Karnataka Rain : ರಾಜ್ಯದಲ್ಲಿ 2 ದಿನ ಮತ್ತೆ ಮಳೆ : ಎಲ್ಲೆಲ್ಲಿ..?

Kannadaprabha News   | Asianet News
Published : Dec 06, 2021, 07:12 AM ISTUpdated : Dec 06, 2021, 07:19 AM IST
Karnataka Rain :  ರಾಜ್ಯದಲ್ಲಿ 2 ದಿನ ಮತ್ತೆ ಮಳೆ : ಎಲ್ಲೆಲ್ಲಿ..?

ಸಾರಾಂಶ

 ರಾಜ್ಯದ ಕೆಲ ಭಾಗದಲ್ಲಿ ಮಳೆ ಮುಂದುವರಿದಿದ್ದು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸೋಮವಾರ ಹಾಗೂ ಮಂಗಳವಾರ ಹಗುರದಿಂದ ಸಾಧಾರಣ ಮಳೆ  ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ

 ಬೆಂಗಳೂರು(ಜ.06):  ರಾಜ್ಯದ (Karnataka)  ಕೆಲ ಭಾಗದಲ್ಲಿ ಮಳೆ ಮುಂದುವರಿದಿದ್ದು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸೋಮವಾರ ಹಾಗೂ ಮಂಗಳವಾರ ಹಗುರದಿಂದ ಸಾಧಾರಣ ಮಳೆಯಾಗಲಿದೆ (Rain) ಎಂದು ಹವಾಮಾನ ಇಲಾಖೆ (Weather Department) ಮುನ್ಸೂಚನೆ ನೀಡಿದೆ.  ಸೋಮವಾರ ದಕ್ಷಿಣ ಒಳನಾಡಿನ ಬೆಂಗಳೂರು (Bengaluru), ಹಾಸನ, ಕೊಡಗು, ಚಾಮರಾಜನಗರ (Chamarajanagar), ಮೈಸೂರು (Mysuru), ರಾಮನಗರ, ತುಮಕೂರು, ಬಳ್ಳಾರಿ, ಮಂಡ್ಯ ಜಿಲ್ಲೆಗಳ ಒಂದೆರಡು ಕಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಮಂಗಳವಾರ ಹಾಸನ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಯ ಒಂದೆರಡು ಕಡೆ ಮಳೆಯಾಗಲಿದ್ದು ಉಳಿದೆಡೆ ಒಣ ಹವೆ ಇರಲಿದೆ. ಆ ಬಳಿಕ ಎರಡು ದಿನ ಕೊಡಗು ಮತ್ತು ಹಾಸನದ ಒಂದೆರಡು ಕಡೆ ಮಳೆಯಾಗಲಿದ್ದು ಉಳಿದಂತೆ ದಕ್ಷಿಣ ಒಳನಾಡಿನಲ್ಲಿ ಒಣ ಹವೆ ಇರಲಿದೆ.

ಉತ್ತರ ಒಳನಾಡಿನಲ್ಲಿ ಸೋಮವಾರದಿಂದ ಮುಂದಿನ ನಾಲ್ಕು ದಿನವೂ ಒಣ ಹವೆ ಇರಲಿದೆ. ಕರಾವಳಿಯ (Coastal) ದಕ್ಷಿಣ ಕನ್ನಡ, ಉಡುಪಿಯ (Udupi) ಒಂದೆರಡು ಕಡೆ ಮುಂದಿನ ನಾಲ್ಕು ದಿನಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಉತ್ತರ ಕನ್ನಡದಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಭಾನುವಾರ ಬೆಳಗ್ಗೆ 8.30ಕ್ಕೆ ಪೂರ್ಣಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದ ಒಳನಾಡಿನ ಕೆಲ ಭಾಗದಲ್ಲಿ ಮತ್ತು ಕರಾವಳಿಯ ಒಂದೆರಡು ಕಡೆ ಮಳೆಯಾಗಿದೆ. ವಿಜಯಪುರದ ಆಲಮಟ್ಟಿ5 ಸೆಂ.ಮೀ., ಮಂಡ್ಯದ ಕೃಷ್ಣರಾಜಸಾಗರ, ಹಾಸನದ ಶ್ರವಣಬೆಳಗೊಳ, ತುಮಕೂರಿನ ಬರಗೂರಿನಲ್ಲಿ ತಲಾ 4 ಸೆಂ.ಮೀ. ಮಳೆಯಾಗಿದೆ.

ಜವಾದ್ ಅಬ್ಬರಕ್ಕೆ ತತ್ತರ : ಜವಾದ್‌ ಚಂಡಮಾರುತ ತೀವ್ರತೆ ಕಳೆದುಕೊಂಡು ವಾಯುಭಾರ ಕುಸಿತವಾಗಿ ಬದಲಾಗಿದ್ದರೂ, ಪರಿಣಾಮ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದೆ. ಭಾನುವಾರ ಬೆಳಗ್ಗೆ ಮಾಹಿತಿ ನೀಡಿದ ಭಾರತೀಯ ಹವಾಮಾನ ಇಲಾಖೆ, ಕಳೆದ 6 ಗಂಟೆಗಳಿಂದ ಪ್ರತೀ ಗಂಟೆಗೆ 20 ಕಿ.ಮೀ ವೇಗವಾಗಿ ಬೀಸುತ್ತಿರುವ ಜವಾದ್‌, ಗೋಪಾಲ್‌ಪುರದಿಂದ 90 ಕಿ.ಮೀ ವೇಗವಾಗಿ ಮತ್ತು ಪುರಿಯಿಂದ 120 ಕಿ.ಮೀ ಹಾಗೂ ಪರದೀಪ್‌ನಿಂದ 210 ಕಿ.ಮೀ ವೇಗವಾಗಿ ಚಲಿಸಲಿದೆ. ಹೀಗಾಗಿ ರಾಜ್ಯಾದ್ಯಂತ ಭಾನುವಾರ ಪೂರ್ತಿ ಮಳೆಯಾಗಿದೆ ಎಂದಿದೆ.

ಇನ್ನು ಗಂಜಾಂ ಜಿಲ್ಲೆಯಲ್ಲಿ 15 ಸೆಂ.ಮೀ, ನಯಗಢದಲ್ಲಿ 10 ಸೆಂ.ಮೀ., ಛತ್ರಪುರದಲ್ಲಿ 8 ಸೆಂ.ಮೀ., ಭುವನೇಶ್ವರದಲ್ಲಿ 42.3 ಮಿ.ಮೀ ಮಳೆಯಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಪ್ರವಾಸಿಗರು ಸೇರಿ ಎಲ್ಲರನ್ನೂ ಸಮುದ್ರ ಭಾಗದಿಂದ ತೆರವುಗೊಳಿಸಲಾಗಿದೆ.ಬಂಗಾಳದಲ್ಲಿ ಉತ್ತರ ಪರಗಣಸ್‌ ಜಿಲ್ಲೆಯಿಂದ ಹೂಗ್ಲಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ದೋಣಿಯಾನವನ್ನು ರದ್ದುಪಡಿಸಲಾಗಿದೆ.

ಕ್ಷೀಣಿಸಿದ ಜವಾದ್‌ ಚಂಡಮಾರುತ : ಒಡಿಶಾ ಹಾಗೂ ಆಂಧ್ರಪ್ರದೇಶ ಕರಾವಳಿಯಲ್ಲಿ ಭೀತಿ ಸೃಷ್ಟಿಸಿದ್ದ ಜವಾದ್‌ ಚಂಡಮಾರುತ ದುರ್ಬಲಗೊಂಡಿದೆ. ಇದು ‘ವಾಯುಭಾರ ಕುಸಿತ’ವಾಗಿ ಕ್ಷೀಣಿಸಿದ್ದು, ಈಗಾಗಲೇ ‘ಗುಲಾಬ್‌’ ಹಾಗೂ ‘ಯಾಸ್‌’ ಚಂಡಮಾರುತದಿಂದ ತತ್ತರಿಸಿದ್ದ ಉಭಯ ರಾಜ್ಯಗಳ ಕರಾವಳಿ ಜನರಿಗೆ ನಿರಾಳತೆ ಉಂಟು ಮಾಡಿದೆ.

ಭಾನುವಾರ ಚಂಡಮಾರುತದ (Cyclone) ಸ್ವರೂಪ ತಾಳಿ ಒಡಿಶಾದ ಪುರಿ ಕಡಲತೀರಕ್ಕೆ ‘ಜವಾದ್‌’ ಅಪ್ಪಳಿಸಬೇಕಿತ್ತು. ಗಂಟೆಗೆ 110 ಕಿ.ಮೀ. ವೇಗದ ಬಿರುಗಾಳಿಯೊಂದಿಗೆ ಇದು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಚಂಡಮಾರುತದ ಪರಿಣಾಮ ಒಟ್ಟು 7 ರಾಜ್ಯಗಳಲ್ಲಿ ಸಾಮಾನ್ಯದಿಂದ ಭಾರೀ ಮಳೆಯ (Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಒಡಿಶಾ, ಆಂಧ್ರ, ಬಂಗಾಳದ ಕರಾವಳಿಯಿಂದ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರವುಗೊಳಿಸಲಾಗಿತ್ತು.

‘ಆದರೆ ಶನಿವಾರ ಇದರ ತೀವ್ರತೆ ಕ್ಷೀಣಿಸಿದೆ. ಭಾನುವಾರ ಮಧ್ಯಾಹ್ನ ಪುರಿ ಕಡಲತೀರಕ್ಕೆ ಇದು ಸಮೀಪಿಸಿದಾಗ ‘ವಾಯುಭಾರ ಕುಸಿತ’ವಾಗಿ ಮಾರ್ಪಡಲಿದೆ’ ಎಂದು ಇಲಾಖೆ ಶನಿವಾರ ಸ್ಪಷ್ಟಪಡಿಸಿದೆ.

64 ಎನ್‌ಡಿಆರ್‌ಎಫ್‌ ತಂಡ:  ಒಡಿಶಾ ಹಾಗೂ ಆಂಧ್ರದಲ್ಲಿನ ಚಂಡಮಾರುತದ ವೇಳೆ ರಕ್ಷಣಾ ಕೆಲಸಕ್ಕೆಂದು 64 ಎನ್‌ಡಿಆರ್‌ಎಫ್‌ ತಂಡಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಶನಿವಾರದಿಂದ ಜಾರಿಗೆ ಬರುವಂತೆ ಮುಂದಿನ 3 ದಿನಗಳ ಅವಧಿಗೆ ಆಂಧ್ರ ಮತ್ತು ಒಡಿಶಾದಲ್ಲಿ ಸಂಚರಿಸುವ 90ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ