ಮತ್ತೆ ಜೋರಾದ ಯಕ್ಷಗಾನ ರಾಜ್ಯದ ಕಲೆಯಾಗಬೇಕೆನ್ನುವ ಕೂಗು

By Suvarna News  |  First Published Sep 30, 2021, 10:02 PM IST

* ಕೇರಳ ಕಥಕ್ಕಳಿ ಮಾದರಿ ಕರ್ನಾಟಕ ಪ್ರಾತಿನಿಧಿಕ ಕಲೆಯಾಗಿ ‘ಯಕ್ಷಗಾನ'
* ಜಾಗತಿಕ ಮಾನ್ಯತೆಯ ಯಕ್ಷಗಾನ ರಾಜ್ಯದ ಕಲೆಯಾಗಬೇಕೆನ್ನುವ ಕೂಗು
 * ಕರಾವಳಿ ಭಾಗದಿಂದ ಕೇಳಿಬಂದ ಪ್ರಬಲ ಆಗ್ರಹ


ಮಂಗಳೂರು, (ಸೆ.30): ರಾಜ್ಯದ ಗಂಡುಕಲೆ ಎಂದೇ ಪ್ರಸಿದ್ಧವಾಗಿರುವ, ಶತಮಾನಗಳ ಇತಿಹಾಸ ಹೊಂದಿರುವ ‘ಯಕ್ಷಗಾನ’ ಕರ್ನಾಟಕದ ಪ್ರಾತಿನಿಧಿಕ ಕಲೆಯಾಗಬೇಕು ಎಂಬ ಕೂಗು ಎದ್ದಿದೆ. 

ಕೇರಳದಲ್ಲಿ ಕಥಕ್ಕಳಿ ಇರುವಂತೆ ಸರ್ವಾಂಗ ಸುಂದರ ಕಲೆಯಾಗಿರುವ ಯಕ್ಷಗಾನ ರಾಜ್ಯದ ಕಲೆಯಾಗಬೇಕು ಎಂಬ ಪ್ರಬಲ ಆಗ್ರಹ ಕರಾವಳಿ ಭಾಗದಿಂದ ಕೇಳಿ ಬರಲಾರಂಭಿಸಿದೆ.  

Latest Videos

undefined

ಮಂಗಳೂರಿನ ಯಕ್ಷಗಾನ, ಆಹಾರ, ಸಮುದ್ರ ಸೂಪರ್‌

ಧರ್ಮ, ಸಂಸ್ಕೃತಿ ಜೊತೆಗೆ ಕರಾವಳಿ ಮತ್ತು ಮಲೆನಾಡಿನಲ್ಲಿ ಕನ್ನಡ ಭಾಷೆ ಉಳಿದುಕೊಳ್ಳಲು ಕಾರಣ ಯಕ್ಷಗಾನ. ಸಾಂಸ್ಕೃತಿಕ ಇತಿಹಾಸದಲ್ಲಿ ಇಡೀ ರಾತ್ರಿ ಕಲೆಯ ಪ್ರದರ್ಶನ ಇರುವುದು ಯಕ್ಷಗಾನದಲ್ಲಿ ಮಾತ್ರ ಎನ್ನುವುದು ಅಷ್ಟೇ ಗಮನಾರ್ಹ.

ಕೇರಳದ ಕಾಸರಗೋಡು ಸಮೀಪದ ಕುಂಬಳೆಯ ಪಾರ್ಥಿ ಸುಬ್ಬನಿಂದ ಪುನಶ್ಚೇತನಗೊಂಡ ಯಕ್ಷಗಾನ ಈಗ ತೆಂಕು, ಬಡಗು ಹಾಗೂ ಬಡಾಬಡಗು ತಿಟ್ಟುಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಕಾಸರಗೋಡು ಹಾಗೂ ದ.ಕ.ಭಾಗದಲ್ಲಿ ತೆಂಕು ತಿಟ್ಟು, ಉಡುಪಿ, ಕುಂದಾಪುರ ಕಡೆಗಳಲ್ಲಿ ಬಡಗು ತಿಟ್ಟು ಹಾಗೂ ಉತ್ತರ ಕನ್ನಡದಲ್ಲಿ ಬಡಾಬಡಗು ತಿಟ್ಟು ಹೆಸರಿನಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತಿವೆ.

ರಂಗದಲ್ಲಿ ಕುಣಿಯಲು ಅಂಗವೈಕಲ್ಯ ಅಡ್ಡಿಯಾಗಲಿಲ್ಲ..! ಒಂದೇ ಕಾಲಿರೋದಾದ್ರೂ ಹೆಜ್ಜೆ ತಪ್ಪಿಲ್ಲ

ವಿಶ್ವ ವ್ಯಾಪಕತೆ: 
ಯಕ್ಷಗಾನವನ್ನು ಸಾಗರೋಲ್ಲಂಘನಗೊಳಿಸಿದ್ದು ಕಡಲತಡಿ ಭಾರ್ಗವ ಕೋಟ ಡಾ.ಶಿವರಾಮ ಕಾರಂತರ ಬ್ಯಾಲೆ ಪ್ರಯೋಗ. ಇದಕ್ಕೆ ಜಾಗತಿಕ ಪ್ರಶಂಸೆ ವ್ಯಕ್ತವಾದ ಬಳಿಕ ಯಕ್ಷಗಾನ ದೇಶ ವಿದೇಶಗಳಲ್ಲೂ ವ್ಯಾಪಿಸಿ ವಿಶ್ವಮಾನ್ಯ ಎನಿಸಿದೆ. ಯಕ್ಷಗಾನದಲ್ಲಿ ಭರತನಾಟ್ಯ, ಜಾನಪದ ಮಟ್ಟು ಬಳಕೆಯಾದ್ದಲ್ಲದೆ, ಕನ್ನಡ ಮಾತ್ರವಲ್ಲ ತುಳು, ಹಿಂದಿ, ಇಂಗ್ಲಿಷ್, ಹವ್ಯಕ ಭಾಷೆಗಳಲ್ಲೂ ಯಶಸ್ವಿ ಪ್ರಯೋಗ ಕಂಡಿದೆ.

ಕರಾವಳಿಯಲ್ಲಿ ಸುಮಾರು ೧೦೦ಕ್ಕೂ ಮಿಕ್ಕಿ ವೃತ್ತಿಪರ ಯಕ್ಷಗಾನ ಮೇಳಗಳು ಇವೆ. 250ಕ್ಕೂ ಮಿಕ್ಕ ಹವ್ಯಾಸಿ ಸಂಘಗಳು, 5000 ಮಿಕ್ಕಿ ಕಲಾವಿದರು ಇದ್ದಾರೆ. 10ಕ್ಕೂ ಹೆಚ್ಚಿನ ಪಿಎಚ್‌ಡಿ ಪ್ರಬಂಧಗಳು, ವರ್ಷವೊಂದಕ್ಕೆ 5000ಕ್ಕೂ ಮಿಕ್ಕ ಯಕ್ಷಗಾನ ಪ್ರದರ್ಶನ ನಡೆಯುತ್ತಿರುತ್ತವೆ. 250ಕ್ಕೂ ಮಿಕ್ಕಿ ವಾಟ್ಸಪ್ ಗ್ರೂಪ್, 25ಕ್ಕೂ ಮಿಕ್ಕಿ ಬ್ಲಾಗ್, 10ರಷ್ಟು ವೆಬ್‌ಸೈಟ್, 200ರಷ್ಟು ಯೂಟ್ಯೂಬ್ ಚಾನೆಲ್, ಐದಕ್ಕೂ ಅಧಿಕ ಯಕ್ಷಗಾನಕ್ಕೆ ಮೀಸಲಾದ ಮಾಸಿಕ ಪತ್ರಿಕೆಗಳು ಯಕ್ಷಗಾನದ ವಿಶಾಲತೆಗೆ ಸಾಕ್ಷಿಯಾಗಿದೆ.

ಸಾಹಿತ್ಯ ಪೂರ್ಣ ಪ್ರಸಂಗ ರಚನೆ, ವಿದ್ವತ್ ಪೂರ್ಣ ಆಶು ಸಾಹಿತ್ಯ, ಭಾಗವತಿಕೆ ಹಾಗೂ ಪ್ರಸಂಗ ರಚನೆಯಲ್ಲಿ ಸಾಂಪ್ರದಾಯಿಕ 150ಕ್ಕೂ ಹೆಚ್ಚಿನ ಮಟ್ಟುಗಳ ಬಳಕೆ, ಯಾವುದೇ ಶಿಷ್ಟ ರಂಗ ಪ್ರಕಾರಗಳಿಗೆ ಕಡಿಮೆ ಇಲ್ಲದ ರಂಗ ಶ್ರೀಮಂತಿಕೆ, ರಾತ್ರಿ ಇಡೀ ನಡೆಯುವ ಏಕೈಕ ಕಲಾ ಪ್ರಕಾರ, ಭಾಷೆ, ಸಂಸ್ಕೃತಿ ಕೈ ದಾಟಿಸುವಲ್ಲಿ ಮಹತ್ತರ ವೇದಿಕೆಯಾಗಿ ವರ್ಷವೊಂದಕ್ಕೆ ಸರಾಸರಿ ಐದು ಲಕ್ಷಕ್ಕೂ ಮಿಕ್ಕ ಪ್ರೇಕ್ಷಕರಿಂದ ವೀಕ್ಷಣೆಗೆ ಒಳಪಡುವುದು ಯಕ್ಷಗಾನದ ಹೆಗ್ಗಳಿಕೆ.

ಹೀಗೆ ಎಲ್ಲ ಕಡೆಗಳಲ್ಲೂ ಸರ್ವವ್ಯಾಾಪಿಯಾಗಿರುವ ಯಕ್ಷಗಾನ ಕರಾವಳಿ ಸೊಗಡನ್ನು ಪಸರಿಸುತ್ತಿದೆ. ಕನ್ನಡ ನಾಡಿನ ಭಾಷೆಯ ಛಾಪು ಬೀರುತ್ತಿದೆ. ಪುರಾಣ, ಇತಿಹಾಸಗಳನ್ನು ಎಲ್ಲದಕ್ಕಿಂತ ಅತ್ಯುತ್ತಮವಾಗಿ ಜನಮಾನಸಕ್ಕೆ ತಲುಪಿಸುತ್ತಿದೆ. ಈಗಲೂ ಬಾಲಕರಿಂದ ತೊಡಗಿ ಮಹಿಳೆ ಹಾಗೂ ವೃದ್ಧರ ವರೆಗೆ ಹಲವಾರು ಹಿರಿಕಿರಿಯ ಕಲಾವಿದರು ಯಕ್ಷಗಾನದಲ್ಲಿ ವೇಷಹಾಕಿ ಮೆರೆಯುವವರು ಇದ್ದಾರೆ.

ಕೂಗಿಗೆ ಆನೆಬಲ:
ಈಗಂತೂ ಕರಾವಳಿಯವರೇ ಆದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿದ್ದಾರೆ. ಇದರಿಂದಾಗಿ ಯಕ್ಷಗಾನ ರಾಜ್ಯದ ಪ್ರಾತಿನಿಧಿಕ ಕಲೆಯಾಗಬೇಕು ಎಂಬ ಈ ಹಿಂದಿನ ಕೂಗಿಗೆ ಆನೆಬಲ ದೊರಕಿದೆ. ಈಗಲ್ಲದೆ ಇನ್ನು ಯಾವಾಗ ನಮ್ಮ ಹಕ್ಕೊತ್ತಾಯ ಎನ್ನುತ್ತಾ ಎಲ್ಲ ಯಕ್ಷಗಾನ ತಿಟ್ಟುಗಳು, ಮೇಳಗಳು, ಕಲಾವಿದರು, ಯಕ್ಷಗಾನ ಅಭಿಮಾನಿಗಳು ಸೇರಿ ಧ್ವನಿಗೂಡಿಸಲು ಹೊರಟಿದ್ದಾಾರೆ.

ಗ್ರಾಂಥಿಕ ಭಾಷೆ ಕನ್ನಡ ಸೊಗಸಾಗಿ ಉಳಿದುಕೊಂಡು ಬಂದಿದ್ದರೆ ಅದಕ್ಕೆ ಯಕ್ಷಗಾನ ಕಾರಣ. ಯಕ್ಷಗಾನ ಪ್ರದರ್ಶನಗಳಲ್ಲಿ ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡುವ ಕಲಾವಿದರು ತಾವು ಯಾರಿಗೂ ಕಡಿಮೆ ಇಲ್ಲ ಎಂದು ಪಾತ್ರ ಪ್ರಪಂಚದಲ್ಲಿ ತೋರಿಸಿಕೊಡುತ್ತಿದ್ದಾಾರೆ. ಅಂತಹ ಯಕ್ಷಗಾನ ರಾಜ್ಯದ ಪ್ರಾಾತಿನಿಧಿಕ ಕಲೆಯಾದರೆ ಏನು ತಪ್ಪು? ಈ ಬಗ್ಗೆ ಎಲ್ಲರೂ ಸರ್ಕಾರಕ್ಕೆ ಒತ್ತಡ ಹಾಕಿ ಹಕ್ಕೊತ್ತಾಯ ಮಾಡಬೇಕಾಗಿದೆ ಎನ್ನುತ್ತಾರೆ ಯೋಗೀಶ್ ರಾವ್ ಚಿಗುರುಪಾದೆ, ಸದಸ್ಯ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು.

-ಆತ್ಮಭೂಷಣ್

click me!