‘ರೀ ಮೇಯರ್ ಅವರೇ, ನೀವು ಗೌನ್ ಹಾಕಿದರೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಚೆಕಪ್ ಮಾಡದೇ ಸೀದಾ ಒಳಗೆ ಬಿಡ್ತಾರೆ. ನಿಮ್ಮದು ಫುಲ್ ಹವಾ ಆಗ್ತದ. ಗೌನ್ ಹಾಕದೇ ಇದ್ದರೆ ನಿಮ್ಮನ್ನು ತಡೆದು ತಪಾಸಣೆ ಮಾಡ್ತಾರೆ ನೋಡಿ’
ವರದಿಗಾರರ ಡೈರಿ
ರಾಜಕಾರಣದಲ್ಲಿ ಕೆಲವೊಮ್ಮೆ ಎಂತೆಂತಹ ರಹಸ್ಯ ಕಾರ್ಯಾಚರಣೆ ನಡೆದು ಬಿಡುತ್ತವೆ ಎಂದರೆ, ಅದರ ಹಿಂದಿನ ಮರ್ಮವನ್ನು ತಿಳಿಯಲು ಖುದ್ದು ಭಗವಂತನಿಂದಲೂ ಸಾಧ್ಯವಿಲ್ಲ.
ಹೀಗೆ ಸರ್ವಶಕ್ತನಿಗೆ ಸವಾಲಾಗುವಂತಹ ಪವಾಡವೊಂದು ಮೈಸೂರಿನ ಸಾಲಿಗ್ರಾಮ ತಾಲೂಕಿನ ಮೇಲೂರಿನಲ್ಲಿ ಘಟಿಸಿದೆ. ಈಗ ರಾಜ್ಯಾದ್ಯಂತ ಗ್ರಾಮ ಪಂಚಾಯ್ತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯುತ್ತಿದೆ. ಅಂತೆಯೇ ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕು ಮೇಲೂರು ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಭಾರತಿ ವಿಶ್ವನಾಥ್, ಕಾಂಗ್ರೆಸ್ ಬೆಂಬಲಿತ ವಿಜಯಾ ರಾಮಕೃಷ್ಣೇಗೌಡ ಅವರ ನಡುವೆ ಪೈಪೋಟಿ ಇತ್ತು.
15 ಸದಸ್ಯ ಬಲವಿರುವ ಈ ಗ್ರಾ.ಪಂ.ನಲ್ಲಿ ಗೆಲ್ಲಲು 8 ಮಂದಿಯ ಬೆಂಬಲ ಬೇಕಿತ್ತು. ಭಾರತಿ ಅವರು 8 ಸದಸ್ಯರಲ್ಲದೇ ತಾವು ಸೇರಿ 9 ಮಂದಿ ಇದ್ದಿದ್ದರಿಂದ ಗೆಲುವು ತಮ್ಮದೇ ಎಂದು ಎಣಿಸಿದ್ದರು. ಆದಾಗ್ಯೂ ಈ ಎಂಟು ಜನರು ಯಾರ ಕೈಗೂ ಸಿಲುಕಿ ಆಪರೇಷನ್‌ಗೆ ಒಳಗಾಗಬಾರದು ಎಂದು ತೀರ್ಥಯಾತ್ರೆಗೂ ಕರೆದೊಯ್ದರು. ಚುನಾವಣೆ ದಿನ ವಾಪಸ್ ಬಂದರು. ಆದರೆ, ಗೆದ್ದಿದ್ದು ಮಾತ್ರ ವಿಜಯಾ! ಈ ಫಲಿತಾಂಶದಿಂದ ಭಾರತಿ ಅವರಿಗೆ ಅಚ್ಚರಿ ಹಾಗೂ ಅವಮಾನ. ರಹಸ್ಯ ಮತದಾನವಾದ್ದರಿಂದ ತಮ್ಮೊಂದಿಗೆ ಇದ್ದು ಕೈಕೊಟ್ಟವರು ಯಾರು? ಎಂಬ ಪ್ರಶ್ನೆ ತಲೆ ಕೊರೆಯಲು ಆರಂಭಿಸಿತು.
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ದೇವರ ಮೊರೆ ಹೋದರು. ಮೈಸೂರು ಭಾಗದಲ್ಲಿ ಆಣೆ - ಪ್ರಮಾಣಕ್ಕೆ ಹೆಸರಾದ ಕಪ್ಪಡಿ ಕ್ಷೇತ್ರಕ್ಕೆ ಕರೆದುಕೊಂಡು ಹೋದರು. ಮಜಾ ಎಂದರೆ, ಎಲ್ಲಾ 8 ಮಂದಿಯೂ ನಿಮಗೇ ವೋಟ್ ಹಾಕಿದ್ದೇವೆ ಎಂದು ಪ್ರಮಾಣ ಮಾಡಿದರು! ಹಾಗಿದ್ದರೆ, ಭಾರತಿ ಅವರಿಗೆ ಕೈಕೊಟ್ಟು, ವಿಜಯಾ ಅವರನ್ನು ಗೆಲ್ಲಿಸಿದ ಮೂವರು ಮಾತ್ರ ಯಾರು?
ಉಹುಂ, ಆ ಭಗವಂತನಿಂದಲೂ ಈ ರಹಸ್ಯ ಪತ್ತೆ ಮಾಡಲು ಆಗಲಿಲ್ಲ!
Reporters Dairy: ಪ್ರತಿಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಗಬೇಕಂತೆ..!
ರಾತ್ರಿ 2ಕ್ಕೆ ಡೀಸಿಗೆ ಚಿಣ್ಣರ ಫೋನ್
ಜೋರು ಮಳೆ ಬಂದರೆ ಸಾಕು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗೆ ಪುಟ್ಟಮಕ್ಕಳೇ ನೆನಪಾಗುತ್ತಾರಂತೆ. ಯಾಕೆ ಅಂತಿರಾ? ಅದಕ್ಕೆ ಉತ್ತರ ಸಿಗುವ ಮೊದಲು ಈ ನೈಜ ಕಥೆ ಕೇಳಿ.
ಒಂದು ವಾರದ ಹಿಂದೆ ದ.ಕ. ಜಿಲ್ಲೆಯಲ್ಲಿ ಭಾರಿ ಮಳೆ ಸುರಿದಿತ್ತು. ಹವಾಮಾನ ಇಲಾಖೆಯೂ ಎರಡು ದಿನ ರೆಡ್, ಮತ್ತೊಂದು ದಿನ ಆರೆಂಜ್ ಅಲರ್ಚ್ ಘೋಷಿಸಿತ್ತು. ಎಡೆಬಿಡದೆ ಸುರಿದ ಮಳೆಗೆ ಮುಂಜಾಗ್ರತಾ ಕ್ರಮವಾಗಿ ಡಿಸಿ ಸಾಹೇಬರು ಸೋಮವಾರ ಎಲ್ಲ ಶಾಲಾ- ಕಾಲೇಜಿಗೆ ರಜೆ ಘೋಷಿಸಿದರು. ಆದರೆ, ಮರು ದಿನವೂ ಮಳೆಯ ಅಬ್ಬರ ಬಿಡಲಿಲ್ಲ. ಹಾಗಾಗಿ ಮಂಗಳವಾರವೂ ಮಕ್ಕಳಿಗೆ ರಜೆ, ಮೂರನೇ ದಿನ, ನಾಲ್ಕನೇ ದಿನವೂ ಮಳೆಯದ್ದೇ ವರಾತ, ಶಾಲೆಗಳಿಗೆ ರಜೆ ಮುಂದುವರಿಕೆ.
ಹೀಗೆ ಸಾಲು ಸಾಲು ರಜೆಯಿಂದ ಖುಷಿಗೊಂಡ ಯಾರೋ ಮಕ್ಕಳು ಡಿಸಿ ಸಾಹೇಬರಿಗೆ ಸಲ್ಯೂಟ್ ಮಾಡುವ ಅಣಕು ವಿಡಿಯೋವನ್ನು ಜಾಲತಾಣದಲ್ಲಿ ಹರಿಯಬಿಟ್ಟು ಕುಣಿದು ಕುಪ್ಪಳಿಸಿದ್ದರು. ಈ ನಾಲ್ಕು ದಿನದ ರಜೆ ಮಜೆಯ ಖುಷಿಯಲ್ಲಿದ್ದಾಗಲೇ ಹವಾಮಾನ ಇಲಾಖೆ ಐದನೇ ದಿನ ಕೂಡ ರೆಡ್ ಅಲರ್ಚ್ ನೀಡಿತು. ಅದೇ ದಿನ ರಾತ್ರಿ ಡಿಸಿ ಸಾಹೇಬರು ನಿದ್ರೆಯ ಮಂಪರಿಗೆ ಜಾರಿದ್ದರು.
ನಸುಕಿನ 2 ಗಂಟೆ ಸುಮಾರಿಗೆ ಅವರ ಮೊಬೈಲ್ ಒಂದೇ ಸಮನೆ ರಿಂಗಣಿಸುತ್ತಿತ್ತು. ಗಾಬರಿಗೊಂಡ ಡಿಸಿ ಸಾಹೇಬರು ಕರೆ ಸ್ವೀಕರಿಸಿದ ಕೂಡಲೇ ಅತ್ತಲಿಂದ ಪುಟ್ಟಮಕ್ಕಳ ಧ್ವನಿ. ‘ಸಾರ್, ನಾಳೆಯೂ ರಜೆ ಇದೆಯಾ? ಭಾರಿ ಮಳೆ ಬಂದರೆ ಸ್ಕೂಲಿಗೆ ಒದ್ದೆಯಾಗಿ ಹೋಗಬೇಕಾಗುತ್ತದೆ, ತರಗತಿಯಲ್ಲಿ ಪಾಠ ಕೇಳಲು ಆಗುತ್ತಿಲ್ಲ. ನಮ್ಮಲ್ಲಿ ಕಾಲು ಸಂಕ ದಾಟಿಕೊಂಡು ಬರಬೇಕಾಗಿದೆ...’
ತಡರಾತ್ರಿ ಬಂದ ಇಂತಹ ಕರೆಗಳಿಂದ ಡೀಸಿ ಸಾಹೇಬರಿಗೆ ಗೊಂದಲವೋ ಗೊಂದಲ. ರಜೆ ನೀಡಬೇಕೇ ಅಥವಾ ಬೇಡವೇ? ರಜೆ ನೀಡಿದಾಗ ಮಳೆ ಬರದಿದ್ದರೆ? ಇಂತಹ ಗೊಂದಲದಲ್ಲೇ ಡಿಸಿ ಸಾಹೇಬರಿಗೆ ನಿದ್ರೆಯೇ ಬರಲಿಲ್ಲವಂತೆ. ಕೊನೆಗೂ ಬೆಳಗ್ಗೆ ಉದಯಿಸಿದ ಸೂರ್ಯ ಮಳೆಯನ್ನೇ ದೂರ ಮಾಡಿದ್ದ. ಹಾಗಾಗಿ ಮತ್ತೊಂದು ದಿನ ಶಾಲೆಗೆ ರಜೆ ನೀಡುವುದು ತಪ್ಪಿ ಹೋಯಿತು.
ಇಷ್ಟೆಲ್ಲ ಆದ ಬಳಿಕ ಈಗ ಡಿಸಿ ಸಾಹೇಬರಿಗೆ ಕಟ್ಟಕಡೆಗೆ ಕಾಡಿದ ಪ್ರಶ್ನೆ. ರಜೆಗಾಗಿ ತಡರಾತ್ರಿ ಕರೆ ಮಾಡಿದ ಪುಟಾಣಿಗಳ ಹಿಂದಿನ ಕೈವಾಡ ಯಾರದ್ದು? ಶಿಕ್ಷಕರದ್ದೇ ಅಥವಾ ಪೋಷಕರದ್ದೇ?
ಗೌನ್ ಗೌನ್, ಮೇಯರ್ ಡೌನ್ ಡೌನ್!
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪ್ರತಿ ಸಾಮಾನ್ಯ ಸಭೆæ ಇತ್ತೀಚಿನ ವರ್ಷಗಳಲ್ಲಿ ಗೌನ್ ಗೌನ್, ಮೇಯರ್ ಡೌನ್ ಡೌನ್ ಎಂಬ ಘೋಷಣೆಗಳಿಂದಲೇ ಆರಂಭವಾಗುತ್ತಿದೆ.
ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಸೇರಿದಂತೆ ಪ್ರಮುಖ ಸಂದರ್ಭಗಳಲ್ಲಿ ಮೇಯರ್ ಕೆಂಪು ಬಣ್ಣದ ಗೌನ್ ಧರಿಸುವುದು ಸಭಾ ನಿಯಮ. ಆದರೆ, ಇದು ಬ್ರಿಟಿಷರ ಸಂಪ್ರದಾಯವೆಂದು ಕಳೆದ ಬಾರಿ ಮೇಯರ್ ಆಗಿದ್ದ ಬಿಜೆಪಿಯ ಈರೇಶ ಅಂಚಟಗೇರಿ ಆ ಸಂಪ್ರದಾಯಕ್ಕೆ ಎಳ್ಳು-ನೀರು ಬಿಟ್ಟಿದ್ದರು. ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ಸಿಗರು ಮೇಯರ್ ಅವರ ಈ ನಡವಳಿಕೆ ವಿರುದ್ಧ ಈ ಘೋಷ ವಾಕ್ಯ ಆರಂಭಿಸಿದ್ದರು.
ಆಗಿನ ಬಿಜೆಪಿ ಸರ್ಕಾರ ಇದರಲ್ಲೂ ಮೂಗು ತೂರಿಸಿ ಗೌನ್ ಧರಿಸುವುದು ಅಥವಾ ಬಿಡುವುದು ಮೇಯರ್ ವಿವೇಚನೆಗೆ ಸೇರಿದ್ದು ಎಂದು ಫರ್ಮಾನು ಹೊರಡಿಸಿತ್ತು. ಇದಾದ ನಂತರ ಕಾಂಗ್ರೆಸ್ಸಿಗರು ಸುಮ್ಮನಾಗಿದ್ದರು.
ಈಗ ಹೊಸದಾಗಿ ಮತ್ತೊಂದು ಅವಧಿಗೆ ಮೇಯರ್ ಆದ ವೀಣಾ ಬರದ್ವಾಡ ಸಹ ಅಂಚಟಗೇರಿ ಅವರ ದಾರಿಯಲ್ಲಿಯೇ ನಡೆದಿದ್ದು ಹೊಸ ಮೇಯರ್ ವೀಣಾ ಗೌನ್ ಧರಿಸದೇ ಸೀರೆಯುಟ್ಟು ಆಗಮಿಸುತ್ತಿದ್ದಂತೆ ಮತ್ತದೇ ‘ಗೌನ್ ಗೌನ್ ಮೇಯರ್ ಡೌನ್ ಡೌನ್’ ಘೋಷಣೆಗಳು ಕೇಳಿ ಬಂದವು.
ಅದರಲ್ಲೂ ಒಬ್ಬಾತ ಸದಸ್ಯ ‘ರೀ ಮೇಯರ್ ಅವರೇ, ನೀವು ಗೌನ್ ಹಾಕಿದರೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಚೆಕಪ್ ಮಾಡದೇ ಸೀದಾ ಒಳಗೆ ಬಿಡ್ತಾರೆ. ನಿಮ್ಮದು ಫುಲ್ ಹವಾ ಆಗ್ತದ. ಗೌನ್ ಹಾಕದೇ ಇದ್ದರೆ ನಿಮ್ಮನ್ನು ತಡೆದು ತಪಾಸಣೆ ಮಾಡ್ತಾರೆ ನೋಡಿ’ ಎನ್ನುವ ಸಲಹೆಯನ್ನು ನೀಡಿದರು.
ಕುಡುಕರಿಗಿದು ಸುಗ್ಗಿ ಕಾಲವಾದರೆ ಕಾರವಾರದಲ್ಲಿ ಉಲ್ಟಾ: ಹುಬ್ಬಳ್ಳಿಯಲ್ಲಿ ಮನೇಲಿ ಕುಕ್ಕರಿದ್ರೂ ರೇಡ್ ಆಗ್ತಾವು!
ಆದರೆ, ಮೇಯರ್ ಮೇಡಂ ಕ್ಯಾರೆ ಎಂದಿಲ್ಲ. ಹೀಗಾಗಿ ಈಗ ರಾಜ್ಯದಲ್ಲಿ ಬಂದಿರುವ ಕಾಂಗ್ರೆಸ್ ಸರ್ಕಾರವೂ ಈ ವಿಚಾರದಲ್ಲಿ ಮೂಗು ತೂರಿಸುವುದೇ? ಕಾಲವೇ ಉತ್ತರ ಹೇಳಬೇಕು
ಅಂಶಿ ಪ್ರಸನ್ನಕುಮಾರ್
ಆತ್ಮಭೂಷಣ್
ಬಸವರಾಜ ಹಿರೇಮಠ