ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ಉತ್ತರ ಕನ್ನಡ ಜಿಲ್ಲೆಯವರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮನ್ ಕೀ ಬಾತ್‌ಗೆ ಕರೆ ಮಾಡಲು ನಿರ್ಣಯ ಮಾಡಲಾಗಿದೆ.
ಬೆಂಗಳೂರು, (ಜು. 30): ಉತ್ತರ ಕನ್ನಡ ಜಿಲ್ಲೆಗೆ ಒಂದು ಸುಸಜ್ಜಿತ ಆಸ್ಪತ್ರೆಗಾಗಿ ಹಕ್ಕೋತ್ತಾಯ ಭಾರೀ ಸದ್ದು ಮಾಡುತ್ತಿದೆ. #WeNeedEmergencyHospitalInUttaraKannada #NoHospitalNoVote ಎನ್ನುವ ಹ್ಯಾಷ್ ಟ್ಯಾಗ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ.
ಇನ್ನು ಆಸ್ಪತ್ರೆಗಾಗಿ ಹೋರಾಟಗಾರರು ಇಂದು(ಶನಿವಾರ) ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು. ಉತ್ತರ ಕನ್ನಡ ಹಿತಾಸಕ್ತಿ ಬಳಗ, ಉತ್ತರ ಕನ್ನಡ ಸಂಘ ಬೆಂಗಳೂರು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷಬೇಧವಿಲ್ಲದೆ ಬೆಂಗಳೂರಿನ ಉತ್ತರ ಕನ್ನಡ ನಿವಾಸಿಗಳು ಪಾಲ್ಗೊಂಡು ಸುಸಜ್ಜಿತ ಆಸ್ಪತ್ರೆಗಾಗಿ ಹಕ್ಕೋತ್ತಾಯ ಮಾಡಿದರು. ಇದೇ ವೇಳೆ ಸರ್ಕಾರ ಮತ್ತು ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಉತ್ತರಕನ್ನಡಕ್ಕೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ : ಕಾರವಾರ ಕುಮಟಾ ಮಧ್ಯೆ ಪೈಪೋಟಿ
ಚಕ್ರವರ್ತಿ ಸೂಲಿಬೆಲೆ ಮಾತು
ಉತ್ತರ ಕನ್ನಡಜಿಲ್ಲೆಯ ಹೊನ್ನಾವದವರೇ ಆದ ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಆಸ್ಪತ್ರೆ ಗಾಗಿ ಬಂದು ಹೋರಾಟ ಮಾಡುತ್ತಾ ಇದ್ದೇವೆ ಎಂದರೆ ನಮ್ಮನ್ನು ನಾವೇ ದೂಷಿಸಿಕೊಳ್ಳಬೇಕಿದೆ. ಒಬ್ಬ ಆಯೋಗ್ಯ ಶಾಸಕ ಕೂಡ ಈ ಪ್ರತಿಭಟನೆಗೆ ಬಂದಿಲ್ಲ. ಅನಂತ್ ಕುಮಾರ್ ಹೆಗಡೆ ಯನ್ನು ಐದಾರು ಸಾರಿ ಸಂಸದರಾಗಿ ಜಿಲ್ಲೆಯ ಜನ ಗೆಲ್ಲಿಸಿದ್ದಾರೆ. ಆದರೆ ಅವರಿಂದ ನಯಾ ಪೈಸೆ ಉಪಯೋಗವಾಗಿಲ್ಲ ಎಂದು ಕಿಡಿಕಾರಿದರು.
ನನಗೆ ಪದೇ ಪದೇ ರಾಜ್ಯಸರ್ಕಾರವನ್ನು ಬೈಯುವ ಪರಿಸ್ಥಿತಿಗೆ ಬಂದಿದೆ. ಉತ್ತರ ಕನ್ನಡದಲ್ಲಿ ಟೂರಿಸಂ ಅಭಿವೃದ್ಧಿ ಮಾಡಿದ್ರೇ ಬೆಂಗಳೂರಿಗೆ ಉದ್ಯೋಗ ಅರಸಿ ಬರಬೇಕಾದ ಸ್ಥಿತಿಯೇ ಇರುತ್ತಿರಲಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಮಾಡಿರುವ ದುಡ್ಡು ಎಷ್ಟಿದೆ ಅಂದ್ರೇ ನೀವ್ಯಾರು ವೋಟು ಮಾಡದೇ ಇದ್ರೂ ಅವರು ಗೆಲ್ಲುತ್ತಾರೆ. ನಮ್ಮ ಶಾಸಕರು ತುಲಾಭಾರ ಮಾಡುವಷ್ಟು ದುಡ್ಡು ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಕುಮಟದ ಶಾಸಕ ದಿನಕರ ಶೆಟ್ಟಿ ಅವರ ಜತೆ ಮಾತನಾಡಿದ್ದೇನೆ. ಸರ್ಕಾರಕ್ಕೆ ಆಗದೇ ಇದ್ರೇ ಖಾಸಗಿ ಸಹಭಾಗಿತ್ವದಲ್ಲಿ ಮಾಡೋಣ ಅಂತಲೂ ಕೇಳಿಕೊಂಡಿದ್ದೇನೆ. ಪಕ್ಕದ ಜಿಲ್ಲೆ ದಕ್ಷಿಣ ಕನ್ನಡದವರಿಗೂ ನಮಗೂ ಬಹಳ ವ್ಯತ್ಯಾಸವಿಲ್ಲ. ಆದರೆ ಅವರು ಯಾರ ಮೇಲೆ ಹೇಗೆ ಒತ್ತಡ ತಂದು ತಮ್ಮ ಕೆಲಸ ಮಾಡಿಸಿಕೊಳ್ಳಬೇಕು ಎಂಬುದನ್ನು ಕಲಿತಿದ್ದಾರೆ. ನಾವು ಮೃದುವಾಗಿರುವುದೇ ಈ ಹಿನ್ನಡೆಗೆ ಕಾರಣ. ದಪ್ಪ ಚರ್ಮದ ನಮ್ಮ ಜನಪ್ತಿನಿಧಿಗಳ ಕಿವಿಗೆ ಇಂಥ ಹೋರಾಟ ಕೇಳಿಸುವುದಿಲ್ಲ ಎಂದರು.,
ಉತ್ತರಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಏಕೆ ಆಗಿಲ್ಲ? ಗಂಭೀರ ಕಾರಣ ಕೊಟ್ಟ ರೂಪಾಲಿ ನಾಯ್ಕ
ಎಮ್ಮೆ ಚರ್ಮದ ಜನಪ್ರತಿಧಿಗಳನ್ನು ಬಡಿದೆಬ್ಬಿಸುವ ಹೋರಾಟ ಆರಂಭವಾಗಿದೆ. ಇದು ಇಲ್ಲಿಗೆ ನಿಲ್ಲಬಾರದು. ಹೋರಾಟ ಒಂದು ತಾರ್ಕಿಕ ಅಂತ್ಯಕ್ಕೆ ಹೋಗಿ ನಿಲ್ಲುವವರೆಗೂ ಕೂಗು ಕಡಿಮೆಯಾಗಬಾರದು ಎಂದು ಹೇಳಿದರು.
ಸೀಬರ್ಡ್ ನೌಕಾನೆಲೆ, ಕೈಗಾ ಅಣುಸ್ಥಾವರ, ರಾಷ್ಟ್ರೀಯ ಹೆದ್ದಾರಿ, ಜಲವಿದ್ಯುತ್ ಯೋಜನೆಗಳಿಗಾಗಿ ತನ್ನ ಒಡಲನ್ನು ಬರಿದು ಮಾಡಿಕೊಂಡಿರುವ ಜಿಲ್ಲೆಯಲ್ಲಿ ಒಂದು ಆಸ್ಪತ್ರೆ ಇಲ್ಲ ಎನ್ನುವುದೇ ನಾಚಿಕೆಗೇಡು. ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡದೇ ಹೋದರೆ ಹೋರಾಟ ಉಗ್ರ ರೂಪ ಪಡೆದುಕೊಳ್ಳುತ್ತದೆ ಎಂದು ನಿವೃತ್ತ ಯೋಧ ಉತ್ತರ ಕನ್ನಡ ಜಿಲ್ಲೆ ಕಾನಸೂರಿನ ಮೇಜರ್ ಗಣಪತಿ ಜಿ ಹೆಗಡೆ ಆಕ್ರೋಶ ಹೊರಹಾಕಿದರು.
ವಿಕ್ರಮ್ ಭಟ್ ಆಂಡ್ ಅಸೋಸಿಯೇಟ್ಸ್ ನ ವಿಕ್ರಮ್ ಭಟ್ ಮಾತನಾಡಿ ನಮ್ಮ ಕೂಗು ಯಾಕೆ ಜನಪ್ರತಿನಿಧಿಗಳಿಗೆ ತಲುಪುತ್ತಿಲ್ಲ. ನಮಗೆ ಆಸ್ಪತ್ರೆ ಬೇಕು ನಿಮ್ಮ ಆಶ್ವಾಸನೆಗಳಲ್ಲ. ಮೊದಲು ಆಸ್ಪತ್ರೆ ಕೊಟ್ಟು ಆ ಮೇಲೆ ಕ್ಷೇತ್ರಕ್ಕೆ ಬನ್ನಿ ಎಂದು ಸವಾಲು ಹಾಕಿದರು.
ಸ್ಪಂದಿಸದ ಜಿಲ್ಲೆಯ ಜನಪ್ರತಿಧಿಗಳು
ಪ್ರತಿಭಟನಾ ಸ್ಥಳದಿಂಲೇ ಉತ್ತರ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುವ ಕಾರವಾರದ ರೂಪಾಲಿ ನಾಯ್ಕ, ಶಿರಸಿ ಸಿದ್ದಾಪುರದ ಶಾಸಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಭಟ್ಕಳದ ಶಾಸಕ ಸುನೀಲ್ ನಾಯ್ಕ, ಕುಮಟಾದ ಶಾಸಕ ದಿನಕರ ಶೆಟ್ಟಿ, ಯಲ್ಲಾಪುರದ ಶಾಸಕ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಹಳಿಯಾಳದ ಶಾಸಕ ಆರ್ ವಿ ದೇಶಪಾಂಡೆ ಮತ್ತು ಸಂಸದ ಅನಂತ್ ಕುಮಾರ್ ಹೆಗಡೆ ಅವರನ್ನು ಸಂಪರ್ಕ ಮಾಡುವ ಯತ್ನ ಮಾಡಿದರೂ ಒಬ್ಬರು ಕರೆಗೆ ಸ್ಪಂದಿಸಲಿಲ್ಲ.
ಮನ್ ಕೀ ಬಾತ್ ಗೆ ಕರೆ ಮಾಡಿ:
ಹೋರಾಟದ ಮುಂದಿನ ಭಾಗವಾಗಿ ಉತ್ತರ ಕನ್ನಡದ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಅಭಿಪ್ರಾಯ ಸಂಗ್ರಹಣೆಗೆ ಕರೆ ಮಾಡಬೇಕು ಎಂದು ತಿಳಿಸಲಾಯಿತು. 1800117800ಕ್ಕೆ ಕರೆ ಮಾಡಿ ಕರ್ನಾಟಕದಿಂದ ಮಾತನಾಡುತ್ತಿರುವುದು ಉತ್ತರ ಕನ್ನಡ ಜಿಲ್ಲೆ ಎಂದು ವಿವರ ದಾಖಲಿಸಿ ಆಸ್ಪತ್ರೆ ಬೇಡಿಕೆ ಸಲ್ಲಿಸಲು ತಿಳಿಸಲಾಯಿತು.
ಆಗಸ್ಟ್ ಮೊದಲ ವಾರದಲ್ಲಿ ಸಿಎಂ ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲೆ ಪ್ರವಾಸ ಮಾಡಲಿದ್ದು ಆ ಸಂದರ್ಭದಲ್ಲಿಯಾದರೂ ಬಹುವರ್ಷದ ಬೇಡಿಕೆಯಾದ ಸುಸಜ್ಜಿತ ಆಸ್ಪತ್ರೆ ಘೋಷಣೆ ಮಾಡಲಿದ್ದಾರೆ ಎಂಬ ಮಾತು ಕೇಳಿಬಂದಿದೆ.