ಬೆಂಗಳೂರು: ತುರಹಳ್ಳಿ ಅರಣ್ಯ ಪಕ್ಕದ ಬಿಡಿಎ ಸೈಟ್‌ಗಳಿಗೆ ಕಂಟಕ

Published : Apr 17, 2023, 11:23 AM IST
ಬೆಂಗಳೂರು: ತುರಹಳ್ಳಿ ಅರಣ್ಯ ಪಕ್ಕದ ಬಿಡಿಎ ಸೈಟ್‌ಗಳಿಗೆ ಕಂಟಕ

ಸಾರಾಂಶ

: ಬನಶಂಕರಿ 6ನೇ ಹಂತದಲ್ಲಿ ಬಿಡಿಎದಿಂದ ನಿವೇಶನ ಪಡೆದಿದ್ದ 800ಕ್ಕೂ ಹೆಚ್ಚು ನಿವೇಶನಗಳ ಮಾಲಿಕರಿಗೆ ಸಂಕಷ್ಟಎದುರಾಗಿದ್ದು, ಮನೆ, ನಿವೇಶನಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಆತಂಕ ವ್ಯಕ್ತಪಡಿಸಿದೆ.

ಬೆಂಗಳೂರು (ಏ.17) : ಬನಶಂಕರಿ 6ನೇ ಹಂತದಲ್ಲಿ ಬಿಡಿಎದಿಂದ ನಿವೇಶನ ಪಡೆದಿದ್ದ 800ಕ್ಕೂ ಹೆಚ್ಚು ನಿವೇಶನಗಳ ಮಾಲಿಕರಿಗೆ ಸಂಕಷ್ಟಎದುರಾಗಿದ್ದು, ಮನೆ, ನಿವೇಶನಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಆತಂಕ ವ್ಯಕ್ತಪಡಿಸಿದೆ.

ಎರಡು ದಶಕಗಳ ಹಿಂದೆ ಬನಶಂಕರಿ 6ನೇ ಹಂತದ ಬಡಾವಣೆಯಲ್ಲಿ 1ರಿಂದ 14ರವರೆಗೆ ಬ್ಲಾಕ್‌ಗಳನ್ನು ನಿರ್ಮಾಣ ಮಾಡಿ 26ರಿಂದ 30 ಸಾವಿರ ನಿವೇಶನಗಳನ್ನು ಬಿಡಿಎ ಹಂಚಿಕೆ ಮಾಡಿತ್ತು. ಈ ಪೈಕಿ 2003-04ರ ಅವಧಿಯಲ್ಲಿ ಹಂಚಿಕೆ ಮಾಡಲಾಗಿದ್ದ 2006 ನಿವೇಶನಗಳು ತುರಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಬರುತ್ತಿವೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ನಿವೇಶನದ ಮಾಲಿಕರಿಗೆ ಮನೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ. ಹೀಗಾಗಿ 3, 5, 4 ಬಿ ಬ್ಲಾಕ್‌ ಹಾಗೂ 4ಎಚ್‌ ಬ್ಲಾಕ್‌ನ ನೂರಾರು ನಿವೇಶನದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ಬೆಂಗ್ಳೂರಿನ ತುರಹಳ್ಳಿ ಅರಣ್ಯದಲ್ಲಿ ಕಾಡ್ಗಿಚ್ಚು: 20 ಎಕರೆ ಭಸ್ಮ

ಬನಶಂಕರಿ 6ನೇ ಹಂತ, 2ನೇ ಬ್ಲಾಕ್‌, 3ನೇ ಬ್ಲಾಕ್‌ ಪ್ರಾಧಿಕಾರದಿಂದ ನಿವೇಶನಗಳನ್ನು ಹಂಚಿಕೆ ಮಾಡಿ ಶುದ್ದ ಕ್ರಯ ಪತ್ರವನ್ನು ನಿವೇಶನದಾರರಿಗೆ ಬಿಡಿಎ ನೋಂದಾಯಿಸಿ ಕೊಟ್ಟಿದೆ. ಕೆಲವರು ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಇನ್ನು ಕೆಲವರು ಕಟ್ಟಡ ನಿರ್ಮಿಸಿಕೊಳ್ಳಲು ಆರಂಭಿಸಿದ್ದಾರೆ. ಆದರೆ, ಈ ನಡುವೆ ಅರಣ್ಯ ಇಲಾಖೆಯ ಸಿಬ್ಬಂದಿ ತುರಹಳ್ಳಿ ಅರಣ್ಯ ವ್ಯಾಪ್ತಿಯ ಬಫರ್‌ ಜೋನ್‌ನಲ್ಲಿ ಕಟ್ಟಡಗಳನ್ನು ನಿರ್ಮಿಸದಂತೆ ತಡೆಯೊಡ್ಡುತ್ತಿದ್ದಾರೆ. ಬಿಡಿಎ ನಮ್ಮ ಸಹಾಯಕ್ಕೆ ಬರುತ್ತಿಲ್ಲ ಎಂದು ನಿವೇಶನದಾರರು ಅತಂಕ ವ್ಯಕ್ತಪಡಿಸಿದ್ದಾರೆ.

ಬಿಡಿಎಯಿಂದ ನಿವೇಶನಗಳನ್ನು ಪಡೆದು ಎರಡು ದಶಕಗಳೇ ಕಳೆದಿವೆ. ಇಷ್ಟುವರ್ಷ ಸುಮ್ಮನಿದ್ದ ಅರಣ್ಯ ಇಲಾಖೆ ಈಗ ಇದು ಅರಣ್ಯ ಇಲಾಖೆಗೆ ಸೇರಬೇಕು ಎಂದು ಹೇಳುತ್ತಿದ್ದು, ಯಾರಿಗೂ ಕಟ್ಟಡ ಕಟ್ಟಿಕೊಳ್ಳಲು ಅವಕಾಶ ನೀಡುತ್ತಿಲ್ಲ. ಜೊತೆಗೆ ವೈಯಕ್ತಿಕವಾಗಿ ಯಾರಿಗೂ ನೋಟಿಸ್‌ ಜಾರಿ ಮಾಡಿಲ್ಲ. ಬಿಡಿಎಗೆ ನೋಟಿಸ್‌ ಕೊಟ್ಟಿದೆ ಎಂಬ ಮಾಹಿತಿ ಇದೆ. ಭೂಸ್ವಾಧೀನ ಪಡಿಸಿಕೊಂಡು ಲಕ್ಷಾಂತರ ರು.ಗಳಿಗೆ ನಿವೇಶನಗಳನ್ನು ಮಾರಾಟ ಮಾಡಿರುವ ಬಿಡಿಎ ನಿವೇಶನದಾರರ ಪರವಾಗಿ ಕ್ರಮಕೈಗೊಂಡು ನ್ಯಾಯ ಒದಗಿಸಬೇಕು ಎಂದು ಬನಶಂಕರಿ 6ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮೇನಾರಾಯಣ್‌ ಆಗ್ರಹಿಸಿದ್ದಾರೆ.

ಫರ್‌ ಜೋನ್‌ ನಮಗೆ ಕೊಡಿ: ಅರಣ್ಯ ಇಲಾಖೆ

1935ರ ಅಧಿಸೂಚನೆಯಂತೆ ಕೆಂಗೇರಿ ಹೋಬಳಿ, ಹೆಮ್ಮಿಗೆಪುರ ಗ್ರಾಮ ಮತ್ತು ಉತ್ತರಹಳ್ಳಿ ಹೋಬಳಿ, ಉತ್ತರಹಳ್ಳಿ ಮನವರ್ತೆ ಕಾವಲ್‌ ಮತ್ತು ತುರಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ ಪ್ರಾಧಿಕಾರವು ವಿವಿಧ ಅಳತೆಯ ನಿವೇಶನಗಳನ್ನು ರಚಿಸಿದ್ದು, ಈ ನಿವೇಶನಗಳು ಅರಣ್ಯ ಪ್ರದೇಶದ ಗಡಿಯ ಬಫರ್‌ ವಲಯದಲ್ಲಿ ಇವೆ. ಅರಣ್ಯದಿಂದ 100 ಮೀಟರ್‌ ಬಫರ್‌ ವಲಯಕ್ಕೆ ಬರುತ್ತದೆ. ಆದ್ದರಿಂದ ಯಾವುದೇ ಕಟ್ಟಡಗಳನ್ನು ನಿರ್ಮಿಸಬಾರದು. ಭೂಮಿಯನ್ನು ಅರಣ್ಯಕ್ಕೆ ಬಿಟ್ಟು ಕೊಡಬೇಕು ಎಂದು ಅರಣ್ಯ ಇಲಾಖೆ ಬಿಡಿಎಗೆ ನೋಟಿಸ್‌ ಮೂಲಕ ಸೂಚಿಸಿದೆ ಎನ್ನಲಾಗಿದೆ.

ತುರಹಳ್ಳಿ ಅರಣ್ಯಕ್ಕೆ ಮತ್ತೆ ಬೆಂಕಿ: 4 ಎಕರೆ ಆಹುತಿ

30 ಮೀಟರ್‌ ಬಫರ್‌ ವಲಯ ಪ್ರಸ್ತಾವನೆ?

ಅರಣ್ಯ ಇಲಾಖೆ ತಮ್ಮದೆನ್ನುತ್ತಿರುವ ಜಾಗದಲ್ಲಿ ಸುಮಾರು 1,157 ನಿವೇಶನದಾರರಿಗೆ ಭೂಮಿ ಹಂಚಿಕೆ ಮಾಡಲಾಗಿದೆ. ಕೆಲವರಿಗೆ ಬದಲಿ ನಿವೇಶನ ಕೊಡಲು ಸಾಧ್ಯವಿಲ್ಲ. ಈಗಾಗಲೇ ಕಟ್ಟಡಗಳನ್ನು ನಿರ್ಮಿಸಿ ಕೊಂಡಿರುವವರಿಗೆ ಪರಿಹಾರ ಒದಗಿಸುವುದು ಕಷ್ಟ. ಆದ್ದರಿಂದ ಅರಣ್ಯ ಇಲಾಖೆ 30 ಮೀಟರ್‌ ವ್ಯಾಪ್ತಿಯಲ್ಲಿ ಬಫರ್‌ ಜೋನನ್ನು ಗುರುತಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಮೂಲಕ ಹಲವು ನಿವೇಶನಗಳನ್ನು ಉಳಿಸಿಕೊಳ್ಳಬಹುದಾಗಿದೆ, ಇದಕ್ಕೆ ಅನುಮೋದನೆ ಸಿಕ್ಕಿದಲ್ಲಿ ಹಲವು ಮಂದಿಗೆ ಅನುಕೂಲ ಆಗಲಿದೆ. ಪ್ರಸ್ತುತ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣೆ ಮುಗಿದ ಬಳಿಕ ಈ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸುವ ಚಿಂತನೆ ಬಿಡಿಎಗೆ ಇದೆ ಎಂದು ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌