
ಮೈಸೂರು(ಜ.18):ವರುಣ ಕ್ಷೇತ್ರದಲ್ಲಿ ಸರ್ವೇ ನಡೆಸಲು ಹೋದ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿರುವ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಮಹಿಳಾ ಅಧಿಕಾರಿ ಅಂತಾನೂ ನೋಡದೆ ನಿಂದಿಸಿರುವುದು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ವರುಣಾದಲ್ಲಿ ಇಂತಹ ಘಟನೆಗಳೇನು ಹೊಸದಲ್ಲ, ಈ ಹಿಂದೆಯೂ ಇಂತಹ ಪುಂಡಾಟಿಕೆಗಳು ನಡೆದಿವೆ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಅವರ ಹಿಂದಿನ ವರ್ತನೆಗಳನ್ನು ನೆನಪಿಸಿದ ವಿಜಯೇಂದ್ರ, ಸ್ವತಃ ಮುಖ್ಯಮಂತ್ರಿಗಳೇ ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿಯ ಕಪಾಳಕ್ಕೆ ಹೊಡೆಯಲು ಹೋಗಿದ್ದರು. ಶಿಡ್ಲಘಟ್ಟದಲ್ಲೂ ಅಧಿಕಾರಿಗಳಿಗೆ ನಿಂದಿಸಲಾಗಿತ್ತು. ಇದೆಲ್ಲವೂ ಕಾಂಗ್ರೆಸ್ ಪುಂಡರ ವರ್ತನೆಯ ಪ್ರತಿಬಿಂಬ ಎಂದು ಟೀಕಿಸಿದರು. ಅಧಿಕಾರಿಗಳ ಮೇಲೆ ದರ್ಪ ತೋರುವ ಮೂಲಕ ಸರ್ಕಾರ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು. ಇದೇ ವೇಳೆ ಮನರೇಗಾ ಹೆಸರು ಬದಲಾವಣೆ ವಿಚಾರದ ಚರ್ಚೆ ವಿಚಾರಕ್ಕೆ 'ಚರ್ಚಿಸುವುದೇನಿದೆ ಬದನೆಕಾಯಿ' ಎಂದು ಗರಂ ಆದರು.
ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಬಂಡವಾಳ ಶಾಹಿಗಳ ಸಭೆಗೆ ಸಿಎಂ ಮತ್ತು ಡಿಸಿಎಂ ಗೈರಾಗಿರುವುದನ್ನು ವಿಜಯೇಂದ್ರ ಪ್ರಶ್ನಿಸಿದ್ದಾರೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ರಾಜ್ಯಕ್ಕೆ ಬಂಡವಾಳ ತರಲು ದಾವೋಸ್‌ಗೆ ಹೋಗಿದ್ದಾರೆ. ಆದರೆ ನಮ್ಮ ರಾಜ್ಯದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಹಿತಾಸಕ್ತಿ ಮರೆತು ಇಲ್ಲಿ ಕುಳಿತಿದ್ದಾರೆ. ಇದು ಕೇವಲ ರಾಜಕೀಯ ಚದುರಂಗದಾಟಕ್ಕಾಗಿ ಅವರು ಮಾಡುತ್ತಿರುವ ತಂತ್ರ ಎಂದು ಅವರು ಕಿಡಿಕಾರಿದ್ದಾರೆ.
ಅಬಕಾರಿ ಇಲಾಖೆಯ ಲಂಚಾವತಾರ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಅಬಕಾರಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ. ಇದರಲ್ಲಿ ನೇರವಾಗಿ ಸಚಿವರ ಹೆಸರು ಕೇಳಿಬಂದಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ಅವರು ತಕ್ಷಣವೇ ಅಬಕಾರಿ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು. ಭ್ರಷ್ಟಾಚಾರದ ಬಗ್ಗೆ ಜನರು 'ಛೀ ತೂ' ಎಂದು ಉಗಿಯುವ ಮುನ್ನ ಸರ್ಕಾರ ಬುದ್ಧಿ ಕಲಿಯಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ