ವಕ್ಫ್ ತಿದ್ದುಪಡಿ ವಿರೋಧಿಸಿ SDPI ಪ್ರತಿಭಟನೆ; 'ನಾವು ಕೇಂದ್ರದ ವಿರುದ್ಧ ನಿರಂತರ ಹೋರಾಡುತ್ತೇವೆ' ಮುಖಂಡ ಕಿಡಿ!

ಕುಷ್ಟಗಿಯಲ್ಲಿ ಎಸ್‌ಡಿಪಿಐ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ವಕ್ಫ್ ಆಸ್ತಿ ವಿಚಾರವಾಗಿ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ಮುಸ್ಲಿಂ ಜಮಾಅತ್ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಮೌನ ಪ್ರತಿರೋಧ ವ್ಯಕ್ತಪಡಿಸಿತು.


ಕುಷ್ಟಗಿ (ಏ.2) : ಎಸ್‌ಡಿಪಿಐ ಸಂಘಟನೆಯಿಂದ ಕೇಂದ್ರ ಸರ್ಕಾರದ ವಿರುದ್ಧ ಈದ್ಗಾ ಮೈದಾನದ ಹೊರಗಡೆ ಪೋಸ್ಟರ್‌ ಹಿಡಿದು ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧ್ಯಕ್ಷ ಯುಸೂಫ್‌ ಮೋದಿ ಮಾತನಾಡಿ, ಪ್ರಾರಂಭದಿಂದಲೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಸ್ಲಿಂ ವಿರೋಧಿ ನೀತಿ ರೂಪಿಸುತ್ತಾ ಬಂದಿದೆ, ಮುಸಲ್ಮಾನರು ಒಂದಾಗಿ ವಕ್ಫ್ ಆಸ್ತಿಯ ಉಳಿವಿಗಾಗಿ ಹೋರಾಟ ಮಾಡಬೇಕು ಎಂಬುದರ ಕುರಿತು ಎಲ್ಲರಿಗೂ ತಿಳಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

Latest Videos

ಎಸ್‌ಡಿಪಿಐ ವತಿಯಿಂದ ರಾಷ್ಟ್ರಾದ್ಯಂತ ಕೇಂದ್ರ ಸರ್ಕಾರದ ಮುಸ್ಲೀಂ ವಿರೋಧಿ ನೀತಿ ವಿರೋಧಿಸಿ ಮುಸ್ಲಿಂರಿಗೆ ಜಾಗೃತಿ ಮೂಡಿಸುವ ಸಲುವಾಗಿ ರಂಜಾನ್ ಹಬ್ಬ ಇರುವುದರಿಂದ ಎಲ್ಲ ಮುಸ್ಲಿಂ ಧರ್ಮದವರು ಒಂದೇ ಕಡೆ ಸೇರುತ್ತಾರೆ, ಅದಕ್ಕಾಗಿ ಕೇಂದ್ರ ಬಿಜೆಪಿ ಸರ್ಕಾರ ಯಾವ ರೀತಿಯಾಗಿ ಮುಸ್ಲಿಂರಿಗೆ ಅನ್ಯಾಯ ಮಾಡುತ್ತಿದೆ ಎನ್ನುವದನ್ನು ಮನವರಿಕೆ ಮಾಡಿ ಕೊಡುವುದಕ್ಕೋಸ್ಕರ ಪ್ರತಿಭಟನೆ ಮಾಡುತಿದ್ದೇವೆ ಎಂದರು.

ಇದನ್ನೂ ಓದಿ: ವಕ್ಫ್‌ ತಿದ್ದುಪಡಿ ಮಸೂದೆಯಿಂದ ಅನ್ಯಾಯವಿಲ್ಲ: ಕೇರಳ ಚರ್ಚ್‌ ಪತ್ರಿಕೆ ಸಂಸದರಿಗೆ ಆಗ್ರಹ

ಈ ಸಂದರ್ಭದಲ್ಲಿ ಶಾಮೀದ್, ಖಾಜಾಸಾಬ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕರ್ನಾಟಕ ಮುಸ್ಲಿಂ ಜಮಾಅ ವಿರೋಧ:

ವಕ್ಫ್ ಆಸ್ತಿ ಕಬಳಿಸುವ ವಕ್ಫ್ ತಿದ್ದುಪಡಿ ಮಸೂದೆ-2024 ರದ್ದುಪಡಿಸುವಂತೆ ಒತ್ತಾಯಿಸಿ ಕರ್ನಾಟಕ ಮುಸ್ಲಿಂ ಜಮಾಅತ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಕಪ್ಪು ಪಟ್ಟಿ ಧರಿಸಿ ಶುಕ್ರವಾರ ಮೌನ ಪ್ರತಿರೋಧ ವ್ಯಕ್ತಪಡಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.ವಕ್ಫ್ ತಿದ್ದುಪಡಿ ಮಸೂದೆ-2024 ವಿರೋಧಿಸಿ ಐದು ಕೋಟಿಗೂ ಹೆಚ್ಚು ಮುಸ್ಲಿಮರು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಇಮೇಲ್‌ ಕಳುಹಿಸಿದ್ದಾರೆ. ಮುಸ್ಲಿಂ ಪೂರ್ವಜರು ಅಲ್ಲಾಹನ ಹೆಸರಿನಲ್ಲಿ ಬಡ ಮುಸ್ಲಿಂ ಜನರಿಗೆ ಉಪಯೋಗವಾಗಲು ನೀಡಿದ್ದು ವಕ್ಫ್ ಆಸ್ತಿಯಾಗಿದೆ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ವಿವಿಧ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಮುಸ್ಲಿಂ ಸಂಘಟನೆಗಳು ಮತ್ತು ಪ್ರಮುಖರು ಜೆಪಿಸಿ ಮುಂದೆ ಮಸೂದೆಯ ಪ್ರತಿಯೊಂದು ಅಂಶದ ಬಗ್ಗೆ ವಾದ ಮಂಡಿಸಿ ಲಿಖಿತ ದಾಖಲೆ ಸಲ್ಲಿಸಿ ವಕ್ಫ್ ತಿದ್ದುಪಡಿ ಮಸೂದೆ ತಿರಸ್ಕರಿಸಿದ್ದೇವೆ ಎಂದು ಮನವರಿಕೆ ಮಾಡಿದ್ದಾರೆ. ಆದರೂ ಸರ್ಕಾರ ತನ್ನ ನಿಲುವನ್ನು ಬದಲಾಯಿಸುವ ಬದಲು, ಮಸೂದೆಯನ್ನು ಇನ್ನಷ್ಟು ಕಠಿಣ ಮಾಡುತ್ತಿರುವುದು ಬೇಸರದ ಸಂಗತಿ ಎಂದು ತಿಳಿಸಿದ್ದಾರೆ.

 ಇದನ್ನೂ ಓದಿ: ಕೇಂದ್ರದ ವಕ್ಫ್‌ ಬಿಲ್‌ ಮಂಡನೆ ಸ್ವಾಗತಾರ್ಹ

ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಸಂಚಾಲಕ ಮೌಲಾನಾ ಖಾರಿ ಮೊಹಮ್ಮದ್ ಅಬುಲ್ ಹಸನ್ ಖಾಝಿ, ಹಾಫೀಝ್ ಮೊಹಮ್ಮದ್ ಮೋಹಿಯೋದ್ದೀನ್ ಬಡೆಘರ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಎ‌. ಗಫಾರ್‌, ಖಬೂಲ್ ರಾಯಚೂರು, ಸುನ್ನಿ ಯುವಜನ ಫೆಡರೇಷನ್ ಜಿಲ್ಲಾ ಸಂಚಾಲಕ ಸೈಯ್ಯದ್ ಸಲಿಮುದ್ದೀನ್ ಅಲ್ವಿ, ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಮುಖಂಡ ಮೊಹಮ್ಮದ್ ಕಿರ್ಮಾನಿ ಖಾಜಿ, ಮಾಜಿ ಉಪಾಧ್ಯಕ್ಷ ಗೌಸ್ ನೀಲಿ, ಜಾಫರ್ ಕುರಿ ಭಾಗವಹಿಸಿದ್ದರು.

click me!