
ರಾಯಚೂರು (ಫೆ. 1): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2026ರ ಬಜೆಟ್ ಕರ್ನಾಟಕ ಮತ್ತು ದಕ್ಷಿಣ ಭಾರತದ ಪಾಲಿಗೆ ಚೊಂಬು ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಣಿಯಲ್ಲಿರುವ ಕಾಗಿನೆಲೆ ಪೀಠದಲ್ಲಿ ನಡೆದ ನುಡಿನಮನ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದ ವಿರುದ್ಧ ಹರಿಹಾಯ್ದರು.
ನಿರ್ಮಲಾ ಸೀತಾರಾಮನ್ ಅವರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನೇನೂ ಕೊಟ್ಟಿಲ್ಲ. ಕೇವಲ ಕರ್ನಾಟಕ ಮಾತ್ರವಲ್ಲ, ಇಡೀ ದಕ್ಷಿಣ ಭಾರತಕ್ಕೆ ಈ ಬಜೆಟ್ ಶೂನ್ಯ ಫಲಿತಾಂಶ ನೀಡಿದೆ. ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ ಎಂದು ಕೇಳಿದರೆ, ಉತ್ತರ 'ಚೊಂಬು' ಮಾತ್ರ! ಬೆಂಗಳೂರಿನಿಂದ ಹೈದರಾಬಾದ್ ಮತ್ತು ಚೆನ್ನೈಗೆ ಹೈಸ್ಪೀಡ್ ಟ್ರೈನ್ ಘೋಷಣೆ ಮಾಡಿದ್ದಾರೆ. ಆದರೆ ಇದರ ಲಾಭ ನಮಗಿಂತ ಆಂಧ್ರ ಮತ್ತು ತಮಿಳುನಾಡಿನವರಿಗೆ ಹೆಚ್ಚು. ನಾವು ಕೇಳಿದ್ದು ಬೆಂಗಳೂರಿನಿಂದ ಮುಂಬೈ, ಪುಣೆ ಮತ್ತು ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರೈಲುಗಳು. ಆದರೆ ನಮ್ಮ ಬೇಡಿಕೆಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಸಿಎಂ ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಕುರಿತು ಮಾತನಾಡಿದ ಸಿಎಂ, ವಿಕಸಿತ ಭಾರತದ ಬಗ್ಗೆ ಬಹಳ ಮಾತನಾಡುತ್ತಾರೆ, ಆದರೆ ಅದೆಲ್ಲಾ ಕೇವಲ ಮಾತಿನಲ್ಲಿ ಇದೆಯೇ ಹೊರತು ಕೃತಿಯಲ್ಲಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ ಎಂದಿದ್ದೆವು, ಮಾಡಿಲ್ಲ. 2023-24ರ ಬಜೆಟ್‌ನಲ್ಲಿ ಘೋಷಿಸಿದ 5300 ಕೋಟಿ ರೂ.ಗಳಲ್ಲಿ ಒಂದು ರೂಪಾಯಿಯನ್ನೂ ನೀಡಿಲ್ಲ. ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ ಆದರೂ ಕ್ಲಿಯರೆನ್ಸ್ ಕೊಡುತ್ತಿಲ್ಲ. ಮಹಾದಾಯಿ ಯೋಜನೆಗೆ ಪರಿಸರ ಇಲಾಖೆ ಅನುಮತಿ ನೀಡದೆ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಹಣಕಾಸು ಹಂಚಿಕೆಯಲ್ಲಿ ತಾರತಮ್ಯ: ಅಂಕಿ-ಅಂಶಗಳೊಂದಿಗೆ ಸಿಎಂ ಕಿಡಿ
14ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಶೇ. 4.71ರಷ್ಟು ಪಾಲು ಸಿಗುತ್ತಿತ್ತು. ಆದರೆ ಈಗ ಅದು ಕೇವಲ ಶೇ. 3.64ಕ್ಕೆ ಇಳಿಕೆಯಾಗಿದೆ. ನಾವು ಕನಿಷ್ಠ ಹಳೆಯ ಪಾಲನ್ನಾದರೂ ಕೊಡಿ ಎಂದು ಕೇಳಿದ್ದರೂ ಪ್ರಯೋಜನವಾಗಿಲ್ಲ. ಬಿಹಾರಕ್ಕೆ ಶೇ. 9.948, ಉತ್ತರ ಪ್ರದೇಶಕ್ಕೆ ಶೇ. 17.619ರಷ್ಟು ಅನುದಾನ ನೀಡುವ ಕೇಂದ್ರ, ಕರ್ನಾಟಕಕ್ಕೆ ಮಾತ್ರ ಅನ್ಯಾಯ ಮಾಡುತ್ತಿದೆ. ರಾಜ್ಯದಿಂದ ಪ್ರತಿ ವರ್ಷ 4.5 ರಿಂದ 5 ಲಕ್ಷ ಕೋಟಿ ತೆರಿಗೆ ಹಣ ದೆಹಲಿಗೆ ಹೋಗುತ್ತದೆ. ಆದರೆ ನಮಗೆ ವಾಪಸ್ ಬರುವುದು ಒಂದು ರೂಪಾಯಿಗೆ ಕೇವಲ 14 ಪೈಸೆ ಮಾತ್ರ! ಇದು ಕನ್ನಡಿಗರಿಗೆ ಮಾಡುತ್ತಿರುವ ಘೋರ ಅವಮಾನ ಎಂದು ಸಿದ್ದರಾಮಯ್ಯ ಅಂಕಿ-ಅಂಶಗಳ ಸಮೇತ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ