2ಎ ಮೀಸಲಾತಿ ನೀಡುವ ವಿಚಾರದಲ್ಲಿ ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡ್ತಿರೋ ಸ್ವಾಮೀಜಿಯವರು ಅದನ್ನು ಸಾಬೀತುಪಡಿಸಲಿ, ಸಾಬೀತಾದರೆ ನಾನು ಇವತ್ತೇ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಡಿ.24): 2ಎ ಮೀಸಲಾತಿ ನೀಡುವ ವಿಚಾರದಲ್ಲಿ ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡ್ತಿರೋ ಸ್ವಾಮೀಜಿಯವರು ಅದನ್ನು ಸಾಬೀತುಪಡಿಸಲಿ, ಸಾಬೀತಾದರೆ ನಾನು ಇವತ್ತೇ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ, ಮಾಡದೇ ಇದ್ದರೆ ನೀವು ಸನ್ಯಾಸತ್ವ ಬಿಟ್ಟು ರಾಜಕಾರಣಕ್ಕೆ ಬರಬೇಕು ಎಂದು ಸಚಿವ ಮುರುಗೇಶ ನಿರಾಣಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಸವಾಲ್ ಹಾಕಿದರು. ಬಾಗಲಕೋಟೆಯ ಮಾಧ್ಯಮಗೋಷ್ಠಿಯಲ್ಲಿ ನಮ್ಮ ಸಮಾಜದ ಒಬ್ಬ ಸಚಿವರಿಂದ 2ಎ ಮೀಸಲಾತಿ ಘೋಷಣೆ ತಪ್ಪಿತು ಎಂದು ಪಂಚಮಸಾಲಿ ಸ್ವಾಮೀಜಿ ಘೋಷಣೆ ವಿಚಾರವಾಗಿ ಸ್ವಾಮೀಜಿ ಮಾತಿಗೆ ನಿರಾಣಿ ಫುಲ್ ಗರಂ ಆಗಿ ಉತ್ತರಿಸುತ್ತಾ, ಸ್ವಾಮೀಜಿಗಳ ಬಗ್ಗೆ ನನಗೆ ಅಪಾರ ಗೌರವಿದೆ, ರಾಜ್ಯದಲ್ಲಿ 80 ಲಕ್ಷ ಸಮಾಜದ ಜನ ಇರೋದ್ರಿಂದ ಎರಡು ಪೀಠಗಳನ್ನ ಮಾಡಿದ್ದೆವು.
undefined
ನಂತರ ಮೂರನೇ ಪೀಠವನ್ನೂ ನಾನೇ ಮಾಡಿದ್ದೇನೆ, ಇನ್ನೂ ಎರಡು ಪೀಠಗಳನ್ನ ಮಾಡ್ತೇನೆ, 5 ಪೀಠಗಳು ಅಣ್ಣ ತಮ್ಮಂದಿರ ತರಹ ಇರಲಿ ಅನ್ನೋದಕ್ಕೆ ಮಾಡ್ತಿದ್ದಿನಿ. ಈ ಪೀಠ ಹುಟ್ಟುವ ಮೊದಲೇ ನಾನು ಮಂತ್ರಿ ಇದ್ದೆ, ನಾನೆಲ್ಲೂ ಮೀಸಲಾತಿ ತಪ್ಪಿಸುವ ಬಗ್ಗೆ ಮಾತನಾಡಿಲ್ಲ, ಈ ರೀತಿಯಾಗಿ ಯಾರದ್ದಾದ್ರೂ ಎದುರು ಹೇಳಿದ್ರೆ ನಾನು ಇವತ್ತೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ನೀವು ಸಾಕ್ಷಿ ಪ್ರೂವ್ ಮಾಡದಿದ್ರೆ, ಸನ್ಯಾಸತ್ವ ತ್ಯಜಿಸಿ ರಾಜಕಾರಣಕ್ಕೆ ಬರಬೇಕು ಪಂಚಮಸಾಲಿ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗೆ ನಿರಾಣಿ ನೇರ ಸವಾಲ್ ಹಾಕಿದರು.
ಬಂಡವಾಳ ಹೂಡಿಕೆ ಸಮಾವೇಶಕ್ಕೆ 75 ಕೋಟಿ ಖರ್ಚು: ಸಚಿವ ನಿರಾಣಿ
ಯಾರೂ ಸಹ ಮನಸ್ಸಿಗೆ ನೋವಾಗೋ ರೀತಿ ಬಾಯಚಪಲಕ್ಕೆ ಮಾತನಾಡೋದು ಬೇಡ: ಇನ್ನು ಮಾತು ಮುಂದುವರೆಸಿದ ನಿರಾಣಿ, ನೀವು ಮನಸ್ಸು ಮಾಡಿದ್ರೆ, ನಾವು ಅವ್ರನ್ನ ಸೋಲಿಸ್ತೇವೆ, ಇವ್ರನ್ನ ಸೋಲಿಸ್ತೇವೆ ಎಂದು ಪ್ರತಿಸಲವೂ ಹೇಳ್ತೀರಿ 2013ರ ಎಲೆಕ್ಷನ್‌ನಲ್ಲಿ ನಿಮ್ಮ ಪೀಠ ಇರುವಲ್ಲೇ ನಿಮ್ಮ ಸಮಾಜದ ಶಾಸಕನ್ನ ಗೆಲ್ಲಿಸಲಿಕ್ಕೆ ಆಗಿಲ್ಲ ಹೀಗಾಗಿ ನಿಮ್ಮ ಶಕ್ತಿ ಎಷ್ಟಿದೆ ಎಂದು ಗೊತ್ತಾಗಿದೆ ನಿಮ್ಮ ಕ್ಷೇತ್ರದ ಒಬ್ಬ ಎಂಪಿ ಅಭ್ಯರ್ಥಿಯನ್ನ ಗೆಲ್ಲಿಸಲು ಆಗಲಿಲ್ಲ, ಧಾರವಾಡದಲ್ಲಿ ವಿನಯ ಕುಲಕರ್ಣಿ ಅವ್ರನ್ನ ಗೆಲ್ಲಿಸಲು ಹಗಲು ರಾತ್ರಿ ಓಡಾಡಿದ್ರಿ ಏನಾಯ್ತು ರಿಸಲ್ಟ್? ಪ್ರಕಾಶ ಹುಕ್ಕೇರಿ ಅವ್ರ ಕ್ಷೇತ್ರದಲ್ಲಿ ಓಡಾಡಿದ್ರಿ ಅಲ್ಲಿ ಏನಾಯ್ತು ರಿಸಲ್ಟ್.
ಸ್ವಾಮೀಜಿಗಳೇ ನಾವು ಗೆಲ್ಲೋದು, ಸೋಲೋದು ಕ್ಷೇತ್ರದ ಮತದಾರರ ಕೈಯಲ್ಲಿದೆ. ಲಕ್ಷಾಂತರ ಜನ ಸಭೆಗೆ ಬಂದಾರ ಅಂದ್ರೆ, ಸಮಾಜಕ್ಕೆ ೨ಎ ಸಿಗಬೇಕು ಅನ್ನೋದಕ್ಕೆ ಬಂದಿದ್ದಾರೆ ನಿಮ್ಮ ಮಾತಿಗಲ್ಲ, ನಿಮ್ಮ ನಡತೆ ನಡುವಳಿಕೆ ಬಗ್ಗೆ ಅಲ್ಲ ನಿಮ್ಮ ಬಾಯಿ ಚಪಲಕ್ಕೆ ಯಾರದೋ ಮಾತು ಕೇಳಿ ಮಾತಾಡಬಾರದು, ನೀವು (ಸ್ವಾಮೀಜಿ)ದೊಡ್ಡ ಸ್ಥಾನದಲ್ಲಿದ್ದೀರಿ ಮನಸ್ಸಿಗೆ ಬಂದಂತೆ ಮಾತಾಡಿದ್ರೆ ಒಬ್ರ ಮನಸ್ಸಿಗೆ ಎಷ್ಟು ನೋವಾಗುತ್ತೆ ಎಂದು ಅರ್ಥ ಮಾಡಿಕೊಳ್ಬೇಕು, ಸಮಸ್ತ ವೀರಶೈವ ಲಿಂಗಾಯತ ಸಮಾಜಕ್ಕೆ 29ರಂದು ಮೀಸಲಾತಿ ಸಿಗುತ್ತೆ ಎನ್ನುವ ಮೂಲಕ ಸಚಿವ ನಿರಾಣಿ ಸುಳಿವು ಬಿಟ್ಟುಕೊಟ್ಟು, ಆಗ ನಾವೇ ಬಂದು ನಿಮಗೆ ಸನ್ಮಾನ ಮಾಡ್ತೇವೆ ಎಂದು ನಿರಾಣಿ ಹೇಳಿದರು.
ಶೋಭಾ ಕರಂದ್ಲಾಜೆ ಕಾಲು ಬಿದ್ದು ಬಂದದ್ದೇಕೆ: ನಾನು ಯಾರ ಕಾಲನ್ನೂ ಬಿದ್ದಿಲ್ಲ ಎಂದು ಬಡಾಯಿ ಕೊಚ್ಷಿಕೊಳ್ಳುವವರು ದೆಹಲಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಕಾಲುಬಿದ್ದು ಬಂದಿದ್ದಾರೆ ಎಂದು ಬೃಹತ್ ಕೈಗಾರಿಕೆ ಸಚಿವ ಮುರಿಗೇಶ ನಿರಾಣಿ ಗಂಭೀರ ಆರೋಪ ಮಾಡಿದರು. ಯಾರ ಕಾಲೂ ಬೀಳದವರು ಕರಂದ್ಲಾಜೆ ಕಾಲು ಬಿದ್ದದ್ದು ಏಕೆ ಎನ್ನುವುದನ್ನು ಬಹಿರಂಗ ಪಡಿಸಬೇಕು ಎಂದು ಪ್ರಶ್ನಿಸಿ, 'ನಾನು ಅವರು ಹೇಳಿದಂತೆ ಬಚ್ಚಾ ಇದ್ದೇನೆ' ಎಂದು ಹೇಳುವ ಮೂಲಕ ಪರೋಕ್ಷವಾಗಿ ಉತ್ನಾಳ್ ವಿರುದ್ದ ವಾಗ್ದಾಳಿ ಮುಂದುವರಿಸಿದ ಅವರು ವಿಧಾನಸಭೆ ಮೂರನೇ ಮಹಡಿಯಲ್ಲಿ ಕೂಡ್ರಿಸಬೇಕಾದವರು ರಾಜ್ಯದ ಮತದಾರರು ಇದ್ದಾರೆ.
ನಾನೇ ಮೂರನೇ ಮಹಡಿಗೆ ಹೋಗಿ ಕೂಡುವೆ ಎಂದು ಸ್ವಯಂ ಆಗಿ ಹೇಳಿಕೊಳ್ಳುವುದು ಸರಿಯಲ್ಲ ಎನ್ನುವ ಕಿವಿ ಮಾತನ್ನು ಬಚ್ಚಾ ಎಂದವರಿಗೆ ಹೇಳಿದರು. ಮರಾಠರು, ಕುರುಬರು ಸೇರಿದಂತೆ ಇತರರಿಗೂ ಮೀಸಲು ಕೊಡಿಸಲು ಇವರಾರು ಎಂದು ಪ್ರಶ್ನಿಸಿದ ಅವರು ಎಲ್ಲ ಸಮುದಾಯಗಳಿಗೆ ಮೀಸಲು ಕೊಡಿಸಲು ಇವರೇನು ಎಲ್ಲರಿಗೆ ಮೀಸಲು ಕೊಡಿಸುವ ಗುತ್ತಿಗೆ ಹಿಡಿದಿದ್ದಾರೆಯೇ ಎಂದರು.ಪಕ್ಷದಲ್ಲಿದ್ದಾಗೊಂದು, ಪಕ್ಷ ಬಿಟ್ಟಾಗೊಂದು ಮಾತನಾಡುವ ಜಾಯಮಾನ ನನ್ನದಲ್ಲ ಎಂದ ಸಚಿವ ನಿರಾಣಿ, ಹೊತ್ತು ಬಂದತ್ತ ಛತ್ರಿ ಹಿಡಿಯುವ ವ್ಯಕ್ತಿ ನಾನಲ್ಲ. ಬಿಜೆಪಿ ನನಗೆ ತಾಯಿ ಸಮಾನ ಎಂದರು. ಇನ್ನೊಬ್ಬರ ಬಗೆಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು.
ಕೂಡಲ ಸಂಗಮದ ಪಂಚಮಸಾಲಿ ಸ್ವಾಮೀಜಿ ಬಗೆಗೆ ಅಪಾರ ಗೌರವವಿದೆ ಎಂದು ಹೇಳುತ್ತಲೇ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವ ನಿರಾಣಿ, ಪಂಚಮಸಾಲಿ ಸಮುದಾಯದ 3 ಪೀಠಗಳನ್ನು ಸ್ಥಾಪಿಸಿದ್ದೇನೆ. ಇನ್ನೂ ಎರಡು ಪೀಠಗಳನ್ನು ಭಕ್ತರ ಅನುಕೂಲಕ್ಕಾಗಿ ಸ್ಥಾಪಿಸಲಾಗುವುದು.ಯಾವ ಸ್ವಾಮೀಜಿಯವರನ್ನೂ ಕ್ಷೇತ್ರಕ್ಕೆ ಕರೆತಂದು ಮತಹಾಕಿಸಿಕೊಳ್ಳುವ ಕೆಲಸ ಮಾಡಿಲ್ಲ ಎಂದರು. ಈಗಲೂ ಎಲ್ಲ ಸ್ವಾಮೀಜಿಗಳ ಬಗ್ಗೆ ಗೌರವವಿದೆ ಎಂದ ಅವರು ಈ ಹಿಂದೆ ಎರಡೂ ಪೀಠಗಳನ್ನು ಒಂದು ಗೂಡಿಸಲು ಶ್ರಮಿಸಿದ್ದೇನೆ. ಈ ಹಿಂದೆ ಇದೇ ಸ್ವಾಮೀಜಿಗಳ ಬಗ್ಗೆ ಯಾರು ಏನು ಮಾತನಾಡಿದ್ದಾರೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು. ಬಾಗಲಕೋಟೆ ಜಿಲ್ಲೆಯ ಮಂತ್ರಿಯಿಂದಲೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ತಪ್ಪಿದೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ.ಇದನ್ನು ಅವರು ಸಾಬೀತು ಪಡಿಸಿದಲ್ಲಿ ರಾಜಕೀಯದಿಂದಲೇ ದೂರ ಉಳಿಯುವೆ ಎಂದು ಸವಾಲು ಹಾಕಿದರು.
ವಾರದಲ್ಲಿ ಭೂ ಪರಿವರ್ತನೆಗಾಗಿ ವಿಧಾನಸಭೆಯಲ್ಲಿ ಮಸೂದೆ ಮಂಡನೆ
ಗೆಲುವು-ಸೋಲು ನಿರ್ಧರಿಸುವವರು ಕ್ಷೇತ್ರದ ಜನ: 2018ರ ವಿಧಾನ ಸಭೆ ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಸ್ವಾಮೀಜಿ ಕ್ಷೇತ್ರದಲ್ಲೆಲ್ಲ ಅಡ್ಡಾಡಿದರೂ ಅವರಿಗೆ ಕಾಶಪ್ಪನವರ ಅವರನ್ನು ಗೆಲ್ಲಿಸಲು ಅಗಲಿಲ್ಲ ಎಂದು ಪರೋಕ್ಷವಾಗಿ ಆಪಾದನೆ ಮಾಡಿದ ಸಚಿವರು ಗೆಲುವು-ಸೋಲು ನಿರ್ಧರಿಸುವವರು ಕ್ಷೇತ್ರದ ಜನ. ಸ್ವಾಮೀಜಿ ಸ್ಥಾನ ದೊಡ್ಡದು. ಅದನ್ನು ಕಾಪಾಡಿಕೊಳ್ಳುವ ಕೆಲಸ ಮಾಡಬೇಕು ಎಂದರು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕಾಲಾವಕಾಶ ನೀಡಲಿಲ್ಲ. ಉಳಿದವರಿಗರ ಎಷ್ಟು ಬಾರಿ ಗಡವು ನೀಡಿದೀರಿ, ಅವಕಾಶ ಕೊಟ್ಟಿರಿ. ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಏಕೆ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2 ಎ ಮೀಸಲು ಕುರಿತು ಘೋಷಣೆ ಮಾಡಲಿದ್ದಾರೆ. ಆಗ ವೀರಶೈವ- ಲಿಂಗಾಯತ ಸಮುದಾಯಕ್ಕೆ ಸೂಕ್ತ ಸ್ಥಾನ ಮಾನ ಸಿಗಲಿದೆ ಎನ್ನುವ ಭರವಸೆ ವ್ಯಕ್ತ ಪಡಿಸಿದರು.