ನನಗೆ, ಕುಟುಂಬಕ್ಕೆ ಈಗಲೂ ಜೀವ ಬೆದರಿಕೆಯಿದೆ-ಬಿಜೆಪಿ ಕಾರ್ಯಕರ್ತ ಪೃಥ್ವಿಸಿಂಗ್‌ ಗಂಭೀರ ಆರೋಪ

By Kannadaprabha News  |  First Published Dec 7, 2023, 5:39 AM IST

 ‘ನನಗೆ, ನನ್ನ ಮಕ್ಕಳಿಗೆ ಈಗಲೂ ಜೀವ ಬೆದರಿಕೆ ಇದೆ. ನನಗೆ, ನನ್ನ ಕುಟುಂಬಕ್ಕೆ ಏನೇ ಆದರೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಕಾರಣ’ ಎಂದು ಬಿಜೆಪಿ ಮುಖಂಡ ಪೃಥ್ವಿ ಸಿಂಗ್‌ ಆರೋಪಿಸಿದ್ದಾರೆ.


ಬೆಳಗಾವಿ (ಡಿ.7) :  ‘ನನಗೆ, ನನ್ನ ಮಕ್ಕಳಿಗೆ ಈಗಲೂ ಜೀವ ಬೆದರಿಕೆ ಇದೆ. ನನಗೆ, ನನ್ನ ಕುಟುಂಬಕ್ಕೆ ಏನೇ ಆದರೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಕಾರಣ’ ಎಂದು ಬಿಜೆಪಿ ಮುಖಂಡ ಪೃಥ್ವಿ ಸಿಂಗ್‌ ಆರೋಪಿಸಿದ್ದಾರೆ.

ಇರಿತಕ್ಕೆ ಒಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬುಧವಾರ ಬಿಡುಗಡೆಯಾದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮೇಲೆ ಯಾವ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಎನ್ನುವುದೇ ಗೊತ್ತಾಗುತ್ತಿಲ್ಲ. ಚಾಕು ಇರಿತವಾದ ದಿನ ಸಂಜೆ ಚನ್ನರಾಜ ಹಟ್ಟಿಹೊಳಿ ಅವರ ಬೆಂಬಲಿಗರಾದ ಸುಜಯ ಜಾಧವ ಮತ್ತು ಸದ್ದಾಂ ನಮ್ಮ ಮನೆಗೆ ಬಂದು, ‘ಅಣ್ಣ ಕರೆಯುತ್ತಿದ್ದಾರೆ, ಬನ್ನಿ’ ಎಂದು ಕರೆದುಕೊಂಡು ಹೋದರು. ಹೊರಗೆ ಬಂದಾಗ, ನಮ್ಮ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡುತ್ತಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಕ್ಕೆ ಹೊಡೆದರು ಎಂದರು.

Tap to resize

Latest Videos

ಬೆಳಗಾವಿಯಲ್ಲಿ ಬಿಜೆಪಿಗನಿಗೆ ಇರಿತ: ಸಚಿವೆ ಹೆಬ್ಬಾಳಕರ ಸಹೋದರ, ಬೆಂಬಲಿಗರಿಂದ ಹಲ್ಲೆ

ನಾನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಸಿಕೊಳ್ಳುತ್ತಿದ್ದಂತೆಯೇ ಅದನ್ನು ಕಸಿದುಕೊಂಡರು. ಬಳಿಕ ಚನ್ನರಾಜ ಅವರ ಸೂಚನೆ ಮೇರೆಗೆ ಸುಜಯ ನನ್ನ ಹಿಡಿದರೆ, ಸದ್ದಾಂ ಹರಿತವಾದ ಆಯುಧದಿಂದ ಹಲ್ಲೆ ಮಾಡಿದರು. ಈ ಘಟನೆ ಕುರಿತು ಪೊಲೀಸ್‌ ಠಾಣೆಗೆ ದೂರು ಸಲ್ಲಿಸದಂತೆ ನನ್ನ ಮೇಲೆ ಒತ್ತಡ ಹೇರಿದರು. ಚನ್ನರಾಜ ಹಟ್ಟಿಹೊಳಿ ಬಂದ ಸುದ್ದಿ ಕೇಳಿ, ನಾನು ಡ್ರೆಸ್‌ ಬದಲಿಸಿಕೊಂಡು ಹೋಗಿದ್ದೆ. ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದರಿಂದ ನಾನು ಮತ್ತೊಮ್ಮೆ ಹೊರ ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿಲ್ಲ. ಘಟನೆ ಬಳಿಕ, ನಾನೆ ಕೈ ಕೊಯ್ದುಕೊಂಡಿದ್ದೇನೆ ಎಂದು ಘಟನೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ನನ್ನ ಮೇಲೆ ಹಲ್ಲೆಯಾದ ದಿನವೇ ದೂರು ಕೊಟ್ಟರೂ, ಪೊಲೀಸರು ಮಂಗಳವಾರ ದೂರು ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

2018ರಲ್ಲಿ ಲಕ್ಷ್ಮೀ ಹೆಬ್ಬಾಳಕರ ಶಾಸಕಿಯಾದ ಮೇಲೆ ಜಯನಗರದಲ್ಲಿನ ನನ್ನ ಮನೆಯನ್ನು ಚನ್ನರಾಜ ಹಟ್ಟಿಹೊಳಿ ಲೀಸ್‌ಗೆ ಪಡೆದಿದ್ದರು. ಲೀಸ್‌ ಮುಗಿದ ಮೇಲೆ ಮನೆಯನ್ನು ಬಿಟ್ಟುಕೊಟ್ಟಿರಲಿಲ್ಲ. ಅದು ತಮಗೆ ‘ಲಕ್ಕಿ ಮನೆ’ ಎಂದು ಅಲ್ಲಿಯೇ ಉಳಿದಿದ್ದರು. ಬಿಟ್ಟು ಕೊಡುವಂತೆ ಒತ್ತಾಯಿಸಿದಾಗ ನನ್ನನ್ನು ನಿಂದಿಸಿದ್ದರು.

ಲಕ್ಷ್ಮೀ ಹೆಬ್ಬಾಳ್ಕರ್ ಬೆಳೆದು ಬಂದಿರುವುದು ಯಾವ ರೀತಿ‌ ಎಂಬುದು ಗೊತ್ತು?: ರಮೇಶ್‌ ಜಾರಕಿಹೊಳಿ

ಇದಾದ ಬಳಿಕ ನನ್ನ ಮನೆ ಕಬ್ಜಾ ಮಾಡುತ್ತಾರೆ ಎಂದು ಗೊತ್ತಾಗಿ ನಾನು ಬಿಜೆಪಿಗೆ ಸೇರಿದೆ. ನನ್ನ ಗಾಡ್‌ಫಾದರ್‌ ರಮೇಶ ಜಾರಕಿಹೊಳಿ ಜತೆ ಸೇರಿಕೊಂಡು ಗ್ರಾಮೀಣ ಕ್ಷೇತ್ರದಲ್ಲಿ ಓಡಾಡಲು ಶುರು ಮಾಡಿದೆ. ಆಗ ಚನ್ನರಾಜ ಹಟ್ಟಿಹೊಳಿ, ನಿನ್ನದು ಬಹಳ ಆಗಿದೆ. ನಿನಗ್ಯಾಕೆ ಬೇಕು ಎಂದು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಹೆಬ್ಬಾಳಕರ ಪುತ್ರ ಮೃಣಾಲ್‌ ಚುನಾವಣೆ ವೇಳೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದರು. ಆದರೆ, ಪ್ರಭಾವ ಬಳಸಿ ಏನೂ ಆಗದಂತೆ ನೋಡಿಕೊಂಡಿದ್ದರು ಎಂದು ಪೃಥ್ವಿಸಿಂಗ್‌ ಹೇಳಿದರು.

click me!