
ಬೆಂಗಳೂರು (ಫೆ.14): ದುಡಿಯಲು ಸಾಮರ್ಥ್ಯವಿರುವ ಪತಿ, ತನ್ನ ಪತ್ನಿ ಮತ್ತು ಮಗುವನ್ನು ಪೋಷಣೆ ಮಾಡಬೇಕು. ಉದ್ಯೋಗ ಇಲ್ಲದಿದ್ದರೆ ಉದ್ಯೋಗ ಹುಡುಕಿಕೊಂಡು ಸಂಪಾದನೆ ಮಾಡಿ ಪೋಷಣೆ ಮಾಡುವ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು ಎಂದು ಹೈಕೋರ್ಟ್ ಆದೇಶಿಸಿದೆ. ವಿಚ್ಛೇದನ ಪಡೆಯುವ ಹಾದಿಯಲ್ಲಿರುವ ಪತ್ನಿ ಹಾಗೂ ಮಗುವಿಗೆ ಜೀವನಾಂಶ ನೀಡುವಂತೆ ಮೈಸೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಪತಿ ವಾಸು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ನೀಡಿದೆ.
ತಾನು ಹಲವು ಕಾಯಿಲೆಗಳಿಂದ ನರಳುತ್ತಿದ್ದೇನೆ. ಸರಿಯಾದ ಉದ್ಯೋಗವಿಲ್ಲ. ತಿಂಗಳಿಗೆ 15 ಸಾವಿರಕ್ಕಿಂತ ಹೆಚ್ಚು ದುಡಿಯಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಪತ್ನಿ ಮತ್ತು ನಾಲ್ಕು ವರ್ಷದ ಮಗನಿಗೆ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂಬ ಮೇಲ್ಮನವಿದಾರ ವಾಸು ವಾದ ಮಂಡಿಸಿದ್ದರು. ಆ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಹೈಕೋರ್ಟ್, ಜೀವನಾಂಶ ಪಾವತಿಸಲು ಸಾಧ್ಯವಿಲ್ಲ ಎಂಬ ಪತಿಯ ವಾದ ಒಪ್ಪಲಾಗದು. ದುಡಿಯಲು ಸಮರ್ಥನಿರುವ ಪತಿಗೆ ಉದ್ಯೋಗವಿಲ್ಲದಿದ್ದರೆ ಉದ್ಯೋಗವನ್ನು ಹುಡುಕಿಕೊಂಡು ದುಡಿದು ಪತ್ನಿ ಹಾಗೂ ಮಗುವಿಗೆ ಜೀವನಾಂಶ ನೀಡಲೇಬೇಕು. ಪತಿ ಮತ್ತು ಮಗುವಿಗೆ 10 ಸಾವಿರ ರು. ಜೀವನಾಂಶ ನೀಡಬೇಕೆನ್ನುವುದು ದುಬಾರಿಯಲ್ಲ ಎಂದು ಅಭಿಪ್ರಾಯಪಟ್ಟಿತು.
ಶಾಸಕ ಕುಮಾರ್ ಭ್ರಷ್ಟ ಶಾಸಕ: ಮಧು ಬಂಗಾರಪ್ಪ ಆರೋಪ
ತಿಂಗಳ ಜೀವನಾಂಶ 10 ಸಾವಿರ ಹಣ ಹೊಂದಿಸಲಾಗದು ಎಂಬ ಪತಿಯ ವಾದ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದೇ ಆಗಿದೆ. ಅಲ್ಲದೆ, ಪತಿ ತಾನೂ ಯಕೃತ್ ಸಂಬಂಧಿ ರೋಗದಿಂದ ಬಳಲುತ್ತಿದ್ದೇನೆ ಎಂದು ಹೇಳುತ್ತಿರುವುದನ್ನು ಪುಷ್ಟೀಕರಿಸಲು ವಾಸು ಒದಗಿಸಿರುವ ದಾಖಲೆಗಳು ತೃಪ್ತಕರವಾಗಿಲ್ಲ. ಹಾಗಾಗಿ, ಕೌಟುಂಬಿಕ ನ್ಯಾಯಾಲಯದ ಆದೇಶದಂತೆ ಜೀವನಾಂಶ ನೀಡಲೇಬೇಕು. ಕೌಟುಂಬಿಕ ನ್ಯಾಯಾಲದ ಆದೇಶದಂತೆ ಅರ್ಜಿದಾರರು ಪ್ರತಿ ತಿಂಗಳು ಪತ್ನಿಗೆ 6,000 ಹಾಗೂ ನಾಲ್ಕು ವರ್ಷದ ಮಗುವಿಗೆ 4,000 ಜೀವನಾಂಶ ನೀಡಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ