ವಕ್ಫ್ ಬೋರ್ಡ್ ಅಧ್ಯಕ್ಷನಿಂದಲೇ 6 ಎಕರೆ ವಕ್ಫ್ ಭೂಮಿ ಕಬಳಿಕೆ: ಹಗರಣದ ದಾಖಲೆ ಬಿಚ್ಚಿಟ್ಟ ಎನ್.ಆರ್. ರಮೇಶ್

By Sathish Kumar KH  |  First Published Dec 12, 2024, 12:21 PM IST

ಚಿತ್ರದುರ್ಗದ ಬಳಿ ಮುಸ್ಲಿಂ ಸಮುದಾಯದ ಸ್ಮಶಾನಕ್ಕೆ ಮಂಜೂರಾದ ಭೂಮಿಯನ್ನು ವಕ್ಫ್ ಮಂಡಳಿ ಅಧ್ಯಕ್ಷರು ಕಬಳಿಸಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆರೋಪಿಸಿದ್ದಾರೆ. ಈ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.


ಬೆಂಗಳೂರು (ಡಿ.12): ಚಿತ್ರದುರ್ಗದ ಬಳಿಯ ಅಗಸನಕಲ್ಲು ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಸ್ಮಶಾನಕ್ಕೆಂದು ಕಾನೂನು ರೀತ್ಯಾ ಸರ್ಕಾರಿ ಅಧಿಸೂಚನೆಯಂತೆ ಮಂಜೂರಾಗಿರುವ ಸುಮಾರು 10 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಸ್ವತ್ತನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವ ವಕ್ಫ್ ಮಂಡಳಿಯ ಅಧ್ಯಕ್ಷರೇ ಕಬಳಿಸಿದ್ದಾರೆ. 'ಬೇಲಿಯೇ ಎದ್ದು ಹೊಲವನ್ನು ಮೇಯ್ದಂತೆ' ಎಂಬ ಗಾದೆಗೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ದಾಖಲೆಗಳ ಸಮೇತ ಲೋಕಾಯುಕ್ತ ಇಲಾಖೆಗೆ ದೂರು ಸಲ್ಲಿಕೆ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷನೇ ವಕ್ಫ್ ಮಂಡಳಿಯ ಆಸ್ತಿಯನ್ನು ಕಬಳಿಸಿರುವ ಭೂ ಕಬಳಿಕೆ ಹಗರಣ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ತಾಲ್ಲೂಕು, ಕಸಬಾ ಹೋಬಳಿ ಅಗಸನಕಲ್ಲು ಗ್ರಾಮದ ಸರ್ವೆ ನಂಬರ್ 11 ರಲ್ಲಿ ಹಿಂದಿನ ವಿಶೇಷ ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಇವರು 06 ಎಕರೆ ಜಮೀನನ್ನು ಮುಸ್ಲಿಂ ಜನಾಂಗದ ಖಬರಸ್ಥಾನಕ್ಕೆಂದು ಮಂಜೂರು (ಸಂಖ್ಯೆ: LNDCR/170/86-87, Dt: 31/03/1987) ಮಾಡಿರುತ್ತಾರೆ.

Tap to resize

Latest Videos

ಸದರಿ ಚಿತ್ರದುರ್ಗ ನಗರದ ಅಗಸನಕಲ್ಲು ಗ್ರಾಮದ ಸರ್ವೆ ನಂಬರ್ 11 ಅನ್ನು ಕಾನೂನು ಬಾಹಿರವಾಗಿ ಹೊಸ ಸರ್ವೆ ನಂಬರ್ 25 ಎಂದು ಪೋಡು ದುರಸ್ತಿ ಮಾಡಿಸಿರುವ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಅನ್ವರ್ ಬಾಷಾ ಸಂಪೂರ್ಣ ಸ್ವತ್ತನ್ನು ಅತಿಕ್ರಮಿಸಿಕೊಂಡು ಖಾಸಗಿ ಶಾಲಾ ಕಟ್ಟಡವನ್ನು ಮತ್ತು ತಮ್ಮ ವಾಸಕ್ಕಾಗಿ ಬೃಹತ್ ಬಂಗಲೆಯನ್ನು ನಿರ್ಮಿಸಿರುತ್ತಾರೆ. ಮುಸ್ಲಿಂ ಸಮುದಾಯದ ಸ್ಮಶಾನಕ್ಕೆಂದು ಕಾನೂನು ರೀತ್ಯಾ ಸರ್ಕಾರಿ ಅಧಿಸೂಚನೆಯಂತೆ ಮಂಜೂರಾಗಿರುವ ಸುಮಾರು 10 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಸ್ವತ್ತನ್ನು ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ವಕ್ಫ್ ಮಂಡಳಿಯ ಅಧ್ಯಕ್ಷರೇ ಕಬಳಿಸಿರುವುದು ನಿಜಕ್ಕೂ ವಿಪರ್ಯಾಸವಾಗಿರುತ್ತದೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಹುಡುಗಿ ವಿಚಾರಕ್ಕೆ ವಿದ್ಯಾರ್ಥಿಗಳ ಗ್ಯಾಂಗ್ ವಾರ್! ಬೆಚ್ಚಿಬಿಳಿಸುತ್ತೆ ವಿಡಿಯೋ ದೃಶ್ಯ!

ಕೇಂದ್ರ ವಕ್ಫ್ ಬೋರ್ಡ್ ಕಾಯ್ದೆ-1923ರಂತೆ ಮುಸಲ್ಮಾನರ ಖಬರಸ್ಥಾನ, ಮಸೀದಿ ಮತ್ತು ದರ್ಗಾಗಳು ವಕ್ಫ್ ಮಂಡಳಿಯ ಆಸ್ತಿ ಎಂದು ಪರಿಗಣಿಸಲ್ಪಟ್ಟಿರುತ್ತದೆ. ಹಾಗಿದ್ದಾಗ್ಯೂ ಸಹ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಸೇರಿದ ಅಮೂಲ್ಯ ಆಸ್ತಿಯನ್ನು ಅದೇ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಅನ್ವರ್ ಬಾಷಾ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕಬಳಿಸಿ, ಸದರಿ ಸ್ವತ್ತಿನಲ್ಲಿ ತಮ್ಮದೇ ಮಾಲೀಕತ್ವದ ಬೃಹತ್ತಾದ ಖಾಸಗಿ ಶಾಲಾ ಕಟ್ಟಡವನ್ನು ಮತ್ತು ತಮ್ಮ ವಾಸಕ್ಕಾಗಿ ಬೃಹತ್ ಬಂಗಲೆಯನ್ನು ನಿರ್ಮಿಸಿರುತ್ತಾರೆ. ಇವರ ಈ ಭೂ ಕಬಳಿಕೆ ಕಾರ್ಯಕ್ಕೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧಿಕಾರಿಗಳೂ ಸಹ ಎಲ್ಲ ರೀತಿಯ ಸಹಕಾರ ನೀಡಿರುವುದು ಅತ್ಯಂತ ಸ್ಪಷ್ಟವಾಗಿರುತ್ತದೆ.

ಆದ ಕಾರಣ ವಕ್ಫ್ ಮಂಡಳಿಯ ಆಸ್ತಿಯನ್ನು ಕಬಳಿಸಿರುವ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಅನ್ವರ್ ಬಾಷಾ ಮತ್ತು ಇವರ ಭೂ ಕಬಳಿಕೆಗೆ ಎಲ್ಲ ರೀತಿಯ ಸಹಕಾರ ನೀಡಿರುವ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧ ಹಾಗೂ ಕೂಡಲೇ ಈ ಸರ್ಕಾರಿ ಆಸ್ತಿಯನ್ನು ರಾಜ್ಯ ಸರ್ಕಾರದ ವಶಕ್ಕೆ ಪಡೆಯುವ ಸಂಬಂಧ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಆಗ್ರಹಿಸಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶದ ಜೌನ್ಪುರದಲ್ಲಿ ಮುಸ್ಲಿಮರಲ್ಲಿ ಹಿಂದೂ ಉಪನಾಮದ ಹೊಸ ಟ್ರೆಂಡ್‌!

ಅಲ್ಲದೇ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಅನ್ವರ್ ಬಾಷಾ ಸೇರಿದಂತೆ ಇವರ ಭೂ ಕಬಳಿಕೆಗೆ ಎಲ್ಲ ರೀತಿಯ ಸಹಕಾರ ನೀಡಿರುವ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧಿಕಾರಿಗಳ ವಿರುದ್ಧ ಸರ್ಕಾರಿ ಭೂ ಕಬಳಿಕೆ, ವಂಚನೆ, ಅಧಿಕಾರ ದುರುಪಯೋಗ ಮತ್ತು ನಕಲಿ ದಾಖಲೆ ತಯಾರಿಕೆ ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಂಪೂರ್ಣ ದಾಖಲೆಗಳ ಸಹಿತ ಲೋಕಾಯುಕ್ತದಲ್ಲಿ ದೂರು ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರಮೇಶ್ ತಿಳಿಸಿದ್ದಾರೆ.

click me!