
ಬೆಂಗಳೂರು[ನ.13]: ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಅಂತಿಮ ಸಂಸ್ಕಾರ ನಡೆದಿದೆ. ಹಿಂದು ಸ್ಮಾರ್ಥ ಬ್ರಾಹ್ಮಣ ಪಂಗಡಕ್ಕೆ ಸೇರಿರುವ ಕೇಂದ್ರ ಸಚಿವರ ಶವ ಸಂಸ್ಕಾರವನ್ನು ಸ್ಮಾರ್ಥ ಪದ್ಧತಿಯನುಸಾರ ನಡೆದಿದ್ದು, 'ನೀಲಿ ಕಣ್ಣಿನ ಹುಡುಗ' ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ಎಂ. ಜಿ. ಶ್ರೀನಾಥ ಶರ್ಮ ಅಂತಿಮ ಸಂಸ್ಕಾರ ವಿಧಿವಿಧಾನ ನೆರವೇರಿಸಿದ್ದು, ಭಾನು ಪ್ರಕಾಶ್ ಶರ್ಮ, ಪ್ರಸನ್ನ ಕುಮಾರ್, ಸುಶಾಂತ್ ಶರ್ಮಾ, ವೆಂಕಟಾಚಲಪತಿ ಶಾಸ್ತ್ರಿಗಳು ವಿಧಿವಿಧಾನಕ್ಕೆ ಜೊತೆ ನೀಡಿದರು. ಮೊದಲಿಗೆ ಪಾರ್ಥಿವ ಶರೀರಕ್ಕೆ ಪಂಚ ದ್ರವ್ಯ ಪ್ರೋಕ್ಷಣೆ ನಡೆಸಿದ್ದಾರೆ. ಈ ವೇಳೆ ಆತ್ಮಕ್ಕೆ ಶಾಂತಿ ಸಿಗಲು ಶಾಂತಿ ಮಂತ್ರ ಪಠನೆ ನಡೆಸಿದ್ದು, ಬಳಿಕ ಪಾರ್ಥಿವ ಶರೀರಕ್ಕೆ ಪಂಚ ದ್ರವ್ಯ ಸ್ಥಾಪನೆ ನಡೆಸಲಾಗಿತ್ತು. ಅನಂತ್ ಕುಮಾರ್ ಅವರಿಗೆ ಗಂಡು ಮಕ್ಕಳಿಲ್ಲದ ಕಾರಣ, ಹಿಂದು ಸಂಪ್ರದಾಯದ ಪ್ರಕಾರ ಅಂತಿಮ ವಿಧಿವಿಧಾನಗಳನ್ನು ಪುರುಷರೇ ಮಾಡಬೇಕಿರುವುದರಿಂದ ಅವರ ತಮ್ಮ ನಂದ ಕುಮಾರ್ ಅಂತಿಮ ವಿಧಿ ವಿಧಾನ ನೆರವೇರಿಸಿದ್ದಾರೆ ಹಾಗೂ ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದ್ದಾರೆ.
ಸ್ಮಾರ್ಥ ಪದ್ಧತಿಯಂತೆ ಅಂತ್ಯ ಸಂಸ್ಕಾರ
ಹಿಂದು ಸ್ಮಾರ್ಥ ಬ್ರಾಹ್ಮಣ ಪಂಗಡಕ್ಕೆ ಸೇರಿರುವ ಅನಂತ್ ಕುಮಾರ್ ಅವರ ಶವ ಸಂಸ್ಕಾರವನ್ನು ಇದೇ ಪದ್ಧತಿಯನುಸಾರ ನಡೆಸಲಾಗಿದೆ. ಮೃತದೇಹಕ್ಕೆ ಅಗ್ನಿಸ್ಪರ್ಶ ನಡೆಸುವುದಕ್ಕೂ ಮೊದಲು ಪುರೋಹಿತರು ವಿಷ್ಣು ಸಹಸ್ರನಾಮ ಪಠಿಸಿ. ಮಂತ್ರಘೋಷಗಳೊಂದಿಗೆ ಅನಂತ್ ಕುಮಾರ್ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಅಂತಿಮ ದರ್ಶನಕ್ಕೆ ಆಗಮಿಸಿದ ರಾಜಕೀಯ ಗುರು
ಎಲ್ಲಾ ಪಕ್ಷದ ನಾಯಕರೊಂದಿಗೆ ಒಡನಾಟ ಇಟ್ಟುಕೊಂಡಿದ್ದ ಸ್ನೇಹಜೀವಿ, ಜನಾನುರಾಗಿಯ ಅಂತಿಮ ದರ್ಶನಕ್ಕೆ ರಾಷ್ಟ್ರ ಹಾಗೂ ರಾಜ್ಯ ನಾಯಕರು ಆಗಮಿಸಿದ್ದರು. 'ನೀಲಿಗಣ್ಣಿನ ಹುಡುಗನ' ಅಂತಿಮ ಕ್ರಿಯೆಗೆ ರಾಜಕೀಯ ಗುರು ಲಾಲ್ ಕೃಷ್ಣಾ ಅಡ್ವಾಣಿ ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ, ಅಮಿತ್ ಷಾ, ಮುರಳೀಧರ್ ರಾವ್, ನಿರ್ಮಲಾ ಸೀತಾರಾಮನ್, ರಾಜನಾಥ್ ಸಿಂಗ್, ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ಆರ್.ಅಶೋಕ್ ಸೇರಿದಂತೆ ಹಲವರು ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದ್ದಾರೆ.
ಸರ್ಕಾರಿ ಗೌರವದೊಂದಿಗೆ ಅಂತಿಮ ವಿದಾಯ
ಅನಂತ್ ಕುಮಾರ್ ರಾಷ್ಟ್ರ ಕಂಡ ಓರ್ವ ಶ್ರೇಷ್ಠ ರಾಜಕಾರಣಿ. ಅಲ್ಲದೇ ಹಲವು ಬಾರಿ ಕೇಂದ್ರ ಸಚಿವರಾಗಿದ್ದವರು. ಕೇಂದ್ರ ಸಚಿವರಾಗಿದ್ದಾಗಲೇ ಇಹಲೋಕ ತ್ಯಜಿಸಿರುವ ಅವರನ್ನು ಚಾಮರಾಜಪೇಟೆಯ ಚಿತಾಗಾರದಲ್ಲಿ 45 ನಿಮಿಷಗಳ ಕಾಲ ನಡೆದ ಅಂತಿಮ ವಿಧಿವಿಧಾನಕ್ಕೂ ಮೊದಲು, ಸಕಲ ಸರ್ಕಾರಿ ಗೌರವದೊಂದಿಗೆ ಬೀಳ್ಕೊಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ