ಉಡುಪಿಯ ದೇವಸ್ಥಾನದ ಹುಂಡಿಯಲ್ಲಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಆದರೆ ಸಾಕು ಎಂದು ಚೀಟಿ ಹಾಕಿದ್ದಾನೆ. ಆತ ತನಗೆ ಬೇಕಾದ ವಿಷಯವಾರು ಅಂಕಗಳನ್ನು ಸಹ ಉಲ್ಲೇಖಿಸಿದ್ದಾನೆ. ಈ ಚೀಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಡುಪಿ (ಮಾ.26): ಇಲ್ಲೊಬ್ಬ ವಿದ್ಯಾರ್ಥಿ ದೇವರೇ ನಾನು ಪರೀಕ್ಷೆಯಲ್ಲಿ ಜಸ್ಟ್ ಪಾಸಾದರೆ ಸಾಕು. ನಾನು ಹೇಳಿದ ಅಂಕಗಳು ಬಂದರೆ ಸಾಕಪ್ಪಾ ದೇವರೇ ಎಂದು ದೇವಸ್ಥಾನದ ಹುಂಡಿಗೆ ಚೀಟಿಯನ್ನು ಬರೆದು ಹಾಕಿರುವುದು ಪತ್ತೆಯಾಗಿದೆ. ಆದರೆ, ವಿದ್ಯಾರ್ಥಿ ತನ್ನ ಹೆಸರು, ಲಿಂಗ ಹಾಗೂ ಎಷ್ಟನೇ ತರಗತಿ ಎಂದು ಉಲ್ಲೇಖ ಮಾಡಿಲ್ಲ. ಆದರೆ, ಇದೀಗ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿರುವ ಕಾರಣ ಹಾಗೂ ಕೇವಲ ಜಸ್ಟ್ ಪಾಸ್ ಮಾಡುವಂತೆ ಕೇಳಿದ್ದರಿಂದ ಆತ ಬಾಲಕ ಇರಬೇಕು ಎಂದು ಹೇಳಲಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರದ ಹೊಳಮಗ್ಗಿ ಹೊರಬೊಬ್ವರ್ಯ ದೇವಸ್ಥಾನದ ಕಾಣಿಕೆಹುಂಡಿಯಲ್ಲಿ ವಿಚಿತ್ರ ಬೇಡಿಕೆಯ ಮತ್ರವು ಲಭ್ಯವಾಗಿದೆ. ಇದರಲ್ಲಿ ವಿದ್ಯಾರ್ಥಿ ಕೇವಲ ಪಾಸಾಗುವಷ್ಟು ಮಾತ್ರ ಅಂಕ ಕೇಳಿ ಕಾಪಾಡು ದೇವರೇ ಎಂದು ಬರೆದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ತಮಾಷೆಯಾಗಿ ಇದನ್ನು ನೋಡುತ್ತಿದ್ದಾರೆ. ಇನ್ನು ಕೆಲವರು ಇವನ್ಯಾರೋ ಅಲ್ಪತೃಪ್ತ, ವರ ಕೊಡೋ ದೇವರ ಹತ್ತಿರ ಫಸ್ಟ್ ರ್ಯಾಂಕ್ ಕೇಳೋದು ಬಿಟ್ಟು ಜಸ್ಟ್ ಪಾಸ್ ಬೇಡಿಕೆ ಇಟ್ಟಿದ್ದಾನಲ್ಲ ಎಂದು ಕಾಲೆಳೆದಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಈ ಕುರಿತ ಫೋಟೋವನ್ನು Sadashiva Shetty Kattbelthur ಅವರು ಎನ್ನುವವರು ಶೇರ್ ಮಾಡಿಕೊಂಡಿದ್ದು, Namma Kundapura ಹೆಸರಿನ ಫೇಸ್‌ಬುಕ್ ಪೇಜ್‌ಗೂ ಟ್ಯಾಗ್ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಯು ದೇವರೊಗೆ ಬೇಡಿಕೆ ಇಟ್ಟಿರುವ ಚೀಟಿಯ ಫೋಟೋ ಭಾರೀ ವೈರಲ್ ಆಗಿದೆ. ಸಾವಿರಾರು ಜನರು ವೀಕ್ಷಣೆ ಮಾಡಿದ್ದು, 520ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 100ಕ್ಕೂ ಅಧಿಕ ಶೇರ್ ಆಗಿದೆ.
ಇದನ್ನೂ ಓದಿ: ಹಣ ತೊಗೊಂಡು ದೇವಾಲಯ ಶಿಫ್ಟ್ ಮಾಡ್ಕೊಳ್ಳಿ; 130 ವರ್ಷ ಹಳೆ ದೇವಸ್ಥಾನ ಜಾಗದಲ್ಲಿ ಮಸೀದಿ ಶಂಕುಸ್ಥಾಪನೆ!
ಪರೀಕ್ಷೆಯಲ್ಲಿ ನನಗೆ ಇಷ್ಟು ಅಂಕ ಇರಬೇಕು, ದೇವರೇ ಹೊರಬೊಬ್ಬರ್ಯ
ಗಣಿತ -39, 38, 37, 36
ಇಂಗ್ಲಿಷ್- 39, 38, 37
ಕನ್ನಡ 40, 39
ವಿಜ್ಞಾನ -39, 38
ಹಿಂದಿ -40,39
ಸಮಾಜ- 38, 37
ದೇವರೇ ಇದಕ್ಕಿಂತಲೂ ನನಗೆ ಕಡಿಮೆ ಅಂಕ ಬೇಡ. ಪರೀಕ್ಷೆಯಲ್ಲಿ ನನಗೆ ಇಷ್ಟು ಮಾರ್ಕ್ ಇರಬೇಕು ಎಂದು ಚೀಟಿಯಲ್ಲಿ ಬರೆದಿದ್ದಾರೆ.