ಹಾಲಿನ ದರ ಹೆಚ್ಚಳ: ಸಿಎಂ ಬೊಮ್ಮಾಯಿ ಹೇಳಿದ್ದಿಷ್ಟು

Kannadaprabha News   | Asianet News
Published : Sep 30, 2021, 12:48 PM IST
ಹಾಲಿನ ದರ ಹೆಚ್ಚಳ: ಸಿಎಂ ಬೊಮ್ಮಾಯಿ ಹೇಳಿದ್ದಿಷ್ಟು

ಸಾರಾಂಶ

*  ಹಾಲಿನ ದರ ಏರಿಕೆ ಮಾಡುವಂತೆ ಕೆಎಂಎಫ್‌ ಮನವಿ  *  ನಂದಿನಿ ನೂತನ ಉತ್ಪನ್ನಗಳ ಬಿಡುಗಡೆ *  ಪದಾಧಿಕಾರಿಗಳ ಜತೆಗೆ ಸಂಸ್ಥೆಯನ್ನೂ ಬೆಳೆಸಿದರೆ ಎಲ್ಲರೂ ಆರ್ಥಿಕ ಪ್ರಗತಿ ಸಾಧಿಸಬಹುದು   

ಬೆಂಗಳೂರು(ಸೆ.30): ನಂದಿನಿ ಹಾಲಿನ ದರ ಹೆಚ್ಚಳ ಮತ್ತು ಪ್ರತಿ ಲೀಟರ್‌ಗೆ ಒಂದು ರು. ಪ್ರೋತ್ಸಾಹ ಧನ ಹೆಚ್ಚಿಸಬೇಕೆಂದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಮಾಡಿದ ಮನವಿ ನನ್ನ ಗಮನದಲ್ಲಿದ್ದು, ತಕ್ಷಣಕ್ಕೆ ಯಾವುದೇ ಭರವಸೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದರು.

ಕೆಎಂಎಫ್‌(KMF) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾಲಿನ ದರ ಏರಿಕೆ ಮಾಡುವಂತೆ ಕೆಎಂಎಫ್‌ ಮನವಿ ಮಾಡಿದೆ. ಅವರ ವಿನಂತಿ ನನ್ನ ಗಮನದಲ್ಲಿದೆ. ಈ ಕುರಿತು ಈ ತಕ್ಷಣಕ್ಕೆ ಯಾವುದೇ ಹೇಳಿಕೆ ನೀಡಲು ಆಗುವುದಿಲ್ಲ ಎಂದರು.

ಅದೇ ರೀತಿಯಲ್ಲಿ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್‌.ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಪ್ರತಿ ಲೀಟರ್‌ ಹಾಲಿಗೆ ನೀಡುತ್ತಿದ್ದ 5 ರು. ಪ್ರೋತ್ಸಾಹ ಧನವನ್ನು 6 ರು.ಗಳಿಗೆ ಹೆಚ್ಚಿಸಬೇಕೆಂಬ ಕೆಎಂಎಫ್‌ ಮನವಿಗೂ ಮುಖ್ಯಮಂತ್ರಿ ಬೊಮ್ಮಾಯಿ ವೇದಿಕೆಯಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಪ್ರತಿ ಲೀಟರ್‌ಗೆ 20 ಪೈಸೆಯಂತೆ ಸೊಸೈಟಿಗಳ ಸಿಬ್ಬಂದಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಈ ವರ್ಷ ಸರ್ಕಾರ ಕೊಡುತ್ತದೆ. ಆದರೆ ಮುಂದಿನ ವರ್ಷದಿಂದ ಅದನ್ನು ಹಾಲು ಒಕ್ಕೂಟವೇ ಕೊಡುವಷ್ಟು ಆರ್ಥಿಕ ಸಬಲತೆ ಸಾಧಿಸಬೇಕು ಎಂದ ಅವರು, ಸಹಕಾರಿ ರಂಗ ಶಕ್ತಿಯುತವಾಗಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಬೇಕಿದ್ದು ಇದುವರೆಗೂ ಅದು ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಸಹಕಾರ ಕ್ಷೇತ್ರದಲ್ಲಿ ಪದಾಧಿಕಾರಿಗಳು ಆರ್ಥಿಕವಾಗಿ ಸಬಲರಾಗಿದ್ದಾರೆ. ಆದರೆ ಸಂಸ್ಥೆ ಮಾತ್ರ ಇದ್ದಲ್ಲಿಯೇ ಇದೆ. ಪದಾಧಿಕಾರಿಗಳ ಜತೆಗೆ ಸಂಸ್ಥೆಯನ್ನೂ ಬೆಳೆಸಿದರೆ ಆಗ ಎಲ್ಲರೂ ಆರ್ಥಿಕ ಪ್ರಗತಿ ಸಾಧಿಸಬಹುದು ಎಂದರು.

ರಾಜ್ಯದ ಜನತೆಗೆ ಮತ್ತೊಂದು ಆಘಾತ: ಬೆಲೆ ಏರಿಕೆ ಮಧ್ಯೆ ಹಾಲಿದ ದರ ಹೆಚ್ಚಳ..?

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ್‌ ನಾರಾಯಣ, ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಶಾಸಕ ಕೆ.ವೈ.ನಂಜೇಗೌಡ, ಸಂಸದ ಉಮೇಶ್‌ ಜಾಧವ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಂದಿನಿ ನೂತನ ಉತ್ಪನ್ನಗಳ ಬಿಡುಗಡೆ:

ಶ್ರೀಖಂಡ್‌ನಲ್ಲಿ ಗ್ರೀನ್‌ ಆ್ಯಪಲ್‌, ಕಿವಿ ಹಣ್ಣು, ಬಟರ್‌ಸ್ಕಾಚ್‌. ನಂದಿನಿ ಕರದಂಟು, ಗೋಡಂಬಿ ಶಕ್ತಿ (ಕಾಜೂ ಕಟ್ಲಿ), ಲಡಗಿ ಲಡ್ಡು, ಪಿಂಕ್‌ ಗುವಾ ಕ್ಯಾಂಡಿ, ಸಕ್ಕರೆ ರಹಿತ ಐಸ್‌ಕ್ರೀಮ್‌, ರಾಗಿ ಬೈಟ್‌ ಕುಕ್ಕೀಸ್‌ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.

ಉದ್ಘಾಟನೆಗೊಂಡ ನೂತನ ಯೋಜನೆಗಳು

ನಂದಿನಿ ಹೈಟೆಕ್‌ ಮೆಗಾ ಹಾಲಿನ ಪುಡಿ ಉತ್ಪಾದನಾ ಘಟಕ (ಕಣ್ವ, ರಾಮನಗರ), ಪಶು ಆಹಾರ ಉತ್ಪಾದನಾ ಘಟಕ-2 (ಧಾರವಾಡ ಹಾಗೂ ತುಮಕೂರು), ಹೈಟೆಕ್‌ ಬುಲ್‌ಮದರ್‌ ಫಾರಂ ಮತ್ತು ಮೇವು ಅಭಿವೃದ್ಧಿ ಕೇಂದ್ರ (ಹೆಸರಘಟ್ಟ, ಬೆಂಗಳೂರು), ರಾಜ್ಯ ಕೇಂದ್ರೀಯ ಪ್ರಯೋಗಾಲಯ ಕೆಎಂಎಫ್‌ ಸಂಕೀರ್ಣ (ಬೆಂಗಳೂರು), ಕೆಎಂಎಫ್‌ ತರಬೇತಿ ಕೇಂದ್ರ(ಕಲಬುರಗಿ ಡೇರಿ ಆವರಣ), ಹಾಸನ ಪಶು ಆಹಾರ ಘಟಕಗಳಲ್ಲಿ ಗೋದಾಮು, ಆಡಳಿತ ಕಚೇರಿ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳು, ರಾಜಾನುಕುಂಟೆ ಪಶು ಆಹಾರ ಘಟಕದಲ್ಲಿ ಗೋದಾಮು, ಆಡಳಿತ ಕಚೇರಿ ಮತ್ತು ಇತರೆ ಅಭಿವೃದ್ಧಿ ಕಾಮಗಾರಿ. ಶಿಕಾರಿಪುರ ಪಶು ಆಹಾರ ಘಟಕದಲ್ಲಿ ಕಾಕಂಬಿ ಶೇಖರಣಾ ಟ್ಯಾಂಕ್‌, ಬೆಣ್ಣೆ ದಾಸ್ತಾನಿನ ಡೀಪ್‌ ಫ್ರೀಜರ್‌ ಘಟಕ (ಚಳ್ಳಘಟ್ಟ ಬೆಂಗಳೂರು).
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌