ನಟಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ ಅವರ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿರುವ ಆರೋಪದಡಿ ನಗರದ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು (ಡಿ.21): ನಟಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ ಅವರ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿರುವ ಆರೋಪದಡಿ ನಗರದ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾರಾ ನೀಡಿದ ದೂರಿನ ಮೇರೆಗೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ .
ದೂರಿನಲ್ಲಿ ಏನಿದೆ?: ತಾರಾ ನೀಡಿರುವ ದೂರಿನಲ್ಲಿ ‘ಫೇಸ್ಬುಕ್‌ನಲ್ಲಿ ತಾರಾ ಅನುರಾಧಾ ಮತ್ತು ತಾರಾ ಅನುರಾಧಾ ವೇಣು ಹೆಸರಿನ ಎರಡು ಅಧಿಕೃತ ಖಾತೆಗಳಿವೆ. ಈ ಎರಡರ ಪೈಕಿ ತಾರಾ ಅನುರಾಧಾ ವೇಣು ಹೆಸರಿನ ಖಾತೆಯನ್ನೇ ಹೆಚ್ಚು ಬಳಸುತ್ತಿದ್ದೇನೆ. ಪರಿಚಿತರೊಬ್ಬರು ನನಗೆ ಕರೆ ಮಾಡಿ ತಾರಾ ಅನುರಾಧಾ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಒಂದು ಪೋಸ್ಟ್ ಬಂದಿದ್ದು, ನೋಡುವಂತೆ ತಿಳಿಸಿದರು.
ಬಳಿಕ ಆ ಪೋಸ್ಟ್ ನೋಡಿದಾಗ ನನಗೆ ಅಶ್ಚರ್ಯ ಕಾದಿತ್ತು. ಆ ಪೋಸ್ಟ್‌ಗೂ ನನಗೂ ಯಾವುದೇ ಸಂಬಂಧವಿಲ್ಲ. ಆ ಪೋಸ್ಟ್ ನಾನು ಹಾಕಿಲ್ಲ. ಅಪರಿಚಿತರು ನನ್ನ ಖಾತೆಯನ್ನು ಬಳಸಿ ಫೇಕ್ ಆಗಿ ಪೋಸ್ಟ್ ಹಾಕಿರಬಹುದು. ಈ ಪೋಸ್ಟ್ ಡಿಲಿಟ್ ಮಾಡಿಸಿ. ಈ ಕೃತ್ಯ ಎಸೆಗಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ’ ತಾರಾ ತಮ್ಮ ದೂರಿನಲ್ಲಿ ಕೋರಿದ್ದಾರೆ. ಈ ದೂರಿನ ಮೇರೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಂಕ್ ಸೀರೆಯಲ್ಲಿ ಕಿಸ್ ಬೆಡಗಿ ಸೆಕ್ಸಿ ಲುಕ್: ಸ್ವಲ್ಪ ಕನ್ನಡ ಕಡೆ ಬನ್ನಿ ಶ್ರೀಲೀಲಾ ಎಂದ ಫ್ಯಾನ್ಸ್!
ನನ್ನ ಹೆಸರಿನ ಫೇಸ್ ಬುಕ್ ಖಾತೆ ಹ್ಯಾಕ್ ಮಾಡಿ ಫೇಕ್ ಫೋಸ್ಟ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಸೈಬರ್ ಠಾಣೆಗೆ ದೂರು ನೀಡಿದ್ದೇನೆ. ಆ ಪೋಸ್ಟ್‌ಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಈ ರೀತಿಯ ಬೆಳವಣಿಗೆ ಅತಂಕಕಾರಿ. ಈ ಫೇಕ್ ಪೋಸ್ಟ್ಗಳಿಗೆ ಬೆಲೆ ಕೊಡಬೇಡಿ.
-ತಾರಾ ಅನುರಾಧಾ ನಟಿ