50 ವರ್ಷ ಸಲೂನ್ ನಡೆಸುತ್ತಾ ನಾಟಕ ರಚನೆ ಮಾಡಿದ ರಂಗಸ್ವಾಮಿ: ಕನ್ನಡ ರಂಗಭೂಮಿಯ ಅಪರೂಪದ ಕಲಾವಿದ

Published : Nov 30, 2025, 07:19 AM IST
SN Rangaswamy

ಸಾರಾಂಶ

ಕ್ಷೌರಿಕ ವೃತ್ತಿ ಮಾಡಿಕೊಂಡೇ ಜನರು ಕಿಕ್ಕಿರಿದು ನೋಡುವಂತಹ ಅದ್ಭುತ ನಾಟಕಗಳನ್ನು ರಚಿಸುವ ಮೂಲಕ ಹಿರಿಯ ನಾಟಕ ರಚನೆಕಾರ ಎಸ್‌.ಎನ್‌.ರಂಗಸ್ವಾಮಿ ಅವರು ಕನ್ನಡ ರಂಗಭೂಮಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ.

ನಾಗರಾಜ ಎಸ್, ಬಡದಾಳ್

ದಾವಣಗೆರೆ (ನ.30): ಕಳೆದ 5 ದಶಕಗಳ ಕಾಲ ನಿರಂತರ ಕ್ಷೌರಿಕ ವೃತ್ತಿ ಮಾಡಿಕೊಂಡೇ ಜನರು ಕಿಕ್ಕಿರಿದು ನೋಡುವಂತಹ ಅದ್ಭುತ ನಾಟಕಗಳನ್ನು ರಚಿಸುವ ಮೂಲಕ ಹಿರಿಯ ನಾಟಕ ರಚನೆಕಾರ ಎಸ್‌.ಎನ್‌.ರಂಗಸ್ವಾಮಿ ಅವರು ಕನ್ನಡ ರಂಗಭೂಮಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ. ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದ ನಿವಾಸಿ ಎಸ್‌.ಎನ್.ರಂಗಸ್ವಾಮಿ, ಚಿರಡೋಣಿ ಗ್ರಾಮದಲ್ಲಿ 50 ವರ್ಷ ಸಲೂನ್ ನಡೆಸುತ್ತಿದ್ದು, ಕುಲಕಸುಬಿನ ಜೊತೆಗೆ ತಮ್ಮ 1.5 ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡೇ ಐದಾರು ನಾಟಕಗಳನ್ನು ರಚಿಸಿದ್ದಾರೆ. ಈ ಪೈಕಿ ಕೊರಳೊಂದು-ತಾಳಿ ಎರಡು, ಶೀಲಗೆಟ್ಟರೂ ಸೂಳೆಯಲ್ಲ, ಹುಡುಗಿ ಮೆಚ್ಚಿದ ಹುಂಬ ಎಂಬ 3 ನಾಟಕಗಳು ಮುದ್ರಣ ಕಂಡಿವೆ.

ದುಡುಕಿ ಹೋದ ಮಗ-ಹುಡುಕಿ ಬಂದ ಸೊಸೆ, ಶಿಕ್ಷಣವೇ ನಮ್ಮ ರಕ್ಷಣೆ ನಾಟಕಗಳನ್ನು ರಚಿಸಿದ್ದಾರೆ. ಅಂಡ ಲುಂಗಿ, ತುಂಡು ಲಂಗವೆಂಬ ನಾಟಕ ಅಪೂರ್ಣವಾಗಿದ್ದು, ಪೂರ್ಣಗೊಳಿಸಲು ಈಗ ವಯೋಸಹಜವಾಗಿ ಕಣ್ಣು, ಕೈಗಳು ಸಹಕರಿಸುತ್ತಿಲ್ಲವೆಂಬ ಬೇಸರ ರಂಗಸ್ವಾಮಿಯವರದು. ನಾಟಕ ರಚನೆ ಜೊತೆಗೆ ತಾವೇ ನಾಯಕರಾಗಿ, ಹಾಸ್ಯ ಪಾತ್ರದಲ್ಲೂ ಅಭಿನಯಿಸಿದ್ದಾರೆ. 4 ದಶಕಗಳ ಹಿಂದೆ ಮುಳುಗುತ್ತಿದ್ದ ನಾಟಕ ಕಂಪನಿಯೊಂದಕ್ಕೆ ಭರ್ಜರಿ ಆದಾಯ ತಂದುಕೊಟ್ಟಂಥ ದುಡುಕಿ ಹೋದ ಮಗ-ಹುಡುಕಿ ಬಂದ ಸೊಸೆ ನಾಟಕ ರಚಿಸಿಕೊಟ್ಟಿದ್ದು ಇವರ ಹೆಗ್ಗಳಿಕೆ.

ರಂಗಸ್ವಾಮಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ರಂಗಸ್ವಾಮಿ ರಚಿಸಿದ ನಾಟಕಗಳಲ್ಲಿ ಮಾಜಿ ಸಚಿವೆ, ಹಿರಿಯ ಕಲಾವಿದೆ ಉಮಾಶ್ರೀ, ಹಿರಿಯ ನಟ ಶ್ರೀನಾಥ, ಬಿ.ಕೆ.ಶಂಕರ್ ಅಭಿನಯಿಸಿದ್ದಾರೆ. ರಂಗಸ್ವಾಮಿ ತಾವೇ ಬರೆದ ನಾಟಕವನ್ನು ಸಾಮಾನ್ಯ ಪ್ರೇಕ್ಷಕನಂತೆ ಬಂದು ದುಡ್ಡು ಕೊಟ್ಟು, ನಾಟಕ ನೋಡುವ ಮೂಲಕ ರಂಗಕಲೆ ಪ್ರೋತ್ಸಾಹಿಸುವ ಸರಳ ವ್ಯಕ್ತಿ. ವೃದ್ಧಾಪ್ಯದಿಂದಾಗಿ ಈಗ ನಾನು ಬರೆಯಲು ಸಾಧ್ಯವಾಗುತ್ತಿಲ್ಲ. ಕಣ್ಣುಗಳು ಸರಿಯಾಗಿ ಕಾಣಿಸುತ್ತಿಲ್ಲ. ಹೃದ್ರೋಗ ಸಮಸ್ಯೆ ಇದ್ದು, 2 ಸ್ಟಂಟ್ ಹಾಕಿದ್ದಾರೆ. ಬಿ.ಪಿ., ಶುಗರ್ ಸಹ ಇದೆ.

ಕಣ್ಣಿನ ನರಗಳು ದುರ್ಬಲವಾಗಿವೆ. 2 ವರ್ಷದಿಂದ ಸಲೂನ್‌ ಬಂದ್ ಮಾಡಿದ್ದು, ಮನೆಯಲ್ಲೇ ಸಮಯ ಕಳೆಯುತ್ತಿದ್ದೇನೆ. 75 ವರ್ಷ ಮೇಲ್ಪಟ್ಟಿದ್ದರೂ ಕಲಾವಿದರ ಮಾಸಾಶನ ಸಿಕ್ಕಿಲ್ಲ ಎಂದು ರಂಗಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ರಂಗಸ್ವಾಮಿಗೆ ಬರವಣಿಗೆ ಸಿದ್ಧಿಸಿದ್ದರೆ, ಪುತ್ರ ಪ್ರಕಾಶ್‌ ಅವರಿಗೆ ನಾಟಕಗಳಲ್ಲಿ ತಬಲಾ ನುಡಿಸುವುದನ್ನು ಕಲಿಸಿದ್ದಾರೆ. ಚಿರಡೋಣಿಯಲ್ಲಿ 6 ಅಡಿ, 4 ಅಡಿ ಅಗಲದ ಶಿಥಿಲ ಶೆಡ್‌ನಲ್ಲಿ ರಂಗಸ್ವಾಮಿ ಈಗ್ಗೆ 2 ವರ್ಷದ ಹಿಂದಿನವರೆಗೂ ವೃತ್ತಿ ನಡೆಸುತ್ತಿದ್ದರು. ಬಿಡುವಿದ್ದಾಗ ನಾಟಕ ರಚನೆ ಮಾಡುತ್ತಿದ್ದರು.

ಕೊಟ್ಟ ಮಾತು ಉಳಿಸಿಕೊಂಡ ರಂಗಸ್ವಾಮಿ

ತೆಲುಗು ಮಾತೃಭಾಷಿಕರಾದ ರಂಗಸ್ವಾಮಿ ಅವರ ನಾಟಕಗಳನ್ನು ಹಿರಿಯ ನಾಟಕಕಾರರಾದ ಪಿ.ಬಿ.ಧುತ್ತರಗಿ, ಎಚ್.ಎನ್.ಹೂಗಾರ ಅವರು 1980, 1982ರಲ್ಲಿ ಗದಗ, ದಾವಣಗೆರೆಯಲ್ಲಿ ಸಂಪೂರ್ಣವಾಗಿ ನೋಡಿ ಅಭಿನಂದಿಸಿ, ಸತ್ಕರಿಸಿದ್ದಾರೆ. ತಮ್ಮ ನೆಚ್ಚಿನ ನಾಟಕಕಾರ ಇತರರ ನಾಟಕಗಳನ್ನು ನಿರ್ದೇಶನ ಮಾಡಿ ತಾವೂ ಪಾತ್ರ ಮಾಡಿದ್ದಾರೆ. 45 ವರ್ಷದ ಹಿಂದೆ ನಾಡಿನ ಪ್ರಸಿದ್ಧ ನಾಟಕ ಕಂಪನಿಯೊಂದು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗ ಕೇವಲ 30 ವರ್ಷದ ಯುವಕನಾಗಿದ್ದ ರಂಗಸ್ವಾಮಿ, ದುಡುಕಿ ಹೋದ ಮಗ- ಹುಡುಕಿ ಬಂದ ಸೊಸೆ ಎಂಬ ಆಕರ್ಷಕ ನಾಟಕ ಬರೆದು ಕೊಟ್ಟಿದ್ದರು. ಈ ನಾಟಕವನ್ನು ಬೇರೆ ಕಂಪನಿಗೆ ಕೊಡಬಾರದು, ಅದನ್ನು ಪ್ರಕಟಿಸಬಾರದೆಂಬ ಷರತ್ತು ಕೂಡ ಹಾಕಿದ್ದರು. ಷರತ್ತಿಗೆ ಸಮ್ಮತಿಸಿದ್ದ ರಂಗಸ್ವಾಮಿ 400 ಭರ್ಜರಿ ಪ್ರಯೋಗ ಕಂಡ ಆ ನಾಟಕವನ್ನು ಮುದ್ರಿಸದೆ ಮಾತು ಉಳಿಸಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ