
ಬೆಂಗಳೂರು(ಆ.20): ಕೊರೋನಾ ಹಿನ್ನೆಲೆಯಲ್ಲಿ ನಗರಗಳಲ್ಲಿ ಉದ್ಯೋಗ ಕಳೆದುಕೊಂಡ ಮಂದಿ ಲಕ್ಷಾಂತರ ಸಂಖ್ಯೆಯಲ್ಲಿ ಕೃಷಿಯತ್ತ ವಾಲಿರುವ ನಡುವೆಯೇ ಕೊಪ್ಪಳ, ಕಲಬುರಗಿ ಸೇರಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ದಿಢೀರ್ ಯೂರಿಯಾ ಗೊಬ್ಬರಕ್ಕೆ ಹಾಹಾಕಾರ ಎದ್ದಿದೆ.
ಬೇಡಿಕೆಯಷ್ಟು ಗೊಬ್ಬರದ ಪೂರೈಕೆ ಇಲ್ಲ ಎಂದು ಹೇಳುತ್ತಿರುವ ಮಾರಾಟಗಾರರು ಪ್ರತಿ ಚೀಲ ಯೂರಿಯಾ ಗೊಬ್ಬರದ ದರವನ್ನು 50ರಿಂದ 135 ರುಪಾಯಿನಷ್ಟು ಹೆಚ್ಚಿಸಿ ಮಾರಾಟ ಮಾಡುತ್ತಿದ್ದಾರೆ. ಲಾಕ್ಡೌನ್ನಿಂದಾಗಿ ಸಕಾಲಕ್ಕೆ ಬೇಡಿಕೆಯಿರುವಷ್ಟು ಗೊಬ್ಬರ ಪೂರೈಕೆಗೆ ಸಮಸ್ಯೆಯಾಗಿದೆ ಎಂದು ಕೃಷಿ ಇಲಾಖೆ ಹೇಳಿಕೊಂಡಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಮಾರಾಟಗಾರರು ಬಡ ರೈತರನ್ನು ಸುಲಿಗೆ ಮಾಡುತ್ತಿದ್ದಾರೆ.
ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಕಲಬುರಗಿ, ಧಾರವಾಡ, ಕೊಪ್ಪಳ, ಗದಗದಲ್ಲಿ ಕಳೆದ 15 ದಿನಗಳಿಂದ ಯೂರಿಯಾ ಗೊಬ್ಬರದ ಸಮಸ್ಯೆ ಗಂಭೀರವಾಗಿ ಕಾಡುತ್ತಿದೆ. ಮಾಮೂಲಿಯಾಗಿ 45 ಕೆಜಿ ಯೂರಿಯಾ ಗೊಬ್ಬರದ ಚೀಲದ ನಿಗದಿತ ದರ 265 ರುಪಾಯಿ. ಆದರೆ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ರಾಜ್ಯದ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ದರದಲ್ಲಿ ಮಾರಾಟವಾಗುತ್ತಿದೆ. ಕೆಲವು ಕಡೆ ಗೊಬ್ಬರದ ದರ ಕನಿಷ್ಠ 15 ರು. ನಷ್ಟು ಹೆಚ್ಚಳ ಮಾಡಿದ್ದರೆ ಕೆಲ ಜಿಲ್ಲೆಗಳಲ್ಲಿ 135ರಷ್ಟು ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ. ಅಂದರೆ 300ರಿಂದ 400 ರುಪಾಯಿವರೆಗೂ ಗೊಬ್ಬರ ಮಾರಾಟವಾಗುತ್ತಿದೆ.
ಯೂರಿಯಾ ಗೊಬ್ಬರ ಕೊಳ್ಳಲು ರೈತರ ನೂಕುನುಗ್ಗಲು..!
ಕೊಪ್ಪಳ, ಗದಗದಲ್ಲಿ ದಿನವಿಡೀ ಅಂಗಡಿ ಮುಂದೆ ಸರದಿ ಸಾಲಲ್ಲಿ ನಿಂತರೂ ರೈತರಿಗೆ ಗೊಬ್ಬರ ಸಿಗುತ್ತಿಲ್ಲ. ಆದರೆ, ಉಳ್ಳವರಿಗೆ ಗೊಬ್ಬರದ ಕೊರತೆಯಾಗಿಲ್ಲ ಎಂಬುದು ರೈತರ ಆರೋಪ. ಸರ್ಕಾರ ಶೀಘ್ರ ಮಧ್ಯಪ್ರವೇಶಿಸಬೇಕು, ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕೃತಕ ಅಭಾವ-ಆರೋಪ: ಕೃಷಿ ಇಲಾಖೆ ಪ್ರಕಾರ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಶೇ.90-96ರಷ್ಟು ಬಿತ್ತನೆಯಾಗಿದೆ. ಈ ಮಧ್ಯೆ, ಉತ್ತಮ ಮಳೆಯಾಗುತ್ತಿರುವ ಕಾರಣ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ಆದರೂ ಎಲ್ಲಾ ಜಿಲ್ಲೆಗಳಿಗೆ ಹೆಚ್ಚುವರಿಯಾಗಿ ಯೂರಿಯಾ ಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.
1 ವಾರ ಸುತ್ತಾಡಿದರೂ 1 ಚೀಲ ಸಿಕ್ತಿಲ್ಲ
ಯೂರಿಯಾ ಗೊಬ್ಬರವನ್ನು ಮೆಕ್ಕೆ ಜೋಳಕ್ಕೆ ತುರ್ತಾಗಿ ಹಾಕಬೇಕಾಗಿದೆ. ಒಂದು ವಾರದಿಂದ ಸುತ್ತಾಡಿದರೂ ಮಾರುಕಟ್ಟೆಯಲ್ಲಿ 1 ಚೀಲ ಗೊಬ್ಬರವೂ ಸಿಕ್ಕಿಲ್ಲ. 14 ಎಕರೆಯಲ್ಲಿನ ಮೆಕ್ಕೆಜೋಳಕ್ಕೆ ಸಕಾಲದಲ್ಲಿ ಗೊಬ್ಬರ ಪೂರೈಸಲಾಗದೆ ಸಮಸ್ಯೆಯಾಗುತ್ತಿದೆ. - ಗ್ಯಾನಪ್ಪ ಬೇಳೂರು, ಕೊಪ್ಪಳ
ಚೀನಾದಿಂದ ಬಂದಿದೆ, ಹಬ್ಬದ ಬಳಿಕ ಸಿಗುತ್ತೆ
ಚೀನಾದಿಂದ ಹಡಗಿನ ಮೂಲಕ ಬರಬೇಕಿದ್ದ 45 ಸಾವಿರ ಟನ್ ಯೂರಿಯಾ ಮಂಗಳೂರು ಬಂದರಿಗೆ ಬರುವುದು ತಡವಾಗಿದೆ. ಬುಧವಾರವಷ್ಟೇ ಈ ಹಡಗು ಮಂಗಳೂರು ಬಂದರು ಮುಟ್ಟಿದೆ. ಆ.20ರಂದು ಯೂರಿಯಾ ಲಾರಿಗಳಿಗೆ ಲೋಡಿಂಗ್ ನಡೆಯಲಿದೆ. ಅನಂತರ ರಾಜ್ಯದ ಎಲ್ಲ ಜಿಲ್ಲೆಗಳಿಗೆ ರವಾನೆಯಾಗಲಿದೆ. ಒಟ್ಟಾರೆ ಗೌರಿ-ಗಣೇಶ ಹಬ್ಬ ಮುಗಿಯುವ ವೇಳೆಗೆ ರೈತರಿಗೆ ಯೂರಿಯಾ ದೊರೆಯಲಿದೆ. - ಬ್ರಿಜೇಶ್ ಕುಮಾರ್ ದೀಕ್ಷಿತ್, ಕೃಷಿ ಇಲಾಖೆ ಆಯುಕ್ತ
ಕೋವಿಡ್ ಮತ್ತು ಪ್ರವಾಹದಿಂದ ಹಡಗಿನಲ್ಲಿ ಆಮದಾಗಿರುವ ಯೂರಿಯಾ ಗೊಬ್ಬರವನ್ನು ಸಕಾಲಕ್ಕೆ ಪೂರೈಕೆ ಮಾಡುವಲ್ಲಿ ಸಮಸ್ಯೆಯಾಗುತ್ತಿದೆ. ಆದರೂ ಜಿಲ್ಲೆಯಲ್ಲಿ ಆಗಸ್ಟ್ ಅಂತ್ಯಕ್ಕೆ 55 ಸಾವಿರ ಮೆಟ್ರಿಕ್ ಟನ್ ಅಗತ್ಯವಿದ್ದು, ಈ ಪೈಕಿ 47 ಸಾವಿರ ಮೆಟ್ರಿಕ್ ಟನ್ ಪೂರೈಸಲಾಗಿದೆ. 22 ಅಥವಾ 23ರಂದು ಸುಮಾರು 3 ಸಾವಿರ ಮೆಟ್ರಿಕ್ ಟನ್ ಜಿಲ್ಲೆಗೆ ಬರಲಿದೆ. - ಶಿವಕುಮಾರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ, ಕೊಪ್ಪಳ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ