Kannada Language: ಕಾಳಜಿ, ಎಚ್ಚರಿಕೆ ಇರದಿದ್ರೆ ನಮ್ಮ ಭಾಷೆಯನ್ನೂ ಕಳೆದುಕೊಳ್ತೇವೆ: ಆತಂಕಕಾರಿ ವಿಷಯ ಬಿಚ್ಚಿಟ್ಟ ಪ್ರೊ.ಬಿಳಿಮಲೆ

Kannadaprabha News   | Kannada Prabha
Published : Jun 27, 2025, 01:00 PM ISTUpdated : Jun 27, 2025, 02:08 PM IST
Pro. bilimale

ಸಾರಾಂಶ

ಯುನೆಸ್ಕೋ ವರದಿಯು ಮುಂದಿನ ದಶಕಗಳಲ್ಲಿ ಹಲವು ಭಾಷೆಗಳು ಅಳಿವಿನಂಚಿನಲ್ಲಿವೆ ಎಂದು ಎಚ್ಚರಿಸಿದೆ. ಕನ್ನಡವೂ ಇದಕ್ಕೆ ಹೊರತಾಗಿಲ್ಲ ಎಂದು ಪ್ರೊ. ಬಿಳಿಮಲೆ ಕಳವಳ ವ್ಯಕ್ತಪಡಿಸಿದ್ದಾರೆ. ಭಾಷಾ ಪ್ರೀತಿ ಮತ್ತು ಕೊಡುಕೊಳ್ಳುವಿಕೆಯಿಂದ ಮಾತ್ರ ಭಾಷೆ ಉಳಿಯುತ್ತದೆ ಎಂದು ಅವರು ಹೇಳಿದರು.

ಬೆಳಗಾವಿ (ಜೂ.27): ಇತ್ತೀಚೆಗೆ ಯುನೆಸ್ಕೋ ಬಿಡುಗಡೆ ಮಾಡಿದ ವರದಿ ದಿಗಿಲು ಹುಟ್ಟಿಸುತ್ತದೆ. ಮುಂದಿನ ಆರು ದಶಕಗಳಲ್ಲಿ ಜಗತ್ತಿನ ಶೇ.92ರಷ್ಟು ಜನ ಮಾತನಾಡುವ ಭಾಷೆಯವರು ತಮ್ಮ ಭಾಷೆಯನ್ನು ಕಳೆದುಕೊಂಡು ಶೇ.8 ರಷ್ಟು ಜನ ಮಾತನಾಡುವ ಭಾಷೆಯ ಮೇಲೆ ಅವಲಂಬಿತರಾಗುತ್ತಾರೆ. ಭಾಷೆಯ ಬಗ್ಗೆ ಎಚ್ಚರಿಕೆ ಇರದಿದ್ದರೆ ನಾವು ಕೂಡ ನಮ್ಮ ಭಾಷೆಯನ್ನು ಕಳೆದುಕೊಳ್ಳುತೇವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ವಿಷಾದಿಸಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರಿಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯು ಪಿಎಂ ಉಷಾ ಮೇರು ಯೋಜನೆ ಅಡಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹಳಗನ್ನಡ ಕಾವ್ಯ ರಸಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅದಕ್ಕೆ ಪೂರಕವಾಗಿ ನೋಡುವುದಾದರೆ 2001ರಲ್ಲಿನ ಜನಗಣತಿ ಪ್ರಕಾರ ಕರ್ನಾಟಕದ ಪ್ರಮುಖ ಭಾಷೆಯಾದ ಕೊಡವ ಭಾಷೆ ಮಾತನಾಡುವವರು 1.66 ಲಕ್ಷ ಇತ್ತು . ಮುಂದೆ 2011 ಜನಗಣತಿಯಲ್ಲಿ 1.36 ಲಕ್ಷ. ಕೇವಲ ಹತ್ತು ವರ್ಷಗಳಲ್ಲಿ ಶೇ. 19ರಷ್ಟು ಕಡಿಮೆ ಆಗಿದೆ. 1981ರ ಜನಗಣತಿಯಲ್ಲಿ ಕರ್ನಾಟಕದ ಕೊರಗ ಭಾಷೆ ಮಾತನಾಡುವವರ ಸಂಖ್ಯೆ ಐವತ್ತೈದು ಸಾವಿರ. 2011ರಲ್ಲಿ ಅದೇ ಭಾಷೆ ಮಾತನಾಡುವವರ ಸಂಖ್ಯೆ ಕೇವಲ ಮೂರು ಸಾವಿರ. ಮೂವತ್ತು ವರ್ಷಗಳಲ್ಲಿ ಈ ಭಾಷೆ ಅವಸಾನವಾಯಿತು.

ನಮ್ಮ ಭಾಷೆ ಪ್ರೀತಿಸಿದರೆ ಅದನ್ನ ಕೊಲ್ಲುವ ಶಕ್ತಿ ದೇವರಿಗೂ ಇಲ್ಲ:

ಭಾಷೆ ಅಳಿವಿನ ಜೊತೆಗೆ ಒಂದು ಸಾಂಸ್ಕೃತಿಕ ಪರಿಸರವು ನಾಶವಾಯಿತು. 2021, ಏಪ್ರಿಲ್ 4ಕ್ಕೆ ಅಂಡಮಾನ್‌ ಗ್ರೂಪ್‌ಗೆ ಸೇರಿದ ಸೆರ ಎಂಬ ಭಾಷೆ ಸತ್ತು ಹೋಯಿತು. ಹೀಗೆ ಒಂದೊಂದೇ ಭಾಷೆ ನಾಶವಾಗುತ್ತಲೇ ಇದೆ ಎಂದು ವಿಷಾದಿಸಿದರು.ಇದಕ್ಕೆಲ್ಲ ಕಾರಣ ಭಾಷೆಯ ಹಿಂದೆ ಇರದ ಬದ್ಧತೆ. ನನ್ನ ಭಾಷೆಯನ್ನು ಪ್ರೀತಿಸಿದರೆ ಅದನ್ನು ಕೊಲ್ಲುವ ಶಕ್ತಿ ಆ ದೇವರಿಗೂ ಕೂಡ ಇಲ್ಲ. ಪರಭಾಷಿಕರು ನಮ್ಮಲ್ಲಿಗೆ ಬಂದು ಅವರ ಭಾಷೆ ನಮಗೆ ಕಲಿಸುತ್ತಾರೆ. ನಾವು ಅವರ ಭಾಷೆಯಲ್ಲೇ ಮಾತನಾಡುತ್ತೇವೆ. ಆದರೆ ನಮ್ಮ ಭಾಷೆ ಅವರಿಗೆ ಕಲಿಸುವುದಿಲ್ಲ. ಭಾಷೆ ಕೊಡುಕೊಳ್ಳುವಿಕೆ ಆಗಬೇಕು. ಆಗ ಭಾಷೆ ಉಳಿಯುತ್ತದೆ. ಭಾಷೆಯನ್ನು, ಸಾಹಿತ್ಯವನ್ನು ಜಾಹೀರಾತಿನ ಸರಕಾಗಿ, ಹಣದ ಉತ್ಪಾದನೆಯ ಸರಕಾಗಿ ನೋಡಬೇಡಿ, ಮಾನವೀಯ ಸರಕಾಗಿ ನೋಡಿ ಎಂದರು.

ಇತ್ತೀಚಿನ ವರದಿ ಪ್ರಕಾರ ಮೈಸೂರಿನಲ್ಲಿರುವ ಮೂವತ್ತು ಸಮುದಾಯಗಳು ಮುಂದಿನ ಮೂವತ್ತು ವರ್ಷಗಳ ನಂತರ ಇರುವುದಿಲ್ಲ ಎಂದು ಹೇಳುತ್ತವೆ. ಭಾಷೆ, ಜನಾಂಗ, ಸಮುದಾಯವನ್ನು ಕಳೆದುಕೊಳ್ಳುತ್ತಾ ಸಾಗಿದಲ್ಲಿ ಮುಂದೊಂದು ದಿನ ಅನಾಥ ಪ್ರಜ್ಞೆ ನಮ್ಮನ್ನು ಆವರಿಸಿಕೊಳ್ಳುತ್ತದೆ ಎಂದು ದಿಗ್ಭ್ರಮೆ ವ್ಯಕ್ತಪಡಿಸಿದರು. ಹಳಗನ್ನಡ ಕಾವ್ಯಗಳು ಪರ ವಿಚಾರ ಮತ್ತು ಪರಧರ್ಮ ಸಹಿಷ್ಣುತೆಯೇ ನಮ್ಮ ಸಂಸ್ಕೃತಿಯ ವಿವೇಕತೆ ಎಂಬುದನ್ನು ತಿಳಿಸಿಕೊಡುತ್ತವೆ. ಶಿಕ್ಷಕರಿಗೆ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡದ ಪರಂಪರೆ ಮತ್ತು ಅದರ ಪ್ರಾಥಮಿಕ ತಿಳಿವಳಿಕೆ ಇರಬೇಕು. ಆ ತಿಳಿವಳಿಕೆ ಇಲ್ಲವೆಂದರೆ ಉತ್ತಮ ಶಿಕ್ಷಕನಾಗುವುದು ಕಷ್ಟ ಎಂದರು.

ಕುಂಟು ನೆಪ ಬಿಟ್ಟು ಹಳಗನ್ನಡ ಮತ್ತು ನಡುಗನ್ನಡದ ಸಾಹಿತ್ಯಿಕ ಸೌರಭ ಮತ್ತು ಸಾಂಸ್ಕೃತಿಕ ಸಂಪತ್ತನ್ನು ವಿದ್ಯಾರ್ಥಿಗಳಿಗೆ ಉಣಬಡಿಸಬೇಕು. ನಮ್ಮ ಕಾಲದ ಜ್ಞಾನಕ್ಕೆ ಹಳಗನ್ನಡವೇ ತಳಹದಿಯಾಗಬೇಕು. ಇದು ನಮ್ಮ ಕಾಲದ ಕರ್ತವ್ಯವೂ ಹೌದು. ನಮ್ಮ ಕಾಲ ನಮ್ಮ ಮೇಲೆ ಹೊರಿಸಿದ ದೊಡ್ಡ ಜವಾಬ್ದಾರಿಯೂ ಹೌದು. ಕಾವ್ಯದ ಭಾಷೆಯು ನೀಡಿದ ವಿವೇಕತೆಯು ನಮ್ಮನ್ನು ಮನುಷ್ಯರನ್ನಾಗಿ ಮಾಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಅವರು ಶ್ರೇಷ್ಠ ಗುರುಗಳಿಂದ ಶ್ರೇಷ್ಠ ವಿದ್ಯಾರ್ಥಿಗಳು ಸೃಷ್ಟಿಯಾಗುತ್ತಾರೆ. ಶಿಕ್ಷಕರು ಹಳಗನ್ನಡ ಕಾವ್ಯಗಳನ್ನು ಓದಬೇಕು, ಅದನ್ನು ವಿದ್ಯಾರ್ಥಿಗಳಿಗೂ ಬೋಧಿಸಬೇಕು. ಇಂದಿನ ಸಾಹಿತ್ಯವು ಹಳಗನ್ನಡ ಸಾಹಿತ್ಯದ ಪರಂಪರೆಯಲ್ಲಿಯೇ ರೂಪುಗೊಂಡದ್ದು. ಅದರಲ್ಲಿ ನಾಡಿನ ಚರಿತ್ರೆಯಿದೆ, ಮೌಲ್ಯವಿದೆ. ಅದೊಂದು ತವನಿಧಿ. ಶಿಕ್ಷಕರು ತಮ್ಮ ಬೌದ್ಧಿಕ ಶಕ್ತಿಯಿಂದ ವಿದ್ಯಾರ್ಥಿಗಳನ್ನು ಬೆಳೆಸಬೇಕು, ಬೆಳಗಿಸಬೇಕು. ಒಂದು ಮಗುವನ್ನು ಅರಳಿಸಲು ಭಾಷೆಗೆ ಮಾತ್ರ ಶಕ್ತಿಯಿದೆ. ಆ ಶಕ್ತಿಯಿಂದಲೇ ಸಮಾಜವನ್ನು ಕಟ್ಟಬಹುದು ಎಂದರು .

ಮೌಲ್ಯಮಾಪನ ಕುಲಸಚಿವ ಪ್ರೊ.ಡಿ.ಎನ್‌.ಪಾಟೀಲ ಹಾಜರಿದ್ದರು. ಕಾರ್ಯಕ್ರಮದ ಸಂಯೋಜಕಿ ಡಾ.ಶೋಭಾ ನಾಯಕ ಮಾತನಾಡಿ, ವರ್ತಮಾನದಲ್ಲಿ ಹಳಗನ್ನಡದ ಪ್ರಸ್ತುತತೆ ಕುರಿತು ಹೇಳಿದರು. ಪಿಎಂ ಉಷಾ ಮೇರು ನೋಡಲ್ ಅಧಿಕಾರಿ ಡಾ.ನಂದಿನಿ ದೇವರಮನಿ ಸ್ವಾಗತಿಸಿದರು. ಡಾ.ಗಜಾನನ ನಾಯ್ಕ ನಿರೂಪಿಸಿದರು. ಡಾ.ಪಿ.ನಾಗರಾಜ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಹೇಶ್ ಗಾಜಪ್ಪನವರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಫ್ರಿನ್ ಭಾನು ಮತ್ತು ಪೂಜಾ ಕಾಂಬಳೆ ಪ್ರಾರ್ಥಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!