ಎಸ್.ಎಂ.ಕೃಷ್ಣ ಅವರನ್ನು ರಾಜಕೀಯದಲ್ಲಿ ಘನತೆಯ ಪ್ರತೀಕವಾಗಿ ನೆನಪಿಸಿಕೊಳ್ಳಲಾಗುತ್ತದೆ. ಅವರ ನಡೆ-ನುಡಿಗಳಲ್ಲಿ ಎದ್ದು ಕಾಣುತ್ತಿದ್ದ ಘನತೆ ಅವರನ್ನು ವಿಶಿಷ್ಟಗೊಳಿಸಿತ್ತು. ಕಷ್ಟದ ಸಮಯದಲ್ಲೂ ಘನತೆಯನ್ನು ಕಾಪಾಡಿಕೊಂಡ ಅವರ ವ್ಯಕ್ತಿತ್ವ ಇಂದಿನ ರಾಜಕಾರಣಿಗಳಿಗೆ ಮಾದರಿ.
-ರವಿ ಹೆಗಡೆ
ಒಬ್ಬ ರಾಜಕಾರಣಿಯನ್ನು ನಾವು ಯಾಕೆ ನೆನಪಿಸಿಕೊಳ್ಳುತ್ತೇವೆ? ಯಾಕೆ ಅವರು ಮಿಕ್ಕವರಿಗಿಂತ ವಿಶಿಷ್ಚವಾಗಿ ಕಾಣಿಸುತ್ತಾರೆ? ನೂರಾರು ರಾಜಕೀಯ ಮುತ್ಸದಿಗಳ ಸಾಲಿನಲ್ಲಿ ಯಾಕೆ ಭಿನ್ನವಾಗಿ ನಿಲ್ಲುತ್ತಾರೆ ಎಂದು ನೋಡುತ್ತಾ ಹೋದರೆ, ಒಬ್ಬೊಬ್ಬರಲ್ಲಿ ಒಂದೊಂದು ಧೀಮಂತಿಕೆ ಸೆಳೆಯುತ್ತದೆ. ಎಸ್ ಎಂ ಕೃಷ್ಣ ಅವರ ವ್ಯಕ್ತಿತ್ವದಲ್ಲಿ ನನ್ನನ್ನು ಸೆಳೆದದ್ದು ಅವರ ಪ್ರತಿಯೊಂದು ನಡೆಯಲ್ಲೂ ನುಡಿಯಲ್ಲೂ ಎದ್ದು ಕಾಣುತ್ತಿದ್ದ ಘನತೆ.
ನಮ್ಮ ಕಾಲದ ಬಹುತೇಕ ರಾಜಕಾರಣಿಗಳನ್ನು ನೋಡಿದಾಗ ಈ ವ್ಯತ್ಯಾಸ ನಮಗೆ ನಿಚ್ಚಳವಾಗುತ್ತದೆ. ಸಾರ್ವಜನಿಕವಾಗಿ ಕೂಗಾಡುವ, ಅಪಶಬ್ದಗಳನ್ನು ಬಳಸುವ, ಬಾಯಿ ಹರಿದುಕೊಳ್ಳುವ, ಶರಟು ಹರಿದುಕೊಳ್ಳುವ, ಅವಾಚ್ಯಪದಗಳಿಂದ ನಿಂದಿಸುವ ರಾಜಕೀಯ ನಾಯಕರನ್ನು ನಾವು ನೋಡುತ್ತಿದ್ದೇವೆ. ಅವರೆಲ್ಲ ಒಮ್ಮೆ ಎಸ್ ಎಂ ಕೃಷ್ಣ ಹೇಗಿದ್ದರು ಅಂತ ನೋಡಿದರೆ, ರಾಜಕಾರಣಿಯೊಬ್ಬ ಸಾರ್ವಜನಿಕ ಜೀವನದಲ್ಲಿ ಹೇಗಿರಬೇಕು ಅನ್ನುವುದು ಗೊತ್ತಾಗಿಬಿಡುತ್ತದೆ.
ಎಸ್ ಎಂ ಕೃಷ್ಣ ಅವರ ಮಾತಿನಲ್ಲಿ ಎಂಥ ಘನತೆಯಿತ್ತು ಅನ್ನುವುದನ್ನು ನಾನು ಉದ್ದಕ್ಕೂ ನೋಡುತ್ತಲೇ ಬಂದಿದ್ದೇನೆ. ಎಂಥಾ ಸಂದಿಗ್ಧದ ಸಂದರ್ಭದಲ್ಲೂ ಅವರು ‘ಲೂಸ್‌ಟಾಕ್’ ಮಾಡಲಿಲ್ಲ. ಅವರ ಜತೆಗಿನ ಮಾತು ಜಗಳದ ರೂಪ ಪಡೆಯುತ್ತಿರಲಿಲ್ಲ, ಸಂವಾದವೋ ವಾಗ್ವಾದವೋ ಆಗಿಯೇ ಉಳಿಯುತ್ತಿತ್ತು. ಸೈದ್ಧಾಂತಿಕ ಭಿನ್ನಾಭಿಪ್ರಾಯ ಎಂಬ ಮಾತಿಗೆ ಅವರು ಮನ್ನಣೆ ಕೊಡುತ್ತಿದ್ದರು. ತನ್ನ ಎದುರಾಳಿಯ ಅಭಿಪ್ರಾಯ ತನಗೆ ಒಪ್ಪಿಗೆಯಾಗದೇ ಇದ್ದಾಗ, ಆ ಅಭಿಪ್ರಾಯವನ್ನು ಅವರು ವಿರೋಧಿಸುತ್ತಿದ್ದರೇ ಹೊರತು, ಆತನ ವ್ಯಕ್ತಿತ್ವವನ್ನು ನಿಂದಿಸುವ ಕೆಲಸ ಮಾಡುತ್ತಿರಲಿಲ್ಲ. ಎಸ್ ಎಂ ಕೃಷ್ಣ ಅದನ್ನು ಗೆದ್ದಾಗಲೂ ಸೋತಾಗಲೂ ಪಾಲಿಸಿಕೊಂಡು ಬಂದರು.
ಕೃಷ್ಣ ಪಥ: ಸಮಾಜವಾದದಿಂದ ಬಿಜೆಪಿಯವರೆಗಿನ ರೋಚಕ ರಾಜಕೀಯ ಪಯಣ -ಪ್ರಶಾಂತ್ ನಾತು ಅಂಕಣ
ಅವರು ಟೀಕಿಸುತ್ತಿದ್ದ ರೀತಿಯಲ್ಲೇ ಆ ಘನತೆ ಇರುತ್ತಿತ್ತು. ಮನುಷ್ಯನ ಧೀಮಂತಿಕೆಯಲ್ಲಿ ಅವರು ನಂಬಿಕೆ ಇಟ್ಟಿದ್ದರು. ಜನಬೆಂಬಲ, ಸಂಪತ್ತು, ಅಧಿಕಾರ ಇವೆಲ್ಲ ಇದ್ದಾಗ ಎಂಥವರಿಗೂ ತಲೆತಿರುಗುತ್ತದೆ ಅನ್ನುವುದಕ್ಕೆ ಈಗಿನ ರಾಜಕಾರಣದಲ್ಲಿ ಬೇಕಾದಷ್ಟು ಸಾಕ್ಷಿಗಳು ಸಿಗುತ್ತವೆ. ಆದರೆ ಟೀಕೆಗೆ ಒಳಗಾದವರು ಕೂಡ ಕೆರಳದೇ, ತಮ್ಮ ತಪ್ಪನ್ನು ತಿದ್ದಿಕೊಳ್ಳುವಂತೆ ಕೃಷ್ಣ ಮಾತಾಡುತ್ತಿದ್ದರು.
ಅದಕ್ಕೆ ಅನೇಕ ಉದಾಹರಣೆಗಳನ್ನು ನೋಡಬಹುದು. ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಅವರು ಎದುರಿಸಿದ ಮಹತ್ವದ ಬಿಕ್ಕಟ್ಟು ಕಾವೇರಿ ನೀರಿಗೆ ಸಂಬಂಧಿಸಿದ್ದು. ಅವರನ್ನು ಕೆಟ್ಟ ಕನಸಿನಂತೆ ಅದು ಕಾಡುತ್ತಲೇ ಇತ್ತು. ಅದೇ ವಿಚಾರದಲ್ಲಿ ಜಯಲಲಿತಾ ಅವರ ವಿರುದ್ಧ ಸಲ್ಲದ ಹೇಳಿಕೆಗಳನ್ನು ಕೊಡುತ್ತಲೇ ಇದ್ದರು. ಎಸ್ ಎಂ ಕೃಷ್ಣ ಆ ಮಟ್ಟಕ್ಕೆ ಎಂದೂ ಇಳಿಯಲಿಲ್ಲ ಅಷ್ಟೇ ಅಲ್ಲ, ಕಾವೇರಿ ಮಾತುಕತೆಗೆ ಜಯಲಲಿತಾ ಬೆಂಗಳೂರಿಗೆ ಬಂದಾಗ ಅವರನ್ನು ಘನತೆಯಿಂದಲೇ ನಡೆಸಿಕೊಂಡರು.
ದೇವೇಗೌಡರ ವಿಚಾರದಲ್ಲೂ ಎಸ್ ಎಂ ಕೃಷ್ಣ ನಡೆ ಮತ್ತು ನುಡಿ ಘನತೆಯಿಂದ ಕೂಡಿದ್ದಾಗಿತ್ತು. ಕೃಷ್ಣ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿಸಿ, ಅವರು ರಾಜ್ಯಪಾಲರಾಗಬೇಕಾದ ಪರಿಸ್ಥಿತಿ ತಂದಿಟ್ಟಾಗಲೂ ದೇವೇಗೌಡರ ವಿರುದ್ಧ ಕೃಷ್ಣ ಹರಿಹಾಯಲಿಲ್ಲ. ಅದೊಂದು ರಾಜಕೀಯ ವಿಷಮ ಪರಿಸ್ಥಿತಿ ಎಂದು ಒಪ್ಪಿಕೊಂಡು, ಅಷ್ಟೇ ಘನತೆಯಿಂದಲೇ ತಮ್ಮ ಭಿನ್ನಾಭಿಪ್ರಾಯವನ್ನು ಹೊರಹಾಕಿದ್ದರು.
ನಾನು ಎಸ್ ಎಂ ಕೃಷ್ಣ ಅವರನ್ನು ಕಳೆದ 35 ವರ್ಷಗಳಿಂದ ನೋಡುತ್ತಲೇ ಬಂದಿದ್ದೇನೆ. ಅವರ ವ್ಯಕ್ತಿತ್ವದಂತೆ, ಅವರು ಬಟ್ಟೆಯೂ ಎಂದೂ ಸುಕ್ಕಾಗಿದ್ದನ್ನು ನಾನು ಕಂಡಿಲ್ಲ. ಘನತೆಯನ್ನೇ ಉಡುಗೆಯಂತೆ ತೊಟ್ಟುಕೊಂಡಿದ್ದವರು ಅವರು. ಅವರು ತೊಡುತ್ತಿದ್ದ ಬಟ್ಟೆ, ಅವರು ಆಡುತ್ತಿದ್ದ ಮಾತು, ತನಗೆ ಇಷ್ಟವಾಗದೇ ಇದ್ದ ಮಾತನ್ನು ಕೂಡ ಸಹನೆಯಿಂದ ಕೇಳಿಸಿಕೊಳ್ಳುವ ಗುಣ, ಥಟ್ಟನೆ ಮನಸ್ಸಿಗೆ ತೋಚಿದ್ದನ್ನು ಆಡದೇ, ಎಲ್ಲವನ್ನೂ ತೂಗಿ ಅಳೆದು ಮಾತಾಡುವ ರೀತಿ ಅವರ ವ್ಯಕ್ತಿತ್ವದ ಭಾಗವೇ ಆಗಿಬಿಟ್ಟಿತ್ತು.
ಕಾಂಗ್ರೆಸ್ ಪಕ್ಷವನ್ನು ತೊರೆದು ಬರುವಾಗಲೂ ಎಸ್ ಎಂ ಕೃಷ್ಣ ತನ್ನ ಭಿನ್ನಮತವನ್ನು ಘನತೆಯಿಂದಲೇ ಮಂಡಿಸಿದ್ದರು. ರಾಹುಲ್ ಗಾಂಧಿಯ ಬಗ್ಗೆ ತನಗಿದ್ದ ಅಸಮಾಧಾನವನ್ನು ಅವರು ತೂಕದ ಮಾತುಗಳಲ್ಲೇ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ತಾನು ಪಕ್ಷದಿಂದ ಹೊರಬಂದ ನಂತರ ಪಕ್ಷದ ಕುರಿತು ಒಂದೇ ಒಂದು ಕೆಟ್ಟ ಮಾತನ್ನೂ ಆಡಿರಲಿಲ್ಲ. ಆದರೆ, ಕೆಲಕಾಲ ಪಕ್ಷ ತೊರೆದ ಅನೇಕ ರಾಜಕೀಯ ನಾಯಕರು, ಒಂದೇ ದಿನದೊಳಗೆ ಪಕ್ಷವನ್ನು ಹೇಗೆಲ್ಲ ಟೀಕಿಸಿದ್ದರು ಅನ್ನುವ ಉದಾಹರಣೆ ನಮ್ಮ ಕಣ್ಮುಂದೆಯೇ ಇವೆ.
ನಿಜವಾದ ಘನತೆ ವ್ಯಕ್ತವಾಗುವುದು ಮೂರು ಸಂದರ್ಭಗಳಲ್ಲಿ. ಸೋತಾಗ, ದುಃಖವಾದಾಗ, ಅವಮಾನ ಆದಾಗ. ತನ್ನ ಅಳಿಯ ಸಿದ್ಧಾರ್ಥ ತೀರಿಕೊಂಡಾಗ ಅವರು ತೋರಿದ ಧೀಮಂತಿಕೆ, ಗಾಢವಾದ ದುಃಖವನ್ನು ಸಾರ್ವಜನಿಕಗೊಳಿಸದೇ ಇದ್ದ ರೀತಿ ಅವರ ಬಗ್ಗೆ ಇದ್ದ ಗೌರವ ಹೆಚ್ಚಿಸಿದ್ದು ಸುಳ್ಳಲ್ಲ. ಹಾಗೆಯೇ ಸಿದ್ಧಾರ್ಥ ಅವರ ಮೇಲೆ ಆದಾಯತೆರಿಗೆ ದಾಳಿ ನಡೆದಾಗ ಕೂಡ ಅವರು ಅದನ್ನು ಕಾನೂನು ಸಹಜ ಪ್ರಕ್ರಿಯೆ ಎಂಬಂತೆ ಸ್ವೀಕರಿಸಿದ್ದರು.
ಎಸ್ ಎಂ ಕೃಷ್ಣ ಆರೋಗ್ಯ ಹದಗೆಟ್ಟಿದೆ, ಅವರು ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂಬಿತ್ಯಾದಿ ಊಹಾಪೋಹಗಳು ಹಬ್ಬುತ್ತಿದ್ದ ದಿನಗಳಲ್ಲಿ ಅವರು ಅಂಥ ಹೇಳಿಕೆಗಳನ್ನು ವಿರೋಧಿಸಲು ಹೋಗಲಿಲ್ಲ. ಅದರ ವಿರುದ್ಧ ಮಾತಾಡಲಿಲ್ಲ. ಹಾಗೆ ಹೇಳಿದವರ ಜನ್ಮ ಜಾಲಾಡಲಿಕ್ಕೂ ಹೋಗಲಿಲ್ಲ. ತಾನು ಟೆನಿಸ್ ಆಡುತ್ತಿರುವ ಫೋಟೋ ದೆಹಲಿಯ ಪತ್ರಿಕೆಯೊಂದರಲ್ಲಿ ಪ್ರಕಟವಾಗುವಂತೆ ನೋಡಿಕೊಂಡರು. ಆ ಫೋಟೋ ಎಲ್ಲವನ್ನೂ ಹೇಳುತ್ತಿತ್ತು. ಅತ್ಯುತ್ತಮ ದೈಹಿಕ ಕ್ಷಮತೆ ಬೇಕಾಗಿರುವ ಟೆನಿಸ್ ಆಟವನ್ನು ಆಡುವಷ್ಟು ಎಸ್ ಎಂ ಕೃಷ್ಣ ಆರೋಗ್ಯವಾಗಿದ್ದಾರೆ ಅನ್ನುವುದನ್ನು ಅವರನ್ನು ಟೀಕಿಸಿದವರಿಗೆ ಹೇಳುತ್ತಿತ್ತು.
ಅವರ ಅನೇಕ ಪತ್ರಿಕಾಗೋಷ್ಠಿಗಳಲ್ಲಿ ನಾನು ಭಾಗವಹಿಸಿದ್ದೇನೆ. ಅಲ್ಲಿಯೂ ಅವರು ಎಲ್ಲಾ ಪ್ರಶ್ನೆಗಳಿಗೂ ಸಾವಧಾನದಿಂದ ಉತ್ತರಿಸುತ್ತಿದ್ದರು. ಉತ್ತರಿಸುವ ಅಗತ್ಯವಿಲ್ಲ ಎಂದು ಅನಿಸಿದ ಪ್ರಶ್ನೆಗಳಿಗೆ ಮೌನವಾಗಿದ್ದು, ಮುಂದಿನ ಪ್ರಶ್ನೆಗಳಿಗೆ ಹೋಗುತ್ತಿದ್ದರು. ಒಂದು ಪತ್ರಿಕಾಗೋಷ್ಠಿಯಲ್ಲಿ ಒಬ್ಬ ಪತ್ರಕರ್ತರಂತೂ ಅವರನ್ನು ಹತ್ತು ಹದಿನೈದು ಕುಟುಕುವ ಪ್ರಶ್ನೆಗಳನ್ನು ಕೇಳಿದ್ದರು. ಬೇರೆ ಯಾವ ರಾಜಕಾರಣಿಯಾದರೂ ರೊಚ್ಚಿಗೆದ್ದು ಆ ಪತ್ರಕರ್ತ, ಪತ್ರಿಕೆ ಎಲ್ಲವನ್ನೂ ಬೈದು ಸಿಟ್ಟು ತೀರಿಸಿಕೊಳ್ಳುತ್ತಿದ್ದರು. ಆದರೆ ಎಸ್ ಎಂ ಕೃಷ್ಣ ಮುಖದ ಮೇಲಿನ ಕಿರುನಗೆ ಒಂದೇ ಒಂದು ಸಲವೂ ಕೊಂಕಿದ್ದನ್ನು ನಾನು ಕಂಡಿಲ್ಲ.
ತುಂಟತನದ ಪ್ರಶ್ನೆಗೆ, ತುಂಟತನದ ಉತ್ತರ, ಗಾಢವಾದ ಪ್ರಶ್ನೆಗೆ ಗಾಂಭೀರ್ಯದ ಉತ್ತರ, ಕಡೆಗಣಿಸಬಹುದಾದ ಪ್ರಶ್ನೆಗೆ ಮೌನ, ಕೀಟಲೆಯ ಪ್ರಶ್ನೆಗೆ ಮುಗುಳ್ನಗೆ- ಹೀಗಿರುತ್ತಿತ್ತು ಅವರ ನಿಲುವು. ಅವರ ಅರ್ಧದಷ್ಟಾದರೂ ಘನತೆ ಇಲ್ಲದೇ ಹೋದರೆ ಅವರನ್ನು ಎದುರಿಸುವುದು ಕೂಡ ಸಾಧ್ಯವಿರಲಿಲ್ಲ.
ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಡಾ. ರಾಜ್‌ಕುಮಾರ್ ಅಪಹರಣಕೊಳ್ಳಗಾದರು. ಇಡೀ ನಾಡು ಅವರ ಮೇಲೆ ಮುಗಿಬಿದ್ದಿತ್ತು. ದಿನವೂ ಅವರನ್ನು ಮಾಧ್ಯಮ, ಅಭಿಮಾನಿಗಳು ಖಂಡಿಸುತ್ತಿದ್ದರು. ಅಂಥ ಹೊತ್ತಲ್ಲೂ ಅವರು ತಮ್ಮ ಚಿತ್ತಸ್ವಾಸ್ಥ್ಯವನ್ನೂ ಘನತೆಯನ್ನೂ ಬಿಟ್ಟುಕೊಡಲಿಲ್ಲ. ಎಂಥಾ ಸಮಸ್ಯೆ ಬಂದರೂ ಅವರು ಕಂಗಾಲಾಗುತ್ತಿರಲಿಲ್ಲ, ಅವರ ವರ್ತನೆಯಲ್ಲಿ ಏರುಪೇರು ಆಗುತ್ತಿರಲಿಲ್ಲ.
ಯಾವತ್ತೂ ಅವರು ಘನತೆಯಿಲ್ಲದವರ ಜತೆಗೆ ಸೇರುತ್ತಿರಲಿಲ್ಲ. ಅವರ ಖಾಸಗಿ ಬಳಗದಲ್ಲಿ ಸಣ್ಣತನ ತೋರುವ, ಸಾರ್ವಜನಿಕ ನಡವಳಿಕೆಯ ಸಂಸ್ಕೃತಿ ಇಲ್ಲದವರು ಇರುತ್ತಲೇ ಇರಲಿಲ್ಲ. ತರಲೆ ಪತ್ರಕರ್ತನಿಗೆ ಅವರ ಹತ್ತಿರ ಸುಳಿಯುವುದು ಕೂಡ ಸಾಧ್ಯವಾಗುತ್ತಿರಲಿಲ್ಲ. ಆದರೆ ತಾನು ಚರ್ಚಿಸಬಹುದಾದ ಸಂಗತಿಗಳಿವೆ ಅಂತ ಗೊತ್ತಾದವರ ಜತೆ ಅವರು ಬೆಳಗಿನ ಉಪಾಹಾರ ಸೇವಿಸುತ್ತಿದ್ದರು. ರಾಜಕಾರಣ, ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ಪ್ರವಾಸ-ಹೀಗೆ ಅನೇಕ ಸಂಗತಿಗಳ ಬಗ್ಗೆ ಚರ್ಚಿಸುತ್ತಿದ್ದರು. ಅವರ ಜತೆ ಮಾತಾಡುವುದು ಕೂಡ ಸಂತೋಷ ಮತ್ತು ಜ್ಞಾನ ಎರಡನ್ನೂ ಕೊಡುತ್ತಿತ್ತು.
ಕೃಷ್ಣಪಥ: ರಾಜಕೀಯಕ್ಕೆ ಬಂದಾಗ 100 ಎಕರೆ ಇತ್ತು, ಈಗ 1 ಎಕರೆ ಕೂಡ ಇಲ್ಲ: ಪ್ರೇಮಾ ಕೃಷ್ಣ
ಎಸ್ ಎಂ ಕೃಷ್ಣ ಅವರು ಅತ್ಯಂತ ಶ್ರೇಷ್ಠರು. ಅವರಲ್ಲಿ ದೌರ್ಬಲ್ಯಗಳೇ ಇರಲಿಲ್ಲ ಅಂತ ನಾನು ಹೇಳುವುದಿಲ್ಲ. ಎಲ್ಲರಲ್ಲೂ ದೌರ್ಬಲ್ಯಗಳಿರುತ್ತವೆ. ಆದರೆ ಆ ದೌರ್ಬಲ್ಯವನ್ನು ಆತ ಹೇಗೆ ನಿಭಾಯಿಸಿದ ಅನ್ನುವುದರ ಮೇಲೆ ಆತನ ಘನತೆ ನಿರ್ಧಾರವಾಗುತ್ತದೆ. ಅದು ಎಸ್ ಎಂ ಕೃಷ್ಣ ಅವರಿಗೆ ಚೆನ್ನಾಗಿ ಗೊತ್ತಿತ್ತು.
ಇವತ್ತಿನ ರಾಜಕೀಯ ನಾಯಕರು ಕಲಿಯಬೇಕಾದ ಪಾಠವೇನಾದರೂ ಇದೆಯೇ ಅಂತ ಕೇಳಿದರೆ ನಾನು ಎಸ್ ಎಂ ಕೃಷ್ಣರನ್ನು ತೋರಿಸುತ್ತೇನೆ. ನೀವು ಎಷ್ಟೇ ದೊಡ್ಡ ಅಧಿಕಾರದಲ್ಲಿರಿ, ಎಷ್ಟೇ ಹಣ ಸಂಪಾದಿಸಿ, ಕೋಟ್ಯಂತರ ಮಂದಿ ನಿಮ್ಮ ಬೆನ್ನಹಿಂದೆ ಇರಲಿ, ಅವೆಲ್ಲ ನಿಮ್ಮನ್ನು ದೊಡ್ಡವರನ್ನಾಗಿ ಮಾಡುವುದಿಲ್ಲ. ಸಾರ್ವಜನಿಕವಾಗಿ ನೀವು ಹೇಗೆ ನಡೆದುಕೊಳ್ಳುತ್ತಿದ್ದೀರಿ ಎಂದು ಪುಟ್ಟ ಮಗು ಬಿಟ್ಟಕಣ್ಣುಗಳಿಂದ ನೋಡುತ್ತಿರುತ್ತದೆ. ನೀವು ಘನತೆಯಿಂದ ನಡೆದುಕೊಂಡರೆ ಅದರಿಂದಾಗಿ ನಾಡಿಗೂ ಘನತೆ ಬರುತ್ತದೆ. ಹಾಗೆ ಘನತೆ ತಂದುಕೊಟ್ಟವರಲ್ಲಿ ಎಸ್ ಎಂ ಕೃಷ್ಣ, ರಾಮಕೃಷ್ಣ ಹೆಗಡೆ, ಪಿವಿ ನರಸಿಂಹರಾವ್, ನರೇಂದ್ರ ಮೋದಿ, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಮುಂತಾದವರಿದ್ದಾರೆ.