ಬೆಂಗಳೂರು: ಕೆಂಪೇಗೌಡ ಲೇಔಟಲ್ಲಿ ಉಕ್ಕುತ್ತಿದೆ ಅಂತರ್ಜಲ!

By Kannadaprabha NewsFirst Published Jan 24, 2024, 7:02 AM IST
Highlights

ನಾಡಪ್ರಭು ಕೆಂಪೇಗೌಡ ಬಡಾವಣೆಯ ಬ್ಲಾಕ್ 1 ಎಲ್ ಸೆಕ್ಟರ್, ಬ್ಲಾಕ್ 2 ಎ, ಬಿ, ಎಚ್ ಸೆಕ್ಟರ್‌ಗಳ ನಿವೇಶನಗಳಲ್ಲಿ ಕನ್ನಳ್ಳಿ, ಸೂಲಿಕೆರೆಯ ಕೆರೆಯಿಂದ ಬಸಿದ ನೀರು ಸ್ವಾಭಾವಿಕವಾಗಿ ಉಕ್ಕಿ ಹರಿಯುತ್ತಿದ್ದು, 700ಕ್ಕೂ ಹೆಚ್ಚು ನಿವೇಶನದಾರರು ಮನೆ, ಕಟ್ಟದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಸಂಪತ್‌ ತರೀಕೆರೆ

ಬೆಂಗಳೂರು (ಜ.24) : ನಾಡಪ್ರಭು ಕೆಂಪೇಗೌಡ ಬಡಾವಣೆಯ ಬ್ಲಾಕ್ 1 ಎಲ್ ಸೆಕ್ಟರ್, ಬ್ಲಾಕ್ 2 ಎ, ಬಿ, ಎಚ್ ಸೆಕ್ಟರ್‌ಗಳ ನಿವೇಶನಗಳಲ್ಲಿ ಕನ್ನಳ್ಳಿ, ಸೂಲಿಕೆರೆಯ ಕೆರೆಯಿಂದ ಬಸಿದ ನೀರು ಸ್ವಾಭಾವಿಕವಾಗಿ ಉಕ್ಕಿ ಹರಿಯುತ್ತಿದ್ದು, 700ಕ್ಕೂ ಹೆಚ್ಚು ನಿವೇಶನದಾರರು ಮನೆ, ಕಟ್ಟದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಕನ್ನಳ್ಳಿ ಕೆರೆ, ಸೂಲಿಕೆರೆಯ ಹಿರೀಕೆರೆ ಪ್ರದೇಶದಲ್ಲಿ ನಿವೇಶನ ಪಡೆದುಕೊಂಡವರಿಗೆ ಈ ಸಮಸ್ಯೆ ಎದುರಾಗಿದೆ. ಬಡಾವಣೆಯ ಕನ್ನಳ್ಳಿಯ 40 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಲೇಔಟ್‌ನ ನಿವೇಶನಗಳಲ್ಲಿ ನೀರು ಉಕ್ಕುತ್ತಿರುವುದು ನಿಂತಿಲ್ಲ. ಹೀಗಾಗಿ ಬಡಾವಣೆಯ ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲಿ ತೀರಾ ಸಡಿಲವಾದ ಮಣ್ಣಿದೆ. ನಿವೇಶನಗಳಲ್ಲಿ 4 ಅಡಿ ಮಣ್ಣು ತೆಗೆದರೂ ನೀರು ಬರುತ್ತಿದೆ. ಇದು ಇಲ್ಲಿನ ನಿವೇಶನದಾರರಿಗೆ ತಲೆನೋವಾಗಿ ಪರಿಣಮಿಸಿದ್ದು, ಮೂಲಸೌಕರ್ಯ ಕಾಮಗಾರಿ ನಡೆಸುತ್ತಿರುವ ಬಿಡಿಎಗೂ ನುಂಗಲಾರದ ತುಪ್ಪವಾಗಿದೆ.

ಲಾಲ್‌ಬಾಗ್‌ ಫ್ಲವರ್‌ಶೋಗೆ ಜನರೇ ಬರುತ್ತಿಲ್ಲ; ಆಯೋಜಕರಿಗೆ ನಿರಾಸೆ!

ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಬಿಡಿಎ ಎಂಜಿನಿಯರಿಂಗ್ ತಂಡವು ಆಸ್ಟ್ರೇಲಿಯಾದ ಖಾಸಗಿ ಕಂಪನಿಯೊಂದರಿಂದ ಶೀಟ್ ಮೆಟಲಿಂಗ್ ತಂತ್ರಜ್ಞಾನದ ಮಾದರಿಯ ಮಾಹಿತಿ ಪಡೆದುಕೊಂಡಿತ್ತು. ಈ ತಂತ್ರಜ್ಞಾನದ ಮೂಲಕ 2 ಕೆರೆಗಳ ಏರಿಗೆ ಸಮಾನವಾಗಿ 10 ಮೀಟರ್ ಆಳ ಹಾಳ ತೆಗೆದು ಹೊಸ ತಂತ್ರಜ್ಞಾನದ ಗೋಡೆಯನ್ನು ನಿರ್ಮಿಸಲು ಚಿಂತಿಸಲಾಗಿತ್ತು. ಅದರ ಭಾಗವಾಗಿ ಸಂಬಂಧಿಸಿದ ಪ್ರಸ್ತಾವನೆ ಐಐಎಸ್‌ಸಿಯಿಂದ ವರದಿ ತೆಗೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಈವರೆಗೂ ಯಾವುದೇ ಪ್ರಗತಿ ಕಂಡುಬಂದಿಲ್ಲ.

ಬದಲಿ ನಿವೇಶನವೂ ಇಲ್ಲ:

ಬಡಾವಣೆಯ ಕನ್ನಳ್ಳಿ ಕೆರೆ ಮತ್ತು ಹಿರೀಕೆರೆಯ ನೀರು ಬಸಿದು ಬಡಾವಣೆಯ ಬ್ಲಾಕ್ 1 ಎಲ್ ಸೆಕ್ಟರ್, ಬ್ಲಾಕ್ 2 ಎ, ಬಿ, ಎಚ್ ಸೆಕ್ಟರ್‌ಗಳಲ್ಲಿ ನೀರು ಉಕ್ಕುತ್ತಿರುವುದು 2017ರಲ್ಲೇ ಬಿಡಿಎ ಗಮನಕ್ಕೆ ಎನ್‌ಪಿಕೆಎಲ್‌ ಮುಕ್ತವೇದಿಕೆ ಗಮನಕ್ಕೆ ತಂದಿತ್ತು. ಹೀಗಾಗಿ 700ಕ್ಕೂ ಹೆಚ್ಚು ನಿವೇಶನದಾರರಿಗೆ ಬಡಾವಣೆಯ ಇತರೆಡೆ ನಿವೇಶನ ಮರು ಹಂಚಿಕೆ ಮಾಡುವ ಕುರಿತು 2021ರಲ್ಲಿ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಈವರೆಗೆ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗದಿರುವುದು ಬಡಾವಣೆಯ ನಿವೇಶನದಾರರಲ್ಲಿ ಆತಂಕ ಮೂಡಿಸಿದೆ.

ದಂಡ ತಪ್ಪಿಸಿಕೊಳ್ಳಲು ಅಧಿಕಾರಿಗಳ ಸರ್ಕಸ್‌?

ಕೆರೆ ಪ್ರದೇಶದಲ್ಲಿ ನಿವೇಶನ ನಿರ್ಮಾಣ, ಚರಂಡಿ, ಯುಟಿಲಿಟಿ ಚಾನಲ್, ವಿದ್ಯುತ್‌ ಕಂಬಗಳು ಸೇರಿದಂತೆ ಇತರೆ ಮೂಲಸೌಕರ್ಯ ಒದಗಿಸಲು ಬಿಡಿಎ ಅಂದಾಜು ₹60 ಕೋಟಿಗೂ ಹೆಚ್ಚು ವೆಚ್ಚ ಮಾಡಿದೆ. ಒಂದು ವೇಳೆ ಬಡಾವಣೆಯ ಬ್ಲಾಕ್ 1 ಎಲ್ ಸೆಕ್ಟರ್, ಬ್ಲಾಕ್ 2 ಎ, ಬಿ, ಎಚ್ ಸೆಕ್ಟರ್‌ ನಿವೇಶನದಾರರಿಗೆ ಬದಲಿ ನಿವೇಶನ ಕೊಡಬೇಕಾದ ಪರಿಸ್ಥಿತಿ ಎದುರಾದರೆ, ಮುಂದಾಲೋಚನೆ ಇಲ್ಲದೇ ಅನಾವಶ್ಯಕವಾಗಿ ಖರ್ಚು ಮಾಡಿದ ಕೋಟ್ಯಂತರ ರುಪಾಯಿ ಹಣದ ಹೊರೆಯನ್ನು ಕೆಲ ಹಿರಿಯ ಅಧಿಕಾರಿಗಳು, ಎಂಜಿನಿಯರ್‌ಗಳು ಹೊರಬೇಕಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದಲೇ ಸಂತ್ರಸ್ತರಿಗೆ ಬದಲಿ ನಿವೇಶನ ಕೊಡುವ ನಿರ್ಧಾರ ಕೈಬಿಡಲಾಗಿದೆ ಎಂಬ ಆರೋಪವೂ ಇದೆ.

ಉದ್ಯಾನದ ಯೋಜನೆಯೂ ಇಲ್ಲ?

ಬಿಡಿಎ 2016ರಲ್ಲಿ ನಾಡಪ್ರಭು ಕಂಪೇಗೌಡ ಬಡಾವಣೆಯ ಕನಹಳ್ಳಿ ಬಳಿಯ ಎರಡು ಕೆರೆಗಳ ನಡುವೆ 40 ಎಕರೆ ಜಾಗದಲ್ಲಿ ಬ್ಲಾಕ್-1 ಎಲ್ ಸೆಕ್ಟರ್, ಬ್ಲಾಕ್-2 ಎಬಿ ಸೆಕ್ಟರ್ ಹಾಗೂ ಎಚ್ ಸೆಕ್ಟರ್ ಎಂದು ವಿಂಗಡಣೆ ಮಾಡಿ ವಸತಿ ಪ್ರದೇಶ ನಿರ್ಮಿಸಿದೆ. ಅದೇ ವರ್ಷ ಸಾವಿರ ನಿವೇಶನ ನಿರ್ಮಿಸಿ ಹಂಚಿಕೆಯೂ ಮಾಡಿದೆ. ಬಡಾವಣೆ ನಿರ್ಮಾಣಗೊಂಡ ವರ್ಷದಲ್ಲಿ ಮಳೆ ಪ್ರಮಾಣ ಕಡಿಮೆ ಇದ್ದ ಕಾರಣ, ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. 2017-18ರಲ್ಲಿ ಅತಿಯಾಗಿ ಮಳೆಯಾದ ಬಳಿಕ ಕೆರೆ ನೀರು ಹೆಚ್ಚಾಗಿ ಉಕ್ಕಲು ಆರಂಭಿಸಿತ್ತು. 2020ರಲ್ಲಿ ಈ ಸಮಸ್ಯೆಯನ್ನು ಅಂದಿನ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್ ಗಮನಕ್ಕೆ ತರಲಾಗಿತ್ತು ಎಂದು ನಿವೇಶನದಾರ ಸೂರ್ಯಕಿರಣ್‌ ತಿಳಿಸಿದರು.

ಬೆಂಗಳೂರು: 5 ಜನ ವಾಹನ ಕಳ್ಳರ ಸೆರೆ: ₹55 ಲಕ್ಷ ಮೌಲ್ಯದ 51 ಬೈಕ್‌ ಜಪ್ತಿ!

ವಿಧಾನಸಭಾ ಅರ್ಜಿ ಸಮಿತಿ ಬಡಾವಣೆಗೆ ಭೇಟಿ ಕೊಟ್ಟಾಗ ಸಮಸ್ಯೆ ನಿವಾರಣೆಗೆ ತ್ವರಿತವಾಗಿ ಕಾಮಗಾರಿ ಪ್ರಾರಂಭಿಸುವ ಆಶ್ವಾಸನೆ ಕೊಟ್ಟು 2 ವರ್ಷ ಕಳೆದಿದೆ. ಸಮಸ್ಯೆ ಇತ್ಯರ್ಥವಾಗಿಲ್ಲ. ಮೂಲಸೌಕರ್ಯ ಕಾಮಗಾರಿ ಕೈಗೊಳ್ಳಲು ಸಹ ಸಾಧ್ಯವಾಗ ಸ್ಥಿತಿ ಇದೆ. ಇನ್ನು ಮನೆ, ಕಟ್ಟಡ ಕಟ್ಟಿಕೊಳ್ಳಲು ಹೇಗೆ ಸಾಧ್ಯ?

-ಎಂ.ಅಶೋಕ್‌, ಕಾರ್ಯದರ್ಶಿ, ಎನ್‌ಪಿಕೆಎಲ್‌.

click me!