
ದಾವಣಗೆರೆ (ನ.30): ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸ್ಥಾನದ ಕುರಿತು ನಡೆಯುತ್ತಿರುವ ಆಂತರಿಕ ಸಂಘರ್ಷ ಮತ್ತು ಆಡಳಿತ ವೈಖರಿ ಬಗ್ಗೆ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು ನಯವಾಗಿಯೇ ಚಾಟಿ ಏಟು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಅಭಿವೃದ್ಧಿಗೆ ಹೆಚ್ಚು ಗಮನ ನೀಡುವಂತೆ ಅವರು ಸಲಹೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ವಚನಾನಂದ ಶ್ರೀಗಳು, ಸಿಎಂ ಮತ್ತು ಡಿಸಿಎಂ ನಡುವಿನ ಭಿನ್ನಾಭಿಪ್ರಾಯದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, 'ಸಿಎಂ ಮತ್ತು ಡಿಸಿಎಂ ಬ್ರೇಕ್‌ಫಾಸ್ಟ್ ಮಾಡಿ ಎಲ್ಲವನ್ನೂ ಬ್ರೇಕ್ ಮಾಡಿದ್ದಾರೆ. ಅವರು ಬಹಳ ಚೆನ್ನಾಗಿ ಪ್ರೀತಿಯಿಂದ ಇದ್ದಾರೆ. ಹೊಂದಿಕೊಂಡು ಹೋಗಿ, ಹೀಗೆ ಪ್ರೀತಿಯಿಂದ ಇರಿ ಎಂದು ನಾವು ಹೇಳುತ್ತೇವೆ. ಆದರೆ, ಹೆಚ್ಚು ಕರ್ನಾಟಕದ ಅಭಿವೃದ್ಧಿ ಕಡೆ ಗಮನ ಕೊಡಿ. ಜನರಿಗೆ ಒಳ್ಳೆಯ ರಸ್ತೆಗಳು, ಕುಡಿಯುವ ನೀರು ಬೇಕಾಗಿದೆ ಎಂದರು.
ರೈತರ ಸಮಸ್ಯೆಗಳ ಕುರಿತು ಮಾತನಾಡಿದ ಸ್ವಾಮೀಜಿಗಳು, ಸರ್ಕಾರಕ್ಕೆ ತಕ್ಷಣ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿದರು. ಈಗಾಗಲೇ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾನು ಲಕ್ಷ್ಮೇಶ್ವರಕ್ಕೆ ಹೋಗಿದ್ದೆ, ಅಲ್ಲಿ ಸಾವಿರಾರು ರೈತರು ಬೀದಿಯಲ್ಲಿ ಕುಳಿತಿದ್ದಾರೆ. ಬೆಂಬಲ ಬೆಲೆ ನೀಡಿ ರೈತರು ಬೆಳೆದ ಮೆಕ್ಕೆಜೋಳವನ್ನು ಸರ್ಕಾರ ಕೂಡಲೇ ಖರೀದಿಸಬೇಕು. ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಿದಂತೆ, ಮೆಕ್ಕೆಜೋಳ ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಿ. ರೈತರ ಹೋರಾಟಕ್ಕೆ ತಾವು ಬೆಂಬಲ ನೀಡುವುದಾಗಿ ಘೋಷಿಸಿದರು. 'ರೈತರು ಇಲ್ಲದೇ ನಮ್ಮ ದಾಸೋಹ ನಡೆಯಲ್ಲ. ನಮ್ಮ ಮಠಗಳು, ಪೀಠಗಳು ಸದಾ ರೈತರ ಪರವಾಗಿ ಇರುತ್ತವೆ ಎಂದು ಸ್ಪಷ್ಟಪಡಿಸಿದರು.
ಸ್ವಾಮೀಜಿಗಳ ಮಧ್ಯೆ ಯಾವುದೇ ಗೊಂದಲವಿಲ್ಲ
ಸಿಎಂ ಮತ್ತು ಡಿಸಿಎಂ ಪರವಾಗಿ ಕೆಲವು ಸ್ವಾಮೀಜಿಗಳು ಹೇಳಿಕೆ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಲು ವಚನಾನಂದ ಶ್ರೀಗಳು ನಿರಾಕರಿಸಿದರು. 'ಆ ವಿಚಾರ ನಾವು ಹೇಳೋಕೆ ಇಷ್ಟಪಡುವುದಿಲ್ಲ. ಅವರವರ ದೃಷ್ಟಿಯಲ್ಲಿ ಅವರು ಸರಿಯಾಗಿಯೇ ಇದ್ದಾರೆ. ಅವರು ಸರಿ ಇವರು ಸರಿ ಅನ್ನೋಕೆ ನಾವು ಆ ಸ್ಥಾನದಲ್ಲಿ ಇಲ್ಲ' ಎಂದರು.
ಸಿಎಂ, ಡಿಸಿಎಂ ಹೇಗೆ ಬ್ರೇಕ್‌ಫಾಸ್ಟ್ ಮಾಡಿ ಒಂದಾಗಿದ್ದಾರೆ, ಹಾಗೇ ನಮ್ಮ ಸ್ವಾಮೀಜಿಗಳೂ ಒಂದಾಗಿದ್ದಾರೆ. ನಮ್ಮ ಸ್ವಾಮೀಜಿಗಳು ಬಹಳ ಜಾಣರಿದ್ದಾರೆ. ನಾವೆಲ್ಲ ಕೂಡಿರುತ್ತೇವೆ, ಕೂಡಿ ಪ್ರಸಾದ ಮಾಡಿರುತ್ತೇವೆ. ಸ್ವಾಮೀಜಿಗಳ ಮಧ್ಯೆ ಯಾವುದೇ ಗೊಂದಲವಿಲ್ಲ ಎಂದು ಅವರು ಗೊಂದಲಗಳಿಗೆ ತೆರೆ ಎಳೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ