Private Aided Schools: ಅನುದಾನಿತ ಖಾಸಗಿ ಶಾಲೆ ಹುದ್ದೆ ಭರ್ತಿಗೆ ಹೊರಟ್ಟಿ ಸೂಚನೆ!

By Kannadaprabha NewsFirst Published Dec 14, 2021, 9:29 AM IST
Highlights

*3 ದಿನದಲ್ಲಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲು ನಿರ್ದೇಶನ
*2015ರಿಂದ ಖಾಲಿ ಉಳಿದ 2081 ಹುದ್ದೆ: ಸದಸ್ಯರ ಆಕ್ಷೇಪ
*ನಕಲಿ ಅಂಕಪಟ್ಟಿಪಡೆದ ಶಾಸಕ, ಸಚಿವರು: ಹರಿಪ್ರಸಾದ್‌ ಆರೋಪ

ಸುವರ್ಣಸೌಧ (ಡಿ. 14): ರಾಜ್ಯದ ಅನುದಾನಿತ ಖಾಸಗಿ ಶಾಲಾ-ಕಾಲೇಜುಗಳಲ್ಲಿ (Private Aided schools) ನಿವೃತ್ತಿ, ನಿಧನ ಹಾಗೂ ರಾಜೀನಾಮೆಯಿಂದ ತೆರವಾಗಿರುವ ಹುದ್ದೆಗಳ ಭರ್ತಿ ಸಂಬಂಧ ಮುಂದಿನ ಗುರುವಾರದೊಳಗೆ ಶಿಕ್ಷಣ ಇಲಾಖೆ, ಆರ್ಥಿಕ ಇಲಾಖೆ ಸಭೆ ಮಾಡಿ ಸೂಕ್ತ ತೀರ್ಮಾನ ಕೈಗೊಂಡು ತಿಳಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಸೂಚಿಸಿದ್ದಾರೆ.ವಿಧಾನ ಪರಿಷತ್‌ನಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಎಸ್‌.ವಿ.ಸಂಕನೂರ, ಪುಟ್ಟಣ್ಣ, ಅರುಣ್‌ ಶಹಾಪುರ ಅವರ ಪ್ರಶ್ನೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಪರವಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಉತ್ತರ ನೀಡಿದರು.

ಆದರೆ, ಸಚಿವರ ಉತ್ತರಕ್ಕೆ ಸಮಾಧಾನಗೊಳ್ಳದ ಸದಸ್ಯರು ಸರ್ಕಾರ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಬಗ್ಗೆ ಸ್ಪಷ್ಟನಿರ್ಧಾರ ಪ್ರಕಟಿಸಬೇಕೆಂದು ಪಟ್ಟುಹಿಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಅವರು, ಇದು ಗಂಭೀರ ಸಮಸ್ಯೆ. ಶಿಕ್ಷಣ ಇಲಾಖೆ ಮತ್ತು ಆರ್ಥಿಕ ಇಲಾಖೆ ಸಭೆ ನಡೆಸಿ ಖಾಲಿ ಹುದ್ದೆಗಳ ಭರ್ತಿ ಬಗ್ಗೆ ಮುಂದಿನ ಗುರುವಾರದೊಳಗೆ ಸೂಕ್ತ ತೀರ್ಮಾನ ಕೈಗೊಂಡು ಸಭೆಗೆ ತಿಳಿಸಲಿ ಎಂದು ಸೂಚಿಸಿದರು.

271 ಹುದ್ದೆಗಳ ಭರ್ತಿಗೆ ಸರ್ಕಾರ ಅನುಮೋದನೆ

ಇದಕ್ಕೂ ಮುನ್ನ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2015ರವರೆಗೆ ಅನುದಾನಿತ ಶಾಲೆ, ಕಾಲೇಜುಗಳಲ್ಲಿ ಒಟ್ಟು 2081 ಹುದ್ದೆಗಳು ಖಾಲಿಯಾಗಿವೆ. ಅವುಗಳಲ್ಲಿ 271 ಹುದ್ದೆಗಳ ಭರ್ತಿಗೆ ಸರ್ಕಾರ ಅನುಮೋದಿಸಿದೆ. ಆದರೆ ನೇಮಕಾತಿಗೆ ಶಿಕ್ಷಣ ಸಂಸ್ಥೆಗಳಿಂದ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತು ನೀಡದ ಕಾರಣ ನಿಯಮಗಳ ಪಾಲನೆಯಾಗಿಲ್ಲ. ಕೇವಲ 12 ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗಿದೆ ಎಂದರು. 

ಇದಕ್ಕೆ ಸಮಾಧಾನಗೊಳ್ಳದ ನಾಲ್ವರೂ ಸದಸ್ಯರು ಅನುದಾನಿತ ಖಾಸಗಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ 2012ರ ಬಳಿಕ 2015ರವರೆಗೆ ಖಾಲಿಯಾಗಿರುವ ಹುದ್ದೆಗಳ ಶಿಕ್ಷಕರು ಹಾಗೂ ಉಪನ್ಯಾಸಕ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮೋದಿಸಿದ್ದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಮತ್ತು ಪಿಯು ಇಲಾಖೆ ನಿರ್ದೇಶಕರೇ ತಕರಾರು ತೆಗೆಯುತ್ತಿದ್ದಾರೆ. ಅನುದಾನಿತ ಶಾಲೆ, ಕಾಲೇಜುಗಳನ್ನು ಮುಚ್ಚಿ ಸರ್ಕಾರವೇ ನಡೆಸುವ ಕೆಲಸವೇನಾದರೂ ನಡೆದಿದೆಯಾ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, 2021ರವರೆಗೆ ಖಾಲಿ ಹುದ್ದೆಗಳ ಭರ್ತಿಗೆ ಅನುಮತಿ ನೀಡುವಂತೆಯೂ ಒತ್ತಾಯಿಸಿದರು.

ನಕಲಿ ಅಂಕಪಟ್ಟಿಪಡೆದ ಶಾಸಕ, ಸಚಿವರು: ಹರಿಪ್ರಸಾದ್‌

ಸೋಮವಾರ ವಿಧಾನಪರಿಷತ್ತಿನಲ್ಲಿ ಬೆಂಗಳೂರು ವಿವಿಯಲ್ಲಿ ನಡೆದ ನಕಲಿ ಅಂಕಪಟ್ಟಿವಿಷಯವಾಗಿ ಕಾಂಗ್ರೆಸ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಮಾತನಾಡುತ್ತಿದ್ದಾಗ, ಬೆಂಗಳೂರು ವಿವಿ ವ್ಯಾಪ್ತಿಯಲ್ಲಿ ನಕಲಿ ಅಂಕಪಟ್ಟಿಹಗರಣ ನಡೆದರೂ ಸರ್ಕಾರ ಕ್ರಮವೇಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಅಲ್ಲದೇ, ಶಾಸಕರು, ಸಚಿವರು, ಕೇಂದ್ರ ಸಚಿವರು ಕೂಡ ನಕಲಿ ಅಂಕಪಟ್ಟಿಪಡೆದಿದ್ದಾರೆ. 

ಬೇಕಾದರೆ ಹೆಸರುಗಳನ್ನು ಬಹಿರಂಗಪಡಿಸುವುದಾಗಿ ಸದನಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಪಟ್ಟಿಇದ್ದರೆ ಹೇಳಬಹುದು ಎಂದು ಹರಿಪ್ರಸಾದ್‌ರ ಕಾಲೆಳೆದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ಹೊರಟ್ಟಿ, ಸದನದ ಹೊರಗೆ ಇದ್ದ ನಕಲಿ ಅಂಕಪಟ್ಟಿವಿವಾದ ಈಗ ಸದನದ ಒಳಗೂ ಬಂದುಬಿಟ್ಟಿತಾ ಎಂದು ಹಾಸ್ಯ ಚಟಾಕಿ ಹಾರಿಸಿದರು.

click me!