ಬಿಜೆಪಿಯಿಂದ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ 2028ಕ್ಕೆ ತಾನೇ ಸಿಎಂ ಆಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೆ ವಾಪಸ್ ಬರುವ ಬಗ್ಗೆಯೂ ಮಾತನಾಡಿದ್ದು, ಸಂತೋಷ ತಟಗಾರ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ವಿಜಯಪುರ (ಏ.2) 2028ಕ್ಕೆ ನಾನೇ ಸಿಎಂ, ನೋಡ್ತಾ ಇರ್ರಿ’ ಎಂದು ಬಿಜೆಪಿಯ ಉಚ್ಛಾಟಿತ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028ಕ್ಕೆ ನಾನು ಸಿಎಂ ಆಗ್ತಿನಿ, ಇಲ್ಲವೇ ಕೇವಲ ಶಾಸಕನಾಗಿ ಇರ್ತೀನಿ ಎನ್ನುವ ಮೂಲಕ ಮತ್ತೆ ವಿಜಯೇಂದ್ರ ವಿರುದ್ಧ ಗುಡುಗಿದರು. ಈ ಹಿಂದೆ ಸಿಎಂ ಆಗಿದ್ದ ವೇಳೆ ಬಸವರಾಜ ಬೊಮ್ಮಾಯಿ ಅವರು ನನಗೆ ಮಂತ್ರಿ ಆಗಿ ಅಂದಿದ್ದರು. ನಾನು ಅಭಿವೃದ್ಧಿಗೆ ಹಣ ಕೊಡಿ, ಮಂತ್ರಿಗಿರಿ ಬೇಡ ಅಂದಿದ್ದೆ. ನನಗೆ ಕಾರಿನ ಮೇಲೆ ಕೆಂಪು ಗೂಟ (ಲೈಟ್) ಹಾಕಿಕೊಂಡು ಅಡ್ಡಾಡೋ ಶೋಕಿ ಇಲ್ಲ ಎಂದರು.
ಬಿಜೆಪಿಗೆ ವಾಪಸ್ ಬರುವ ವಿಚಾರದ ಕುರಿತು ಮಾತನಾಡಿ, ನಾನು ಪಕ್ಷಕ್ಕೆ ತೆಗೆದುಕೊಳ್ಳಿ ಎಂದು ಕೈ ಮುಗಿಯಲ್ಲ. ನಾನು ಬಿಜೆಪಿಗೆ ಸೇರಿಸಿಕೊಳ್ಳಿ ಎಂದು ಯಾರ ಕೈಕಾಲೂ ಹಿಡಿಯೋದಿಲ್ಲ. ನನ್ನ ಪರವಾಗಿ ಸಾಕಷ್ಟು ಜನರು ನಿಂತಿದ್ದಾರೆ, ನನ್ನ ಪರವಾಗಿ ಮಾತನಾಡೋಕೂ ತಯಾರು ಇದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: 4 ಅಜೆಂಡಾ ಜತೆ ಇಂದಿನಿಂದ ಸಿದ್ದು ದಿಲ್ಲಿ ಯಾತ್ರೆ: ಹೈಕಮಾಂಡ್ ಭೇಟಿಯ ರಹಸ್ಯವೇನು?
ಈ ಮಧ್ಯೆ, ಅವರು ಅಪಘಾತದಲ್ಲಿ ಮೃತಪಟ್ಟ ಸಂತೋಷ ತಟಗಾರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಬಿಜೆಪಿಯಿಂದ ಯತ್ನಾಳರನ್ನು ಉಚ್ಚಾಟನೆ ಮಾಡಿದ ದಿನವೇ ರಾಜೀನಾಮೆ ನೀಡಿದ್ದ ಎಸ್ಟಿ ಮೋರ್ಚಾ ಕಾರ್ಯದರ್ಶಿ ಸಂತೋಷ ತಟಗಾರ, ಅಪಘಾತದಲ್ಲಿ ಮೃತಪಟ್ಟಿದ್ದರು. ಮಾರನೇ ದಿನವೇ ಸಂತೋಷ ತಟಗಾರ ಸಾವಿಗೆ ಕಂಬನಿ ಮಿಡಿದಿದ್ದ ಶಾಸಕ ಯತ್ನಾಳ ಅವರು, ಸಂತೋಷ ಸಾವು ನೋವು ತಂದಿದೆ. ಆತನ ಕುಟುಂಬದ ಜೊತೆಗೆ ನಾನಿರುವೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದರು. ಮಂಗಳವಾರ ಮೃತ ಬೆಂಬಲಿಗ ಸಂತೋಷ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಈ ವೇಳೆ ಯತ್ನಾಳ ಅವರ ಎದುರು ಸಂತೋಷ ಕುಟುಂಬಸ್ಥರು ಕಣ್ಣೀರು ಹಾಕಿದರು.