
ತಿಪಟೂರು (ಜೂ.27) : ಏಷ್ಯಾದಲ್ಲಿಯೇ ಅತಿದೊಡ್ಡ ಮಾರುಕಟ್ಟೆ ಎಂದು ಹೆಸರುವಾಸಿಯಾಗಿರುವ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿನ ಉಂಡೆ ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ ₹30,000 ದಾಟಿದ್ದು, ತೆಂಗು ಬೆಳೆಗಾರರಿಗೆ ಸಂತಸ ತಂದಿದೆ.
ಗುರುವಾರದ ಹರಾಜಿನಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ಗರಿಷ್ಟ ₹29,106ಕ್ಕೆ ಟೆಂಡರ್ ಆಗಿದ್ದು, ಸಂಜೆಯ ವೇಳೆಗೆ ₹30,000 ದಾಟಿದೆ. ಕಳೆದ ಸೋಮವಾರ ನಡೆದ ಹರಾಜಿನಿಂದ ಕೇವಲ ನಾಲ್ಕೇ ದಿನದಲ್ಲಿ ಬೆಲೆ ₹3 ಸಾವಿರದಷ್ಟು ಜಿಗಿದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ಕೇವಲ ₹9 ಸಾವಿರದ ಆಸುಪಾಸಿನಲ್ಲಿತ್ತು.
ತಿಪಟೂರು ಕೊಬ್ಬರಿ ಹೆಚ್ಚಿನ ಸಿಹಿ ಹಾಗೂ ಉತ್ತಮ ಗುಣಮಟ್ಟದ ಎಣ್ಣೆ ಅಂಶಗಳನ್ನೊಳಗೊಂಡಿದೆ. ಮುಂಬರುವ ಶ್ರಾವಣ ಮಾಸದಲ್ಲಿ ಸಾಲು, ಸಾಲು ಹಬ್ಬ, ಶುಭ ಸಮಾರಂಭಗಳು, ಕಾರ್ಯಕ್ರಮಗಳು ಪ್ರಾರಂಭವಾಗುವುದರಿಂದ ಇಲ್ಲಿನ ಕೊಬ್ಬರಿಗೆ ಮತ್ತಷ್ಟು ಬೇಡಿಕೆ ಬರುವ ನಿರೀಕ್ಷೆಯಿದೆ. ಹೀಗಾಗಿ, ಮುಂದಿನ ಕೆಲವೇ ವಾರಗಳಲ್ಲಿ ಕ್ವಿಂಟಾಲ್ ಬೆಲೆ ₹35 ರಿಂದ ₹40 ಸಾವಿರ ತಲುಪುವ ಆಶಾಭಾವ ರೈತರದು.
ಇತ್ತೀಚಿನ ವರ್ಷಗಳಲ್ಲಿ ಕೊಬ್ಬರಿ ಎಣ್ಣೆ ದಿನನಿತ್ಯದ ಅಡುಗೆ, ಖಾದ್ಯ ತಯಾರಿಸಲು ಹೆಚ್ಚೆಚ್ಚು ಬಳಕೆಯಾಗುತ್ತಿದೆ. ತಮಿಳುನಾಡು, ಆಂಧ್ರ, ಕೇರಳ ಮತ್ತಿತರ ತೆಂಗು ಬೆಳೆಯುವ ಪ್ರದೇಶಗಳಲ್ಲಿ ತೆಂಗಿನ ಮರಗಳಿಗೆ ನಾನಾ ರೋಗ ರುಜಿನಗಳು ಅಂಟಿಕೊಂಡಿದ್ದು, ತೆಂಗಿನಕಾಯಿಗಳ ಇಳುವರಿ ಕುಸಿತ ಕಂಡಿದೆ. ಕಳೆದೊಂದು ವರ್ಷದಿಂದ ಎಳನೀರು ಮತ್ತು ತೆಂಗಿನಕಾಯಿಗಳಿಗೆ ಉತ್ತಮ ಬೆಲೆ ಬಂದ ಕಾರಣ, ಹೆಚ್ಚಿನ ರೈತರು ತೆಂಗಿನ ಕಾಯಿ ಮತ್ತು ಎಳನೀರು ಮಾರಾಟ ಮಾಡಲು ಮುಂದಾಗಿದ್ದಾರೆ. ಹೀಗಾಗಿ, ಕೊಬ್ಬರಿ ದಾಸ್ತಾನು ಕಡಿಮೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ