ವಿಜಯಪುರದಲ್ಲಿ ಸಾಕಷ್ಟು ಗದ್ದಲಕ್ಕೆ ಕಾರಣವಾಗಿರುವ ವಕ್ಫ್ ಆಸ್ತಿ ವಿವಾದ ಇನ್ನೂ ಎರಡು ಜಿಲ್ಲೆಗಳಲ್ಲಿ ರೈತರ ನಿದ್ದೆಗೆಡಿಸಿರುವುದು ಇದೀಗ ಬೆಳಕಿಗೆ ಬಂದಿದೆ. ಯಾದಗಿರಿ ಮತ್ತು ಧಾರವಾಡ ಜಿಲ್ಲೆಯ ರೈತರ ಭೂಮಿಯ ಪಹಣಿಯಲ್ಲಿ ‘ವಕ್ಫ್ ಆಸ್ತಿ’ ಎಂದು ನಮೂದಾಗಿರುವುದು ರೈತರಲ್ಲಿ ಆತಂಕ, ಆಕ್ರೋಶಕ್ಕೆ ಕಾರಣವಾಗಿದೆ.
ಯಾದಗಿರಿ/ಧಾರವಾಡ (ಅ.29): ವಿಜಯಪುರದಲ್ಲಿ ಸಾಕಷ್ಟು ಗದ್ದಲಕ್ಕೆ ಕಾರಣವಾಗಿರುವ ವಕ್ಫ್ ಆಸ್ತಿ ವಿವಾದ ಇನ್ನೂ ಎರಡು ಜಿಲ್ಲೆಗಳಲ್ಲಿ ರೈತರ ನಿದ್ದೆಗೆಡಿಸಿರುವುದು ಇದೀಗ ಬೆಳಕಿಗೆ ಬಂದಿದೆ. ಯಾದಗಿರಿ ಮತ್ತು ಧಾರವಾಡ ಜಿಲ್ಲೆಯ ರೈತರ ಭೂಮಿಯ ಪಹಣಿಯಲ್ಲಿ ‘ವಕ್ಫ್ ಆಸ್ತಿ’ ಎಂದು ನಮೂದಾಗಿರುವುದು ರೈತರಲ್ಲಿ ಆತಂಕ, ಆಕ್ರೋಶಕ್ಕೆ ಕಾರಣವಾಗಿದೆ. ಯಾದಗಿರಿಯಲ್ಲಿ 1,440 ರೈತರ ಜಮೀನು ಹಾಗೂ ಧಾರವಾಡದ ಉಪ್ಪಿನ ಬೆಟಗೇರಿಯ ಕೆಲ ರೈತರ ಪಹಣಿ ಪರಿಶೀಲಿಸಿದಾಗ ಈ ಅವಾಂತರ ಬೆಳಕಿಗೆ ಬಂದಿದೆ.
ಭೂಸ್ವಾಧೀನ ವೇಳೆ ಬಯಲಿಗೆ:
undefined
ಯಾದಗಿರಿ ಜಿಲ್ಲೆಯಲ್ಲಿ 1,440 ರೈತರ ಜಮೀನುಗಳ ಪಹಣಿ ಕಾಲಂ 11ರಲ್ಲಿ ದಿಢೀರ್ ಆಗಿ ‘ವಕ್ಫ್ ಮಂಡಳಿ ಬೆಂಗಳೂರು’ ಎಂದು ನಮೂದಿಸಲಾಗಿದೆ. ರೈಲ್ವೆ ಯೋಜನೆಗಾಗಿ, ಹೆದ್ದಾರಿ ಹಾಗೂ ಕೈಗಾರಿಕಾ ಪ್ರದೇಶಕ್ಕೆಂದು ಭೂಮಿ ಸ್ವಾಧೀನ ಮಾಡಿಕೊಂಡ ಈ ಜಾಗದ ಮಾಲೀಕರಿಗೆ ಪರಿಹಾರ ನೀಡುವಾಗ ‘ವಕ್ಫ್ ಆಸ್ತಿ’ ಎಂದು ಪಹಣಿಯಲ್ಲಿ ನಮೂದಾಗಿರುವುದು ಗೊತ್ತಾಗಿದೆ.
ಇಲ್ಲಿ ಆಸ್ತಿ ಮಾಡೋಕೆ ಅಲ್ಲಾ ಏನು ಭಾರತದವನಾ? ನೋಟೀಸ್ ಕೊಡೋಕೆ ಇವರಪ್ಪನ ಮನೆ ಆಸ್ತೀನಾ? ಪ್ರಹ್ಲಾದ್ ಜೋಶಿ!
ಗದಗ-ವಾಡಿ ರೈಲ್ವೆ ಯೋಜನೆಗೆಂದು ಜಿಲ್ಲೆಯಲ್ಲಿ ನೂರಾರು ಎಕರೆ ಜಮೀನನ್ನು ರೈಲ್ವೆ ಇಲಾಖೆ ಸ್ವಾಧೀನಪಡಿಸಿಕೊಂಡಿದೆ. ಇಲಾಖೆ ಎಲ್ಲ ದಾಖಲೆಗಳನ್ನು ಪರಿಶೀಲಿಸಿಯೇ ಭೂಮಿ ಸ್ವಾಧೀನಪಡಿಸಿಕೊಂಡಿದೆ. ಆದರೆ ವಕ್ಫ್ ಬೋರ್ಡ್ ಮಂಡಳಿ ಅಧಿಕಾರಿಗಳು ಇದು ತಮ್ಮ ಆಸ್ತಿ ಎಂದು ವಿಶೇಷ ಭೂಸ್ವಾಧೀನ ಅಧಿಕಾರಿಗಳಿಗೆ, ಬ್ಯಾಂಕುಗಳಿಗೆ ಪತ್ರ ಬರೆದು ರೈತರಿಗೆ ನೀಡಬೇಕಿರುವ ಪರಿಹಾರಕ್ಕೆ ಅಡ್ಡಿ ಮಾಡಿದ್ದಾರೆಂದು ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮಿಕಾಂತ ಎ. ಪಾಟೀಲ್ ಮದ್ದರಕಿ ಆರೋಪಿಸಿದ್ದಾರೆ.
ಭೂಸ್ವಾಧೀನ ವೇಳೆ ರೈಲ್ವೆ ಇಲಾಖೆಯು ಅಧಿಸೂಚನೆಯಲ್ಲಿ ರೈತರ ಹೆಸರನ್ನೇ ನಮೂದಿಸಿದೆ. ಹೀಗಿದ್ದಾಗ ಏಕಾಏಕಿ ಈಗ ಪರಿಹಾರ ಹಂಚಿಕೆ ಸಮಯದಲ್ಲಿ ವಕ್ಫ್ ಮಂಡಳಿ ಆಸ್ತಿ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಅದೇ ರೀತಿ ಸೂರತ್-ಚೆನ್ನೈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಭೂಸ್ವಾಧೀನಗೊಂಡ ನೂರಾರು ಎಕರೆ ಜಮೀನಿಗೆ ಪರಿಹಾರ ಕೊಡದಂತೆ ವಕ್ಫ್ ಮಂಡಳಿ ಭೂಸ್ವಾಧೀನಾಧಿಕಾರಿಗಳಿಗೆ ಪತ್ರ ಬರೆದಿದೆ. ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಭೂಸ್ವಾಧೀನ ಮಾಡಿಕೊಂಡ ಕೆಲ ರೈತರ ಜಮೀನಿಗೆ ನೀಡಬೇಕಿದ್ದ ಪರಿಹಾರದ ವಿಚಾರದಲ್ಲೂ ಇದೇ ರೀತಿ ವಕ್ಫ್ ಮಂಡಳಿ ಮಧ್ಯಪ್ರವೇಶಿಸಿದೆ. ಹೀಗೆ ಯಾದಗಿರಿ ಜಿಲ್ಲೆಯೊಂದರಲ್ಲೇ ಒಟ್ಟು 1,440 ಆಸ್ತಿಗಳಲ್ಲಿ ‘ವಕ್ಫ್ ಬೋರ್ಡ್ ಬೆಂಗಳೂರು’ ಎಂದು ಪಹಣಿಯ ಕಲಂ ನಂ.11ರಲ್ಲಿ ದಿಢೀರ್ ಆಗಿ ನಮೂದಾಗಿರುವುದರಿಂದ ರೈತರಿಗೆ ಯಾವುದೇ ರೀತಿಯ ಸಾಲ-ಸೌಲಭ್ಯಗಳು ಸರ್ಕಾರದ ಸವಲತ್ತುಗಳು ಸಿಗದಂತಾಗಿದೆ. ಜಮೀನು ಮಾರಾಟ ಮಾಡುವುದಕ್ಕೂ ತಡೆ ಇರುವುದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಲಕ್ಷ್ಮೀಕಾಂತ ದೂರಿದ್ದಾರೆ.
ಈ ಹಿಂದೆ ಪ್ರಕರಣವೊಂದರಲ್ಲಿ ವಕ್ಫ್ ಬೋರ್ಡಿನಿಂದ ರೈತರಿಗೆ ಆಗಿರುವ ಅನ್ಯಾಯದ ಕುರಿತು 2013ರಲ್ಲಿ ಹೈಕೋರ್ಟಿಗೆ ಸಿವಿಲ್ ರಿವಿಜನ್ ಪಿಟಿಷನ್ ನಂ.2018 ದಿ: 5-12-2013 ಸಲ್ಲಿಕೆಯಾಗಿದ್ದು, ಆ ಪ್ರಕರಣದಲ್ಲಿ ನ್ಯಾಯಾಲಯವು ಯಾವುದೇ ರೈತರ ಭೂನ್ಯಾಯ ಮಂಡಳಿಗೆ ಒಳಪಟ್ಟ ಆಸ್ತಿ ವಕ್ಫ್ ಮಂಡಳಿಗೆ ಸಂಬಂಧಪಡುವುದಿಲ್ಲ ಎಂದು ಆದೇಶ ನೀಡಿದೆ. ಇಷ್ಟಾದರೂ ಇಲ್ಲಿ ಭೂನ್ಯಾಯಮಂಡಳಿ ನೀಡಿದ ಭೂಮಿಯನ್ನೂ ವಕ್ಫ್ ತನ್ನದೆಂದು ಹೇಳಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.
2 ವರ್ಷದಿಂದ ಬದಲಾವಣೆ:
ಧಾರವಾಡದ ಉಪ್ಪಿನಬೆಟಗೇರಿ ಗ್ರಾಮದ ಐದಾರು ರೈತರ ಜಮೀನು ಪಹಣಿ ಪತ್ರ ಕಾಲಂ 11ರಲ್ಲೂ ವಕ್ಫ್ ಮಂಡಳಿ ಹೆಸರು ಇದ್ದು, ಈ ಬದಲಾವಣೆ ಕುರಿತು ರೈತರಿಗೆ ಗೊತ್ತಾಗಿದ್ದೇ ಇತ್ತೀಚೆಗೆ. ವಿಜಯಪುರ ಗದ್ದಲದ ಬಳಿಕ ಧಾರವಾಡದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. 2021, 2022 ಹಾಗೂ 2023ರಲ್ಲಿ ರೈತರ ಜಮೀನುಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. 2018-2019ರ ಪಹಣಿ ಪತ್ರಿಕೆಯಲ್ಲಿ ವಕ್ಫ್ ಹೆಸರೇ ಉಲ್ಲೇಖವಿಲ್ಲ.
ಇದು ಪೂರ್ವಜರಿಂದ ಬಂದ ಆಸ್ತಿ. ಇದೀಗ ಏಕಾಏಕಿ ವಕ್ಫ್ ಆಸ್ತಿ ಎಂದು ನಮೂದಿಸಿ, ಜಮೀನು ಕಬಳಿಸುವ ಹುನ್ನಾರ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಉಪ್ಪಿನಬೆಟಗೇರಿಯ ಸುಮಾರು 20 ಎಕರೆ ಹಾಗೂ ಜಿಲ್ಲೆಯ 1,500 ಜಮೀನಿನಲ್ಲಿ ವಕ್ಫ್ ಬೋರ್ಡ್ ಎಂದು ದಾಖಲಾಗಿದೆ ಎನ್ನಲಾಗುತ್ತಿದ್ದು, ಸತ್ಯಾಸತ್ಯತೆ ಇನ್ನಷ್ಟೇ ಗೊತ್ತಾಗಬೇಕಿದೆ.
ದೇವಸ್ಥಾನಕ್ಕೂ ವಕ್ಫ್ ಮಂಡಳಿ ನೋಟಿಸ್ ನೀಡ್ತಾರೆ: ಶಾಸಕ ಬಸನಗೌಡ ಯತ್ನಾಳ
ವಕ್ಫ್ ಮಂಡಳಿ ಹಾಗೂ ವಕ್ಫ್ ಸಚಿವರು ರೈತರ ಜಮೀನು ಕಸಿಯುವ ಹುನ್ನಾರ ಕೈಬಿಟ್ಟರೆ ಒಳಿತು. ವಿಜಯಪುರದಲ್ಲಿ ರೈತರ ಆಸ್ತಿ ಮೇಲೆ ವಕ್ಫ್ ಸಚಿವರ ಮೌಖಿಕ ಆದೇಶದ ಮೇರೆಗೆ ಮಂಡಳಿ ನೋಟಿಸ್ ಜಾರಿ ಮಾಡಿರುವುದು ಮೊಘಲರ ದಬ್ಬಾಳಿಕೆ ನೆನಪಿಸುವಂತಿದೆ.
- ಲಕ್ಷ್ಮಿಕಾಂತ ಎ. ಪಾಟೀಲ್ ಮದ್ದರಕಿ, ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ರಾಜ್ಯ ಉಪಾಧ್ಯಕ್ಷ