ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲಿ ನೀಟ್‌ ರದ್ದು ಚಿಂತನೆ: ಡಿ.ಕೆ.ಶಿವಕುಮಾರ್‌ ಸುಳಿವು

By Kannadaprabha News  |  First Published Jun 19, 2024, 4:45 AM IST

ನೀಟ್‌ನಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಭಾರೀ ಅನ್ಯಾಯವಾಗುತ್ತಿರುವುದರಿಂದ ಕರ್ನಾಟವೂ ತಮಿಳುನಾಡು ಮಾದರಿಯನ್ನು ಅನುಸರಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. 
 


ಬೆಂಗಳೂರು (ಜೂ.19): ನೀಟ್‌ನಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಭಾರೀ ಅನ್ಯಾಯವಾಗುತ್ತಿರುವುದರಿಂದ ಕರ್ನಾಟವೂ ತಮಿಳುನಾಡು ಮಾದರಿಯನ್ನು ಅನುಸರಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಈ ಪರೀಕ್ಷೆಯಿಂದ ನಮ್ಮ ರಾಜ್ಯದ ಮಕ್ಕಳಿಗೆ ದೊಡ್ಡ ಅನ್ಯಾಯವಾಗುತ್ತಿವೆ. ನಾವು ಕಾಲೇಜುಗಳನ್ನು ಕಟ್ಟಿದ್ದೇವೆ. ನೀಟ್ ಪರೀಕ್ಷೆಯಿಂದ ಉತ್ತರ ಭಾರತದ ರಾಜ್ಯಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಹೀಗಾಗಿ ನಮ್ಮ ಮಕ್ಕಳಿಗೆ ತಾರತಮ್ಯವಾಗುತ್ತಿದೆ. ನಮ್ಮ ಮಕ್ಕಳಿಗೆ ನ್ಯಾಯ ಒದಗಿಸಲು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. 

ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆಯನ್ನು ರಾಜ್ಯಗಳೇ ನಡೆಸಲು ಅವಕಾಶ ಮಾಡಿಕೊಡುವುದು ಉತ್ತಮ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಇತ್ತೀಚೆಗಷ್ಟೆ ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಇದೀಗ ನೀಟ್‌ ವಿರುದ್ಧ ತಮಿಳುನಾಡು ಮಾದರಿ ಅನುಸರಿಸುವುದಾಗಿ ಹೇಳಿಕೆ ನೀಡಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸ್ಥಳೀಯ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳು ದೊರೆಯಬೇಕು ಎನ್ನುವ ದೃಷ್ಟಿಯಿಂದ ತಮಿಳುನಾಡು ಸರ್ಕಾರ ನಿರಂತರವಾಗಿ ನೀಟ್‌ ವಿರೋಧಿಸುತ್ತಲೇ ಬರುತ್ತಿದೆ. 

Latest Videos

undefined

ಅಶೋಕ್‌ ಒಬ್ಬ ಸುಳ್ಳುಗಾರ ಹಾಗೂ ಜೋಕರ್‌: ಡಿ.ಕೆ.ಶಿವಕುಮಾರ್‌ ತಿರುಗೇಟು

ಇದೇ ಹಾದಿಯನ್ನು ಕರ್ನಾಟಕವೂ ಅನುಸರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗಂಭೀರವಾಗಿ ಈ ವಿಚಾರ ಚರ್ಚಿಸಲಾಗುವುದು. ಈ ಬಗ್ಗೆ ಇಡೀ ರಾಷ್ಟ್ರಮಟ್ಟದಲ್ಲಿ ಕೂಡ ಚರ್ಚೆಯಾಗಬೇಕು ಎಂದರು. ನೀಟ್‌ ಅಕ್ರಮದ ಬಗ್ಗೆ ಕೇಂದ್ರ ಸಚಿವರೇ ಒಪ್ಪಿಕೊಂಡಿದ್ದಾರೆ. ಹಾಗಾಗಿ ಈ ಬಾರಿ ನಡೆಸಿರುವ ನೀಟ್‌ ಪರೀಕ್ಷೆಯನ್ನು ರದ್ದುಪಡಿಸಿ ಎಲ್ಲ ವಿದ್ಯಾರ್ಥಿಗಳಿಗೂ ಮರು ಪರೀಕ್ಷೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ತಮಿಳ್ನಾಡು ಏನು ಮಾಡಿದೆ?: ನೀಟ್‌ನಿಂದ ವಿನಾಯಿತಿ ಪಡೆಯಲು ನಿರಂತರ ಕಾನೂನು ಹೋರಾಟ, ಉಭಯ ಸದನಗಳಲ್ಲಿ ಮಸೂದೆ ಅಂಗೀಕಾರ ಸೇರಿದಂತೆ ಹಲವು ದಾರಿಗಳಲ್ಲಿ ಪ್ರಯತ್ನ ನಡೆಸಿದೆ. ಜೊತೆಗೆ ಸ್ಥಳೀಯ ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಶೇ.7.5 ಸೀಟುಗಳ ಮೀಸಲಾತಿಗೆ ಮಸೂದೆ ತಂದಿರುವುದು ಇಲ್ಲಿ ಗಮನಾರ್ಹ.

ಶೇ.7.5 ಸೀಟುಗಳ ಮೀಸಲಾತಿಗೆ ಮಸೂದೆ: ನೀಟ್‌ ರದ್ದು ಕೋರಿ ತಮಿಳುನಾಡು ವಿಧಾನಸಭೆ 2017ರಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಿತ್ತು. 2019ರಲ್ಲಿ ಅದನ್ನು ಕೇಂದ್ರ ತಿರಸ್ಕರಿಸಿತ್ತು. 2022ರಲ್ಲಿ ಮತ್ತೆ ವಿಧಾನಸಭೆ ಇದೇ ಮಾದರಿ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಿದೆ. ಅದು ಸದ್ಯ ರಾಷ್ಟ್ರಪತಿಗಳ ಬಳಿ ಉಳಿದಿದೆ.

ಪ್ರವಾಸೋದ್ಯಮಕ್ಕೆ ಹೊಸ ನೀತಿ, ಉದ್ದಿಮೆಗಳನ್ನು ಜಿಎಸ್‌ಟಿ ಕೊಲ್ಲುತ್ತಿದೆ: ಡಿಕೆಶಿ

ಸ್ಥಳೀಯ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳು ದೊರೆಯಬೇಕು ಎನ್ನುವ ದೃಷ್ಟಿಯಿಂದ ತಮಿಳುನಾಡು ಸರ್ಕಾರ ನೀಟ್‌ ರದ್ದತಿಗೆ ನಿರ್ಣಯ ಕೈಗೊಂಡಿದೆ. ಇದೇ ಹಾದಿಯನ್ನು ಕರ್ನಾಟಕವೂ ಅನುಸರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.
- ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ

click me!