ಈಗ ಒಕ್ಕಲಿಗರ ಮೀಸಲು ಏರಿಕೆಗೆ ಹೆಚ್ಚಿದ ಒತ್ತಡ: ಸಿಎಂ ಭೇಟಿ ಮಾಡಿದ ಸಚಿವ ಅಶೋಕ್‌ ನೇತೃತ್ವದ ನಿಯೋಗ

Published : Dec 24, 2022, 02:43 PM IST
ಈಗ ಒಕ್ಕಲಿಗರ ಮೀಸಲು ಏರಿಕೆಗೆ ಹೆಚ್ಚಿದ ಒತ್ತಡ: ಸಿಎಂ ಭೇಟಿ ಮಾಡಿದ ಸಚಿವ ಅಶೋಕ್‌ ನೇತೃತ್ವದ ನಿಯೋಗ

ಸಾರಾಂಶ

ಪಂಚಮಸಾಲಿ ಮೀಸಲಾತಿ ಬೇಡಿಕೆ ಬೆನ್ನಲ್ಲೇ ಒಕ್ಕಲಿಗ ಸಮುದಾಯದಿಂದಲೂ ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ ತೀವ್ರಗೊಳ್ಳುತ್ತಿದ್ದು, ಬಿಜೆಪಿಯ ಒಕ್ಕಲಿಗ ಸಮುದಾಯದ ಸಚಿವರು ಹಾಗೂ ಶಾಸಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮೀಸಲು ಹೆಚ್ಚಿಸುವಂತೆ ಮನವಿ ಸಲ್ಲಿಸಿದರು. 

ಸುವರ್ಣ ಸೌಧ (ಡಿ.24): ಪಂಚಮಸಾಲಿ ಮೀಸಲಾತಿ ಬೇಡಿಕೆ ಬೆನ್ನಲ್ಲೇ ಒಕ್ಕಲಿಗ ಸಮುದಾಯದಿಂದಲೂ ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ ತೀವ್ರಗೊಳ್ಳುತ್ತಿದ್ದು, ಬಿಜೆಪಿಯ ಒಕ್ಕಲಿಗ ಸಮುದಾಯದ ಸಚಿವರು ಹಾಗೂ ಶಾಸಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮೀಸಲು ಹೆಚ್ಚಿಸುವಂತೆ ಮನವಿ ಸಲ್ಲಿಸಿದರು. ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸುವರ್ಣಸೌಧದಲ್ಲಿ ಭೇಟಿ ಮಾಡಿದ ಕಂದಾಯ ಸಚಿವ ಆರ್‌.ಅಶೋಕ್‌, ಉನ್ನತ ಶಿಕ್ಷಣ ಸಚಿವ ಅಶ್ವತನಾರಾಯಣ ಅವರ ನೇತೃತ್ವದ ಒಕ್ಕಲಿಗ ಸಮುದಾಯದ ಸಚಿವರು ಮತ್ತು ಶಾಸಕರ ನಿಯೋಗ ಒಕ್ಕಲಿಗರ ಮೀಸಲಾತಿ ಹೆಚ್ಚಳ, ಕುಂಚಿಟಿಗರು ಹಾಗೂ ಬಂಟ ಸಮುದಾಯದವರಿಗೆ ಮೀಸಲಾತಿ ಹೆಚ್ಚಳ ಮಾಡಬೇಕು ಎಂಬ ಬೇಡಿಕೆಯನ್ನು ಸಲ್ಲಿಸಿತು.

ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಒಕ್ಕಲಿಗ ಸಚಿವರು ಹಾಗೂ ಶಾಸಕರು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ ಮತ್ತು ಒಕ್ಕಲಿಗ ಸಂಘದ ಅಭಿಪ್ರಾಯ ಪಡೆದು ಗುರುವಾರ ರಾತ್ರಿ ಬೆಳಗಾವಿಯ ಖಾಸಗಿ ಹೋಟೆಲ್‌ವೊಂದರಲ್ಲಿ ಸಭೆ ನಡೆಸಲಾಗಿತ್ತು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್‌.ಅಶೋಕ್‌ ಅವರು, ಕೃಷಿಯನ್ನೇ ನಂಬಿಕೊಂಡು ರಾಜ್ಯಕ್ಕೆ ಅನ್ನ ನೀಡುವ ಒಕ್ಕಲಿಗ ಸಮುದಾಯದಲ್ಲಿ ಸಾಕಷ್ಟುಮಂದಿ ಬಡವರಿದ್ದಾರೆ. ಮೀಸಲಾತಿ ಸಿಕ್ಕಿದರೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. 

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

ಆದ್ದರಿಂದ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಬೇಡಿಕೆ ಸಲ್ಲಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಎಲ್ಲರೂ ಒಗ್ಗಟ್ಟಿನಿಂದ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು. ಕುಂಚಿಟಿಗರು ಕೇಂದ್ರ ಒಬಿಸಿಯಲ್ಲಿ ಸೇರ್ಪಡೆಯಾಗಿಲ್ಲ. ಅದನ್ನು ಸೇರಿಸುತ್ತೇವೆ. ಮಂಗಳೂರಿನ ಬಂಟ ಸಮುದಾಯವನ್ನು ಕೂಡ ಸೇರ್ಪಡೆ ಮಾಡಬೇಕು. ಗ್ರಾಮೀಣ ಪ್ರದೇಶದ ಒಕ್ಕಲಿಗರಿಗೆ ಶೇ.4ರಷ್ಟು ಮೀಸಲಾತಿ ಸಿಗುತ್ತಿದೆ. ನಗರ ಪ್ರದೇಶದ ಒಕ್ಕಲಿಗರಿಗೆ ಇದರ ಸೌಲಭ್ಯ ಇಲ್ಲ. ಹಾಗಾಗಿ ನಗರ ಪ್ರದೇಶದ ಬಡ ಒಕ್ಕಲಿಗರಿಗೆ ಇಡಬ್ಲ್ಯೂ ಎಸ್‌ನಲ್ಲಿ ಅವಕಾಶ ಕಲ್ಪಿಸಲು ಮನವಿ ಮಾಡಿದ್ದೇವೆ ಎಂದರು.

ಮೀಸಲಾತಿಯನ್ನು ಶೇ.4ರಿಂದ 12ಕ್ಕೆ ಏರಿಸಲು ನಮ್ಮ ಹಕ್ಕೊತ್ತಾಯ ಇದೆ. ಒಗ್ಗಟ್ಟಿನಿಂದ ನಮ್ಮ ಜನಾಂಗಕ್ಕೆ ಆದ ಅನ್ಯಾಯವನ್ನು ಸರಿಪಡಿಸಲು ನಾವೆಲ್ಲ ಕಂಕಣ ಬದ್ಧರಾಗಿದ್ದೇವೆ. ನಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಪರಿಗಣನೆ ಮಾಡುತ್ತಾರೆಂಬ ಭರವಸೆ ಇದೆ. ಜನವರಿ 4ರಂದು ಬೆಂಗಳೂರಿನಲ್ಲಿ ನಿರ್ಮಿಲಾನಂದನಾಥ ಸ್ವಾಮೀಜಿಗಳನ್ನು ಭೇಟಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು. ನಿಯೋಗದಲ್ಲಿ ಸಚಿವರಾದ ಆರಗ ಜ್ಞಾನೇಂದ್ರ, ಎಸ್‌.ಟಿ.ಸೋಮಶೇಖರ್‌, ಗೋಪಾಲಯ್ಯ, ನಾರಾಯಣಗೌಡ, ಕೆ.ಸುಧಾಕರ್‌, ಶಾಸಕರಾದ ನಾರಾಯಣಸ್ವಾಮಿ, ತುಳಸಿ ಮುನಿರಾಜು, ಪುಟ್ಟಣ್ಣ, ಎಂ.ಕೆ.ಪ್ರಾಣೇಶ್‌, ಆ.ದೇವೇಗೌಡ, ಭಾರತಿ ಶೆಟ್ಟಿ, ಸುಕುಮಾರ್‌ ಶೆಟ್ಟಿ, ಸಂಜೀವ್‌ ಮಠಂದೂರ್‌ ಸೇರಿದಂತೆ ಮತ್ತಿತರರು ಇದ್ದರು.

ಶೀಘ್ರ ವರದಿ ಸಲ್ಲಿಕೆಗೆ ಸೂಚನೆ: ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಆದಷ್ಟುಶೀಘ್ರವಾಗಿ ವರದಿ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗ ಸಮುದಾಯದ ಎಲ್ಲಾ ಶಾಸಕರು ಒಕ್ಕಲಿಗ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಆಶೋತ್ತರಗಳು ಈಡೇರಬೇಕು. ಅವಕಾಶಗಳು ಹೆಚ್ಚಾಗಬೇಕೆಂಬ ಹಿನ್ನೆಲೆಯಲ್ಲಿ ಈಗಿನ ಮೀಸಲಾತಿ ಪ್ರಮಾಣದಲ್ಲಿ ಹೆಚ್ಚಳವಾಗಬೇಕೆಂದು ಬೇಡಿಕೆ ಸಲ್ಲಿಸಿದ್ದಾರೆ. ಅದೇ ಸಮುದಾಯಕ್ಕೆ ಹೊಂದಿಕೊಂಡಿರುವ ರೆಡ್ಡಿ, ಬಂಟ ಸೇರಿದಂತೆ ಎಲ್ಲ ಸಮುದಾಯಗಳ ಮೀಸಲಾತಿ ಅಗತ್ಯ. ಕುಂಚಿಟಿಗ ಸಮುದಾಯದ್ದು, ಕೇಂದ್ರದ ಪಟ್ಟಿಯಲ್ಲಿ ಇಲ್ಲ. 

ಸಂಜಯ್‌ ರಾವುತ್‌ ಚೀನಾ ಏಜೆಂಟ್‌, ದೇಶದ್ರೋಹಿ: ಸಿಎಂ ಬೊಮ್ಮಾಯಿ

ಹೀಗಾಗಿ ಸಮುದಾಯವನ್ನು ಕೇಂದ್ರದ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಅವರು ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ ಎಂದರು. ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳ ನೇತೃತ್ವದಲ್ಲಿ ಈ ಹಿಂದೆಯೇ ಸಭೆ ನಡೆಸಿ ಮನವಿಯನ್ನು ಕೊಟ್ಟಿದ್ದರು. ಆ ಮನವಿಯನ್ನು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ಕಳುಹಿಸಲಾಗಿದೆ. ಅದರ ಪರಿಷ್ಕರಣೆ ಕೂಡ ಆಗುತ್ತಿದೆ. ಸಂವಿಧಾನ ದತ್ತವಾದ ಆಯೋಗದ ಶಿಫಾರಸಿನ ಅಗತ್ಯವಿದೆ. ಹೀಗಾಗಿ ಕಳೆದ ನವೆಂಬರ್‌ 29ರಂದು ಮನವಿಯನ್ನು ಕಳುಹಿಸಲಾಗಿದೆ. ಇದರ ಅಂಶಗಳನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ. ಸಚಿವರಾದ ಅಶೋಕ್‌ ಅವರ ನೇತೃತ್ವದ ನಿಯೋಗವು ಕೊಟ್ಟಿರುವ ಮನವಿಯನ್ನೂ ಸಹ ಆಯೋಗಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ