ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ‘2ನೇ ಜಲಿಯನ್ ವಾಲಾಬಾಗ್’ ಎಂದೇ ಕರೆಯಲ್ಪಡುವ ಬೀದರ್ ಜಿಲ್ಲೆ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಅನಾವರಣ ಮಾಡಲಿದ್ದಾರೆ.
ಬೀದರ್/ರಾಯಚೂರು/ಬೆಂಗಳೂರು (ಮಾ.26): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ‘2ನೇ ಜಲಿಯನ್ ವಾಲಾಬಾಗ್’ ಎಂದೇ ಕರೆಯಲ್ಪಡುವ ಬೀದರ್ ಜಿಲ್ಲೆ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಜೊತೆಗೆ, ಹುತಾತ್ಮರ ಸ್ಮಾರಕ ಹಾಗೂ 103 ಅಡಿ ಎತ್ತರದ ರಾಷ್ಟ್ರಧ್ವಜ ಲೋಕಾರ್ಪಣೆಗೊಳಿಸಲಿದ್ದಾರೆ.
1948ರಲ್ಲಿ ಹೈದರಾಬಾದ್‌ನ ನಿಜಾಮ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರಲು ನಿರಾಕರಿಸಿದಾಗ, ಆತನ ಇಚ್ಛೆಗೆ ವಿರುದ್ಧವಾಗಿ ಈ ಗ್ರಾಮದ ಜನ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರಲು ಬಯಸಿದ್ದರು. ಆಗ ಈ ಗ್ರಾಮದ ಜನರ ಮೇಲೆ ನಿಜಾಮನ ಆಡಳಿತದಲ್ಲಿದ್ದ ರಜಾಕಾರರು (ಯೋಧರು) ದಾಳಿ ನಡೆಸಿದ್ದರು. ಆಗ 70ಕ್ಕೂ ಹೆಚ್ಚು ಹಿಂದೂಗಳ ಮಾರಣಹೋಮ ನಡೆದು, ‘2ನೇ ಜಲಿಯನ್ ವಾಲಾಬಾಗ್’ ಎಂಬ ಕುಖ್ಯಾತಿಗೆ ಘಟನೆ ಒಳಗಾಗಿತ್ತು.
ನೂತನ ಮೆಟ್ರೋ ಮಾರ್ಗದಲ್ಲಿ ಇಂದಿನಿಂದಲೇ ಸಂಚಾರ ಪ್ರಾರಂಭ: 12 ನಿಮಿಷಕ್ಕೊಂದು ರೈಲು
ಶಾ ಅವರು, ಶನಿವಾರ ರಾತ್ರಿಯೇ ಬೀದರ್ ವಾಯುಸೇನಾ ತರಬೇತಿ ಕೇಂದ್ರಕ್ಕೆ ಆಗಮಿಸಿದ್ದು, ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದಾರೆ. ಭಾನುವಾರ ಬೆಳಿಗ್ಗೆ ಬೀದರ್‌ನಿಂದ ಗೋರ್ಟಾಗೆ ಆಗಮಿಸಲಿದ್ದಾರೆ. ಇಲ್ಲಿನ ಕಾರ್ಯಕ್ರಮ ಮುಗಿಸಿ, ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರ್ ಗ್ರಾಮಕ್ಕೆ ಆಗಮಿಸಿ, ವಿವಿಧ ಇಲಾಖೆಗಳ .4,283 ಕೋಟಿ ವೆಚ್ಚದ 220 ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಿದ್ದಾರೆ.
ಬಳಿಕ, ಬೀದರ್ ಏರ್‌ಪೋರ್ಟ್ ಮೂಲಕ ಬೆಂಗಳೂರಿಗೆ ತೆರಳಿ ವಿಧಾನಸೌಧದ ಮುಂದೆ ಸ್ಥಾಪಿಸಿರುವ ಜಗಜ್ಯೋತಿ ಬಸವೇಶ್ವರ ಹಾಗೂ ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ಅನಾವರಣ ಮಾಡಲಿದ್ದಾರೆ. ವಿಧಾನಸೌಧದ ಆವರಣದಲ್ಲಿರುವ ಮಾಜಿ ಪ್ರಧಾನಿ ನೆಹರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯ ಮಧ್ಯ ಭಾಗದಲ್ಲಿ ಸುಮಾರು 8 ಕೋಟಿ ರು.ವೆಚ್ಚದಲ್ಲಿ ಈ ಇಬ್ಬರೂ ಮಹನಿಯರ ನಾಲ್ಕು ಮೀಟರ್ ಎತ್ತರದ ಅಶ್ವಾರೂಢ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಬಳಿಕ, ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡು, ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಲಿದ್ದಾರೆ.
ನಮ್ಮ ಮೆಟ್ರೋ ವೈಟ್‘ಫೀಲ್ಡ್’ಗೆ ಮೋದಿ ಚಾಲನೆ: ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು, ಮೆಟ್ರೋ ಸಿಬ್ಬಂದಿ ಜತೆ ಸಂವಾದ
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪೇಜಾವರ ಮಠದ ವಿಶ್ವಪ್ರಸನ್ನರ್ತೀ ಸ್ವಾಮೀಜಿ, ಸಿದ್ಧಗಂಗಾಮಠದದ ಸಿದ್ದಲಿಂಗ ಸ್ವಾಮೀಜಿ, ಮಾದಾರ ಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಗುರುಗುಂಡಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.