ಬಳ್ಳಾರಿ ಸಾಹಿತ್ಯ ಸಮ್ಮೇಳನ ಸದ್ಯಕ್ಕಂತೂ ಇಲ್ಲಾರಿ: ಇನ್ನೂ ಒಂದು ವರ್ಷ ನಡೆಯುವುದೇ ಅನುಮಾನ!

Published : Nov 30, 2025, 07:38 AM IST
Kannada Sahitya Sammelana

ಸಾರಾಂಶ

ಹಣಕಾಸು ಅವ್ಯವಹಾರ, ಅಧಿಕಾರ ದುರ್ಬಳಕೆ ಆರೋಪಗಳಿಂದಾಗಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ವಜಾ ಆಗಿರುವುದರಿಂದ ಸಾಹಿತ್ಯ ಸಮ್ಮೇಳನ ಡಿಸೆಂಬರ್‌ ಮಾತ್ರವಲ್ಲ, ಇನ್ನೊಂದು ವರ್ಷದೊಳಗೆ ನಡೆಯುವುದು ಅನುಮಾನ!

ಸಂಪತ್‌ ತರೀಕೆರೆ

ಬೆಂಗಳೂರು (ನ.30): ಹಣಕಾಸು ಅವ್ಯವಹಾರ, ಅಧಿಕಾರ ದುರ್ಬಳಕೆ ಆರೋಪಗಳಿಂದಾಗಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ವಜಾ ಆಗಿರುವುದರಿಂದ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್‌ ಮಾತ್ರವಲ್ಲ, ಮುಂದಿನ ಇನ್ನೊಂದು ವರ್ಷದೊಳಗೆ ನಡೆಯುವುದು ಕೂಡ ಅನುಮಾನ! ಗಣಿನಾಡು ಬಳ್ಳಾರಿಯಲ್ಲಿ 67 ವರ್ಷಗಳ ಬಳಿಕ ಸಾಹಿತ್ಯ ಸಮ್ಮೇಳನ ಆಯೋಜನೆಗೆ ನಿರ್ಧಾರ ಕೈಗೊಂಡಿದ್ದು ಆ ಜಿಲ್ಲೆಯ ಜನತೆಯಲ್ಲಿ ಸಂತಸದ ಹೊನಲು ಮೂಡಿಸಿತ್ತು. ವಿಪರ್‍ಯಾಸವೆಂದರೆ, ಸಮ್ಮೇಳನ ಪ್ರಕ್ರಿಯೆ ಆರಂಭಕ್ಕೂ ಮೊದಲೇ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮೇಲೆ ವಿವಾದಗಳು ಸುತ್ತಿಕೊಂಡಿದ್ದು ಹಿನ್ನಡೆಗೆ ಕಾರಣವಾಗಿದೆ. ಪರಿಷತ್ತಿಗೆ ಅಧ್ಯಕ್ಷರೇ ಇಲ್ಲದ್ದರಿಂದ ಸಮ್ಮೇಳನದ ವಿಚಾರಗಳು ನೇಪಥ್ಯಕ್ಕೆ ಸರಿದಿವೆ.

ಡಿ.26ರಿಂದ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಿಸಬೇಕೆಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಖಾನ್‌, ಶಾಸಕ ನಾಗೇಂದ್ರ ಅವರು ಅಲ್ಲಿಪುರದಲ್ಲಿ 100 ಎಕರೆಗೂ ಹೆಚ್ಚು ವಿಸ್ತೀರ್ಣವಿರುವ ಜಾಗವನ್ನು ಗುರುತಿಸಿದ್ದರು. ಅಲ್ಲದೇ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಡಾ.ಮಹೇಶ್‌ ಜೋಶಿ ಅವರೊಂದಿಗೂ ಸಮ್ಮೇಳನಕ್ಕೆ ಸಂಬಂಧಿಸಿದ ಕೆಲ ವಿಚಾರಗಳ ಚರ್ಚೆ ನಡೆಸಿದ್ದರು. ಆದರೆ, ಸದ್ಯಕ್ಕೆ ಕಸಾಪ ಅಧ್ಯಕ್ಷರೇ ವಜಾಗೊಂಡಿರುವುದರಿಂದ ಸಮ್ಮೇಳನದ ಕಾರ್ಯಚಟುವಟಿಕೆ ಸಂಪೂರ್ಣ ಸ್ತಬ್ಧಗೊಂಡಿದೆ.

ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಮನು ಬಳಿಗಾರ್‌ ಅವರು, ಒಂದು ಸಮ್ಮೇಳನ ಮಾಡಲು ಕನಿಷ್ಠ ಮೂರ್ನಾಲ್ಕು ತಿಂಗಳ ಕಾಲಾವಧಿ ಬೇಕು. ಸದ್ಯ ಡಿಸೆಂಬರ್‌ ಬಂದಿದ್ದು 26ನೇ ತಾರೀಖು ಸಮ್ಮೇಳನ ನಡೆಸಲು ಸಾಧ್ಯವಿಲ್ಲ. ಕಸಾಪ ಅಧ್ಯಕ್ಷರ ವಿರುದ್ಧ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದ್ದು ಈ ಸಂದರ್ಭದಲ್ಲಿ ಸಮ್ಮೇಳನ ನಡೆಸಬೇಕೇ? ಬೇಡವೇ ಎಂಬುದನ್ನು ಸರ್ಕಾರ ಮತ್ತು ಪರಿಷತ್ತಿನ ಆಡಳಿತಾಧಿಕಾರಿ, ಕಾರ್ಯಕಾರಿ ಸಮಿತಿ ತೀರ್ಮಾನ ಮಾಡಬೇಕಾಗುತ್ತದೆ. ಇದು ಸೂಕ್ಷ್ಮ ವಿಷಯವಾಗಿದ್ದು ಪರಿಷತ್ತು ಮತ್ತು ಸರ್ಕಾರ ನೋಡಿಕೊಂಡು ಹೆಜ್ಜೆ ಇಡುವುದು ಒಳಿತು ಎಂದು ಅಭಿಪ್ರಾಯಪಟ್ಟರು.

ಸರ್ಕಾರ ಒಪ್ಪಿದರೆ ಸಮ್ಮೇಳನ ನಡೆಸಬಹುದು: 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಆಡಳಿತಾಧಿಕಾರಿಯವರು ಸರ್ಕಾರದ ಅನುಮತಿ ಪಡೆಯಬೇಕು. ಆ ನಂತರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಿಷಯ ಮಂಡನೆ ಮಾಡಿ ನಿರ್ಣಯ ಕೈಗೊಂಡು, ಸರ್ಕಾರದ ಅನುಮೋದನೆ ಮೇರೆಗೆ ಸಮ್ಮೇಳನ ನಡೆಸಬಹುದು. ಆದರೆ, ಸಮ್ಮೇಳನಕ್ಕೆ ಸಿದ್ಧತೆ ಮಾಡಿಕೊಳ್ಳಲು ಇನ್ನೂ ಎರಡ್ಮೂರು ತಿಂಗಳ ಕಾಲಾವಕಾಶ ಬೇಕಿರುವುದರಿಂದ ಡಿಸೆಂಬರ್‌ನಲ್ಲಿ ಸಮ್ಮೇಳನ ನಡೆಸುವುದು ಕಷ್ಟ. ಇಲ್ಲದಿದ್ದರೆ ಪ್ರಸ್ತುತ ಇರುವ ಹಾಲಿ ಅಧ್ಯಕ್ಷರ ಆಯ್ಕೆಯನ್ನು ರದ್ದುಪಡಿಸಿ, ಹೊಸ ಅಧ್ಯಕ್ಷರನ್ನು ಮುಂದಿನ ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಂಡು ಸಮ್ಮೇಳನ ನಡೆಸಬಹುದು. ಅದಕ್ಕೆ ಕಾರ್ಯಕಾರಿ ಸಮಿತಿ ಸಭೆ ನಡೆಸಿ ನಿರ್ಣಯಕೈಗೊಂಡು ಮುಂದಡಿ ಇಡಬಹುದು. ಆದರೆ, ಇಲ್ಲಿರುವ ಸೂಕ್ಷ್ಮ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಿಕೊಂಡು ಮುನ್ನಡೆಯಬೇಕಾಗುತ್ತದೆ ಎಂಬುದು ಮನು ಬಳಿಗಾರ್‌ ಅವರ ಸಲಹೆ.

ಕನಿಷ್ಠ ಒಂದು ವರ್ಷ ಬೇಕು?

ಕಸಾಪ ಕೇಂದ್ರ ಅಧ್ಯಕ್ಷರ ಅವಧಿ 2026ರ ನವೆಂಬರ್‌ಗೆ ಮುಕ್ತಾಯವಾಗಲಿದೆ. ಈ ನಡುವೆ ಕೋರ್ಟ್‌ನಲ್ಲಿ ಅವರ ವಿರುದ್ಧದ ಕೇಸು ಮುಕ್ತಾಯಗೊಳ್ಳಬೇಕು. ಇಲ್ಲವೇ ಕಾರ್ಯಕಾರಿ ಸಮಿತಿ ನಿರ್ಣಯ ಕೈಗೊಂಡು ಅಧ್ಯಕ್ಷರನ್ನು ವಜಾಗೊಳಿಸಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಬೇಕು. ಸರ್ಕಾರ ಸೂಪರ್‌ಸೀಡ್‌ ಮಾಡಿ, ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಮುಂದಿನ ಆರು ತಿಂಗಳಲ್ಲಿ ಚುನಾವಣೆ ನಡೆಸಬೇಕು. ಆ ನಂತರ ಹೊಸ ಆಡಳಿತ ಮಂಡಳಿ ರಚನೆಯಾದ ಬಳಿಕ ಸಾಹಿತ್ಯ ಸಮ್ಮೇಳನ ನಡೆಸಲು ಸಿದ್ಧತೆ ಆರಂಭಿಸುವಷ್ಟರಲ್ಲಿ ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಹಾಗಾಗಿ ಸಾಹಿತ್ಯ ಸಮ್ಮೇಳನ ಮುಂದಿನ ಒಂದು ವರ್ಷದಲ್ಲಿ ನಡೆಯುವುದು ಅನುಮಾನ ಎಂದು ಸಾಹಿತ್ಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಸಾಹಿತ್ಯ ಸಮ್ಮೇಳನವನ್ನು ಮೂರು ವಾರದಲ್ಲಿ ನಡೆಸಲು ಸಾಧ್ಯವಿಲ್ಲ. ಸ್ವಾಗತ ಸಮಿತಿ, ಉಪ ಸಮಿತಿಗಳ ರಚನೆಯಾಗಬೇಕು. ವೇದಿಕೆಗಳು ಸಿದ್ಧಗೊಳ್ಳಬೇಕು. ಉಟ, ವಸತಿ, ಮೂಲಭೂತ ಸೌಕರ್ಯಗಳ ವ್ಯವಸ್ಥೆಯಾಗಬೇಕು. ಅತಿಥಿಗಳು, ಸಾಹಿತಿ, ಕಲಾವಿದರ ಪಟ್ಟಿ ಸಿದ್ಧಪಡಿಸಬೇಕು. ಹೀಗೆ ಹತ್ತಾರು ಕೆಲಸಗಳು ನಡೆಯಬೇಕಿದ್ದು ಸದ್ಯಕ್ಕೆ ಸಮ್ಮೇಳನ ಸಾಧ್ಯವಿಲ್ಲ.
- ಡಾ.ಮನುಬಳಿಗಾರ್‌, ನಿಕಟಪೂರ್ವ ಅಧ್ಯಕ್ಷ, ಕಸಾಪ

ಸಮ್ಮೇಳನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಅಲ್ಲಿಪುರದಲ್ಲಿ ಜಾಗ ಗುರುತಿಸಿದ್ದಾರೆ. ರಾಜ್ಯ ಸರ್ಕಾರ 10 ಕೋಟಿ ರು.ಗಳನ್ನು ಸಮ್ಮೇಳನಕ್ಕೆ ಮೀಸಲು ಇಟ್ಟಿದೆ. ಸಮ್ಮೇಳನಾಧ್ಯಕ್ಷರ ಆಯ್ಕೆಯೂ ಪೂರ್ಣಗೊಂಡಿದೆ. ಕಸಾಪ ಕೇಂದ್ರದ ಅಧ್ಯಕ್ಷರು ಇಲ್ಲದೆ ಸಮ್ಮೇಳನ ನಡೆಯುವುದಿಲ್ಲ. ಸರ್ಕಾರವೇ ಏನಾದರೂ ನಿರ್ಧಾರ ಕೈಗೊಳ್ಳಬೇಕು.
- ಡಾ.ನಿಸ್ಟಿ ರುದ್ರಪ್ಪ, ಕಸಾಪ ಅಧ್ಯಕ್ಷರು, ಬಳ್ಳಾರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!