
ರಾಯಚೂರು (ಫೆ. 1): ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಿಂಥಣಿಯಲ್ಲಿರುವ ಕಾಗಿನೆಲೆ ಪೀಠದಲ್ಲಿ ನಡೆದ ದಿವಂಗತ ಸಿದ್ದರಾಮಾನಂದಪುರಿ ಶ್ರೀಗಳ ನುಡಿನಮನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದರು. ಶ್ರೀಗಳ ಗದ್ದುಗೆಗೆ ಪುಷ್ಪ ನಮನ ಸಲ್ಲಿಸಿ, ಬೀರ ದೇವರ ದರ್ಶನ ಪಡೆದ ಮುಖ್ಯಮಂತ್ರಿಗಳು ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡರು.
ತಿಂಥಣಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಮೊದಲಿಗೆ ಕಾಗಿನೆಲೆ ಪೀಠದ ದಿವಂಗತ ಸಿದ್ದರಾಮಾನಂದಪುರಿ ಶ್ರೀಗಳ ಗದ್ದುಗೆಗೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ಗದ್ದುಗೆಗೆ ಪ್ರಣಾಮ ಸಲ್ಲಿಸಿದ ಬಳಿಕ, ಕುರುಬ ಸಮುದಾಯದ ಆರಾಧ್ಯ ದೈವ ಬೀರ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಎಂ ಜೊತೆಗೆ ಸಚಿವರಾದ ಶಿವರಾಜ್ ತಂಗಡಗಿ, ಶರಣಪ್ರಕಾಶ್ ಪಾಟೀಲ್ ಹಾಗೂ ಎನ್.ಎಸ್. ಬೋಸರಾಜು ಸಾಥ್ ನೀಡಿದರು.
ಗದ್ದುಗೆ ದರ್ಶನದ ವೇಳೆ ಒಂದು ಆಸಕ್ತಿದಾಯಕ ಘಟನೆ ನಡೆಯಿತು. ಸಿಎಂ ಸಿದ್ದರಾಮಯ್ಯ ಅವರ ಹಣೆಗೆ ಪೂಜಾರಿಯೊಬ್ಬರು ಬಂಡಾರ ಹಚ್ಚಲು ಮುಂದಾದಾಗ, ಸಿಎಂ ಆರಂಭದಲ್ಲಿ 'ಬೇಡ' ಎಂಬಂತೆ ಕೈ ಸನ್ನೆ ಮಾಡಿದರು. ಈ ವೇಳೆ ಅವರ ಜೊತೆಯಿದ್ದ ಬೆಂಬಲಿಗರೊಬ್ಬರು ಬಂಡಾರ ಹಚ್ಚುವುದನ್ನು ತಡೆದರು. ಆದರೆ, ಕೊನೆಗೆ ಸಿಎಂ ಸಿದ್ದರಾಮಯ್ಯ ಅವರು ಹಣೆಗೆ ಒಂದು ಬಂಡಾರದ ಬೊಟ್ಟು ಹಚ್ಚಿಸಿಕೊಂಡು ಭಕ್ತಿ ಮೆರೆದರು.
ವೇದಿಕೆಯಲ್ಲಿ ನುಡಿನಮನ: ಸಚಿವರ ದಂಡು ಭಾಗಿ
ಊಟದ ವಿರಾಮದ ನಂತರ ನಡೆದ ಔಪಚಾರಿಕ ನುಡಿನಮನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾದರು. ಸಿದ್ದರಾಮಾನಂದಪುರಿ ಶ್ರೀಗಳೊಂದಿಗಿನ ತಮ್ಮ ಒಡನಾಟ ಹಾಗೂ ಶ್ರೀಗಳ ಸಮಾಜಮುಖಿ ಕಾರ್ಯಗಳನ್ನು ನೆನೆಯುತ್ತಾ ಮುಖ್ಯಮಂತ್ರಿಗಳು ನಮನ ಸಲ್ಲಿಸಿದರು. ಸಂಪುಟದ ಪ್ರಮುಖ ಸಚಿವರು ಸಿಎಂ ಅವರಿಗೆ ಜೊತೆಯಾಗಿ ನಿಂತು ಶ್ರೀಗಳ ಸ್ಮರಣೆ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ