ಮಲೆನಾಡಿನಲ್ಲಿ ಮತ್ತೆ ಮಳೆಯಬ್ಬರ: ಅನೇಕ ಕಡೆ ರಸ್ತೆ, ಭೂಕುಸಿತ

By Govindaraj S  |  First Published Jul 15, 2022, 5:00 AM IST

ರಾಜ್ಯದ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಮಲೆನಾಡು ಭಾಗದಲ್ಲಿ ನಿರಂತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಅನೇಕ ಕಡೆ ಭೂಕುಸಿತ, ರಸ್ತೆಕುಸಿತಗಳಾಗುವುದರೊಂದಿಗೆ ಮನೆ, ಸಾರ್ವಜನಿಕ ಕಟ್ಟಡಗಳೂ ಕುಸಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. 


ಬೆಂಗಳೂರು (ಜು.15): ರಾಜ್ಯದ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಮಲೆನಾಡು ಭಾಗದಲ್ಲಿ ನಿರಂತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಅನೇಕ ಕಡೆ ಭೂಕುಸಿತ, ರಸ್ತೆಕುಸಿತಗಳಾಗುವುದರೊಂದಿಗೆ ಮನೆ, ಸಾರ್ವಜನಿಕ ಕಟ್ಟಡಗಳೂ ಕುಸಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಕಾಫಿತೋಟಗಳಲ್ಲಿ ಮಣ್ಣು ಕುಸಿದು ಅಪಾರ ಹಾನಿಯಾಗಿದೆ. ಮಹಾರಾಷ್ಟ್ರದ ಘಟ್ಟಪ್ರದೇಶ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ಮತ್ತದರ ಉಪನದಿಗಳ ಮಟ್ಟಹೆಚ್ಚಳಗೊಂಡಿದ್ದು ನದಿತೀರ ಪ್ರದೇಶಗಳು ಪ್ರವಾಹ ಭೀತಿಯನ್ನು ಎದುರಿಸುತ್ತಿವೆ. 

ತುಂಗಭದ್ರಾ, ಅಲಮಟ್ಟಿ, ನಾರಾಯಣಪುರ ಜಲಾಶಯಗಳಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕಲ್ಯಾಣ ಕರ್ನಾಟಕದ ಭಾಗದ ಹಲವು ಜಿಲ್ಲೆಗಳಲ್ಲಿ ಪ್ರವಾಹಾತಂಕ ಎದುರಾಗಿದೆ. ಮಳೆ ಸಂಬಂಧಿ ಕಾರಣಗಳಿಗೆ 1 ವರ್ಷದ ಬಾಲಕ ಸೇರಿದಂತೆ ಇಬ್ಬರು ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಉಡುಪಿ ಜಿಲ್ಲೆ ಬ್ರಹ್ಮಾವರ ಸಮೀಪದ ತೆಂಕಬೆಟ್ಟು ಎಂಬಲ್ಲಿ ಲೊರೆನ್‌ ಗ್ಯಾವಿನ್‌ ಲೂವಿಸ್‌ (5) ಎಂಬ ಬಾಲಕ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿದ್ದಾನೆ. 

Tap to resize

Latest Videos

Chikkamagaluru: ಮಲೆನಾಡಿನಲ್ಲಿ ಮಹಾಮಳೆಯಿಂದ ತತ್ತರಿಸಿದ ಜನರು: ಕುಸಿದ ಶಾಲಾ ಕೊಠಡಿ

ಮಳೆಯಿಂದ ರಕ್ಷಣೆ ಪಡೆಯುವ ಸಲುವಾಗಿ ಮನೆ ಮೇಲೆ ಟಾರ್ಪಲಿನ್‌ ಅಳವಡಿಸುವ ಸಂದರ್ಭ ವಿದ್ಯುತ್‌ ಆಘಾತವಾಗಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗೋವಿನಕೊಪ್ಪದಲ್ಲಿ ನಡದಿದೆ. ಏತನ್ಮಧ್ಯೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರು ಜಿಲ್ಲೆಗಳಲ್ಲಿ ಮಳೆ ಕೊಂಚ ಇಳಿಮುಖವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಗುರುವಾರ ಮತ್ತೆ ಮಣ್ಣು ಕುಸಿದಿದ್ದು ಮಣ್ಣನ್ನು ಜೆಸಿಬಿ ಯಂತ್ರದಿಂದ ತೆರವುಗೊಳಿಸಲಾಯಿತು. 

ಈವರೆಗೆ 200ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು ಗುರುವಾರ ಮೂಡಿಗೆರೆ ತಾಲೂಕಿನ ಸಬ್ಲಿ ಪ್ರಾಥಮಿಕ ಶಾಲೆ ಮತ್ತು ನಿಡುವಾಳೆ ಪ್ರೌಢಶಾಲೆಯ ಕಟ್ಟಡಗಳು ಕುಸಿದಿವೆ. ಚಿಕ್ಕಮಗಳೂರು ತಾಲೂಕಿನ ಕಸ್ಕೆ ಗ್ರಾಮದಲ್ಲಿ 10ಕ್ಕೂ ಹೆಚ್ಚು ಕಾಫಿ ತೋಟಗಳು ಸರ್ವನಾಶವಾಗಿದ್ದು 2000ಕ್ಕೂ ಹೆಚ್ಚು ಗಿಡಗಳು ಮಣ್ಣುಪಾಲಾಗಿದೆ. ಐದಳ್ಳಿ ಗ್ರಾಮದ ಕಾಫಿಯ ತೋಟದಲ್ಲಿ ಭೂ ಕುಸಿತವಾಗಿ ಬಂಡೆಗಳು ಉರುಳಿಬಿದ್ದ ಪರಿಣಾಮ ಹಲವು ಗಿಡಗಳಿಗೆ ಹಾನಿಯಾಗಿದೆ. ಕೊಡಗು ಜಿಲ್ಲಾದ್ಯಂತ ಗುರುವಾರ ಗಾಳಿ ಸಹಿತ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಅಪಾರ ನಷ್ಟಸಂಭವಿಸಿದೆ. ಹಲವು ಮನೆಗಳ ಮೇಲೆ ಮರ ಬಿದ್ದು ಮನೆಗಳಿಗೆ ಹಾನಿಯಾಗಿವೆ. 

ಬ್ರಹ್ಮಗಿರಿ ತಪ್ಪಲಿನಲ್ಲಿ ಬುಧವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತಗೊಂಡಿದೆ. ಭಾಗಮಂಡಲ-ನಾಪೋಕ್ಲು ರಸ್ತೆ ಮೂರನೇ ಬಾರಿ ಜಲಾವೃತಗೊಂಡು ಸಂಪರ್ಕ ಕಡಿತವಾಗಿದೆ. ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಮಡಿಕೇರಿ ತಾಲೂಕಿನ ಬಲಮುರಿ ಕೆಳ ಸೇತುವೆ ಮುಳುಗಡೆಗೊಂಡಿದ್ದು 2 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಭೂಕುಸಿತದ ಭೀತಿಯಿರುವ ತೋರದ 14 ಕುಟುಂಬದ 34 ಜನರನ್ನು ತೋರ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಜು,15, 16ರಂದು ರಜೆ ಘೋಷಿಸಲಾಗಿದೆ.

ಇನ್ನು ಮಹಾರಾಷ್ಟ್ರ ಘಟ್ಟಪ್ರದೇಶ, ಬೆಳಗಾವಿಯಲ್ಲಿ ಗುರುವಾರ ಮಳೆಯ ಅಬ್ಬರ ಜೋರಾಗಿರುವ ಪರಿಣಾಮ ಕೃಷ್ಣಾ, ಘಟಪ್ರಭಾ, ಮಲಪ್ರಭಾ ಸೇರಿ ಜಿಲ್ಲೆಯ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಒಟ್ಟು 10 ಸೇತುವೆಗಳು ಮುಳುಗಡೆಯಾಗಿವೆ. ಖಾನಾಪುರ ತಾಲೂಕಿನಲ್ಲಿ ಹಬ್ಬನಹಟ್ಟಿಆಂಜನೇಯ ದೇಗುಲ ಪೂರ್ಣ ಜಲಾವೃತವಾಗಿದೆ. ಮುಂತುರ್ಗಾ ಬಳಿ ಹೆಮ್ಮಡಗಾ ರಸ್ತೆಯ ಬಳಿ ಸೇತುವೆ ಮುಳುಗಡೆಯಾಗಿದ್ದು ಕರ್ನಾಟಕ- ಗೋವಾ ನಡುವಿನ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ಕೃಷ್ಣಾ ನದಿಗೆ ಪ್ರಸ್ತುತ 1,21,472 ಕ್ಯುಸೆಕ್‌ ನೀರು ಬರುತ್ತಿದ್ದು, 1,25,000 ಕ್ಯುಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ.

Bagalkote: ಪ್ರವಾಹ ನಿರ್ವಹಣೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಸಚಿವ ಸಿ.ಸಿ.ಪಾಟೀಲ್‌

ಇನ್ನು ದಕ್ಷಿಣ ಕನ್ನಡದ ಮೂಡುಬಿದಿರೆಯ 4 ಗ್ರಾಮಗಳಲ್ಲಿ ಮಳೆ ನೀರು ಗದ್ದೆಗೆ ನುಗ್ಗಿ ಸುಮಾರು 300 ಎಕರೆಯಷ್ಟುಕೃಷಿ ಭೂಮಿ ನಾಶವಾಗಿದೆ. 15ಕ್ಕೂ ಅಧಿಕ ಮನೆಗಳ ಸುತ್ತಮುತ್ತ ನೆರೆ ನೀರು ತುಂಬಿದ್ದು, ದ್ವೀಪ ಸದೃಶ ವಾತಾವರಣ ಉಂಟಾಗಿದೆ. ಕೆಮ್ರಾಲ್‌ ಪಂಜದ ಉಳಿಯದಲ್ಲಿ ನಂದಿನಿ ನದಿ ಉಕ್ಕಿ ಹರಿದು ದ್ವೀಪದಂತಾಗಿದ್ದು ಜನತೆ ಕೃಷಿ ಭೂಮಿಯಲ್ಲಿ ದೋಣಿಯಲ್ಲೇ ಸಂಚರಿಸುವಂತಾಗಿದೆ.

click me!