ಬೆಂಗಳೂರಿನ ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯದಲ್ಲಿ ವೀರಶೈವ- ಲಿಂಗಾಯತ ಮಹಾಸಭಾದ ಪದಾಧಿಕಾರಿಗಳ ವಜಾಕ್ಕೆ ದಾವೆ ಸಲ್ಲಿಸಿರುವ ಎನ್.ಎಸ್. ಕೆಂಪಣ್ಣ ಎನ್ನುವವರು ಮಹಾಸಭಾದಲ್ಲಿ ಇದ್ದಾರೋ, ಇಲ್ಲವೋ, ಅವರು ಯಾರು ಎಂಬುದೂ ಸಹ ಗೊತ್ತಿಲ್ಲ.
ವರದಿ : ವರದರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ದಾವಣಗೆರೆ (ಡಿ.19): ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಸ್ಥಾನಗಳನ್ನು ರಾಜಕಾರಣಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಾರಣಕ್ಕೆ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳನ್ನು ಪದಚ್ಯುತಗೊಳಿಸಬೇಕು ಎಂಬುದಾಗಿ ಎಸ್.ಎನ್. ಕೆಂಪಣ್ಣ ಬೆಂಗಳೂರಿನ ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಿರುವ ದಾವೆಗೆ ಸಂಬಂದಿಸಿದಂತೆ ತಮಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಎನ್. ಕೆಂಪಣ್ಣ ಇತರೆ ಐವರು ಸಲ್ಲಿಸಿರುವ ದಾವೆಗೆ ಸಂಬಂಧಿಸಿದಂತೆ ಯಾವುದೇ ತುರ್ತು ನೋಟಿಸ್ ತಮಗೆ ಬಂದಿಲ್ಲ ಎಂದರು.ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಹಿಂದಿನಿಂದಲೂ ವೀರಶೈವ-ಲಿಂಗಾಯತ ಒಂದೇ ಎಂದೇ ಪ್ರತಿಪಾದಿಸುತ್ತಾ ಬಂದಿದೆ. ಎಲ್ಲ 99 ಒಳಪಂಗಡಗಳು ಒಂದಾಗಬೇಕು ಎಂಬುದನ್ನ ಮಹಾಸಭಾ ಬಯಸುತ್ತದೆ. ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಸಾಮಾನ್ಯ ಸಭೆಯಲ್ಲೇ ಚರ್ಚಿಸಿಯೇ ಲಿಂಗಾಯತ ಎಂಬ ಪದ ಸೇರಿಸಲಾಗಿದೆ. ದಾವಣಗೆರೆಯಲ್ಲಿ ನಡೆಯಬೇಕಿದ್ದ 23ನೇ ಅಧಿವೇಶನವನ್ನ ಮುಂದೂಡಿಕೆಯ ಬಗ್ಗೆಯೂ ಶನಿವಾರ ಆನ್‌ಲೈನ್‌ನಲ್ಲಿ ಸಭೆ ನಡೆಸಿ, ಚರ್ಚೆ ನಡೆಸಿದ ನಂತರವೇ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಸಿದರು.
Raichur: ಸರ್ವ ಧರ್ಮದವರನ್ನು ಪ್ರೀತಿಸುವ ಗುಣ ವೀರಶೈವಕ್ಕಿದೆ: ಡಾ.ವೀರಸೋಮೇಶ್ವರ
ಕೆಂಪಣ್ಣ ಯಾರೆಂಬುದೇ ಗೊತ್ತಿಲ್ಲ: ಬೆಂಗಳೂರಿನ ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿರುವ ಎನ್.ಎಸ್. ಕೆಂಪಣ್ಣ ಎನ್ನುವವರು ಮಹಾಸಭಾದಲ್ಲಿ ಇದ್ದಾರೋ, ಇಲ್ಲವೋ, ಅವರು ಯಾರು ಎಂಬುದೂ ಸಹ ಗೊತ್ತಿಲ್ಲ. ಕೆಲವರು ಮಾತನಾಡುತ್ತಾರೆ. ಅಂತಹವರ ಬಾಯಿ ತಡೆಯುವುದಕ್ಕೆ ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಜಾಮಾದಾರ್ ಕೊಡುಗೆ ಏನೂ ಇಲ್ಲ: ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಜಾಮಾದಾರ್ ಸಮಾಜಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ಅಂತಹವರ ಹೇಳಿಕೆಗಳ ಬಗ್ಗೆ ಸದಾ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಜಾಮಾದಾರ್ ಅಧಿವೇಶನ ನಡೆಸುವುದಕ್ಕೆ ಬೇಡ ಅನ್ನಲಾಗುತ್ತದೆಯೇ. ಬೇಕಿದ್ದರೆ ದಾವಣಗೆರೆಯಲ್ಲೇ ಅಧಿವೇಶನ ನಡೆಸಲಿ ಬೇಡ ಎನ್ನುವವರು ಯಾರು. ಅವರು ಏನೇ ಮಾತನಾಡಲಿ. ನಾವೂ ಸಹ ನೇರ ದಿಟ್ಟ ಉತ್ತರವನ್ನ ಕೊಟ್ಟೇ ಕೊಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವೀರಶೈವ ಮಹಾಸಭಾ ರಾಜಕೀಯ ಪುಡಾರಿಗಳ ಸಂಘಟನೆ: ಎಸ್.ಎಂ ಜಾಮದಾರ್ ಕಿಡಿ
ಬಿಡಿಎ ಸ್ಕೆಚ್ ಮಾದರಿಯಲ್ಲಿ ಕಟ್ಟಡ ನಿರ್ಮಾಣ: ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ರಾಜಕಾಲುವೆ ಮೇಲೆ ಶಾಮನೂರು ಶಿವಶಂಕರಪ್ಪ ಅವರು ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ ಎಂದು ಜಾಮಾದಾರ್ ಆರೋಪ ಮಾಡಿದ್ದಾರೆ. ಬಿಡಿಎನಿಂದಲೇ ಬಾಪೂಜಿ ವಿದ್ಯಾ ಸಂಸ್ಥೆಗೆ ನಿವೇಶನ ಮಂಜೂರು ಮಾಡಲಾಗಿದೆ. ಬಾಪೂಜಿ ವಿದ್ಯಾಸಂಸ್ಥೆಯಿಂದಾಗಲಿ, ಶಾಮನೂರು ಶಿವಶಂಕರಪ್ಪ ಅವರಾಗಲೀ ಖರೀದಿ ಮಾಡಿಯೇ ಇಲ್ಲ. ಬಿಡಿಎ ಸ್ಕೆಚ್, ಅನುಮತಿ ನೀಡಿರುವಂತೆಯೇ ಆಸ್ಪತ್ರೆ ಕಟ್ಟಲಾಗಿದೆ. ಜಾಮದಾರ್ ಈ ರೀತಿಯ ಹೇಳಿಕೆ ನೀಡುವುದು ಸರಿ ಅಲ್ಲ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು. ಮಹಾಸಭಾದ ಉಪಾಧ್ಯಕ್ಷ ಅಥಣಿ ಎಸ್. ವೀರಣ್ಣ ಸಹ ಧ್ವನಿಗೂಡಿಸಿದರು.
ಮಹಾಸಭಾ ಅಧಿವೇಶನ ರಾಜಕೀಯ ಉದ್ದೇಶವಲ್ಲ: ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ 23ನೇ ಅಧಿವೇಶನವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಮಾಡುತ್ತಿಲ್ಲ. ಮಹಾಸಭಾದಲ್ಲಿ ಬರೀ ಕಾಂಗ್ರೆಸ್‌ನ ಪದಾಧಿಕಾರಿಗಳೇ ಇಲ್ಲ. ರಾಷ್ಟ್ರೀಯ ಉಪಾಧ್ಯಕ್ಷ ಪ್ರಭಾಕರ ಕೋರೆ, ವೀರಣ್ಣ ಚರಂತಿಮಠ್, ದಾವಣಗೆರೆ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ ಬಿಜೆಪಿಯವರು. ಮಹಾಸಭಾದಲ್ಲಿ ಬರೀ ಕಾಂಗ್ರೆಸ್‌ನವರು ಮಾತ್ರವೇ ಅಲ್ಲ. ಎಲ್ಲ ಪಕಕ್ಷದವರೂ ಪದಾಧಿಕಾರಿಗಳಾಗಿದ್ದಾರೆ. ನಾಲ್ಕು ತಿಂಗಳ ಮುಂಚೆಯೇ ಚರ್ಚಿಸಿ, ಅಧಿವೇಶನ ನಿಗದಿಪಡಿಸಿದ ನಂತರ ವಿಧಾನ ಸಭಾ ಅಧಿವೇಶನ ನಿಗದಿಆಗಿದೆ. ಮಹಾಸಭಾದ ಅಧಿವೇಶನಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಶಾಮನೂರು ಶಿವಶಂಕರಪ್ಪ ಉತ್ತರಿಸಿದರು.