ಪ್ರಧಾನಿ ನರೇಂದ್ರ ಮೋದಿ ಅವರು ಜನಸಾಮಾನ್ಯರೊಂದಿಗೆ ನಿಕಟ ಬಾಂಧವ್ಯವನ್ನು ಸ್ಥಾಪಿಸುವ ಅಸಾಧಾರಣ ಸಂವಹನಕಾರ ಎಂದು ಸಾರ್ವತ್ರಿಕವಾಗಿ ಗುರುತಿಸಲ್ಪಟ್ಟಿದ್ದಾರೆ. ಅಮೋಘ ವಾಕ್ಚಾತುರ್ಯ ಅವರ ಅನನ್ಯ ಸಾಮರ್ಥ್ಯಗಳಲ್ಲೊಂದು. ಅವರ ನುಡಿಯಲ್ಲಿನ ಪ್ರಾಮಾಣಿಕತೆ, ನಡೆಯಲ್ಲಿನ ನಿಷ್ಠೆ ಮತ್ತು ಕಳೆದ ಎಂಟು ವರ್ಷಗಳಿಂದ ಅವರು ಜನರೊಂದಿಗೆ ಸಾಧಿಸಿರುವ ವಿಶ್ವಾಸ ಆಧಾರಿತ ಸಂಬಂಧ ಇವೆಲ್ಲವೂ ಅವರು ಯಶಸ್ವಿ ಸಂವಹನಕಾರರಾಗಲು ಕೊಡುಗೆ ನೀಡಿವೆ.
ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಜನಸಾಮಾನ್ಯರೊಂದಿಗೆ ನಿಕಟ ಬಾಂಧವ್ಯವನ್ನು ಸ್ಥಾಪಿಸುವ ಅಸಾಧಾರಣ ಸಂವಹನಕಾರ ಎಂದು ಸಾರ್ವತ್ರಿಕವಾಗಿ ಗುರುತಿಸಲ್ಪಟ್ಟಿದ್ದಾರೆ. ಅಮೋಘ ವಾಕ್ಚಾತುರ್ಯ ಅವರ ಅನನ್ಯ ಸಾಮರ್ಥ್ಯಗಳಲ್ಲೊಂದು. ಅವರ ನುಡಿಯಲ್ಲಿನ ಪ್ರಾಮಾಣಿಕತೆ, ನಡೆಯಲ್ಲಿನ ನಿಷ್ಠೆ ಮತ್ತು ಕಳೆದ ಎಂಟು ವರ್ಷಗಳಿಂದ ಅವರು ಜನರೊಂದಿಗೆ ಸಾಧಿಸಿರುವ ವಿಶ್ವಾಸ ಆಧಾರಿತ ಸಂಬಂಧ ಇವೆಲ್ಲವೂ ಅವರು ಯಶಸ್ವಿ ಸಂವಹನಕಾರರಾಗಲು ಕೊಡುಗೆ ನೀಡಿವೆ.
ಎಲ್ಲರನ್ನೂ ಒಳಗೊಳ್ಳುವ ಅವರ ವಿಧಾನವು ಜನಸಮೂಹದಾದ್ಯಂತ ಅಭೂತಪೂರ್ವ ಸಮ್ಮತಿಯನ್ನು ಪಡೆದುಕೊಂಡಿದೆ. ಇದು ಪ್ರಧಾನಿ ಮೋದಿಯವರ ಜನಾಭಿಮುಖಿ ಅಭಿವೃದ್ಧಿಯ ಮಾದರಿಯಾಗಿದ್ದು ಅದರಿಂದಾಗಿ ಅಪಾರ ಜನಸಮೂಹಕ್ಕೆ ಅವರು ಪ್ರೀತಿಪಾತ್ರರಾಗಿದ್ದಾರೆ. ಜನರೊಂದಿಗಿನ ನಿರಂತರ ಸಂವಾದದ ಅವರ ಕಲ್ಪನೆಯೇ ಅಕ್ಟೋಬರ್ 2014ರಲ್ಲಿ ‘ಮನ್ ಕಿ ಬಾತ್’ ಪ್ರಾರಂಭಿಸಲು ಕಾರಣವಾಯಿತು. ಹಲವು ವರ್ಷಗಳಿಂದ ಇದು ತಿಂಗಳ ಕೊನೆಯ ಭಾನುವಾರದ ಕಾತರದಿಂದ ಕಾಯುವ ಕಾರ್ಯಕ್ರಮವಾಗಿದೆ. ಮೊದಲು ರೇಡಿಯೋ ಕಾರ್ಯಕ್ರಮವಾಗಿ ಪ್ರಾರಂಭವಾಯಿತು; ಇದು ಈಗ ಏಕಕಾಲದಲ್ಲಿ ವಿವಿಧ ವೇದಿಕೆಗಳಿಂದ ಬಹು ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ.
ಮೋದಿ ಜಗತ್ತಿನ ಜನಪ್ರಿಯ ನಾಯಕ; ಅಮೆರಿಕ ಮತ್ತೆ ಬಣ್ಣನೆ
ಎಲ್ಲರನ್ನೂ ತಲುಪುವ ಮನಸ್ಸಿನ ಮಾತು
ಮನ್ ಕಿ ಬಾತ್(Mann ki Baat) ಮೋದಿಯವರ ಎರಡು ಮುಖಗಳನ್ನು ಪರಿಚಯಿಸುತ್ತದೆ. ಒಂದು ಪ್ರಬಲ, ಶಕ್ತಿಶಾಲಿ, ಉದ್ದೇಶ ಹೊಂದಿದ ಪ್ರಧಾನಿ ಮೋದಿ; ಮತ್ತು ಮೃದುವಾದ, ದಯಾಪರವಾದ, ಸೌಮ್ಯವಾದ ಕುಟುಂಬದ ಯಜಮಾನನಂತಹ ಮೋದಿ. ನೀವು ಕಣ್ಣು ಮುಚ್ಚಿ ‘ಮನ್ ಕಿ ಬಾತ್’ ಅನ್ನು ಕೇಳುತ್ತಿದ್ದರೆ, ಮೋದಿಯವರು ಹಳ್ಳಿಯ ಜಗಲಿ ಮೇಲೆ ಕುಳಿತು ಜನರೊಂದಿಗೆ ಮಾತನಾಡುತ್ತಿದ್ದಾರೆ, ಅವರ ಮಾತನ್ನು ಕೇಳುತ್ತಿದ್ದಾರೆ, ಅವರೊಂದಿಗೆ ಮಾತನಾಡುತ್ತಿದ್ದಾರೆ ಮತ್ತು ಅಗತ್ಯವಿರುವಲ್ಲಿ ಸಲಹೆಯನ್ನು ನೀಡುತ್ತಿದ್ದಾರೆ ಅಥವಾ ಅನುಕರಣೀಯ ಕಾರ್ಯಕ್ಕಾಗಿ ಹೊಗಳುತ್ತಿದ್ದಾರೆ ಎಂದು ನಿಮಗೆ ಅನ್ನಿಸುತ್ತದೆ. ಇತ್ತೀಚೆಗೆ ತಮ್ಮ ಪ್ರೀತಿಪಾತ್ರರ ಅಂಗಗಳನ್ನು ದಾನ ಮಾಡಲು ಧೈರ್ಯವಾಗಿ ಮುಂದೆ ಬಂದ ಅಪಘಾತ ಸಂತ್ರಸ್ತರ ಕುಟುಂಬಗಳೊಂದಿಗಿನ ತಮ್ಮ ಸಂವಾದವನ್ನು ಪ್ರಧಾನಿ ಹಂಚಿಕೊಂಡರು. ಅಂಗಾಂಗ ದಾನದ ಉದಾತ್ತ ಕಲ್ಪನೆಯನ್ನು ಉತ್ತೇಜಿಸಲು ಮೋದಿಯವರು ಆ ಸಂವಾದವನ್ನು ಬಳಸಿಕೊಂಡರು.
ಹವಾಮಾನ ವೈಪರೀತ್ಯಗಳನ್ನು ನಿಭಾಯಿಸುವುದರಿಂದ ಹಿಡಿದು ಆರೋಗ್ಯ ಮತ್ತು ನೈರ್ಮಲ್ಯದವರೆಗೆ, ಜನಸಾಮಾನ್ಯರನ್ನು ಅವರ ಒಳ್ಳೆಯ ಕಾರ್ಯಗಳಿಗಾಗಿ ತುಂಬು ಹೃದಯದಿಂದ ಅಭಿನಂದಿಸುವವರೆಗೆ ಅಂತಹ ಹಲವಾರು ಉದಾಹರಣೆಗಳನ್ನು ನೀಡಬಹುದು. ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಮೂಲಭೂತವಾಗಿ ನಿಜ ಜೀವನದ ಕಥೆಗಳು ಮತ್ತು ಅನುಭವಗಳನ್ನು, ಪ್ರತಿಷ್ಠಿತ ದೆಹಲಿಯಿಂದಾಚೆಗೆ ಅಸ್ತಿತ್ವದಲ್ಲಿರುವ ನೈಜ ಭಾರತವನ್ನು ಪ್ರತಿಬಿಂಬಿಸುವ ಕಥೆಗಳನ್ನು ಕುರಿತದ್ದಾಗಿದೆ. ‘ಮನ್ ಕಿ ಬಾತ್’ನ ಪ್ರತಿಯೊಂದು ಸಂಚಿಕೆಯು ಏಕೆ ಹೆಚ್ಚು ಜನಪ್ರಿಯವಾಗಿದೆ ಮತ್ತು ಹತ್ತಾರು ಸಾವಿರ ಪ್ರತಿಕ್ರಿಯೆಗಳನ್ನು ಪಡೆಯುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಇದು ಜನರ ಬಗೆಗಿನ ಕಾಳಜಿಯನ್ನು ಪ್ರತಿಧ್ವನಿಸುತ್ತದೆ.
2014ರಲ್ಲಿ ಶುರುವಾದ ರೇಡಿಯೋ ಮಾತು
ಮನ್ ಕಿ ಬಾತ್‌ನ ಮೊದಲ ಸಂಚಿಕೆ 2014ರ ಅಕ್ಟೋಬರ್ 3ರಂದು ಪ್ರಸಾರವಾಯಿತು. ಇದು 30 ಏಪ್ರಿಲ…, 2023ರಂದು 100 ಸಂಚಿಕೆಗಳನ್ನು ಪೂರ್ಣಗೊಳಿಸುತ್ತದೆ. ಮನ್ ಕಿ ಬಾತ್ ಅದರ ವಿಷಯ, ವಿನ್ಯಾಸ, ಸಂವಹನ ಮತ್ತು ಒಟ್ಟಾರೆಯಾಗಿ ಜನರು ಮತ್ತು ಸಮಾಜದೊಂದಿಗೆ ಸಂವಹನ ನಡೆಸುವ ವಿನೂತನ ವಿಧಾನದಿಂದಾಗಿ ವಿಶಿಷ್ಟವಾಗಿದೆ. 262 ರೇಡಿಯೊ ಕೇಂದ್ರಗಳು ಮತ್ತು 375ಕ್ಕೂ ಹೆಚ್ಚು ಖಾಸಗಿ ಮತ್ತು ಸಮುದಾಯ ರೇಡಿಯೊ ಕೇಂದ್ರಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ರೇಡಿಯೊ ನೆಟ್‌ವರ್ಕ್ ‘ಆಕಾಶವಾಣಿ’ ಮೂಲಕ ಭಾರತದ ಪ್ರಧಾನಮಂತ್ರಿಯವರು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ವೈವಿಧ್ಯಮಯವಾಗಿರುವ ವಿಶಾಲ ಜನಸಂಖ್ಯೆಯನ್ನು ತಲುಪುತ್ತಾರೆ, ಸ್ಫೂರ್ತಿ ಮತ್ತು ಶಕ್ತಿ ತುಂಬುತ್ತಾರೆ. ಇದು ಕೇವಲ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ವಿಷಯಗಳನ್ನು ಕುರಿತು ಮಾತ್ರ ಇರುವುದಿಲ್ಲ, ಬದಲಿಗೆ ಇಂದು ಜಗತ್ತು ಎದುರಿಸುತ್ತಿರುವ ಸವಾಲುಗಳಾದ ಹವಾಮಾನ ಬದಲಾವಣೆ, ತ್ಯಾಜ್ಯ ನಿರ್ವಹಣೆ, ಇಂಧನ ಬಿಕ್ಕಟ್ಟು ಇತ್ಯಾದಿಗಳ ಬಗ್ಗೆಯೂ ಇರುತ್ತದೆ.
52 ಭಾಷೆಗಳಲ್ಲಿ ಪ್ರಸಾರ!
ಭಾರತೀಯ ಸಾರ್ವಜನಿಕ ಸೇವಾ ಪ್ರಸಾರ ಸಂಸ್ಥೆಯಾದ ಪ್ರಸಾರ ಭಾರತಿ 11 ವಿದೇಶಿ ಭಾಷೆಗಳನ್ನು ಒಳಗೊಂಡಂತೆ 52 ಭಾಷೆಗಳು/ಉಪಭಾಷೆಗಳಲ್ಲಿ ಮನ್ ಕಿ ಬಾತ್‌ನ ಅನುವಾದ ಮತ್ತು ಪ್ರಸಾರವನ್ನು ಮಾಡುತ್ತದೆ. ಇದನ್ನು ದೇಶದ ಮೂಲೆಯಲ್ಲಿರುವ ದೂರ ಪ್ರದೇಶಗಳವರೆಗೂ ತಲುಪಿಸುತ್ತದೆ ಮತ್ತು ವಿದೇಶಗಳಲ್ಲಿರುವ ಭಾರತೀಯ ಸಮುದಾಯದವರೆಗೂ ಕೊಂಡೊಯ್ಯುತ್ತದೆ. ಮನ್ ಕಿ ಬಾತ್ ಭಾರತದ ಮೊದಲ ಉತ್ಕೃಷ್ಟವರ್ಚುವಲ… ರೇಡಿಯೊ ಕಾರ್ಯಕ್ರಮವಾಗಿದ್ದು, ಇದನ್ನು ಟಿವಿ ಚಾನೆಲ್‌ಗಳು ಏಕಕಾಲದಲ್ಲಿ ಪ್ರಸಾರ ಮಾಡುತ್ತವೆ. ದೂರದರ್ಶನ ಜಾಲದ 34 ಚಾನೆಲ್‌ಗಳು ಮತ್ತು 100ಕ್ಕೂ ಹೆಚ್ಚು ಖಾಸಗಿ ಉಪಗ್ರಹ ಟಿವಿ ಚಾನೆಲ್‌ಗಳು ಈ ವಿನೂತನ ಕಾರ್ಯಕ್ರಮವನ್ನು ದೇಶದ ಉದ್ದಗಲಕ್ಕೂ ಪ್ರಸಾರ ಮಾಡುತ್ತಿವೆ, ಈ ಸಾಂಪ್ರದಾಯಿಕ ಸಂವಹನ ಮಾಧ್ಯಮದ ಬಗ್ಗೆ ಹೊಸ ಆಸಕ್ತಿ ಮತ್ತು ಜಾಗೃತಿಯನ್ನು ಸೃಷ್ಟಿಸುತ್ತಿವೆ. ಸಮಾಜದ ವಿವಿಧ ಕ್ಷೇತ್ರಗಳ ತಜ್ಞರು ಮತ್ತು ಬದಲಾವಣೆಗೆ ಕಾರಣರಾದವರ ಲೇಖನಗಳೊಂದಿಗೆ ಅಚ್ಚುಕಟ್ಟಾಗಿ ಸಂಗ್ರಹಿಸಲಾದ ಕಿರುಪುಸ್ತಕವನ್ನು ಫೆಬ್ರವರಿ 2022ರಿಂದ ಪ್ರತಿ ತಿಂಗಳು ಪ್ರಕಟಿಸಲಾಗುತ್ತಿದೆ, ಇದು ಡಿಜಿಟಲ… ಮೂಲಕ 60 ಮಿಲಿಯನ್ ಜನರನ್ನು ತಲುಪುತ್ತಿದೆ.
ಇದೊಂದು ಸಾಮಾಜಿಕ ಕ್ರಾಂತಿ
ಬೃಹತ್ ಪ್ರಭಾವದಿಂದಾಗಿ ಮನ್ ಕಿ ಬಾತ್ ಕಾರ್ಯಕ್ರಮವನ್ನು ಒಂದು ಸಾಮಾಜಿಕ ಕ್ರಾಂತಿ ಎಂದು ವ್ಯಾಪಕವಾಗಿ ಮತ್ತು ಸೂಕ್ತವಾಗಿ ಕರೆಯಲಾಗಿದೆ ಮತ್ತು ಅದು ಜನ ಭಾಗೀದಾರಿಯ ಮೂಲಕ ದೃಢವಾದ ನೆಲೆಯನ್ನು ಕಂಡುಕೊಳ್ಳುತ್ತಿದೆ. ಕಾರ್ಯಕ್ರಮದ ಹೆಸರಿನಿಂದ ಹಿಡಿದು ಈ ಕಾರ್ಯಕ್ರಮದ ವಿಷಯಗಳ ಆಯ್ಕೆ ಮತ್ತು ಪ್ರಧಾನಮಂತ್ರಿಯವರು ಕರೆ ನೀಡುವ ಕ್ರಮಗಳವರೆಗೆ ನಾಗರಿಕರ ಪಾಲ್ಗೊಳ್ಳುವಿಕೆ ಮತ್ತು ಭಾಗವಹಿಸುವಿಕೆಯ ಸುತ್ತ ಕಾರ್ಯಕ್ರಮವನ್ನು ರೂಪಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗುತ್ತಿದೆ. ಪ್ರತಿಯೊಂದು ಸಂಚಿಕೆಯು ವ್ಯಕ್ತಿಗಳ ಪರಿವರ್ತನಾ ಶಕ್ತಿಯ ಬಗ್ಗೆ ಪ್ರಧಾನ ಮಂತ್ರಿಯವರ ಅಚಲ ನಂಬಿಕೆಯ ಮಾಸಿಕ ಜ್ಞಾಪನೆಯಾಗಿದೆ ಮತ್ತು ಆಡಳಿತದಲ್ಲಿ ಜನ ಭಾಗೀದಾರಿಯನ್ನು ಪೋ›ತ್ಸಾಹಿಸುವಲ್ಲಿ ಪ್ರಮುಖವಾಗಿದೆ. ಮನ್ ಕಿ ಬಾತ್ ಮೂಲಕ ಪ್ರಧಾನಿಯವರು ದೇಶಾದ್ಯಂತ ಲಕ್ಷಾಂತರ ಜನರನ್ನು ತಲುಪಲು ಸಾಧ್ಯವಾಗಿದೆ. ಅವರು ದೇಶಕ್ಕಾಗಿ ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲು ವೇದಿಕೆಯನ್ನು ಬಳಸುತ್ತಾರೆ ಮತ್ತು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಬಯಸುತ್ತಾರೆ.
ನಾಗರಿಕರ ಜೊತೆ ನೇರ ಸಂಪರ್ಕ
ಮನ್ ಕಿ ಬಾತ್‌ನ ಪ್ರಾಥಮಿಕ ಉದ್ದೇಶವು ಭಾರತದ ಪ್ರಧಾನ ಮಂತ್ರಿ ಮತ್ತು ದೇಶದ ನಾಗರಿಕರ ನಡುವೆ ನೇರ ಸಂಪರ್ಕವನ್ನು ಸಾಧಿಸುವುದು. ಪ್ರತಿ ತಿಂಗಳು, ಪ್ರಧಾನಿಯವರು ರಾಷ್ಟ್ರದಾದ್ಯಂತದಿಂದ ಲಕ್ಷಾಂತರ ಪತ್ರಗಳನ್ನು ಸ್ವೀಕರಿಸುತ್ತಾರೆ, ಅವರು ಕಾರ್ಯಕ್ರಮದ ಸಮಯದಲ್ಲಿ ಅವುಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಕಾರ್ಯಕ್ರಮದ ಸಮಯದಲ್ಲಿ ಗೌರವಾನ್ವಿತ ಪ್ರಧಾನಿ ಜನರೊಂದಿಗೆ ದೂರವಾಣಿ ಸಂಭಾಷಣೆ ನಡೆಸುವುದು ಸಾಮಾನ್ಯವಾಗಿದೆ. ಚುನಾಯಿತ ನಾಯಕ ಮತ್ತು ಜನಸಾಮಾನ್ಯರ ನಡುವಿನ ಇಂತಹ ಸಂವಹನ ವಿಧಾನವು ಪ್ರಜಾಪ್ರಭುತ್ವ ಮತ್ತು ಆಡಳಿತದಲ್ಲಿ ಜನರ ನಂಬಿಕೆಯನ್ನು ಬಲಪಡಿಸುತ್ತದೆ.
ಮನ್ ಕಿ ಬಾತ್ 8 ವರ್ಷಗಳಲ್ಲಿ 99 ಸಂಚಿಕೆಗಳ ಯಶಸ್ವಿ ಪ್ರಯಾಣದಲ್ಲಿ ಪ್ರಮುಖ ವಿಷಯಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ ಸಾಮಾಜಿಕ ಮತ್ತು ರಾಷ್ಟ್ರೀಯ ಉದ್ದೇಶಗಳಿಗಾಗಿ ಕ್ರಮ ವಹಿಸುವಂತೆ ಅವರನ್ನು ಪ್ರೇರೇಪಿಸಲು ಪ್ರಯತ್ನಿಸಿದೆ. ಕಾರ್ಯಕ್ರಮದ ಪ್ರಮುಖ ವೈಶಿಷ್ಟ್ಯವೆಂದರೆ, ಬದಲಾವಣೆಗಾಗಿ ನಿರಂತರವಾಗಿ ಮತ್ತು ನಿಸ್ವಾರ್ಥವಾಗಿ ಕೆಲಸ ಮಾಡುವವರ ಸ್ಫೂರ್ತಿದಾಯಕ ಕಥೆಗಳು, ಇದು ಅವರಿಗೆ ಕೆಲಸ ಮಾಡುವುದನ್ನು ಮುಂದುವರಿಸಲು ಪ್ರೇರಣೆಯ ಮೂಲವಾಗಿದೆ, ಅಲ್ಲದೇ ಇತರ ಲಕ್ಷಾಂತರ ಮಂದಿಗೆ ಸ್ಫೂರ್ತಿಯಾಗಿದೆ.
ಜನಾಂದೋಲನದ ಸಾಧನ
ಮನ್ ಕಿ ಬಾತ್ ಆರಂಭವಾದಾಗಿನಿಂದಲೂ ರಾಷ್ಟ್ರದಾದ್ಯಂತ ಸಮುದಾಯಗಳನ್ನು ಒಳಗೊಂಡ ಸಾಮಾಜಿಕ ಚಳವಳಿಗಳಿಗೆ ಜನಾಂದೋಲನದ ಪರಿಣಾಮಕಾರಿ ಸಾಧನವಾಗಿ ಹೊರಹೊಮ್ಮಿದೆ. ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಯವರು ನೀಡಿದ ಸಾಮಾಜಿಕ ಸಂದೇಶಗಳು ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗುತ್ತವೆ ಮತ್ತು ಕೆಲವೇ ವಾರಗಳಲ್ಲಿ ಅವು ಜನಾಂದೋಲನವಾಗುತ್ತವೆ. ಸ್ವಚ್ಛ ಭಾರತ ಅಭಿಯಾನ, ಬೇಟಿ ಬಚಾವೋ ಬೇಟಿ ಪಢಾವೋ, ಕೋವಿಡ್ ಲಸಿಕೆ ಮತ್ತು ಹರ್ ಘರ್ ತಿರಂಗಾ ಅಂತಹ ಕೆಲವು ಅದ್ಭುತ ಉದಾಹರಣೆಗಳಾಗಿವೆ. ಇತ್ತೀಚೆಗೆ, ಮನ್ ಕಿ ಬಾತ್‌ನ 88ನೇ ಸಂಚಿಕೆಯಲ್ಲಿ, ಪ್ರಧಾನಿಯವರು ಜಲ ಸಂರಕ್ಷಣೆಯ ಮಹತ್ವದ ಬಗ್ಗೆ ಮಾತನಾಡಿದರು ಮತ್ತು ನಾಗರಿಕರು ತಮ್ಮ ಪ್ರದೇಶದಲ್ಲಿ ಅಮೃತ ಸರೋವರಗಳನ್ನು ನಿರ್ಮಿಸುವಂತೆ ಕರೆ ನೀಡಿದರು. ಕೆಲವೇ ತಿಂಗಳುಗಳಲ್ಲಿ, ಈ ಸಂದೇಶವು ಜನಾಂದೋಲನವಾಯಿತು ಮತ್ತು ಹಲವಾರು ಅಮೃತ ಸರೋವರಗಳು ರಾಷ್ಟ್ರದಾದ್ಯಂತ ರೂಪುಗೊಂಡವು, ಇವುಗಳನ್ನು ಆ ಪ್ರದೇಶದ ಸರ್ಕಾರಿ ಸಂಸ್ಥೆಗಳ ಸಹಾಯದಿಂದ ಸ್ಥಳೀಯರು ನಿರ್ಮಿಸಿದರು. ತರುವಾಯ, ಪ್ರಧಾನಿಯವರು 92ನೇ ಸಂಚಿಕೆಯಲ್ಲಿ, ಉತ್ತರ ಪ್ರದೇಶದ ಲಲಿತಪುರದ ಭಗತ್ ಸಿಂಗ್ ಅಮೃತ ಸರೋವರ ಮತ್ತು ಕರ್ನಾಟಕದ ಬಿಳೆಕೆರೂರಿನ ಅಮೃತ ಸರೋವರದಂತಹ ವಿವಿಧ ಅಮೃತ ಸರೋವರಗಳನ್ನು ಪ್ರಸ್ತಾಪಿಸಿ, ನಾಗರಿಕರ ತ್ವರಿತ ಪ್ರಯತ್ನಗಳನ್ನು ಶ್ಲಾಘಿಸಿದರು.
ಸಶಕ್ತ ದೇಶ ನಿರ್ಮಾಣದ ಗುರಿ
ಸಶಕ್ತ ಭಾರತವನ್ನು ನಿರ್ಮಿಸುವ ದೃಷ್ಟಿಕೋನವನ್ನು ಮತ್ತಷ್ಟುಹೆಚ್ಚಿಸುವ ಮನ್ ಕಿ ಬಾತ್ ರಾಷ್ಟ್ರೀಯ ಮತ್ತು ಜಾಗತಿಕ ಯಶಸ್ಸನ್ನು ಎತ್ತಿ ತೋರಿಸುವುದರ ಮೇಲೆ ಕೇಂದ್ರೀಕೃತವಾಗಿದ್ದು, ನಾಗರಿಕರಲ್ಲಿ ಹೆಮ್ಮೆ, ಸಂಬಂಧ ಮತ್ತು ರಾಷ್ಟ್ರೀಯತೆಯ ಭಾವವನ್ನು ತುಂಬುವುದರೊಂದಿಗೆ ರಾಷ್ಟ್ರದ ಅಭಿವೃದ್ಧಿಯಲ್ಲಿ ಭಾಗವಹಿಸುವಂತೆ ಜನರನ್ನು ಒತ್ತಾಯಿಸುತ್ತಿದೆ. 89ನೇ ಸಂಚಿಕೆಯಲ್ಲಿ, ಪ್ರಧಾನಮಂತ್ರಿಯವರು ಭಾರತದಲ್ಲಿ ಯುನಿಕಾರ್ನ್‌ಗಳ ಸಂಖ್ಯೆಯು 100ಕ್ಕೆ ತಲುಪಿರುವುದರ ಬಗ್ಗೆ ಪ್ರಸ್ತಾಪಿಸಿದರು. 91ನೇ ಸಂಚಿಕೆಯು ಹರ್ ಘರ್ ತಿರಂಗಾ ಅಭಿಯಾನದ ಸಾಮೂಹಿಕ ಭಾಗವಹಿಸುವಿಕೆ ಮತ್ತು ರಾಷ್ಟ್ರವ್ಯಾಪಿ ಯಶಸ್ಸನ್ನು ಆಚರಿಸಿತು, ಪ್ರತಿಯೊಬ್ಬ ಭಾರತೀಯನ ಹೃದಯವೂ ಹೆಮ್ಮೆಯಿಂದ ಬೀಗುವಂತೆ ಮಾಡಿತು. ಇಂತಹ ಇನ್ನೂ ಅನೇಕ ಉದಾಹರಣೆಗಳು ಮನ್ ಕಿ ಬಾತ್ ಕೇವಲ ರೇಡಿಯೋ ಕಾರ್ಯಕ್ರಮವಲ್ಲ, ಬದಲಿಗೆ ಭಾರತದ ಸಮಗ್ರ ಅಭಿವೃದ್ಧಿಯ ಪ್ರತಿಬಿಂಬವಾಗಿದೆ ಮತ್ತು ಸಾರ್ವಜನಿಕ ಭಾಗವಹಿಸುವಿಕೆಯ ಅಭಿವ್ಯಕ್ತಿಯಾಗಿದೆ ಎಂಬುದನ್ನು ತೋರಿಸುತ್ತವೆ.
ಪ್ರಧಾನಿ ಮೋದಿ ನಾಯಕತ್ವಕ್ಕೆ ಬ್ರಿಟನ್ ಸಂಸದ ಸ್ಟರ್ನ್ ಮುಕ್ತಕಂಠದ ಶ್ಲಾಘನೆ
ಮನ್ ಕಿ ಬಾತ್‌ನೊಂದಿಗೆ, ಕಲ್ಯಾಣ ಯೋಜನೆಗಳು ಮತ್ತು ನೀತಿಗಳನ್ನು ಪ್ರತಿ ಹಂತದಲ್ಲೂ ಜನರ ಬಳಿಗೆ ಕೊಂಡೊಯ್ಯಲು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಲು ಪ್ರಧಾನ ಮಂತ್ರಿಯವರು ಯಶಸ್ವಿ ಕಾರ್ಯವಿಧಾನವನ್ನು ಸ್ಥಾಪಿಸಿದ್ದಾರೆ. ಅಷ್ಟೇ ಅಲ್ಲ, ಹೆಚ್ಚು ಹೆಚ್ಚು ಜನರನ್ನು ಫಲಾನುಭವಿಗಳಾಗಲು ಪ್ರೇರೇಪಿಸಲು ಈ ಯೋಜನೆಗಳು ತಳ ಮಟ್ಟದ ಜನರಿಗೆ ಹೇಗೆ ಪ್ರಯೋಜನವನ್ನು ನೀಡುತ್ತವೆ ಎಂಬ ಯಶೋಗಾಥೆಗಳನ್ನು ಪ್ರಧಾನಮಂತ್ರಿ ಹಂಚಿಕೊಳ್ಳುತ್ತಾರೆ. ಕೋವಿಡ್ ಸಾಂಕ್ರಾಮಿಕದಂತಹ ಬಿಕ್ಕಟ್ಟಿನ ಸಮಯದಲ್ಲಿಯೂ, ಜನರಿಗೆ ಮಾಹಿತಿ ನೀಡುವಲ್ಲಿ ಮತ್ತು ಲಸಿಕೆ ಪಡೆಯಲು ಅವರನ್ನು ಪ್ರೇರೇಪಿಸುವಲ್ಲಿ ಕಾರ್ಯಕ್ರಮವು ಪ್ರಮುಖ ಪಾತ್ರ ವಹಿಸಿತು. ಭಾರತದ ಲಸಿಕೆ ಯಶಸ್ಸಿನಲ್ಲಿ ಮನ್ ಕಿ ಬಾತ್ ಪಾತ್ರವಿದೆ. ಅದೊಂದೇ ಮನ್ ಕಿ ಬಾತ್‌ನ ಪ್ರಸ್ತುತತೆ ಮತ್ತು ನಮ್ಮ ಜೀವನದಲ್ಲಿ ಅದರ ಮಹತ್ವಕ್ಕೆ ಸಾಕ್ಷಿಯಾಗಿದೆ.