
ಹಾಸನ (ಡಿ.21): ಈಗಾಗಲೇ ಕೇರಳದಲ್ಲಿ ಕೊರೋನಾ ಹೆಚ್ಚಾಗುತ್ತಿರುವುದರಿಂದ ಶಬರಿಮಲೆಗೆ ಹೋಗಿ ವಾಪಸ್ ಬರುವ ಭಕ್ತರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲೆಯ ಅಭಿವೃದ್ಧಿ ಕುರಿತು ಸಭೆ ನಡೆಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೊರೋನಾ ಗೈಡಲೈನ್ಸ್ ಪ್ರಕಾರ ೬೦ ವರ್ಷ ಮೇಲ್ಪಟ್ಟವರು ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಶಬರಿಮಲೆ ಭಕ್ತಾದಿಗಳಿಗೆ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸಲಾಗುವುದು. ಮತ್ತೆ ರಾಜ್ಯದಲ್ಲಿ ಕೊರೋನಾ ಭೀತಿಯಿಂದಾಗಿ ಈಗಾಗಲೇ ರಾಜ್ಯ ಸರ್ಕಾರ ಗೈಡ್‌ಲೈನ್ಸ್ ಬಿಡುಗಡೆ ಮಾಡಲು ಚಿಂತನೆ ನಡೆಸುತ್ತಿದೆ. ಮತ್ತು ಕೇರಳದ ಶಬರಿಮಲೆಯಿಂದ ಬರುವಂತಹ ಭಕ್ತಾದಿಗಳನ್ನ ಪರೀಕ್ಷೆ ನಡೆಸಬೇಕು ಎಂದು ಈಗಾಗಲೇ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದರು.
ಆನೆ ಕ್ಯಾಂಪ್: ಹಾಸನ ಸೇರಿದಂತೆ ಚಿಕ್ಕಮಗಳೂರು ಮತ್ತು ಮೂಡಿಗೆರೆಯಲ್ಲಿ ಕಾಡಾನೆಗಳ ಹಾವಳಿಯಿಂದ ಪ್ರತಿನಿತ್ಯ ಸಾವು ನೋವುಗಳು ಸಂಭವಿಸುತ್ತಿದ್ದು, ಈ ಸಂಬಂಧ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಸಭೆ ಕರೆದು ಚರ್ಚೆ ನಡೆಸಲಾಗುವುದು. ಕಾಡು ಪ್ರಾಣಿಗಳು ಮತ್ತು ಮನುಷ್ಯರ ಸಂಘರ್ಷ ಹೆಚ್ಚಾಗುತ್ತಿದೆ ಇದಕ್ಕೆ ಪ್ರಮುಖ ಕಾರಣ ಅರಣ್ಯ ಒತ್ತುವರಿಯಾಗಿರುವುದರಿಂದ ಪ್ರಾಣಿಗಳು ನಾಡಿಗೆ ಬರುತ್ತಿವೆ, ಅಲ್ಲದೆ ಕಾಡಿನಲ್ಲಿ ಆಹಾರ ಸಿಗದೇ ಊರಿಗೆ ಆಗಮಿಸುತ್ತಿವೆ, ಇದನ್ನು ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದೆಂದು ಹೇಳಿದರು. ಜಿಲ್ಲೆಯಲ್ಲಿ ಹೆಚ್ಚಾಗಿರುವ ಕಾಡಾನೆಯಿಂದ ಮನುಷ್ಯನ ಪ್ರಾಣಹಾನಿ ಸಂಭವಿಸುತ್ತಿದ್ದು, ಈ ಬಗ್ಗೆ ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಸಭೆ ಕರೆದು ಚರ್ಚಿಸಿ, ಶ್ರೀಲಂಕಾ ಮಾದರಿಯಲ್ಲಿ ಆನೆ ಕ್ಯಾಂಪ್ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಭರವಸೆ ನೀಡಿದರು.
ಲಂಚ ಕೇಸ್: ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
ಬ್ಯಾರಿಕೇಡ್‌ಗಳ ನಿರ್ಮಾಣ: ಮಲೆನಾಡು ಭಾಗದಲ್ಲಿ ಕಾಡಾನೆಗಳ ಸಂತತಿಯು ಕೂಡ ಹೆಚ್ಚಾಗಿದೆ. ಅಲ್ಲದೆ ಇವುಗಳನ್ನ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ೩೫೦ ಕೋಟಿ ರು. ವೆಚ್ಚದಲ್ಲಿ ಬ್ಯಾರಿಕೇಡ್ ನಿರ್ಮಾಣಕ್ಕೆ ಹೈಪೊರ್ ಕಮಿಟಿ ವರದಿ ನೀಡಿದೆ. ಆದರೆ ಅಷ್ಟೊಂದು ಹಣವನ್ನ ಒಂದೇ ಹಂತದಲ್ಲಿ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಹಂತ ಹಂತವಾಗಿ ರೈಲ್ವೆ ಬ್ಯಾರಿಕೇಡ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು. ಕಾಡಾನೆ ದಾಳಿಯಿಂದ ಕೂಲಿ ಕಾರ್ಮಿಕರೇ ಹೆಚ್ಚು ತೊಂದರೆಗೆ ಒಳಗಾಗುತ್ತಿದ್ದು, ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಶ್ರೀಲಂಕಾ ಮಾದರಿಯಲ್ಲಿ ಕಾಡಾನೆಗಳನ್ನು ಹಿಡಿದು ತೊಲಗಿಸಲು ಆನೆ ಕ್ಯಾಂಪ್ ನಿರ್ಮಾಣದ ಬಗ್ಗೆಯೂ ಕೂಡ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು. ಅರ್ಜುನ ಆನೆ ಸಾವಿನ ಬಗ್ಗೆ ಈಗಾಗಲೇ ತನಿಖೆ ನಡೆಸಲಾಗುತ್ತಿದ್ದು, ಯಾರೇ ತಪ್ಪಿತಸ್ಥರಿದ್ದರೂ ಕೂಡ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದರು.
ಜನಗಣತಿ ಬಿಡುಗಡೆಗೂ ಮೊದಲೇ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿರುವುದು ಕಾಣುತ್ತಿದ್ದೇವೆ. ವರದಿ ಬರುವುದಕ್ಕೆ ಮುಂಚೆ ವಿರೋಧ ಮಾಡಬಾರದು. ಜಾತಿಗಣತಿ ವರದಿ ಪಡೆಯಲು ೨೦೦ ಕೋಟಿ ಖರ್ಚು ಮಾಡಲಾಗಿದೆ. ಕಾಂತರಾಜ್ ಅವರ ನೇತೃತ್ವದಲ್ಲಿ ವರದಿ ತಯಾರಿಸಲಾಗಿದೆ. ಇನ್ನು ಬಿಡುಗಡೆ ಮಾಡುವ ಮೊದಲೆ ವಿನಾಕಾರಣ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಟೀಕಿಸಿದರು. ವರದಿಯನ್ನ ಅನುಷ್ಠಾನ ಮಾಡುವ ಮೊದಲು ಸಾರ್ವಜನಿಕರ ಅಭಿಪ್ರಾಯಗಳನ್ನ ಪಡೆದು ವಿಶ್ಲೇಷಣೆ ಮಾಡಿ, ಎಲ್ಲರ ಒಮ್ಮತದಿಂದ ಅದನ್ನ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಕೊರೊನಾ ವೈರಸ್ ದಿನೇ ದಿನೇ ಹೆಚ್ಚಳ: 7 ಮಂದಿ ಐಸಿಯುನಲ್ಲಿ!
ಜನಪ್ರತಿನಿಧಿಗಳು ಕಾಯ್ದೆ ಮತ್ತು ಕಾನೂನುಗಳನ್ನ ಜಾರಿಗೆ ತರುವವರು ಅಂತಹವರನ್ನು ಸಂಸತ್ತಿನಿಂದ ಅಮಾನತು ಮಾಡಿರುವುದು ನಿಜಕ್ಕೂ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮುಂಬರುವ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಂಬಂಧ ರಾಷ್ಟ್ರೀಯ ಪಕ್ಷ ರಾಜ್ಯ ಮತ್ತು ರಾಷ್ಟ್ರದ ನಾಯಕರು ಚರ್ಚೆ ನಡೆಸಿ ಸೂಕ್ತ ತೀರ್ಮಾನವನ್ನ ಕೈಗೊಳ್ಳಲಿದ್ದಾರೆ. ಸ್ಥಳೀಯರು ಸಾರ್ವಜನಿಕರ ವಿಶ್ವಾಸವನ್ನ ತೆಗೆದುಕೊಂಡು ಜಿಲ್ಲೆಗೆ ಸೂಕ್ತ ಅಭ್ಯರ್ಥಿಯನ್ನು ಪ್ರಕಟ ಮಾಡಲಿದ್ದಾರೆ. ಬಹು ನಿರೀಕ್ಷೆಯ ನಿಗಮ ಮಂಡಳಿಗಳ ನೇಮಕಗಳು ಶೀಘ್ರದಲ್ಲೇ ನಡೆಯಲಿದ್ದು, ಹಾಸನ ಜಿಲ್ಲೆಯಿಂದ ಅನೇಕ ಆಕಾಂಕ್ಷಿಗಳು ಇದ್ದು, ಆದರೇ ಹಾಲಿ ೨೦ ರಿಂದ ೨೫ ಜನ ಶಾಸಕರಿಗೆ ಈ ಸ್ಥಾನವನ್ನು ನೀಡಲಾಗುವುದು. ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ