತ್ರಜ್ಞ ನೌಕೆ ಆಗಮಿಸಿದರೂ ಇನ್ನೂ ಕಾಯುವ ಪರಿಸ್ಥಿತಿ ತಲೆದೋರಿದೆ.
ಈಗ ಸಮುದ್ರ ಅಬ್ಬರ ಜಾಸ್ತಿ ಇರುವುದರಿಂದ ಮುಳುಗಿದ ನೌಕೆಯ ಸಮೀಪಕ್ಕೆ ತೆರಳಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಬಂದರು ಅಧಿಕಾರಿಗಳ ಪ್ರಕಾರ ಬಹುತೇಕ ಜುಲೈ ಅಂತ್ಯ ಅಥವಾ ಆಗಸ್ಟ್ ಪ್ರಥಮ ವಾರದಲ್ಲಿ ತೈಲ ಹೊರ ತೆಗೆಯುವ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ. ಆ ಬಳಿಕವಷ್ಟೆನೌಕೆಯನ್ನು ತೆರವುಗೊಳಿಸಲು ಪ್ರಯತ್ನ ನಡೆಯಲಿದೆ.
Mangaluru: ಉಳ್ಳಾಲ ಕಡಲಲ್ಲಿ ವಿದೇಶಿ ನೌಕೆ ಮುಳುಗಡೆ, ತೈಲ ಸೋರಿಕೆ ಭೀತಿ
ಮುಳುಗಿದ ನೌಕೆಯಿಂದ ತೈಲ ಸೋರಿಕೆ ಬಗ್ಗೆ ದಿನದ 24 ಗಂಟೆಯೂ ಕೋಸ್ಟ್ ಗಾರ್ಡ್ ನೌಕೆ ಹಾಗೂ ಕರಾವಳಿ ಕಾವಲು ಪೊಲೀಸ್ ಬೋಟ್‌ಗಳು ಕಣ್ಗಾವಲು ನಡೆಸುತ್ತಿವೆ. ಪ್ಕತಿದಿನ ಸಂಜೆ ನೌಕಾಯಾನ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ. ಈ ವೇಳೆ ಜಿಲ್ಲಾಡಳಿತ, ಕೋಸ್ಟ್‌ಗಾರ್ಡ್, ಕರಾವಳಿ ಕಾಲವು ಪೊಲೀಸ್, ಮರೈನ್ ವಿಭಾಗ, ಬಂದರು ವಿಭಾಗದ ಅಧಿಕಾರಿಗಳು ಸಮಾಲೋಚನೆ ನಡೆಸುತ್ತಿದ್ದಾರೆ. ತೈಲ ಹೊರ ತೆಗೆಯಲು ಎಲ್ಲವೂ ಸನ್ನದ್ಧ ಸ್ಥಿತಿಯಲ್ಲಿದೆ, ಆದರೆ ಹವಾಮಾನ ಮಾತ್ರ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಬಂದರು ಅಧಿಕಾರಿಗಳು.
ಜೂ.21ರಂದು ಸಿರಿಯಾದ ಪ್ರಿನ್ಸಿಸ್ ಮಿರಾಲ್ ಹೆಸರಿನ ಸರಕು ನೌಕೆ ಉಳ್ಳಾಲ ಸಮುದ್ರ ತೀರದಲ್ಲಿ ಮುಳುಗಡೆಯಾಗಿದೆ. ನೌಕೆಯ ತಳಭಾಗದಲ್ಲಿ ಉಂಟಾದ ರಂಧ್ರದಿಂದ ನೀರು ಒಳನುಗ್ಗಿ ಈ ಅವಘಡ ಸಂಭವಿಸಿತ್ತು. ಕೋಸ್ಟ್‌ಗಾರ್ಡ್ ಸಿಬ್ಬಂದಿ ಈ ನೌಕೆಯಲ್ಲಿದ್ದ 15 ಮಂದಿಯನ್ನು ರಕ್ಷಿಸಿದ್ದರು. ಈ ಮಂದಿ ಈಗ ನವಮಂಗಳೂರು ಬಂದರು ಗೆಸ್ಟ್‌ಹೌಸ್‌ನಲ್ಲಿ ಇದ್ದಾರೆ.
ಸಿರಿಯಾದ ನೌಕೆ ಇಟಲಿಗೆ ತೆರಳುವ ಮಧ್ಯೆ ಉಳ್ಳಾಲ ಕಡಲ ತೀರಕ್ಕೆ ಹೇಗೆ ಬಂತು ಎಂಬ ಬಗ್ಗೆ ಕೇಂದ್ರ ಬಂದರು ಮತ್ತು ನೌಕಾಯಾನ ಇಲಾಖೆ, ಕಸ್ಟಮ್ಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಜಿಲ್ಲಾಡಳಿತ ಕೂಡ ಅವರಿಗೆ ವಿವರವಾದ ವರದಿ ಸಲ್ಲಿಸಿದೆ. ಶ್ರೀಲಂಕಾ ಮಾರ್ಗವಾಗಿ ತೆರಳುವ ವೇಳೆ ನೌಕೆಯ ತಳಭಾಗದಲ್ಲಿ ರಂಧ್ರ ಕಾಣಿಸಿದ ಕಾರಣ ಅಪಾಯದ ಹಿನ್ನೆಲೆಯಲ್ಲಿ ಸಮುದ್ರ ಮಧ್ಯೆಯ ನೇರ ಹಾದಿ ಬಿಟ್ಟು ಕಡಲ ತೀರದ ಮಾರ್ಗವಾಗಿ ಪ್ರಯಾಣ ಬೆಳೆಸಿತ್ತು. ಇದರಿಂದಾಗಿ ಉಳ್ಳಾಲ ಸಮುದ್ರ ತೀರ ತಲುಪಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಈಗ ಈ ನೌಕೆ ಮುಳುಗಿದ ಸ್ಥಿತಿಯಲ್ಲೇ ಇದೆ. ಇದರಲ್ಲಿನ ತೈಲ ಸೋರಿಕೆ ಬಗ್ಗೆ ಎರಡು ಬಾರಿ ಆರೋಪ ಕೇಳಿಬಂದಿತ್ತು. ಆದರೆ ಜಿಲ್ಲಾಡಳಿತ ಅದನ್ನು ನಿರಾಕರಿಸಿತ್ತು.
ಮಂಗಳೂರು: ಮುಳುಗಿದ ನೌಕೆ, ತೈಲ ಬೇರ್ಪಡಿಸಲು ಗುಜರಾತ್‌ನಿಂದ ನೌಕೆ ಆಗಮನ
ಸಮುದ್ರದ ಪ್ರಕ್ಷುಬ್ಧವಾಗಿರುವುದರಿಂದ ಸದ್ಯದ ಮಟ್ಟಿಗೆ ತೈಲ ಹೊರತೆಗೆಯುವ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಸಮುದ್ರ ಸಹಜ ಸ್ಥಿತಿಗೆ ಬಂದ ಬಳಿಕವೇ ಮುಳುಗಡೆಯಾದ ನೌಕೆಯಿಂದ ತೈಲ ಹೊರ ತೆಗೆಯಲಾಗುವುದು. ಮುಳುಗಡೆಯಾದ ನೌಕೆಯಿಂದ ಇಲ್ಲಿವರೆಗೆ ತೈಲ ಸೋರಿಕೆಯಾಗಿಲ್ಲ. ಆದರೂ ತೈಲ ಸೋರಿಕೆಯಾದರೆ ತಡೆಗಟ್ಟಲು ಎಲ್ಲ ರೀತಿಯ ಸಿದ್ಧತೆಯನ್ನು ನಡೆಸಲಾಗಿದೆ.
-ನಿರಂಜನ ಮೂರ್ತಿ, ಆಡಳಿತಾಧಿಕಾರಿ, ಬಂದರು ಇಲಾಖೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ