
ರಾಯಚೂರು (ಫೆ. 1): ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಿಂಥಣಿಯಲ್ಲಿರುವ ಕಾಗಿನೆಲೆ ಪೀಠದಲ್ಲಿ ನಡೆದ ದಿವಂಗತ ಸಿದ್ದರಾಮಾನಂದಪುರಿ ಶ್ರೀಗಳ ನುಡಿನಮನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದರು. ಶ್ರೀಗಳ ಗದ್ದುಗೆಗೆ ಪುಷ್ಪ ನಮನ ಸಲ್ಲಿಸಿ, ಬೀರ ದೇವರ ದರ್ಶನ ಪಡೆದ ಮುಖ್ಯಮಂತ್ರಿಗಳು ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡರು.
ಸಿದ್ದರಾಮಾನಂದಪುರಿ ಸ್ವಾಮೀಜಿ ಅಗಲಿದ ದಿನವೇ ನಾನು ಬರಬೇಕಿತ್ತು. ಆದರೆ ಆವತ್ತು ನನಗೆ ವಿಪರೀತ ಜ್ವರವಿತ್ತು, ಪ್ರಯಾಣ ಮಾಡುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಹೆಲಿಕಾಪ್ಟರ್ ಕೂಡ ಲಭ್ಯವಿರಲಿಲ್ಲ. ಹಾಗಾಗಿ ಬೇರೆಯವರ ಮೂಲಕ ವ್ಯವಸ್ಥೆ ಮಾಡಿ ಭೈರತಿ ಸುರೇಶ್ ಅವರನ್ನು ಕಳುಹಿಸಿಕೊಟ್ಟೆ. ನಾನು ಭೌತಿಕವಾಗಿ ಬರಲಾಗದಿದ್ದರೂ ಸರ್ಕಾರಿ ಗೌರವದೊಂದಿಗೆ ಶ್ರೀಗಳ ಅಂತ್ಯಕ್ರಿಯೆ ನಡೆಯುವಂತೆ ನೋಡಿಕೊಂಡೆವು ಎಂದು ಸಿಎಂ ಭಾವುಕರಾದರು.
ಕಾರ್ಯಕ್ರಮದಲ್ಲಿ ಬಸವಣ್ಣ ಮತ್ತು ಕನಕದಾಸರ ವಚನಗಳನ್ನು ಸ್ಮರಿಸಿದ ಸಿಎಂ, ನಮ್ಮ ಸಮಾಜ ಅಸಮಾನತೆಯಿಂದ ಕೂಡಿದೆ. ಬುದ್ಧನ ಕಾಲದಿಂದಲೂ ಜಾತಿ ವ್ಯವಸ್ಥೆ ಹಾಗೆಯೇ ಇದೆ. ಹಿಂದುಳಿದ ವರ್ಗಗಳ ಸಮ್ಮೇಳನವನ್ನು ಜಾತಿ ಸಮ್ಮೇಳನ ಎಂದು ಕರೆಯುವುದು ಸರಿಯಲ್ಲ. ಸಾಮಾಜಿಕ ನ್ಯಾಯದ ರಥವನ್ನು ನಾನು ಇಲ್ಲಿಯವರೆಗೆ ಎಳೆದು ತಂದಿದ್ದೇನೆ, ಇದನ್ನು ಯಾರೂ ಹಿಂದಕ್ಕೆ ತಳ್ಳಬೇಡಿ ಎಂದು ಅಂಬೇಡ್ಕರ್ ಹೇಳಿದ ಮಾತನ್ನು ನಾವೆಲ್ಲರೂ ಪಾಲಿಸಬೇಕು" ಎಂದರು.
ಶಿಕ್ಷಣ ಸಿಕ್ಕರೂ ಗುಲಾಮಗಿರಿ ಮನಸ್ಥಿತಿ ಹೋಗಿಲ್ಲ
ಬರೀ ಬಿಎ, ಬಿಇಡಿ ಪದವಿ ಪಡೆದರೆ ಸಾಲದು, ವೈಜ್ಞಾನಿಕ ಮತ್ತು ವೈಚಾರಿಕ ಶಿಕ್ಷಣ ಸಿಕ್ಕಾಗ ಮಾತ್ರ ಸಮಾಜದ ಪ್ರಗತಿ ಸಾಧ್ಯ. ಶಿಕ್ಷಣ ಸಿಕ್ಕರೂ ಗುಲಾಮಗಿರಿ ಮನಸ್ಥಿತಿ ಹೋಗಿಲ್ಲ. ಇನ್ನೊಬ್ಬರನ್ನು ಪ್ರೀತಿಸಿ ಸ್ವಾಭಿಮಾನಿಗಳಾಗಿ ಬದುಕುವುದನ್ನು ಕಲಿಯಬೇಕು. ಶ್ರೀಗಳು ಶೈಕ್ಷಣಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಮಾಜವನ್ನು ಕಟ್ಟುವ ಕೆಲಸ ಮಾಡಿದ್ದರು ಎಂದರು.
ಒಂದು ತಿಂಗಳಲ್ಲಿ ಜಾತಿ ಗಣತಿ ವರದಿ ಬಿಡುಗಡೆ!
ಇದೇ ವೇಳೆ ರಾಜ್ಯದ ಜನತೆ ಕುತೂಹಲದಿಂದ ಕಾಯುತ್ತಿರುವ ಜಾತಿ ಗಣತಿ ಬಗ್ಗೆ ಮಾಹಿತಿ ನೀಡಿದ ಸಿಎಂ, ಜಾತಿ ಗಣತಿ ವರದಿಯನ್ನು ಒಂದು ತಿಂಗಳಲ್ಲಿ, ಬಹಳ ತಡವಾದರೆ ಎರಡು ತಿಂಗಳಲ್ಲಿ ಬಿಡುಗಡೆ ಮಾಡುತ್ತೇವೆ. ಅದನ್ನು ಶಿಫಾರಸು ಮಾಡಿ ಅಂಗೀಕರಿಸುತ್ತೇವೆ ಎಂದರು. ಅಲ್ಲದೆ, ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯವರನ್ನು ಎಸ್.ಟಿ (ST) ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಅಭಿವೃದ್ಧಿಗೆ ಹಣಕಾಸಿನ ನೆರವು:ಸಿಎಂ ಭರವಸೆ
ಕಾಗಿನೆಲೆ ಪೀಠದ ವತಿಯಿಂದ ಹುಡುಗ ಮತ್ತು ಹುಡುಗಿಯರ ಹಾಸ್ಟೆಲ್ ಹಾಗೂ ಭೋಜನ ಶಾಲೆ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಖಂಡಿತವಾಗಿಯೂ ಇವುಗಳಿಗೆ ಅಗತ್ಯವಿರುವ ಹಣವನ್ನು ನೀಡುತ್ತೇನೆ. ಕಾಗಿನೆಲೆ ಪೀಠವು ಜಾತ್ಯಾತೀತವಾಗಿ ಬೆಳೆಯಬೇಕು ಎನ್ನುವುದು ಶ್ರೀಗಳ ಆಸೆಯಾಗಿತ್ತು ಎಂದು ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ