
ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಲೋಕಾಯುಕ್ತ ಪೊಲೀಸರು ನಡೆಸಿದ ಟ್ರಾಪ್ ಕಾರ್ಯಾಚರಣೆ ಇದೀಗ ಮುಂದಿನ ಹಂತಕ್ಕೆ ತಲುಪಿದೆ. ಅಬಕಾರಿ ಉಪ ಆಯುಕ್ತ (ಡಿಸಿ) ಜಗದೀಶ್, ಅಬಕಾರಿ ಕಚೇರಿ ಅಧೀಕ್ಷಕ (ಎಸ್ಪಿ) ಕೆ.ಎಂ. ತಮ್ಮಣ್ಣ ಹಾಗೂ ಅಬಕಾರಿ ಕಾನ್ಸ್‌ಟೇಬಲ್ ಲಕ್ಕಪ್ಪ ಗಣಿ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಲೋಕಾಯುಕ್ತ ಕೋರ್ಟ್ ಆದೇಶ ಹೊರಡಿಸಿದೆ.
ಬಂಧಿತ ಮೂವರು ಆರೋಪಿಗಳನ್ನು ಲೋಕಾಯುಕ್ತ ಪೊಲೀಸರು ತಡ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನಿನ್ನೆ ತಡ ರಾತ್ರಿ ತನಕ ಸತತ ವಿಚಾರಣೆ ನಡೆಸಿದ ನಂತರ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು, ಸಾಕ್ಷ್ಯಾಧಾರಗಳು ಹಾಗೂ ವಶಪಡಿಸಿಕೊಂಡ ಹಣದ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ದಾಖಲೆಗಳ ಪರಿಶೀಲನೆಯ ಬಳಿಕ ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆದೇಶಿಸಿದರು.
ಲೋಕಾಯುಕ್ತ ಪೊಲೀಸರು ಈ ಪ್ರಕರಣದ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದು, ಲಂಚ ಸ್ವೀಕರಿಸಿದ್ದಕ್ಕೆ ಸಂಬಂಧಿಸಿದಂತೆ ಕೆಲ ಮಹತ್ವದ ಸಾಕ್ಷ್ಯಗಳನ್ನು ಈಗಾಗಲೇ ಕಲೆ ಹಾಕಿದ್ದಾರೆ. ಲಂಚದ ಹಣ ಸ್ವೀಕಾರದ ಬಗ್ಗೆ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಅಧಿಕಾರಿಗಳು, ಪ್ರಕರಣದ ಜಾಲವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆರೋಪಿಗಳ ಮೂವರ ಬ್ಯಾಂಕ್ ಖಾತೆಗಳ ಸಂಪೂರ್ಣ ಮಾಹಿತಿಯನ್ನು ಪಡೆಯಲು ಲೋಕಾಯುಕ್ತ ಪೊಲೀಸರು ಮುಂದಾಗಿದ್ದಾರೆ. ಯಾವ ಯಾವ ಖಾತೆಗಳಲ್ಲಿ ಹೆಚ್ಚಿನ ಪ್ರಮಾಣದ ಹಣ ವರ್ಗಾವಣೆ ನಡೆದಿದೆ, ಆ ಹಣವನ್ನು ಯಾರು, ಯಾವ ಉದ್ದೇಶಕ್ಕಾಗಿ ವರ್ಗಾಯಿಸಿದ್ದಾರೆ ಎಂಬುದರ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಈ ಹಿಂದೆ ಆರೋಪಿಗಳು ಎಷ್ಟು ಅಬಕಾರಿ ಪರವಾನಗಿಗಳನ್ನು (ಲೈಸೆನ್ಸ್‌ಗಳನ್ನು) ಮಂಜೂರು ಮಾಡಿದ್ದಾರೆ ಎಂಬುದನ್ನೂ ತನಿಖೆ ವ್ಯಾಪ್ತಿಗೆ ತೆಗೆದುಕೊಳ್ಳಲಾಗಿದೆ. ಆ ಪರವಾನಗಿ ಪಡೆದವರನ್ನು ಸಂಪರ್ಕಿಸಿ, “ನೀವು ಹಣ ನೀಡಿದ್ದೀರಾ?”, “ಪರವಾನಿಗೆಗಾಗಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತೇ?” ಎಂಬ ಪ್ರಶ್ನೆಗಳ ಮೂಲಕ ಮಾಹಿತಿ ಕಲೆ ಹಾಕಲು ಲೋಕಾಯುಕ್ತ ಅಧಿಕಾರಿಗಳು ಮುಂದಾಗಿದ್ದಾರೆ.
ಒಂದು ವೇಳೆ ಲಂಚದ ಬೇಡಿಕೆ ಇಟ್ಟಿದ್ದರೆಂಬುದು ದೃಢಪಟ್ಟಲ್ಲಿ, ಆರೋಪಿಗಳಿಗೆ ಇನ್ನಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಲಂಚದ ಹಣವನ್ನು ಹೆಚ್ಚಿನ ಪ್ರಮಾಣದಲ್ಲಿ ನಗದು ರೂಪದಲ್ಲೇ ಸ್ವೀಕರಿಸಿರುವ ಶಂಕೆಯೂ ವ್ಯಕ್ತವಾಗಿದೆ. ಈ ಹಣ ಯಾರಿಂದ ಯಾರಿಗೆ ಸಾಗುತ್ತಿತ್ತು, ಅಂತಿಮವಾಗಿ ಯಾವ ಹಂತಕ್ಕೆ ಹೋಗುತ್ತಿತ್ತು ಎಂಬುದರ ಕುರಿತು ವಿಶೇಷ ತನಿಖೆ ನಡೆಸಲಾಗುತ್ತಿದೆ.
ಈ ಪ್ರಕರಣದಲ್ಲಿ ಬಂಧಿತರಾದ ಮೂವರ ಹೊರತಾಗಿ ಇನ್ನೂ ಯಾರು ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಸಹ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಬಕಾರಿ ಇಲಾಖೆಯ ಒಳಜಾಲದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಸಂಪೂರ್ಣ ಜಾಲವನ್ನು ಬಯಲು ಮಾಡುವ ಉದ್ದೇಶದಿಂದ ತನಿಖೆ ಮುಂದುವರೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ