ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿದ್ದರೆ ದರ್ಶನ್‌ ಮನೆ ತೆರವು: ಡಿಕೆಶಿ

By Kannadaprabha News  |  First Published Jun 19, 2024, 4:25 AM IST

ನಟ ದರ್ಶನ್ ಸೇರಿದಂತೆ ಯಾರೇ ರಾಜಕಾಲುವೆ ಒತ್ತುವರಿ ಮಾಡಿಕೊಂಡು ನ್ಯಾಯಾಲಯದಿಂದ ತಡೆಯಾಜ್ಞೆ ತೆಗೆದುಕೊಂಡು ಬಂದರೂ ಮುಲಾಜಿಲ್ಲದೇ ತೆರವುಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. 


ಬೆಂಗಳೂರು (ಜೂ.19): ನಟ ದರ್ಶನ್ ಸೇರಿದಂತೆ ಯಾರೇ ರಾಜಕಾಲುವೆ ಒತ್ತುವರಿ ಮಾಡಿಕೊಂಡು ನ್ಯಾಯಾಲಯದಿಂದ ತಡೆಯಾಜ್ಞೆ ತೆಗೆದುಕೊಂಡು ಬಂದರೂ ಮುಲಾಜಿಲ್ಲದೇ ತೆರವುಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ಕೊಲೆ ಆರೋಪಿ ನಟ ದರ್ಶನ್‌ ಆರ್‌.ಆರ್‌ ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು, ನೀವು ಸೇರಿದಂತೆ ಯಾರೇ ರಾಜಕಾಲುವೆ ಒತ್ತುವರಿ ಮಾಡಿಕೊಂಡು ನ್ಯಾಯಾಲಯದಿಂದ ತಡೆಯಾಜ್ಞೆ ತೆಗೆದುಕೊಂಡು ಬಂದಿದ್ದರೆ, ತಡೆಯಾಜ್ಞೆ ತೆರವುಗೊಳಿಸಿ ಒತ್ತುವರಿ ತೆರವುಗೊಳಿಸಲಾಗುವುದು.

ಕಾನೂನು ಪ್ರಕಾರ ಏನು ಮಾಡಬೇಕೋ ಮಾಡುತ್ತೇವೆ ಎಂದು ಹೇಳಿದರು. ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಸಣ್ಣವರು, ದೊಡ್ಡವರೆಂದು ನೋಡದೇ ತೆರವು ಮಾಡುತ್ತೇವೆ. ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ ತೆರವು ಕಾರ್ಯಾಚರಣೆ ನಡೆಸಲು ಸಾಧ್ಯವಾಗಿಲ್ಲ. ರಾಜಕಾಲುವೆ ಒತ್ತುವರಿ ಸಂಬಂಧಿಸಿದಂತೆ ತಡೆಯಾಜ್ಞೆ ಇರುವ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವುಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಕೋರ್ಟ್‌ ಬೇಗ ತಡೆಯಾಜ್ಞೆ ತೆರವುಗೊಳಿಸಿದರೆ ಅಷ್ಟೇ ಬೇಗ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

Latest Videos

undefined

ಅಶೋಕ್‌ ಒಬ್ಬ ಸುಳ್ಳುಗಾರ ಹಾಗೂ ಜೋಕರ್‌: ಡಿ.ಕೆ.ಶಿವಕುಮಾರ್‌ ತಿರುಗೇಟು

2016ರಲ್ಲಿ ತಡೆಯಾಜ್ಞೆ: 2016ರಲ್ಲಿ ರಾಜ ಕಾಲುವೆ ಒತ್ತುವರಿ ತೆರವಿಗೆ ಸರ್ಕಾರ ಸೂಚಿಸಿತ್ತು. ಆಗ ನಟ ದರ್ಶನ್ ರಾಜಕಾಲುವೆಯ ಬಫರ್ ಝೋನ್ ಮೇಲೆ ಮನೆ ಕಟ್ಟಿರುವುದು ಬೆಳಕಿಗೆ ಬಂದಿತ್ತು. ಈ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ನಟ ಕಾನೂನು ಮೊರೆ ಹೋಗಿದ್ದರು. ರಾಜರಾಜೇಶ್ವರಿನಗರದ ಐಡಿಯಲ್‌ ಹೋಮ್ಸ್‌ ಬಡಾವಣೆಯಲ್ಲಿರುವ ನಟ ದರ್ಶನ್‌ ಮನೆ ತೆರವು ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಹೈಕೋರ್ಟ್‌ 2016 ಅಕ್ಟೋಬರ್‌ನಲ್ಲಿ ಸೂಚನೆ ನೀಡಿತ್ತು.

click me!