ಹೊಸ ತಲೆಮಾರಿನ, ವಿಶ್ವದರ್ಜೆಯ ಪ್ರವಾಸೋದ್ಯಮವನ್ನು ಪರಿಚಯಿಸುವ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿ, ಸಾರಿಗೆ ಸಂಪರ್ಕ ಮತ್ತು ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ಶುಲ್ಕಗಳನ್ನು ನಿಗದಿಪಡಿಸಿದರೆ ರಾಜ್ಯದ ಪ್ರವಾಸೋದ್ಯಮ ವಲಯ ಉತ್ತುಂಗಕ್ಕೆ ಏರುತ್ತದೆ.
ಬೆಂಗಳೂರು (ಜೂ.17): ಹೊಸ ತಲೆಮಾರಿನ, ವಿಶ್ವದರ್ಜೆಯ ಪ್ರವಾಸೋದ್ಯಮವನ್ನು ಪರಿಚಯಿಸುವ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿ, ಸಾರಿಗೆ ಸಂಪರ್ಕ ಮತ್ತು ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ಶುಲ್ಕಗಳನ್ನು ನಿಗದಿಪಡಿಸಿದರೆ ರಾಜ್ಯದ ಪ್ರವಾಸೋದ್ಯಮ ವಲಯ ಉತ್ತುಂಗಕ್ಕೆ ಏರುತ್ತದೆ. ಸ್ಥಳೀಯವಾಗಿ ಅಪಾರ ಪ್ರಮಾಣದ ಉದ್ಯೋಗ ಸೃಷ್ಟಿಯಾಗಿ ಜನರ ಜೀವನಮಟ್ಟ ಸುಧಾರಣೆ ಜೊತೆಗೆ ಸರ್ಕಾರಕ್ಕೆ ಪ್ರಮುಖ ಆದಾಯದ ಮೂಲವಾಗುತ್ತದೆ ಎಂದು ಪ್ರವಾಸೋದ್ಯಮದ ತಜ್ಞರು ಅಭಿಪ್ರಾಯಪಟ್ಟರು.
ನಗರದ ಅರಮನೆ ಮೈದಾನದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಎಫ್‌ಕೆಸಿಸಿಐ ಆಯೋಜಿಸಿರುವ ಎರಡು ದಿನಗಳ ‘ದಕ್ಷಿಣ ಭಾರತ ಉತ್ಸವ-2024’ರಲ್ಲಿ ಭಾನುವಾರ ನಡೆದ ‘ಜಾಗತಿಕ ಮಾದರಿಗಳೊಂದಿಗೆ ಕರ್ನಾಟಕ ಪ್ರವಾಸೋದ್ಯಮವನ್ನು ವಿಶ್ವದರ್ಜೆಗೆ ಏರಿಸುವುದು’ ಕುರಿತ ಚರ್ಚೆಯಲ್ಲಿ ಭಾಗವಹಿಸಿ ತಜ್ಞರು ಈ ಅನಿಸಿಕೆ ವ್ಯಕ್ತಪಡಿಸಿದರು. ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಶ್ರೀಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಪ್ರವಾಸಿ ತಾಣಗಳು ಕಾರ್ಯ ನಿರ್ವಹಿಸಬೇಕು. ತಾಣಗಳು ಸರಿಯಾಗಿ ನಿರ್ವಹಣೆಯಾಗಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬಂದಂತಹ ಪ್ರವಾಸಿಗರನ್ನು ವ್ಯಾಪಾರಿಗಳು ಅವರನ್ನು ಸುಲಿಗೆ ಮಾಡುವ ಮನಸ್ಥಿತಿಯಿಂದ ಹೊರಬರಬೇಕು. ತಾಣಗಳನ್ನು ಜನರ ಮನೆ, ಮನಗಳಿಗೆ ತಲುಪಿಸುವ ಸಿನಿಮಾ ಶೂಟಿಂಗ್‌ಗೆ ಇರುವ ಹತ್ತಾರು ನಿರ್ಬಂಧ ಕ್ರಮಗಳನ್ನು ಸರಳೀಕರಿಸಬೇಕು ಎಂದರು.
undefined
ಪ್ರವಾಸೋದ್ಯಮಕ್ಕೆ ಹೊಸತನ ಬೇಕು, ಬ್ಯಾನ್ ಮನಸ್ಥಿತಿ ಬಿಡಬೇಕು: ರವಿ ಹೆಗಡೆ
‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಪ್ರವಾಸೋದ್ಯಮದಲ್ಲಿ ನಮ್ಮ ರಾಜ್ಯ 15 ವರ್ಷ ಹಿಂದುಳಿದಿದೆ. ನಮ್ಮ ಪ್ರವಾಸಿ ತಾಣಗಳನ್ನು ವಿಶ್ವದರ್ಜೆ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಬೇಕು. ಪ್ರವಾಸಿ ತಾಣಗಳಿಗೆ ಹೋಗಿ ಒಂದು ಫೋಟೋ ಮತ್ತೊಂದು ಸೆಲ್ಫಿ ತೆಗೆದುಕೊಂಡು ಬರುವುದಲ್ಲ. ಪ್ರವಾಸಿಗರಿಗೆ ನೈಜ ಅನುಭವ ಸಿಗಬೇಕು. ಪ್ಯಾರಿಸ್‌ನಲ್ಲಿ ಐಫಲ್ ಟವರ್, ಇಂಡೋನೇಷಿಯಾದ ಬಾಲಿಯಲ್ಲಿ ಜೋಕಾಲಿ, ಹಕ್ಕಿ ಗೂಡುಗಳಲ್ಲಿ ಕುಳಿತು ಫೋಟೋ ಕ್ಲಿಕ್ಕಿಸಿಕೊಳ್ಳುವುದೇ ಒಂದು ವಿಶೇಷ ಅನುಭವ ಎಂದು ಬ್ರ್ಯಾಂಡ್ ಮಾಡಲಾಗಿದೆ. ಅದರಂತೆ ನಮ್ಮ ರಾಜ್ಯದಲ್ಲಿನ ತಾಣಗಳನ್ನೂ ಸ್ಥಳೀಯ ವೈಶಿಷ್ಟ್ಯದೊಂದಿಗೆ ಬ್ರ್ಯಾಂಡಿಂಗ್ ಮಾಡಬೇಕು. ಜನರು ಪ್ರವಾಸಿ ತಾಣಗಳಿಗೆ ತೆರಳಿದಾಗ ಸ್ಥಳಗಳ ಕುರಿತು ಮಾಹಿತಿ ನೀಡುವ ಫಲಕಗಳು, ಭಿತ್ತಿಪತ್ರಗಳು ಸಿಗಬೇಕು. ಪುಸ್ತಕಗಳು, ಉಡುಗೊರೆಗಳು, ವಸ್ತ್ರಗಳು ಲಭ್ಯವಾಗಬೇಕು. ಜನರು ಬರುತ್ತಿದ್ದಂತೆ ಅವರಿಗೆ ಪ್ರವಾಸಿ ತಾಣದಲ್ಲಿದ್ದೇನೆ ಎನ್ನುವ ಅನುಭವ ನೀಡಬೇಕು. ಬೋರಿಂಗ್ ಆಗಬಾರದು ಎಂದು ಹೇಳಿದರು.
ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ ಚಂದ್ರ ಲಹೋಟಿ ಮಾತನಾಡಿ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹೂಡಿಕೆದಾರ ಸ್ನೇಹಿ ನೀತಿ, ಮೂಲಸೌಕರ್ಯ, ಸಂಪರ್ಕ ಮತ್ತು ಪರವಾನಗಿ ವ್ಯವಸ್ಥೆಯ ಸರಳೀಕರಣಕ್ಕೆ ಏಕಗವಾಕ್ಷಿ ವ್ಯವಸ್ಥೆ ಅನುಷ್ಠಾನಗೊಳಿಸಬೇಕು. ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಿ ಮಹಾನಗರಗಳಿಗೆ ವಲಸೆ ತಪ್ಪುತ್ತದೆ ಎಂದು ಹೇಳಿದರು. ಅಡಿಗಾಸ್ ಯಾತ್ರಾ ಸಂಸ್ಥಾಪಕ ಕೆ.ನಾಗರಾಜ ಅಡಿಗ ಅವರು ಮಾತನಾಡಿ, ಪ್ರವಾಸಿಗರು ಪ್ರವಾಸಿ ತಾಣಗಳಲ್ಲಿ ಶುಚಿ ಹಾಗೂ ಶುದ್ಧ ಆಹಾರವನ್ನು ಬಯಸುತ್ತಾರೆ. ಅನೇಕ ಪ್ರವಾಸಿ ತಾಣಗಳಲ್ಲಿ ಸ್ಥಳ ಮತ್ತು ಆಹಾರದ ಕೊರತೆ ಪ್ರವಾಸಿಗರಿಗೆ ಕಾಡುತ್ತದೆ. ಈ ಹಿನ್ನೆಲೆಯಲ್ಲಿ ತಾಣಗಳ ವೀಕ್ಷಣೆ ಜೊತೆಗೆ ಆಹಾರದ ಮೂಲಕವೂ ಪ್ರವಾಸವನ್ನು ಆಹ್ಲಾದಿಸುವ ಅವಕಾಶ ಕಲ್ಪಿಸಬೇಕು. ತಾಣಗಳ ಬಳಿ ಹೊಟೇಲ್, ರೆಸ್ಟೋರೆಂಟ್‌ಗಳ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಪೂರಕ ವಾತಾವರಣ ನಿರ್ಮಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಕೈಗೆಟುಕುವ ದರದಲ್ಲಿ ಉತ್ತಮ ಸೇವೆ ಮತ್ತು ಆಹಾರ ನೀಡಲು ಪ್ರವಾಸೋದ್ಯಮ ನೀತಿಯಲ್ಲಿ ಸಹಕಾರ ಸಿಗಬೇಕು ಎಂದು ಆಶಿಸಿದರು.
ಒಂದು ವರ್ಷದಲ್ಲಿ ಎಲ್ಲಾ ರೀತಿ ಬೆಲೆ ಏರಿಕೆ ಭಾಗ್ಯ: ವಿಜಯೇಂದ್ರ, ಎಚ್‌ಡಿಕೆ ಆಕ್ರೋಶ
ಕರಾವಳಿ ಪ್ರವಾಸೋದ್ಯಮ ತಜ್ಞ ಮಂಗಲ ಶೆಟ್ಟಿ ಅವರು, 800 ಹೆಕ್ಟೇರ್‌ಗೂ ಹೆಚ್ಚು ವಿಸ್ತೀರ್ಣದ ಅರಣ್ಯ ಪರಿಸರದ ಅದ್ಭುತ ನಿಸರ್ಗ ತಾಣವಾಗಿರುವ ಅಘನಾಶಿನಿಯ ಸೌಂದರ್ಯವನ್ನು ಪ್ರವಾಸಿಗರಿಗೆ ಉಣಬಡಿಸುವ ಅವಕಾಶವಿದೆ. ಈ ಕುರಿತು ಪ್ರವಾಸಿಗರಿಗೆ ಸಮಗ್ರ ಮಾರ್ಗದರ್ಶನ ಮಾಡುವಂತಹ ವಿಶೇಷ ಯೋಜನೆಯನ್ನು ಸರ್ಕಾರ ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು, ಪಾರಂಪರಿಕ ತಾಣಗಳನ್ನು ಕಾಪಾಡಿಕೊಳ್ಳುವಲ್ಲಿ ಕರ್ನಾಟಕ ಮೊದಲಿನಿಂದಲೂ ಹಿಂದುಳಿದಿದೆ. ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಬೇಕು. ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಮೈಸೂರು ಅರಮನೆಯ ನಿರ್ವಹಣೆ ಉತ್ತಮವಾಗಿಲ್ಲ. ನೂರಾರು ವರ್ಷಗಳ ಇತಿಹಾಸ ಇರುವ ವೆಲ್ಲಿಂಗ್ಟನ್ ಹೌಸ ಕೂಡ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದರು.