Government Doctor Private Practice: ಸರ್ಕಾರಿ ವೈದ್ಯರ ಖಾಸಗಿ ಪ್ರ್ಯಾಕ್ಟೀಸ್‌ ಸರಿಯಲ್ಲ: ಕೆ ಸುಧಾಕರ್‌!

By Kannadaprabha News  |  First Published Dec 14, 2021, 9:13 AM IST

*ಖಾಸಗಿ ಪ್ರ್ಯಾಕ್ಟೀಸ್‌ ಮಾಡುವ ವೈದ್ಯರಿಗೆ ಬಿಸಿ
*ವೈದ್ಯರ ಹುದ್ದೆ ಗೌರವಯುತವಾದ್ದದ್ದು: ಡಾ.ಸುಧಾಕರ್‌
*ಸೀಟು ಬ್ಲಾಕಿಂಗ್‌ ತಡೆಯಲು ಕಠಿಣ ಕ್ರಮ: ಸುಧಾಕರ್‌
*ವೈದ್ಯ ಸೀಟು ನಿರಾಕರಿಸಿದರೆ25 ಲಕ್ಷ ದಂಡಕ್ಕೆ ಶಿಫಾರಸು


ಶಿವಮೊಗ್ಗ (ಡಿ. 14): ವೈದ್ಯರ ಹುದ್ದೆ ಸಮಾಜದಲ್ಲಿ ಮಾನ್ಯತೆ ಪಡೆದ ಗೌರವಯುತ ಹುದ್ದೆಯಾಗಿದ್ದು, ಸರ್ಕಾರಿ ಕರ್ತವ್ಯಕ್ಕೆ ನಿಯೋಜಿಯವಾಗಿರುವ ವೈದ್ಯರು (Government Doctors) ಖಾಸಗಿಯಾಗಿ ಕೆಲಸ ನಿರ್ವಹಿಸುವುದು ಸರಿಯಲ್ಲ ಎಂದು ಸಚಿವ ಡಾ.ಸುಧಾಕರ್‌ (K Sudhakar) ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ಸಿಮ್ಸ್‌ ವೈದ್ಯಕೀಯ ಸಂಸ್ಥೆಗೆ ಭೇಟಿ ನೀಡಿ, ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ವೈದ್ಯಾಧಿಕಾರಿಗಳು ಹಾಗೂ ಅಲ್ಲಿನ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿ, ಮಾಹಿತಿ ಪಡೆದ ಅವರು ಸರ್ಕಾರಿ ವೈದ್ಯರು ಖಾಸಗಿಯಾಗಿ ಪ್ರ್ಯಾಕ್ಟೀಸ್‌ ಮಾಡಬಾರದು ಎಂದು ಸೂಚಿಸಿದರು.

ಸ್ವಯಂ ಪ್ರೇರಿತವಾಗಿ ಕಾರ್ಯಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಕರ್ತವ್ಯಕ್ಕೆ ನಿಯೋಜಿತರಾಗಿರುವ ವೈದ್ಯರು ಒತ್ತಾಯಪೂರ್ವಕವಾಗಿ ಕಾರ್ಯನಿರ್ವಹಿಸುವುದು ಸರಿಯಲ್ಲ. ಪ್ರಸ್ತುತ ಹಿರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಸುಮಾರು .2 ಲಕ್ಷದಿಂದ .3ಲಕ್ಷ ವೇತನ ನೀಡಲಾಗುತ್ತಿದೆ. ವೈದ್ಯರ ಹುದ್ದೆ ಸಮಾಜದಲ್ಲಿ ಮಾನ್ಯತೆ ಪಡೆದ ಗೌರವಯುತ ಹುದ್ದೆಯಾಗಿದ್ದು, ಆ ಗೌರವವನ್ನು ಉಳಿಸುವುದು ವೈದ್ಯರ ಜವಾಬ್ದಾರಿಯಾಗಿದೆ ಎಂದರು.

Latest Videos

undefined

ರಾಜ್ಯದಲ್ಲಿ ಹೊಸ ವ್ಯವಸ್ಥೆ ತರಲು ಆದೇಶಿಸಲಾಗಿದೆ. ಪ್ರತಿ ಐಸಿಯು, ವಾರ್ಡ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಜಿಯೋ ಫೆನ್ಸಿಂಗ್‌ ತಂತ್ರಜ್ಞಾನ ತರಲಾಗುತ್ತಿದೆ. ಸಿಬ್ಬಂದಿ ಅಥವಾ ವೈದ್ಯರು ಸಂಸ್ಥೆಯಿಂದ ಹೊರಗೆ 100 ಮೀ. ದೂರ ಹೋದರೆ ಈ ತಂತ್ರಜ್ಞಾನದಲ್ಲಿ ಗೊತ್ತಾಗುತ್ತದೆ. ಬಯೋಮೆಟ್ರಿಕ್‌ನಲ್ಲಿ ಪಂಚ್‌ ಮಾಡಿ ಹೋದರೆ ಗೊತ್ತಾಗದೇ ಹೋಗಬಹುದು. ಆದರೆ ಈ ಹೊಸ ತಂತ್ರಜ್ಞಾನದಿಂದ ಕರ್ತವ್ಯದ ಅವಧಿಯಲ್ಲಿ ಹೊರಗೆ ಹೋದರೆ ತಿಳಿದುಬರುತ್ತದೆ ಎಂದು ತಿಳಿಸಿದರು.

ವೈದ್ಯ ಸೀಟು ನಿರಾಕರಿಸಿದರೆ25 ಲಕ್ಷ ದಂಡಕ್ಕೆ ಶಿಫಾರಸು

ಬೆಳಗಾವಿ (ಡಿ. 14):ವೈದ್ಯಕೀಯ ಸೀಟುಗಳ ಬ್ಲಾಕಿಂಗ್‌ ದಂಧೆ ತಡೆಗಟ್ಟಲು ತಜ್ಞರ ಸಮಿತಿ ನೀಡಿರುವ ವರದಿಯನ್ನು ಪರಿಶೀಲಿಸುತ್ತಿದ್ದು, ಸೀಟು ನಿರಾಕರಿಸಿದ ವಿದ್ಯಾರ್ಥಿಗೆ 25 ಲಕ್ಷ ರು.ವರೆಗೆ ದಂಡ ವಿಧಿಸುವುದು ಸೇರಿದಂತೆ ಕಠಿಣ ಕ್ರಮಗಳನ್ನು ಒಳಗೊಂಡ ಹಲವು ಶಿಫಾರಸು ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಬಿಜೆಪಿ ಎನ್‌.ರವಿಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಲವಾರು ವರ್ಷಗಳಿಂದ ವೈದ್ಯಕೀಯ ಸೀಟುಗಳ ಬ್ಲಾಕಿಂಗ್‌ ದಂಧೆ ನಡೆಯುತ್ತಿದ್ದು, ಕಾನೂನಿನಲ್ಲಿ ಇರುವ ಲೋಪದೋಷ, ಸುಪ್ರೀಂಕೋರ್ಟ್‌ ಆದೇಶವನ್ನು ದುರುಪಯೋಗ ಮಾಡಿಕೊಂಡು ಈ ದಂಧೆ ಮಾಡಲಾಗುತ್ತಿದೆ. ಇಂತಹ ಅಕ್ರಮ ತಡೆದು ಮೆರಿಟ್‌ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಿರಲು ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿ ನಿಯಂತ್ರಣ ನಿಯಮ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳ ಸಂಘಗಳೊಂದಿಗೆ ಸರ್ಕಾರ ಮಾಡಿಕೊಂಡ ಒಡಂಬಡಿಕೆ ಪರಿಶೀಲಿಸಿ, ಸದರಿ ಕಾಯ್ದೆ ಹಾಗೂ ನಿಯಮಗಳಿಗೆ ತಿದ್ದುಪಡಿ ತರಲು ರಾಜೀವಗಾಂಧಿ ಆರೋಗ್ಯ ವಿವಿ ಕುಲಪತಿ ಡಾ. ಸಚ್ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ಈಗಾಗಲೇ ವರದಿ ನೀಡಿದ್ದು, ಸರ್ಕಾರ ಪರಿಶೀಲಿಸುತ್ತಿದೆ ಎಂದು ವಿವರಿಸಿದರು.

ಸೀಟು ಬ್ಲಾಕಿಂಗ್‌ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸುತ್ತಿದೆ. ಆದರೆ ಸೀಟು ಬ್ಲಾಕಿಂಗ್‌ ನಿಯಂತ್ರಿಸಲು ಕಾಯ್ದೆಯಲ್ಲಿ ತಿದ್ದುಪಡಿ ತರಲು ಸರ್ಕಾರದ ಹಂತದಲ್ಲಿ ಪರಿಶೀಲಿಸಲಾಗುತ್ತಿದೆ . ಬ್ಲಾಕಿಂಗ್‌ ದಂಧೆಯಲ್ಲಿ ವಿವಿ ಅಧಿಕಾರಿಗಳು ಭಾಗಿಯಾಗಿರುವ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಪೂರ್ವಾನುಮತಿ ಕೋರಿದೆ, ಸರ್ಕಾರ ಪ್ರಸ್ತಾವನೆ ಪರಿಶೀಲಿಸುತ್ತಿದೆ ಎಂದು ಉತ್ತರಿಸಿದರು.

ಇತ್ತೀಚೆಗೆ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿದ ಪ್ರಕರಣವನ್ನು ಆದಾಯ ತೆರಿಗೆ ತನಿಖೆ ನಡೆಸುತ್ತಿದೆ. ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಏನಾದರೂ ನಿಯಮ ಉಲ್ಲಂಘನೆ ಮಾಡಿದ್ದರೆ ಮಾತ್ರ ತಮ್ಮ ಇಲಾಖೆ ಕ್ರಮಕೈಗೊಳ್ಳುತ್ತದೆ ಎಂದು ಹೇಳಿದರು.ಇದಕ್ಕೂ ಮುನ್ನ ಮಾತನಾಡಿದ ಪಿ.ರವಿಕುಮಾರ್‌, ಪ್ರತಿ ವರ್ಷ 250-400 ಸೀಟುಗಳ ಬ್ಲಾಕಿಂಗ್‌ ದಂಧೆ ನಡೆಯುತ್ತಿದ್ದು, ಇದರಿಂದ ಮೆರಿಟ್‌ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

click me!