ವಿಚಾರಣೆ ವಿಳಂಬ: ಅಪರಾಧಿಗೆ ಶಿಕ್ಷೆ ಕಡಿತಕ್ಕೆ ಮನವಿ ಸಲ್ಲಿಸಲು ಹೈಕೋರ್ಟ್ ಅನುಮತಿ! ಏನಿದು ಪ್ರಕರಣ?

Published : Apr 02, 2025, 06:44 AM ISTUpdated : Apr 02, 2025, 07:44 AM IST
ವಿಚಾರಣೆ ವಿಳಂಬ: ಅಪರಾಧಿಗೆ ಶಿಕ್ಷೆ ಕಡಿತಕ್ಕೆ ಮನವಿ ಸಲ್ಲಿಸಲು ಹೈಕೋರ್ಟ್ ಅನುಮತಿ! ಏನಿದು ಪ್ರಕರಣ?

ಸಾರಾಂಶ

ಎರಡು ಕೊಲೆ ಪ್ರಕರಣಗಳ ವಿಚಾರಣೆಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ಶಿಕ್ಷೆ ಕಡಿತಗೊಳಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲು ಹೈಕೋರ್ಟ್ ಅನುಮತಿ ನೀಡಿದೆ. ವಿಚಾರಣಾ ವಿಳಂಬವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಈ ತೀರ್ಮಾನಕ್ಕೆ ಬಂದಿದೆ.

ವೆಂಕಟೇಶ್‌ ಕಲಿಪಿ

 ಬೆಂಗಳೂರು (ಏ.2):ಒಂದೇ ದಿನ ಮಾಡಿದ ಎರಡು ಕೊಲೆ ಪ್ರಕರಣಗಳನ್ನು ಜಂಟಿಯಾಗಿ ವಿಚಾರಣೆ ನಡೆಸದೆ ಪ್ರಕರಣಗಳ ವಿಲೇವಾರಿಯಲ್ಲಿ ಐದೂವರೆ ವರ್ಷ ವಿಳಂಬ ಮಾಡಿರುವ ಅಧೀನ ನ್ಯಾಯಾಲಯದ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌, ಶಿಕ್ಷೆ ಪ್ರಮಾಣ ಕಡಿಮೆಗೊಳಿಸಲು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ಅನುಮತಿಸಿದೆ.

ವಿಚಾರಣೆ ವಿಳಂಬದಿಂದ ಶಿಕ್ಷೆ ಪ್ರಮಾಣ ಕಡಿತಗೊಳಿಸಿ ಆದೇಶಿಸಬೇಕು ಎಂದು ಕೋರಿ ಎರಡು ಕೊಲೆ ಪ್ರಕರಣಗಳಲ್ಲಿ ಎರಡು ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಬೆಂಗಳೂರು ನಿವಾಸಿ ಫ್ರಾಂಕ್‌ ಆ್ಯಂಟೋನಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ವಿಚಾರಣೆ ವಿಳಂಬದಿಂದ ಆ್ಯಂಟೋನಿಯು ಶಿಕ್ಷೆ ಪ್ರಮಾಣ ಕಡಿತಗೊಳಿಸಲು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಬಹುದು. ಒಂದೊಮ್ಮೆ ಆ್ಯಂಟೋನಿ ಅಂತಹ ಮನವಿ ಪತ್ರ ಸಲ್ಲಿಸಿದರೆ, ಆತನಿಗೆ ಶಿಕ್ಷೆ ಕಡಿತಗೊಳಿಸಬಹುದೇ ಅಥವಾ ಇಲ್ಲವೇ ಎಂಬ ಬಗ್ಗೆ ಸರ್ಕಾರ ತನ್ನ ವಿವೇಚನೆ ಬಳಸಿ ತೀರ್ಮಾನ ಕೈಗೊಳ್ಳಬಹುದು ಎಂದು ಪೀಠ ಆದೇಶದಲ್ಲಿ ಹೇಳಿದೆ.

ಇದನ್ನೂ ಓದಿ: ಕನ್ಯತ್ವ ಪರೀಕ್ಷೆ ಅಸಂವಿಧಾನಿಕ, ಹೆಣ್ಣಿನ ಘನತೆ ಕುರಿತು ಹೈಕೋರ್ಟ್ ಮಹತ್ವದ ಆದೇಶ

ಪ್ರಕರಣದ ವಿವರ:

ಬೆಂಗಳೂರಿನ ತಟ್ಟಗುಪ್ಪೆ ನಿವಾಸಿ ಫ್ರಾಂಕ್‌ ಆ್ಯಂಟೋನಿ 2009ರ ಆ.9ರಂದು 82 ವರ್ಷದ ವೃದ್ಧೆ ಲೌರ್ಡ್‌ ಮೇರಿಯನ್ನು ಶ್ರೀನಿವಾಸ್‌ ಎಂಬಾತನೊಂದಿಗೆ ಸೇರಿ ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ. ಬಳಿಕ ಚಿನ್ನಾಭರಣ ಮಾರಾಟ ಮಾಡುವುದರಿಂದ ಬರುವ ಹಣದಲ್ಲಿ ಹೆಚ್ಚಿನ ಪಾಲು ಕೇಳಿದ ಕಾರಣಕ್ಕೆ ಶ್ರೀನಿವಾಸ್‌ನನ್ನೂ ಅದೇ ದಿನ ಆ್ಯಂಟೋನಿ ಕೊಲೆ ಮಾಡಿದ್ದ. ಈ ಎರಡೂ ಪ್ರಕರಣದಲ್ಲಿ ಆ್ಯಂಟೋನಿಯನ್ನು ದೋಷಿಯಾಗಿ ಪರಿಗಣಿಸಿದ ಬೆಂಗಳೂರಿನ 64ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಎರಡು ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರಿಂದ ಅಪರಾಧಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.

ಅಪರಾಧಿ ಪರ ವಕೀಲ ವಿ.ಜಿ.ತಿಗಡಿ ವಾದ ಮಂಡಿಸಿ, ಅಪರಾಧ ಪ್ರಕ್ರಿಯಾ ಸಂಹಿತೆ-1973 (ಸಿಆರ್‌ಪಿಸಿ) ಸೆಕ್ಷನ್‌ 220 (1) ಅನ್ವಯ ಎರಡು ಅಪರಾಧ ಕೃತ್ಯಗಳನ್ನು ಒಂದೇ ದಿನ ಸ್ವಲ್ಪ ಸಮಯದ ಅಂತರದಲ್ಲಿ ಎಸಗಿದ್ದರೆ, ಆ ಕೃತ್ಯಗಳನ್ನು ಪ್ರತ್ಯೇಕ ಅಪರಾಧಗಳೆಂದು ಹೇಳಲಾಗುವುದಿಲ್ಲ. ಸೆಕ್ಷನ್‌ 219ರ ಅನ್ವಯ ಓರ್ವ ಆರೋಪಿಯು 12 ತಿಂಗಳ ಒಳಗೆ ಒಂದೇ ರೀತಿಯಲ್ಲಿ ಒಂದಕ್ಕಿಂತ ಹೆಚ್ಚು ಅಪರಾಧ ಕೃತ್ಯ ಎಸಗಿದ್ದರೆ, ಆತನನ್ನು ಒಂದು ವಿಚಾರಣೆಗೆ ಒಳಪಡಿಸಬೇಕಿದೆ ಎಂದು ವಾದಿಸಿದ್ದರು.

ಈ ಎರಡೂ ಕೊಲೆಗಳು ಬೇರೆ ಬೇರೆಯಾಗಿದ್ದು, ಒಂದೇ ದಿನ ಒಂದೇ ರೀತಿಯ ವ್ಯವಹಾರಕ್ಕಾಗಿ ನಡೆದಿವೆ. ಎರಡೂ ಪ್ರಕರಣಗಳಲ್ಲಿನ ಕೆಲ ಸಾಕ್ಷಿಗಳು ಒಬ್ಬರೇ ಆಗಿದ್ದಾರೆ. ಆದ್ದರಿಂದ ಎರಡೂ ಪ್ರಕರಣಗಳನ್ನು ಒಂದೇ ಸೆಷನ್ಸ್‌ ನ್ಯಾಯಾಲಯವು ಜಂಟಿಯಾಗಿ ವಿಚಾಣೆ ನಡೆಸಬೇಕಿತ್ತು. ಆದರೆ, ಮೊದಲಿಗೆ ಎರಡು ಪ್ರಕರಣಗಳನ್ನು ಬೇರೆ ಬೇರೆ ನ್ಯಾಯಾಲಯಗಳು ವಿಚಾರಣೆ ನಡೆಸುತ್ತಿದ್ದವು. 2015ರ ಅ.31ರಂದು ಎರಡೂ ಪ್ರಕರಣಗಳನ್ನು ಜೊತೆಗೂಡಿ ಒಂದೇ ಸೆಷನ್ಸ್‌ ನ್ಯಾಯಾಲಯ ಜಂಟಿಯಾಗಿ ವಿಚಾರಣೆ ನಡೆಸಿ, 2021ರ ಜೂ.14ರಂದು ತೀರ್ಪು ನೀಡಿದೆ. ಇದರಿಂದ ವಿಚಾರಣೆ ಪೂರ್ಣಗೊಳ್ಳಲು ವಿಳಂಬವಾಗಿದೆ. ಇದರಿಂದ ಸಿಆರ್‌ಪಿಸಿ ಸೆಕ್ಷನ್‌ 432ರ ಅಡಿಯಲ್ಲಿ ಶಿಕ್ಷೆ ಕಡಿತಕ್ಕೆ ಆ್ಯಂಟೋನಿ ಅರ್ಹನಾಗಿದ್ದಾನೆ ಎಂದು ವಾದಿಸಿದರು.

ಈ ವಾದ ಪುರಸ್ಕರಿಸಿರುವ ಹೈಕೋರ್ಟ್‌, ಮೇಲ್ಮನವಿದಾರನನ್ನು ಒಂದೇ ವಿಚಾರಣೆಗೆ ಒಳಪಡಿಸಿದ್ದರೆ, ಆತನ ವಿರುದ್ಧದ ಪ್ರಕರಣಗಳ ವಿಲೇವಾರಿಯಲ್ಲಿ ಉಂಟಾಗಿರುವ ವಿಳಂಬವನ್ನು ತಡೆಯಬಹುದಾಗಿತ್ತು. ಮೇಲ್ಮನವಿದಾರ 2009ರ ಡಿ.10ರಂದು ಬಂಧನಕ್ಕೆ ಒಳಗಾಗಿದ್ದು, ಜಾಮೀನು ಮೇಲೆ ಬಿಡುಗಡೆಯಾಗಿಲ್ಲ. ಪ್ರಕರಣಗಳ ವಿಚಾರಣೆ ವಿಳಂಬದಲ್ಲಿ ಆತ ಕಾರಣನಲ್ಲ. ಮೊದಲಿನಿಂದಲೂ ಎರಡೂ ಪ್ರಕರಣಗಳನ್ನು ಜಂಟಿಯಾಗಿ ಒಂದೇ ನ್ಯಾಯಾಲಯ ವಿಚಾರಣೆ ನಡೆಸಿದ್ದರೆ 2015ರ ಅಂತ್ಯದೊಳಗೆ ವಿಚಾರಣೆ ಪೂರ್ಣಗೊಳ್ಳುತ್ತಿತ್ತು. ಆ ರೀತಿ ಮಾಡದಕ್ಕೆ ವಿಚಾರಣೆ ಪೂರ್ಣಗೊಳ್ಳಲು ಐದು ವರ್ಷ ಆರು ತಿಂಗಳ ಕಾಲ ವಿಳಂಬವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಹೋಟೆಲ್‌ ತಿನಿಸಿಗೆ ಸೇವಾ ಶುಲ್ಕ ಕೊಡಬೇಕಿಲ್ಲ, ಗ್ರಾಹಕರಿಗೆ ಕಡ್ಡಾಯವಾಗಿ ವಿಧಿಸುವಂತಿಲ್ಲ: ದೆಹಲಿ ಹೈಕೋರ್ಟ್ ತೀರ್ಪು

ರಾಜ್ಯ ಸರ್ಕಾರವು 2014ರ ಜ.7ರಂದು ಹೊರಡಿಸಿರುವ ಮಾರ್ಗಸೂಚಿಗಳನ್ವಯ ಒಂದಕ್ಕಿಂತ ಹೆಚ್ಚು ಕೊಲೆಗಳಿಗೆ ಶಿಕ್ಷೆಗೊಳಗಾದ ಕೈದಿಯು ಶಿಕ್ಷೆ ಪ್ರಮಾಣದಲ್ಲಿ ವಿನಾಯಿತಿ ಪಡೆಯಲು ಅರ್ಹನಾಗಿರುತ್ತಾನೆ. ಈ ಪ್ರಕರಣದಲ್ಲಿ ವಿಚಾರಣೆ ವಿಳಂಬವಾಗಿರುವುದರಿಂದ ಆ್ಯಂಟೋನಿಯು ಅಪರಾಧ ಸಾಬೀತಾಗುವ ಮುನ್ನ ಅನುಭವಿಸಿರುವ ಜೈಲು ವಾಸದ ಅವಧಿಯನ್ನು ಕಡಿತಗೊಳಿಸಲಾಗಿದೆ ಎಂಬುದಾಗಿ ಸಿಆರ್‌ಪಿಸಿ ಸೆಕ್ಷನ್‌ 428 ಅನ್ವಯ ಪರಿಗಣಿಸಬಹುದಾಗಿದೆ. ಅದರಂತೆ ಶಿಕ್ಷೆ ಕಡಿತಕ್ಕಾಗಿ ಮೇಲ್ಮನವೀದಾರ ಸರ್ಕಾರಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಪೀಠ ಆದೇಶಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!