ಮೇಕೆದಾಟುಗೆ ತಮಿಳುನಾಡು ಅನುಮತಿ ಅಗತ್ಯ: ಕೇಂದ್ರ

By Kannadaprabha NewsFirst Published Aug 6, 2021, 7:24 AM IST
Highlights

* ಅಣ್ಣಾಮಲೈನನ್ನು ದೊಡ್ಡ ಮನುಷ್ಯ ಮಾಡಬೇಡಿ
* ಸಂಸತ್ತಲ್ಲಿ ಪ್ರಜ್ವಲ್‌ ರೇವಣ್ಣ ಪ್ರಶ್ನೆಗೆ ಜಲಶಕ್ತಿ ಸಚಿವರ ಉತ್ತರ
* ತಮಿಳುನಾಡಿನಲ್ಲಿ ಈ ವಿಚಾರ ರಾಜಕೀಯಕ್ಕೆ ಬಳಕೆ: ಬೊಮ್ಮಾಯಿ
 

ನವದೆಹಲಿ(ಆ.06): ಬೆಂಗಳೂರಿಗೆ ಕುಡಿಯುವ ನೀರಿನ ಉದ್ದೇಶದಿಂದ ಕರ್ನಾಟಕವು ಕೈಗೆತ್ತಿಕೊಳ್ಳಲುದ್ದೇಶಿಸಿರುವ ಯೋಜನೆಗೆ ಕಾವೇರಿ ಕೊಳ್ಳದ ಇತರೆ ರಾಜ್ಯಗಳ ಅನುಮತಿ ಕಡ್ಡಾಯ, ಜತೆಗೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿಯೂ ಬೇಕು ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ತಿಳಿಸಿದ್ದಾರೆ.

ಮೇಕೆದಾಟು ಯೋಜನೆ ಸ್ಥಿತಿಗತಿ ಕುರಿತು ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಗುರುವಾರ ಲೋಕಸಭೆಯಲ್ಲಿ ಎತ್ತಿದ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ. ಕರ್ನಾಟಕ ಸಲ್ಲಿಸಿದ್ದ ಮೇಕೆದಾಟು ಸಮಗ್ರ ಯೋಜನಾ ವರದಿಗೆ ಷರತ್ತು ಬದ್ಧ ಅನುಮತಿ ನೀಡಿದ್ದೇವೆ. ಆದರೆ, ಇದು ಅಂತಾರಾಜ್ಯ ಯೋಜನೆ ಆಗಿರುವ ಕಾರಣ ಕಾವೇರಿ ಕಣಿವೆ ರಾಜ್ಯಗಳಾದ , ಕೇರಳ, ಪುದುಚೇರಿ ಅನುಮತಿ ಬೇಕು. ರಾಜ್ಯವು ಯೋಜನಾ ವರದಿ(ಡಿಪಿಆರ್‌) ಕೊಟ್ಟಾಗಲೇ ಇದನ್ನು ಸ್ಪಷ್ಟವಾಗಿ ತಿಳಿಸಿದ್ದೆವು. ಯೋಜನೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಕೂಡ ಕಡ್ಡಾಯ. ಜತೆಗೆ ಈ ಯೋಜನೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಸಮ್ಮತಿ ಇನ್ನೂ ಸಿಕ್ಕಿಲ್ಲ ಎಂದ ಕೇಂದ್ರ ಸಚಿವ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.

ಯೋಜನೆಗೆ ಅನುಮತಿಯನ್ನು 6 ತಿಂಗಳ ಒಳಗೆ ನೀಡಿಲ್ಲವಾದರೆ ಕೇಂದ್ರ ಸಮ್ಮತಿ ನೀಡಿದೆ (deemed approval) ಎಂದೇ ಭಾವಿಸಲಿದೆ ಎಂದು ಕರ್ನಾಟಕ ತಿಳಿಸಿತ್ತಲ್ವಾ? ಎಂಬ ವಿಚಾರವನ್ನು ಪ್ರಜ್ವಲ್‌ ಅವರು ಸಚಿವರ ಗಮನಕ್ಕೆ ತಂದಾಗ, ಸಮ್ಮತಿ ಇದೆ ಎಂದು ಕರ್ನಾಟಕ ಭಾವಿಸಿದರೂ ಅದನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ತಿಳಿಸಬೇಕು ಮತ್ತು ಪ್ರಾಧಿಕಾರದ ಅನುಮತಿಯೂ ಬೇಕು ಎಂದಿದ್ದಾರೆ. ಯೋಜನೆಗೆ ಪರಿಸರ ಮತ್ತು ಅರಣ್ಯ ಇಲಾಖೆಗೆ ಪರಿಶೀಲನೆ ನಡೆಸಿ ಎಂದು ತಿಳಿಸಿದ್ದೇವೆ. ಅಲ್ಲಿಂದ ದಾಖಲೆ ಬರಬೇಕಷ್ಟೆ ಎಂದು ಈ ಸಂದರ್ಭದಲ್ಲಿ ಶೇಖಾವತ್‌ ಹೇಳಿದ್ದಾರೆ.

ಮೇಕೆದಾಟು ಯೋಜನೆಗೆ ಅವಕಾಶ ಬೇಡ: ಮೋದಿಗೆ ಅಣ್ಣಾ ಡಿಎಂಕೆ ಮನವಿ!

ಯಾಕೆ ಅನುಮತಿ ಪಡೆಯಬೇಕು?: ಮೇಕೆದಾಟು ಯೋಜನೆ ಸಂಬಂಧಿಸಿ ಜಲಶಕ್ತಿ ಸಚಿವರು ನೀಡಿದ ಉತ್ತರಕ್ಕೆ ಸಂಬಂಧಿಸಿ ಸಂಸತ್ತಿನ ಹೊರಗೆ ಸುದ್ದಿಗಾರರ ಜತೆಗೆ ಮಾತನಾಡಿದ ಸಂಸದ , ಯೋಜನೆಗೆ ತಮಿಳುನಾಡಿನ ಅನುಮತಿ ಬೇಕೆಂದು ಕೇಂದ್ರ ಸರ್ಕಾರ ತಿಳಿಸಿದೆ. ನಾವು ಯಾಕೆ ತಮಿಳುನಾಡಿನ ಅನುಮತಿ ಪಡೆಯಬೇಕು? ಅದು ನಮ್ಮ ನೀರು, ನಮ್ಮ ಪ್ರದೇಶದಲ್ಲಿ ನಡೆಯುವ ಯೋಜನೆ, ಅದಕ್ಕೆ ಯಾರ ಅನುಮತಿಯೂ ಬೇಕಿಲ್ಲ, ಯಾವ ಕಾನೂನಿನಲ್ಲಿದೆ ಅನುಮತಿ ಪಡೆಯಬೇಕೆಂದು? ಎಂದು ಆಕ್ರೋಶ ಹೊರಹಾಕಿದರು.

ಕರ್ನಾಟಕ ಸರ್ಕಾರದಿಂದ ಪರಿಸರ ಇಲಾಖೆಗೆ ಯೋಜನಾ ವರದಿಯು ಕ್ಲಿಯರೆನ್ಸ್‌ಗೆ ಬಂದಿಲ್ಲ ಎಂದು ಕೇಂದ್ರ ಹೇಳುತ್ತಿದೆ. ಆದರೆ, ಇ- ಪೋರ್ಟಲ… ಮೂಲಕ ಯೋಜನಾ ವರದಿ ಕಳುಹಿಸಲಾಗಿದೆ ಎಂದ ಪ್ರಜ್ವಲ್‌, ಈ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನ್ಯಾಯ ಒದಗಿಸಬೇಕು. ಈ ಯೋಜನೆ ಆಗುತ್ತೋ, ಇಲ್ವೋ ಎಂದು ಕರ್ನಾಟಕದ ಜನತೆಗೆ ತಿಳಿಸಬೇಕಿದೆ ಎಂದು ಆಗ್ರಹಿಸಿದರು.

ಬಿಜೆಪಿ ನಿಲುವು ತಿಳಿಸಲಿ- ಮೇಕೆದಾಟು ಯೋಜನೆಗೆ ತಮಿಳುನಾಡು ರಾಜ್ಯ ಬಿಜೆಪಿ ಉಸ್ತುವಾರಿ ಅಣ್ಣಾಮಲೈ ಅವರ ವಿರೋಧಕ್ಕೆ ಸಂಬಧಿಸಿ ಪ್ರತಿಕ್ರಿಯಿಸಿದ ಪ್ರಜ್ವಲ್‌, ಈ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್‌ ತನ್ನ ನಿಲುವು ಏನೆಂದು ತಿಳಿಸಲಿ. ಅಣ್ಣಾಮಲೈ ಅವರನ್ನು ಕರೆದು ಬುದ್ಧಿ ಹೇಳಲಿ. ನಾವೂ ಕೈಕಟ್ಟಿಕೂತಿಲ್ಲ. ಕೇಂದ್ರ ನ್ಯಾಯ ನೀಡಬೇಕು. ಒಂದು ವೇಳೆ ಕೇಂದ್ರ ಸರಿಯಾದ ನಿಲುವು ತಾಳದಿದ್ದರೆ ಹೋರಾಟ ಆರಂಭವಾಗಲಿದೆ ಎಂದು ಎಚ್ಚರಿಸಿದರು.
ಇದೇ ವೇಳೆ, ನಾವೆಲ್ಲರೂ ಸರ್ವಪಕ್ಷ ಸಂಸದರ ನಿಯೋಗದೊಂದಿಗೆ ಹೋಗಿ ಕೇಂದ್ರದ ಮೇಲೆ ಒತ್ತಡ ಹಾಕೋಣ ಎಂದು ಪ್ರಜ್ವಲ್‌ ತಿಳಿಸಿದರು.

ಮೇಕೆದಾಟು ವಿಷಯದಲ್ಲಿ ತಮಿಳುನಾಡು ಪರ : ಅಣ್ಣಾಮಲೈ

ಮೇಕೆದಾಟು ಬಗ್ಗೆ ರಾಜಿ ಇಲ್ಲ: ಬೊಮ್ಮಾಯಿ

ತಮಿಳುನಾಡಿನಲ್ಲಿ ಮೇಕೆದಾಟು ವಿಚಾರವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಯೋಜನೆಯನ್ನು ಜಾರಿಗೆ ತರುವ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಯಿಂದ ಯಾವುದೇ ತೊಂದರೆ ಇಲ್ಲ ಎಂದು ಗೊತ್ತಿದ್ದರೂ ರಾಜಕೀಯ ಕಾರಣಗಳಿಗಾಗಿ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಒತ್ತಾಯ ಮಾಡಿದ್ದೇವೆ. ವಿಸ್ತೃತ ಯೋಜನೆಗೆ ಶೀಘ್ರ ಅನುಮತಿ ದೊರೆಯಲಿದೆ ಎಂಬ ವಿಶ್ವಾಸವಿದೆ. ಡಿಪಿಆರ್‌ಗೆ ಅನುಮತಿ ಸಿಕ್ಕ ಕೂಡಲೇ ಕಾಮಗಾರಿ ಪ್ರಾರಂಭಿಸುವುದು ಶತಃಸಿದ್ಧ. ಇದರಲ್ಲಿ ಯಾವುದೇ ರಾಜಿ ಇಲ್ಲ. ಯಾರಾದರೂ ಪ್ರತಿಭಟನೆ ನಡೆಸುತ್ತಿದ್ದರೆ, ನಮಗೆ ಸಂಬಂಧವಿಲ್ಲ. ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಎಂದರು.

ಅಂತಾರಾಜ್ಯ ವಿವಾದ ಪರಿಹಾರ ಕಂಡಿದೆ. ಹೆಚ್ಚುವರಿ ನೀರನ್ನು ಬೆಂಗಳೂರಿಗೆ ಕೊಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ ಮೇಕೆದಾಟು ಯೋಜನೆಯನ್ನು ಕೈಗೊಳ್ಳಲಾಗಿದೆ. ಇದೆಲ್ಲ ಗೊತ್ತಿದ್ದು ಕೂಡ ತಮಿಳುನಾಡಿನಲ್ಲಿ ರಾಜಕೀಯವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆಲ್ಲ ನಾವು ಸೊಪ್ಪು ಹಾಕುವುದಿಲ್ಲ ಎಂದರು.

ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಅಲ್ಲಿನ ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಕರ್ನಾಟಕ ಮೂಲದ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಅವನನ್ನು ದೊಡ್ಡ ಮನುಷ್ಯನನ್ನಾಗಿ ಮಾಡಬೇಡಿ ಎಂದು ಏಕವಚನದಲ್ಲೇ ಕಿಡಿಕಾರಿದರು.
 

click me!