ಲಾಲ್‌ಬಾಗ್‌ ಫ್ಲವರ್‌ಶೋಗೆ ವೀಕ್ಷಕರ ಕೊರತೆ

By Kannadaprabha NewsFirst Published Jan 24, 2024, 6:36 AM IST
Highlights

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಿರುವ 215ನೇ ಫಲಪುಷ್ಪ ಪ್ರದರ್ಶನದಲ್ಲಿ ವೀಕ್ಷಕರ ಕೊರತೆ ಕಂಡು ಬಂದಿದ್ದು, ಆಯೋಜಕರಿಗೆ ನಿರಾಸೆಯುಂಟು ಮಾಡಿದೆ.

ಬೆಂಗಳೂರು (ಜ.24) : ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಿರುವ ‘ಬಸವಣ್ಣ ಮತ್ತು ವಚನ ಸಾಹಿತ್ಯ ವಿಷಯಾಧಾರಿತ’ 215ನೇ ಫಲಪುಷ್ಪ ಪ್ರದರ್ಶನದಲ್ಲಿ ವೀಕ್ಷಕರ ಕೊರತೆ ಕಂಡು ಬಂದಿದ್ದು, ಆಯೋಜಕರಿಗೆ ನಿರಾಸೆಯುಂಟು ಮಾಡಿದೆ.

ಈ ಬಾರಿಯ ಕಾಯಕಯೋಗಿ ಬಸವಣ್ಣ ಮತ್ತು ವಚನ ಸಾಹಿತ್ಯ ವಿಷಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ನಿರೀಕ್ಷೆಗೂ ಮೀರಿ ಜನರು ಬರಬಹುದೆಂದು ಅಂದಾಜಿಸಲಾಗಿತ್ತು. ವಾರಾಂತ್ಯವಾದ ಶನಿವಾರ ಮತ್ತು ಭಾನುವಾರ ದಿನಕ್ಕೆ 42ರಿಂದ 43 ಸಾವಿರ ಮಂದಿ ವೀಕ್ಷಕರು ಆಗಮಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಶನಿವಾರ 29,100 ಮತ್ತು ಭಾನುವಾರ 34,200 ವೀಕ್ಷಕರು ಮಾತ್ರ ಫುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ್ದು ಹೊರತುಪಡಿಸಿ ಉಳಿದ ದಿನಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಬಾರದಿರುವುದು ಇಲಾಖೆ ಅಧಿಕಾರಿಗಳ ಬೇಸರಕ್ಕೆ ಕಾರಣವಾಗಿದೆ.

ಲಾಲ್‌ಬಾಗ್‌ನಲ್ಲಿ ಆಕರ್ಷಿಸುತ್ತಿದೆ ‘ವಿಶ್ವಗುರು ಬಸವಣ್ಣ’ ಫಲಪುಷ್ಪ ಪ್ರದರ್ಶನ: ಶಾಲಾ ಮಕ್ಕಳಿಗೆ ಉಚಿತ ಪ್ರವೇಶ!

ತೋಟಗಾರಿಕೆ ಇಲಾಖೆ ಅಧಿಕಾರಿಗಳ ನಿರೀಕ್ಷೆಯಂತೆ ಜ. 18ರಿಂದ 28ರವರೆಗೆ ಹನ್ನೊಂದು ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಬರೋಬ್ಬರಿ 10ರಿಂದ 11 ಲಕ್ಷ ವೀಕ್ಷಕರು ಆಗಮಿಸುತ್ತಾರೆಂದು ನಿರೀಕ್ಷಿಸಲಾಗಿದೆ ಈಗಾಗಲೇ ಆರು ದಿನಗಳು ಪೂರ್ಣಗೊಂಡಿದ್ದು ಈವರೆಗೆ 1.17 ಲಕ್ಷ ಜನರು ಲಾಲ್‌ಬಾಗ್‌ಗೆ ಭೇಟಿ ಕೊಟ್ಟಿದ್ದಾರೆ. ಈ ಮೂಲಕ ಟಿಕೆಟ್ ಶುಲ್ಕ 68.54 ಲಕ್ಷ ರು. ಸಂಗ್ರಹವಾಗಿದೆ. ಇನ್ನೂ ಫಲಪುಷ್ಪ ಪ್ರದರ್ಶನ ಐದು ದಿನ ನಡೆಯಲಿದ್ದು, ಜ.28ರಂದು ಸಂಜೆ 6.30ಕ್ಕೆ ಮುಕ್ತಾಯವಾಗಲಿದೆ. ಜ.26ರಂದು ಗಣರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ರಜೆ ಮತ್ತು ವಿಕೆಂಡ್‌ನಲ್ಲಿ ಎರಡು ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಬರುವ ನಿರೀಕ್ಷೆಯಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಆಶಾಭಾವ ವ್ಯಕ್ತಪಡಿಸಿದ್ದಾರೆ.

2022 ಆಗಸ್ಟ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌ ಸ್ಮರಣಾರ್ಥ ನಡೆದಿದ್ದ 212ನೇ ಫಲಪುಷ್ಪ ಪ್ರದರ್ಶನಕ್ಕೆ ಬಂದವರ ಸಂಖ್ಯೆ 9.5 ಲಕ್ಷವಿದ್ದು, ಮೊದಲ ಸ್ಥಾನದಲ್ಲಿದೆ. ಅಂದು ₹3.15 ಕೋಟಿ ಸಂಗ್ರಹಿಸಲಾಗಿತ್ತು. ಈ ಬಾರಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ವೇಳೆ 11 ದಿನಗಳಲ್ಲಿ 8.26 ಲಕ್ಷ ಜನರು ಆಗಮಿಸಿದ್ದು, 2ನೇ ಸ್ಥಾನದಲ್ಲಿದೆ. ಆದರೆ, ಅತ್ಯಧಿಕ ಮೊತ್ತ ಗಳಿಸಿದ ಪ್ರದರ್ಶನದಲ್ಲಿ ಮೊದಲ ಸ್ಥಾನದಲ್ಲಿದ್ದು, 3.98 ಕೋಟಿ ರು. ಆದಾಯ ಗಳಿಸಿತ್ತು.

Lalbagh Flower Show 2024: ಲಾಲ್‌ಬಾಗ್‌ ಫಲಪುಷ್ಪಗಳಲ್ಲಿ ಅರಳಲಿದ್ದಾರೆ ವಿಶ್ವಗುರು ಬಸವಣ್ಣ!

ತಾಜಾ ಪುಷ್ಪದ ಆಕರ್ಷಣೆ

ಫಲಪುಷ್ಪ ಪ್ರದರ್ಶನ ಆರಂಭಗೊಂಡು ಆರು ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅನುಭವ ಮಂಟಪ ಸೇರಿದಂತೆ ಇತರೆ ಪುಷ್ಪಮಾದರಿಗಳಿಗೆ ಅಳವಡಿಸಲಾದ ಹೂವುಗಳು ಕಳೆಗುಂದಿದ್ದು, ಬಾಡಿ ಹೋಗುವ ಸ್ಥಿತಿಗೆ ತಲುಪಿದ್ದವು. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ 6.30ರಿಂದ ಅಹೋರಾತ್ರಿ ಸುಮಾರು 180 ಸಿಬ್ಬಂದಿ ಅನುಭವ ಮಂಟಪಕ್ಕೆ ಸುಮಾರು ವಿವಿಧ ತಳಿಯ10 ಲಕ್ಷಕ್ಕೂ ಹೆಚ್ಚು ತಾಜಾ ಹೂವುಗಳಿಂದ ಅನುಭವ ಮಂಟಪವನ್ನು ಶೃಂಗರಿಸಿದ್ದು ಬುಧವಾರದಿಂದ ಪುಷ್ಪ ಪ್ರದರ್ಶನ ಇನ್ನಷ್ಟು ಮೆರುಗಿನಿಂದ ವೀಕ್ಷಕರನ್ನು ಸೆಳೆಯಲಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ (ಪಾರ್ಕ್ಸ್‌ ಆ್ಯಂಡ್‌ ಗಾರ್ಡನ್ಸ್‌) ಡಾ.ಎಂ.ಜಗದೀಶ್‌ ಅವರು ಕನ್ನಡಪ್ರಭಕ್ಕೆ ತಿಳಿಸಿದರು.

click me!