ರಾಜ್ಯದಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಶುಕ್ರವಾರ ಕೂಡ ಧಾರವಾಡ, ಗದಗ, ದಾವಣಗೆರೆ, ಹಾವೇರಿ, ಕೊಪ್ಪಳ, ಚಾಮರಾಜನಗರ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿದ್ದಾನೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.
ಬೆಂಗಳೂರು (ಅ.15): ರಾಜ್ಯದಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಶುಕ್ರವಾರ ಕೂಡ ಧಾರವಾಡ, ಗದಗ, ದಾವಣಗೆರೆ, ಹಾವೇರಿ, ಕೊಪ್ಪಳ, ಚಾಮರಾಜನಗರ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿದ್ದಾನೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಮಳೆ ಸಂಬಂಧಿ ಅನಾಹುತಕ್ಕೆ ಇಬ್ಬರು ಬಲಿಯಾಗಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಚಿಕ್ಕಗಂಗೂರಲ್ಲಿ, ರಾಜಪ್ಪ(52) ಎಂಬಾತ ಹಿರೇಹಳ್ಳದಲ್ಲಿ ಕೊಚ್ಚಿಹೋಗಿದ್ದಾನೆ.
ಮತ್ತೊಂದೆಡೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ತುಂಗೋಟಿ ಗ್ರಾಮದಲ್ಲಿ ಮನೆಯ ಬಂಡೆ ಕುಸಿದು ಚೌಡಮ್ಮ (70) ಎಂಬುವವರು ಮೃತಪಟ್ಟಿದ್ದಾರೆ. ಗದಗ ನಗರದ ನರಿಬಾವಿ ಓಣಿಯಲ್ಲಿ ಶಿಥಿಲಗೊಂಡ ಮನೆ ಗೋಡೆ ಕುಸಿದಿದ್ದು, ಮನೆಯಲ್ಲಿ ಮಲಗಿದ್ದ 6 ಜನ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಪ್ಪಳ ತಾಲೂಕಿನ ಹನುಮನಳ್ಳಿ ಗ್ರಾಮದ ಬಳಿ ಖಾಸಗಿ ವ್ಯಕ್ತಿ ತಮ್ಮ ಹೊಲದಲ್ಲಿ ನಿರ್ಮಾಣ ಮಾಡಿಕೊಂಡಿದ್ದ ಚೆಕ್‌ಡ್ಯಾಂ ಒಡೆದು, ಹೊಲಗಳಿಗೆ ನೀರು ನುಗ್ಗಿದ್ದು, ನೂರಾರು ಎಕರೆ ಪ್ರದೇಶದಲ್ಲಿನ ಬೆಳೆ ನಾಶವಾಗಿದೆ.
ಮುಂಗಾರು ಬೆಳೆನಷ್ಟ, ಕೈ ಹಿಡಿಯುವುದೇ ಹಿಂಗಾರು..!
ಬಸ್ ಡಿಪೋ ಮತ್ತೆ ಜಲಾವೃತ: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸಾರಿಗೆ ಬಸ್ ನಿಲ್ದಾಣ ಮತ್ತು ಬಸ್ ಡಿಫೋ ಮತ್ತೆ ಜಲಾವೃತಗೊಂಡಿವೆ. ಪರಿಣಾಮ ಸಾರಿಗೆ ಸಿಬ್ಬಂದಿ ಕೆರೆಯಂತಾಗಿರುವ ನೀರಿನಲ್ಲಿಯೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಕಳೆದ ಮೂರ್ನಾಲ್ಕು ತಿಂಗಳಲ್ಲಿ ಸಾರಿಗೆ ಡಿಫೋ ಮತ್ತು ಬಸ್ ನಿಲ್ದಾಣ ಮೂರನೇ ಬಾರಿಗೆ ಜಲಾವೃತಗೊಂಡಿದೆ. ಕಂದಾಯ ಸಚಿವ ಆರ್.ಅಶೋಕ್ ಅವರೇ ಖುದ್ದು ಎರಡು ಬಾರಿ ಸ್ಥಳಪರಿಶೀಲನೆ ನಡೆಸಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ರಾಡಿಯಾದ ಜಿಲ್ಲಾ ಕೇಂದ್ರ: ಚಾಮರಾಜನಗರ ಜಿಲ್ಲೆಯಾದ್ಯಂತ ಕೂಡ ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಕೆರೆ ಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ಇದರಿಂದಾಗಿ ಜಿಲ್ಲಾ ಕೇಂದ್ರದ ಜೋಡಿ ರಸ್ತೆ ಮಾಮೂಲಿಯಂತೆ ಹೊಳೆಯಂತಾಗಿ ವಾಹನ ಸವಾರರು ಪರದಾಡುವಂತಾಯಿತು. ನಗರದಲ್ಲಿ ಮಳೆನೀರಿನಿಂದ ಸುಮಾರು 100ಕ್ಕೂ ಹೆಚ್ವು ಮನೆಗಳು ಜಲಾವೃತವಾಗಿದ್ದು, ಅಪಾರ ಹಾನಿ ಸಂಭವಿಸಿದೆ.
ಮನೆಯಲ್ಲಿದ್ದ 6 ಜನ ಪ್ರಾಣಪಯದಿಂದ ಪಾರು: ಗದಗ ಜಿಲ್ಲೆಯ ಮುಂಡರಗಿ, ಲಕ್ಷ್ಮೇಶ್ವರ, ಶಿರಹಟ್ಟಿ, ಗಜೇಂದ್ರಗಡ, ಗದಗ ತಾಲೂಕಿನಾದ್ಯಂತ ಗುರುವಾರ ತಡರಾತ್ರಿಯ ವರೆಗೆ ಮಳೆ ಜಿನುಗಿದ್ದು, ಶುಕ್ರವಾರ ಬೆಳಗ್ಗೆಯೂ ಜಿಲ್ಲಾದ್ಯಂತ ಧಾರಾಕಾರ ಮಳೆ ಸುರಿದಿದೆ. ಗದಗ ನಗರದ ನರಿಬಾವಿ ಓಣಿಯಲ್ಲಿ ಶಿಥಿಲಗೊಂಡ ಮನೆ ಗೋಡೆ ಕುಸಿದು, ಮನೆಯಲ್ಲಿ ಮಲಗಿದ್ದ 6 ಜನ ಪ್ರಾಣಾಪಾಯದಿಂದ ಪಾರಾದ ಘಟನೆ ಗುರುವಾರ ಮಧ್ಯರಾತ್ರಿ 12.30ರ ಸುಮಾರಿಗೆ ನಡೆದಿದೆ. ಕಾಶಪ್ಪ ಬರಡಿ ಎಂಬವರಿಗೆ ಸೇರಿದ ಮನೆಯಾಗಿದ್ದು, ಮನೆಗೋಡೆ ಕುಸಿತದಿಂದ ಆತಂಕಗೊಂಡ ಕುಟುಂಬಸ್ಥರು ರಾತ್ರಿಯೆ ಬೇರೆ ಮನೆಗೆ ತೆರಳಿದರು.
ಮಳೆಯಿಂದ ಬೆಳೆಗೆ ಕುತ್ತು, ರೈತರಿಗೆ ಆಪತ್ತು..!
ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಬೆಳಗ್ಗೆ ದಟ್ಟವಾದ ಮಂಜು ಮುಸುಕಿದ್ದು, ಆಗಾಗ್ಗೆ ತುಂತುರು ಮಳೆಯಾಗಿದ್ದು, ಸಂಜೆ ಹೊತ್ತಿಗೆ ತಾಲೂಕಿನ ಗೊಜನೂರು, ಯಳವತ್ತಿ, ಅಕ್ಕಿಗುಂದ, ಕುಂದ್ರಳ್ಳಿ ಗ್ರಾಮಗಳಲ್ಲಿ ರಭಸದ ಮಳೆ ಸುರಿದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಗದಗ ತಾಲೂಕಿನಾದ್ಯಂತ ಮುಳಗುಂದ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೆಳಗಿನ ಜಾವ ಬಿರು ಬಿಸಲಿನ ವಾತಾವರಣವಿದ್ದು, ಮಧ್ಯಾಹ್ನದ ವೇಳೆಗೆ ಕೆಲಕಾಲ ಉತ್ತಮ ಮಳೆ ಸುರಿದಿದೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತವಾರಣ ಮುಂದುವರೆದಿದೆ.