
ರಾಯಚೂರು (ಮಾ.1):ಮಂತ್ರಾಲಯದಲ್ಲಿ ಗುರು ವೈಭವೋತ್ಸವ ಸಂಭ್ರಮ ಇದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಗುರುಗಳ ಅಪ್ಪಣೆ ಮೇರೆಗೆ ಇಲ್ಲಿಗೆ ಬಂದಿದ್ದೇನೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ತಿಳಿಸಿದರು.
ಇಂದು ಮಂತ್ರಾಲಯದಲ್ಲಿ ಗುರು ವೈಭವೋತ್ಸವ ಸಂಭ್ರಮದಲ್ಲಿ ದಂಪತಿ ಸಮೇತ ರಾಯರ ದರ್ಶನ ಪಡೆದರು ಬಳಿಕ ಮಾತನಾಡಿದ ಅವರು, ರಾಘವೇಂದ್ರ ಸ್ವಾಮೀಜಿಗಳ ಬಗ್ಗೆ ಮೊದಲಿನಿಂದಲೂ ಪ್ರತಿಯೊಬ್ಬರಿಗೂ ನಂಬಿಕೆ ಇದೆ. ಪ್ರತಿಯೊಬ್ಬರ ಕಷ್ಟ ಸುಖಗಳನ್ನ ಬಗೆಹರಿಸಲು ಗುರುವಿನ ಸ್ಥಾನದಲ್ಲಿ ನಿಂತು ಹಲವಾರು ಪವಾಡಗಳು ಅವರಿಂದ ಆಗಿರೋದು ನಮ್ಮ ಕಣ್ಣಮುಂದೆ ಇದೆ. ರಾಜ್ಯ, ದೇಶ ಸೇರಿದಂತೆ ಜಗತ್ತಿನಾದ್ಯಂತ ಲಕ್ಷಾಂತರ ಕುಟುಂಬಗಳು ರಾಯರ ಭಕ್ತರಿದ್ದಾರೆ. ಸಂಕಷ್ಟದಿಂದ ಕೂಡಿರೋ ರಾಜ್ಯದಲ್ಲಿ ಒಳ್ಳೆ ಮಾರ್ಗದಲ್ಲಿ ಹೋಗೊ ಮನಸ್ಸುಗಳನ್ನ ಕೊಡಲಿ ಅಂತ ರಾಯರಲ್ಲಿ ಬೇಡಿಕೊಂಡಿದ್ದೇನೆ ಎಂದರು.
ಇದನ್ನೂ ಓದಿ: BIFFES: ಉತ್ತಮ ಸಾಹಿತ್ಯ, ಸಂಗೀತ, ಸಿನಿಮಾ,ಸಂಸ್ಕೃತಿಯೇ ನಮ್ಮ ಆಸ್ತಿ: ಡಿಕೆ ಶಿವಕುಮಾರ ಮಾತು
ಕಾಂಗ್ರೆಸ್ ಸರ್ಕಾರದಿಂದ ಕಲ್ಯಾಣ ಕರ್ನಾಟಕ ನಿರ್ಲಕ್ಷ್ಯ:
ರಾಜ್ಯದ ಜನರು 136 ಸೀಟು ಕೊಟ್ಟಿದ್ದಾರೆ. ಸರ್ಕಾರ ಜನರಿಗಾಗಿ ಒಳ್ಳೆಯ ಕೆಲಸ ಮಾಡಲಿ ಎಂದು ಕೇಳಿಕೊಳ್ತೇನೆ. ನೀವು ಪಾಪ ಗ್ಯಾರಂಟಿಗಳ ಕಾರ್ಯಕ್ರಮವೇ ದೊಡ್ಡದು ಅಂತ ಬೇರೆ ಅಭಿವೃದ್ಧಿ ಕಾರ್ಯಗಳನ್ನೇ ನಿಲ್ಲಿಸಿಬಿಟ್ಟಿದ್ದೀರಿ. ಕಳೆದ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5 ಸಾವಿರ ಕೋಟಿ ಕ್ರಿಯಾ ಯೋಜನೆ ಘೋಷಣೆ ಮಾಡಿತ್ತು. ಆದರೆ ಈ ಕ್ಷಣದವರೆಗೂ ಒಂದು ಬಿಡಿಗಾಸೂ ಕೊಟ್ಟಿಲ್ಲ. ಕೇವಲ ಘೋಷಣೆ ಮಾಡಿ ಕೈತೊಳೆದುಕೊಂಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಇದು ನಮ್ಮ ಮುಂದೆ ಇರುವ ಅಂಕಿ ಅಂಶ. ಇದನ್ನ ನೋಡಿದ್ರೆ ಸರ್ಕಾರ ಎಷ್ಟರ ಮಟ್ಟಿಗೆ ಬಡವರ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದಾರೆ ಗೊತ್ತಾಗತ್ತೆ ಎಂದರು.
ಸಿದ್ದರಾಮಯ್ಯ ಬಜೆಟ್ ಬಗ್ಗೆ ಹೇಳೊದಾದ್ರೆ, ಈಗ ಹೋಗಿರುವ ಮಾರ್ಗ ನೋಡಿದ್ರೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟಿಲ್ಲ. ಗ್ಯಾರಂಟಿ ಹೆಸರಿನಲ್ಲಿ ಒಂದು ಲಕ್ಷ ಕೋಟಿ, ಒಂದುವರೆ ಲಕ್ಷ ಕೋಟಿ ಸಾಲ ಆಗದೇ ಇರಲಿ ಅಂತ ಬಯಸುತ್ತೇನೆ ಎಂದರು.
ಎಸ್ಸಿ -ಎಸ್ಟಿ ರೂಲ್ಸ್ ಯಾಕೆ ತಂದ್ರಿ?
ಎಸ್ ಸಿ ಎಸ್ ಟಿ ಹಣ ಗ್ಯಾರಂಟಿಗಳಿಗೆ ಬಳಕೆ ಮಾಡಿದ ವಿಚಾರಕ್ಕೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ ಎಚ್ಡಿ ಕುಮಾರಸ್ವಾಮಿ, ಎಸ್ಸಿ -ಎಸ್ಟಿ ರೂಲ್ಸ್ ಯಾಕೆ ತಂದ್ರಿ? ಕಾನೂನು ಯಾಕೆ ತಂದ್ರಿ? ನಿಗದಿಯಾಗಿರುವ ಹಣವನ್ನ ಖರ್ಚು ಮಾಡದೇ ಇದ್ರೆ ಆಕ್ಷನ್ ತಗೋಬೇಕು ಜೈಲಿಗೆ ಕಳುಹಿಸ್ತೇವೆ ಅಂದ್ರಿ ಆದರೆ ಅದನ್ನ ಇಟ್ಕೊಂಡು ಏನು ಮಾಡ್ತೀರಿ? ಗ್ಯಾರಂಟಿ ಸ್ಕೀಂ ಬೇರೆ ಎಸ್ಸಿ- ಎಸ್ಟಿ ಸಮಾಜಗಳ ಆರ್ಥಿಕ ಶಕ್ತಿ ವೃದ್ಧಿಗೊಳಿಸುವ ನಿಟ್ಟಿನಲ್ಲಿ ಯೋಜನೆಗಳಿಗೆ ಸಿಮಿತಗೊಳಿಸದೇ ಅಂತಿಮವಾಗಿ ಉಪಯೋಗ ಏನು ಆಯ್ತು ಇದು ಸರ್ಕಾರದ ಬೇಜವ್ದಾರಿ. ಇಷ್ಟೆಲ್ಲ ದುರುಪಯೋಗ ನಡೆದರೂ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಇವರ ಲಘುವಾದ ಮಾತುಗಳಿಗೆ ಜನರು ಸೂಕ್ತ ಸಮಯದಲ್ಲಿ ತೀರ್ಮಾನ ಮಾಡ್ತಾರೆ ಎಂದರು.
ಇದನ್ನೂ ಓದಿ: ಚುನಾವಣೆ ಬಂದಾಗ ಮಾತ್ರ ಗ್ಯಾರಂಟಿ ಮ್ಯಾಜಿಕ್: ನಿಖಿಲ್ ಕುಮಾರಸ್ವಾಮಿ ಕಿಡಿ
ಕಾರ್ಖಾನೆಗಳ ಉತ್ಪನ್ನಗಳಿಗೆ ಕನ್ನಡ ಕಡ್ಡಾಯ:
ಕಾರ್ಖಾನೆ ಅಷ್ಟೆ ಅಲ್ಲ, ಎಲ್ಲ ಭಾಗದಲ್ಲೂ ಕನ್ನಡ ಇರಬೇಕು. ಕನ್ನಡಿಗರಿಗೆ ಶಕ್ತಿ ಕೊಡಬೇಕು ಅನ್ನೋದು ಎಲ್ಲರ ಅಭಿಪ್ರಾಯ ಇದೆ. ಕರ್ನಾಟಕಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ